ಪುತ್ತೂರಿನ ಧರ್ಮಶಿಕ್ಷಣ ತರಗತಿಗಳಿಗೆ ಶೃಂಗೇರಿ ಜಗದ್ಗುರುಗಳಿಂದ ಚಾಲನೆ

0

ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಎರಡು ಸಾವಿರಕ್ಕೂ ಅಧಿಕ ಮಂದಿ ಧಾರ್ಮಿಕ ಕಾರ್ಯಕರ್ತರು

ಪುತ್ತೂರು: ಇಡಿಯ ದೇಶದಲ್ಲೇ ಪ್ರಪ್ರಥಮವಾಗಿ ಪುತ್ತೂರಿನಲ್ಲಿ ಜಾರಿಗೊಳಿಸಲು ಯೋಜಿಸಿರುವ ಹಿಂದೂ ಧರ್ಮ ಶಿಕ್ಷಣ ತರಗತಿಗಳಿಗೆ ಶ್ರೀ ಕ್ಷೇತ್ರ ಶೃಂಗೇರಿಯಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಧಾರ್ಮಿಕ ಶಿಕ್ಷಣದ ಮಾರ್ಗದರ್ಶಕರೂ, ಪ್ರೇರಕರೂ ಆದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಅಮೃತ ಹಸ್ತದಿಂದ ಧರ್ಮ ಶಿಕ್ಷಣ ತರಗತಿ – ಧರ್ಮಾಭ್ಯುದಯವನ್ನು  ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು ಹಿಂದೂ ಧರ್ಮವೆಂಬುದು ಅನಾದಿ ಕಾಲದಿಂದಲೂ ಬಂದ ಸನಾತನ ಧರ್ಮ. ಎಷ್ಟೇ ಜನ ಈ ಧರ್ಮವನ್ನು ನಾಶಗೊಳಿಸುತ್ತೇವೆಂದು ಅಂದುಕೊಂಡರೂ ಅದು ಅಸಾಧ್ಯ. ಯಾಕೆಂದರೆ ಇದು ಶಾಶ್ವತ ಧರ್ಮ ಎಂದರು.

ನಮ್ಮ ಧರ್ಮದ ಮೇಲೆ ದಾಳಿಗಳಾದಾಗ ರಕ್ಷಣೆಗಾಗಿ ಭಗವಂತ ಬರಲಿಲ್ಲ ಎಂದು ಆತನ ಅಸ್ತಿತ್ವವನ್ನೇ ಪ್ರಶ್ನಿಸುತ್ತೇವೆ. ಆದರೆ ಭಗವಂತ ಬರಲಿಲ್ಲ ಎಂಬುದರ ಅರ್ಥ ಆ ದಾಳಿಗಳನ್ನು ತಡೆಯುವ ಶಕ್ತಿ ನಮ್ಮಲ್ಲೇ ಇದೆ ಎಂಬುದಾಗಿದೆ. ನಾವೆಲ್ಲರೂ ಒಗ್ಗಟ್ಟಾದರೆ ಎಂತಹ ದಾಳಿಯನ್ನೂ ಎದುರಿಸಿ ನಿಲ್ಲಬಹುದು. ನಾವು ಆ ಕೆಲಸ ಮಾಡದೆ ಭಗವಂತ ಬರಲಿಲ್ಲ ಎನ್ನಬಾರದು. ನಮ್ಮ ಯಾರಿಂದಲೂ ಧರ್ಮರಕ್ಷಣೆ ಅಸಾಧ್ಯವಾದಾಗಲಷ್ಟೇ ಭಗವಂತ ಆಗಮಿಸುತ್ತಾನೆ ಎಂದು ಹೇಳಿದರು.

ನಾವಿಂದು ನಮ್ಮ ಮಕ್ಕಳಿಗೆ ಧರ್ಮದ ಜತೆಗೆ ಈ ದೇಶದ ನಿಜ ಇತಿಹಾಸವನ್ನು ಹೇಳಬೇಕು. ನಾವು ಸೋತದ್ದಕ್ಕಿಂತ ಸಾವಿರ ಪಟ್ಟು ಗೆದ್ದ ಇತಿಹಾಸಗಳಿವೆ. ಆದರೆ ನಾವದನ್ನು ನಮ್ಮ ಮಕ್ಕಳ ಪಠ್ಯದಲ್ಲಿ ತಿಳಿಸಿಕೊಡುತ್ತಿಲ್ಲ. ನಮ್ಮ ದೇಶದ ಉತ್ಕೃಷ್ಟ ವ್ಯಕ್ತಿಗಳ ಬಗೆಗೆ ಮಕ್ಕಳಿಗೆ ತಿಳಿಸಿಕೊಡುತ್ತಿಲ್ಲ. ಇದರಿಂದ ಈಗಾಗಲೇ ಸಾಕಷ್ಟು ಹಾನಿಯಾಗಿದೆ ಎಂದು ನುಡಿದರು.

ನಾವು ಸಂಪಾದಿಸಿದ ಯಾವುದನ್ನೂ ನಾವು ಜತೆಗೆ ಒಯ್ಯಲಾರೆವು. ಆದರೆ ಸಂಪಾದಿಸಿದ ಪುಣ್ಯ ಮಾತ್ರ ನಮ್ಮ ಜತೆ ಬರುತ್ತದೆ. ಅಂತಹ ಪುಣ್ಯ ಸಂಪಾದನೆಗೆ ಧರ್ಮಾಚರಣೆ ಅಗತ್ಯ. ಕಾಲ ಬದಲಾಗಿದೆ ಎಂದ ಮಾತ್ರಕ್ಕೆ ಧರ್ಮಾಚರಣೆಗಳನ್ನು ಮಾಡದಿರುವುದು ಸರಿಯಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಧರ್ಮ ಶಿಕ್ಷಣ ಸಮಿತಿ ಹಾಗೂ ಗ್ರಾಮಸಮಿತಿಗಳ ವತಿಯಿಂದ ಶ್ರೀ ಗುರುಗಳಿಗೆ ಫಲಪುಷ್ಪ ಸಮರ್ಪಿಸಲಾಯಿತು. ಶೃಂಗೇರಿ ಮಠದ ವಿದ್ವಾನ್ ತೇಜಶಂಕರ ಸೋಮಯಾಜಿ ಕಾರ್ಯಕ್ರಮ ನಿರ್ವಹಿಸಿದರು.

ಪುತ್ತೂರು ಮಹಾಲಿಂಗೇಶ್ವರ ದೇವಳದ ಆವರಣದಿಂದ ಪ್ರಯಾಣ ಆರಂಭ:
ಧರ್ಮ ಶಿಕ್ಷಣವನ್ನು ಜಾರಿಗೊಳಿಸುವ ಹಿನ್ನೆಲೆಯಲ್ಲಿ ಪುತ್ತೂರು ಹಾಗೂ ಕಡಬ ತಾಲೂಕುಗಳ ನಾನಾ ಭಾಗಗಳಲ್ಲಿ ಗ್ರಾಮ ಸಮಿತಿಗಳನ್ನು ರಚಿಸಲಾಗಿದ್ದು, ಆ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಧರ್ಮಾಭಿಮಾನಿ ಹಿಂದೂ ಕಾರ್ಯಕರ್ತರನ್ನೊಳಗೊಂಡ ಎರಡು ಸಾವಿರಕ್ಕೂ ಮೀರಿದ ಶೃಂಗೇರಿಯ ಭಕ್ತಜನ ಶೃಂಗೇರಿಯಲ್ಲಿ ನಡೆದ ಧರ್ಮ ಶಿಕ್ಷಣ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದರು. ಬೆಳಗ್ಗೆ ಒಂಬತ್ತು ಗಂಟೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ಆವರಣದಿಂದ ಐವತ್ತಕ್ಕೂ ಮೀರಿದ ಬಸ್ ಗಳಲ್ಲಿ ಧರ್ಮ ಶಿಕ್ಷಣದ ಕಾರ್ಯಕರ್ತರು ಶೃಂಗೇರಿಗೆ ಪ್ರಯಾಣ ಆರಂಭಿಸಿದರು. ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಪ್ರಯಾಣಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಧರ್ಮ ಶಿಕ್ಷಣ ಸಮಿತಿಯ ಅಧ್ಯಕ್ಷ ದಂಬೆಕಾನ ಸದಾಶಿವ ರೈ, ಕಾರ್ಯಾಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು, ಸಂಚಾಲಕ ಸುಬ್ರಮಣ್ಯ ನಟ್ಟೋಜ, ಧಾರ್ಮಿಕ ಶಿಕ್ಷಣ ನೇತಾರರಾದ ಮೊಗೆರೋಡಿ ಬಾಲಕೃಷ್ಣ ರೈ, ಎನ್.ಕೆ.ಜಗನ್ನಿವಾಸ ರಾವ್, ಆರ್.ಸಿ.ನಾರಾಯಣ, ಮಾಧವ ಸ್ವಾಮಿ, ಶೈಲೇಶ್ ರಾವ್, ದಿನೇಶ್ ಜೈನ್ ಮತ್ತಿತರ ಅನೇಕ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ಪ್ರಯಾಣಕ್ಕೂ ಪೂರ್ವದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಎಲ್ಲಾ ಭಕ್ತಾದಿಗಳಿಗೂ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಯಿತು.

ಅಭೂತಪೂರ್ವ ಕಾರ್ಯಕ್ರಮ:
ದೇಶದಲ್ಲೇ ಮೊದಲ ಬಾರಿಗೆ ರಾಜಕೀಯ, ಜಾತಿಗಳನ್ನು ಮೀರಿದ ತಾಲೂಕು ಧರ್ಮ ಶಿಕ್ಷಣ ಸಮಿತಿಯೊಂದು ಪುತ್ತೂರಿನಲ್ಲಿ ಅಸ್ತಿತ್ವಕ್ಕೆ ಬಂದಿದೆ. ಈ ಸಮಿತಿಯಲ್ಲಿ ಎಲ್ಲಾ ರಾಜಕೀಯ ಪಕ್ಷದ ನೇತಾರರೂ, ಜಾತಿಗಳ ಮುಖಂಡರೂ ಇರುವುದು ವಿಶೇಷ. ಯಾವುದೇ ವೈಯಕ್ತಿಕ ಸ್ವಾರ್ಥಗಳಿಲ್ಲದೆ ಈ ಧರ್ಮ ಶಿಕ್ಷಣದ ಯೋಜನೆ ಜಾರಿಗೆ ಬಂದಿದೆ. ಶೃಂಗೇರಿ ಜಗದ್ಗುರುಗಳ ಅಡಿದಾವರೆಗಳಲ್ಲಿ ಹಿಂದೂ ಸಮಾಜದ ಎಲ್ಲ ಬಂಧುಗಳು ಒಂದಾಗಿ ಧರ್ಮ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ಒದಗಿಸಿಕೊಡಬೇಕೆಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಶೃಂಗೇರಿಯ ಗುರುಭವನದ ತುಂಬ ಪುತ್ತೂರಿನ ಧರ್ಮ ಶಿಕ್ಷಣ ಅಭಿಯಾನದ ಸದಸ್ಯರು ತುಂಬಿ ಗುರುಭವನದ ಹೊರಗೂ ಅಸಂಖ್ಯ ಜನ ನಿಂತು ಕಾರ್ಯಕ್ರಮಕ್ಕೆ ಸಾಕ್ಷಿಯಾದದ್ದು ಅಭೂತಪೂರ್ವ ಕಾರ್ಯಕ್ರಮವೆನಿಸಿ ಇತಿಹಾಸದ ಪುಟಗಳಲ್ಲಿ ದಾಖಲಾಯಿತು.

ಶಾಲಾವಾಹನ, ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು:
ಪುತ್ತೂರಿನಿಂದ ಶೃಂಗೇರಿಗೆ ತೆರಳುವುದಕ್ಕಾಗಿ ವಿವಿಧ ವಿದ್ಯಾಸಂಸ್ಥೆಗಳು ಸ್ವಯಂಪ್ರೇರಣೆಯಿಂದ ಬಸ್ ಒದಗಿಸಿಕೊಟ್ಟದ್ದು ವಿಶೇಷವೆನಿಸಿತು. ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಗಳು ಹಾಗೂ ನರಿಮೊಗರಿನ ಸಾಂದೀಪನಿ ವಿದ್ಯಾಸಂಸ್ಥೆಗಳ ಶಾಲಾ ವಾಹನ ಬಸ್‌ಗಳು ಮಾತ್ರವಲ್ಲದೆ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳನ್ನು ನಿಗದಿಪಡಿಸಲಾಗಿತ್ತು. ಸುಮಾರು ಎರಡು ಸಾವಿರದಷ್ಟು ಮಂದಿ ಧಾರ್ಮಿಕ ಶಿಕ್ಷಣದ ಆಕಾಂಕ್ಷಿ ಭಕ್ತ ಜನ ಶೃಂಗೇರಿಗೆ ಈ ವಾಹನಗಳಲ್ಲಿ ಪ್ರಯಾಣಗೈದರು. ಎಲ್ಲರನ್ನೂ ಉಚಿತವಾಗಿ ಊಟೋಪಚಾರ ಸಹಿತ ಕರೆದೊಯ್ದದ್ದು ಗಮನಾರ್ಹವೆನಿಸಿತು.

ಧರ್ಮಾಭ್ಯುದಯ:
ತಮ್ಮ ಅಮೃತ ಹಸ್ತಗಳಿಂದ ಧರ್ಮ ಶಿಕ್ಷಣ ತರಗತಿಗಳಿಗೆ ಚಾಲನೆ ನೀಡಿರುವ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಧರ್ಮ ಶಿಕ್ಷಣ ತರಗತಿಗಳಿಗೆ ಧರ್ಮಾಭ್ಯುದಯ ಎಂದು ನಾಮಕರಣ ಮಾಡಿದ್ದಾರೆ. ಸ್ವತಃ ಜಗದ್ಗುರುಗಳೇ ಈ ಹೆಸರನ್ನು ನೀಡಿ ಧರ್ಮದ ಉಳಿವು ಬೆಳೆವಿಗಾಗಿ ಹರಸಿದ್ದು ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here