ಸೋಫಿಯಾ ಖುರೇಷಿ (ಮುಸ್ಲಿಂ), ವ್ಯೋಮಿಕ್ ಸಿಂಗ್ (ಸಿಖ್) ವಿಕ್ರಂ ಮಿಸ್ರಿ (ಹಿಂದು)ಯವರು ಪತ್ರಿಕಾಗೋಷ್ಠಿ ನಡೆಸುವಂತೆ ಮಾಡಿ ನಮ್ಮಲ್ಲಿ ಹಿಂದು, ಮುಸ್ಲಿಂ, ಸಿಖ್ ಎಂಬ ಭೇದವಿಲ್ಲ ಎಂದು ಜಗತ್ತಿಗೆ ತೋರಿಸಿಕೊಟ್ಟದ್ದಲ್ಲದೆ ಆಂತರಿಕವಾಗಿ ಕೋಮು ಭಾವನೆ ಉಂಟು ಮಾಡುವವರಿಗೆ ಮೋದಿಜೀ ಮಂಗಳಾರತಿ ಮಾಡಿದ್ದಾರೆ.
ದೇಶದ ಎಲ್ಲಾ ಜಾತಿ, ಧರ್ಮ, ಭಾಷೆ, ಪಕ್ಷದವರು ಪಾಕಿಸ್ತಾನದ ವಿರುದ್ಧದ ಆಪರೇಶನ್ ಸಿಂಧೂರದ ಯಶಸ್ಸಿಗೆ ಪ್ರಾರ್ಥನೆ ಮಾಡಿ ಸಾಮರಸ್ಯದ ನವ ಭಾರತಕ್ಕೆ ನಾಂದಿ ಹಾಡಿ ಅದಕ್ಕೆ ಬೆಂಬಲ ಸೂಚಿಸಿದ್ದಾರೆ.
ದೇಶದ ಹೊರಗಿನ ಭಯೋತ್ಪಾದನೆ ನಿರ್ಮೂಲನೆಯ ಕಠಿಣ ಜವಾಬ್ದಾರಿ ಮಿಲಿಟರಿಯ ಮೇಲಿದ್ದರೆ, ದೇಶದ ಒಳಗಿನ ಆಂತರಿಕ ಕಲಹ (ಭಯೋತ್ಪಾದನೆ, ಕೋಮುಗಲಭೆ) ನಿರ್ಮೂಲನೆಯ ಜವಾಬ್ದಾರಿ ಅತ್ಯಂತ ಕಠಿಣವಾಗಿದ್ದು ಅದರ ಯಶಸ್ಸಿಗೆ ಜನತೆ ಒಗ್ಗಟ್ಟಿನಲ್ಲಿದ್ದು ದಿನನಿತ್ಯ ಪ್ರಾರ್ಥಿಸಬೇಕಾಗಿದೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ 26 ಜನರ ಹತ್ಯೆಯ ಪ್ರತೀಕಾರವಾಗಿ ಪಾಕ್‌ನ ಭಯೋತ್ಪಾದಕ ಕೇಂದ್ರಗಳ ಮೇಲೆ ಆಪರೇಶನ್ ಸಿಂಧೂರ ದಾಳಿ ನಡೆಸಿದ ಬಗ್ಗೆ ಕರ್ನಲ್ ಸೋಫಿಯಾ ಖುರೇಷಿ (ಮುಸ್ಲಿಂ), ಕರ್ನಲ್ ವ್ಯೋಮಿಕ್ ಸಿಂಗ್ (ಸಿಖ್), ವಿಕ್ರಂ ಮಿಸ್ರಿ (ಹಿಂದೂ) ಪತ್ರಿಕಾಗೋಷ್ಠಿ ನಡೆಸಿ ಆಪರೇಶನ್ ಸಿಂಧೂರದ ಸಂಪೂರ್ಣ ಕಾರ್ಯಾಚರಣೆಯ ವಿವರಗಳನ್ನು ನೀಡಿದರು. ಈ ಮೇಲಿನ ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಮಹಿಳೆ, ಸಿಖ್ ಮಹಿಳೆ ಹಾಗೂ ಹಿಂದು ವ್ಯಕ್ತಿ ದಾಳಿಯ ವಿವರಗಳನ್ನು ನೀಡುವ ಮೂಲಕ ಭಾರತ ಎಲ್ಲಾ ಧರ್ಮಗಳ ದೇಶ ಎಂದು ಸಾರುವುದರೊಂದಿಗೆ ಇಲ್ಲಿ ಏಕತೆ ಮತ್ತು ಒಗ್ಗಟ್ಟಿದೆ ಎಂದು ಸಾರಿದ್ದರು.

ಈ ಸಂದೇಶ ಹೊರಗಿನ ದೇಶಗಳಿಗೆ ಎಷ್ಟು ಮುಖ್ಯವೋ ಅದಕ್ಕಿಂತ ಕಡಿಮೆ ಎನ್ನದೆ ನಮ್ಮ ದೇಶವಾಸಿಗಳಿಗೂ ಮುಖ್ಯ. ಅದರಲ್ಲೂ ದ.ಕ. ಜಿಲ್ಲೆಗೆ ಅತ್ಯಂತ ಪ್ರಮುಖ ಸಂದೇಶವಾಗಿದೆ. ಕಳೆದ ಹಲವಾರು ವರ್ಷಗಳಲ್ಲಿ ದ.ಕ. ಜಿಲ್ಲೆಯಲ್ಲಿ ಹಿಂದು, ಮುಸ್ಲಿಂ ಎಂಬ ಕಾರಣಗಳಿಗೆ ಹಲವಾರು ಹತ್ಯೆಗಳು ನಡೆದಿವೆ. ಅವು ಪ್ರತೀಕಾರದ ಹತ್ಯೆಗಳಾಗಿ ಮುಂದುವರೆಯುತ್ತಿವೆ. ಅಂತಹ ಘಟನೆಗಳು ನಡೆದಾಗ ಪ್ರತಿಭಟನೆಗಳು, ಬಂದ್‌ಗಳು ನಡೆದು ನಿರಪರಾಧಿಗಳು ಮತ್ತು ಅಮಾಯಕರ ಮೇಲೆ ಹಲ್ಲೆಗಳು ನಡೆದಿವೆ. ಇದರಿಂದಾಗಿ ಎಷ್ಟೋ ಸಲ ಅಪರಾಧಿಗಳು ಶಿಕ್ಷೆಗೆ ಒಳಗಾಗದೆ ತಮ್ಮ ತಮ್ಮ ಸಮುದಾಯದಿಂದ ರಕ್ಷಣೆಗೆ ಒಳಪಟ್ಟು ಹೀರೋ ಆಗಿ ಪರಿಗಣಿಸಲ್ಪಟ್ಟಿದ್ದಾರೆ. ಹತ್ಯೆಗೆ ಒಳಗಾದವರು ಅಪರಾಧಿಗಳಾಗಿದ್ದರೂ ಹೋರಾಟಗಾರರಂತೆ ಪರಿಗಣಿಸಲ್ಪಟ್ಟು ಮುಂದಿನ ಜನಾಂಗಕ್ಕೆ ಮಾದರಿಯಾಗುವ ಅಪಾಯವನ್ನು ತಂದಿಟ್ಟಿದ್ದಾರೆ. ರಾಜಕೀಯಕ್ಕಾಗಿ ಮತ್ತು ಓಟಿಗಾಗಿ ಕೋಮುದ್ವೇಷ ಹರಡುವವರು ಧರ್ಮ ರಕ್ಷಣೆಯೆಂದರೆ ತಮ್ಮ ಧರ್ಮವನ್ನು ಪ್ರೀತಿಸುವುದು ಮತ್ತು ರಕ್ಷಿಸುವುದು ಎಂದು ಅರ್ಥ ಮಾಡಿಕೊಳ್ಳ ಬೇಕು. ಆದರೆ ಅವರು ಉಳಿದ ಧರ್ಮವನ್ನು ದ್ವೇಷಿಸುವುದು ತಮ್ಮ ಧರ್ಮದ ರಕ್ಷಣೆ ಎಂಬ ಭಾವನೆಯನ್ನು ಸಮಾಜದಲ್ಲಿ ಹರಡುತ್ತಿದ್ದಾರೆ. ಅದಕ್ಕೆ ಬೆಂಬಲ ನೀಡುವ ಎಲ್ಲಾ ಸಮುದಾಯಗಳ ನಾಯಕರು ಈ ಆಪರೇಶನ್ ಸಿಂಧೂರದಿಂದ ಪಾಠ ಕಲಿತು ದೇಶದ ಅಂತರಿಕ ಭದ್ರತೆಗೆ, ಸಾಮರಸ್ಯಕ್ಕೆ ಒತ್ತು ಕೊಡಬೇಕಾಗಿದೆ. ಎಲ್ಲಾ ಜಾತಿ, ಧರ್ಮೀಯರು, ಭಾಷೆಯವರು ಮತ್ತು ಪ್ರಾಂತ್ಯದವರು ಭಾರತೀಯರು ನಾವೆಲ್ಲಾ ಒಂದೇ ಎಂಬ ಭಾವನೆ ಹರಡಬೇಕಾಗಿದೆ.

ಪ್ರಧಾನಿ ಮೋದಿಜೀಯವರ ಅಪೇಕ್ಷೆಯಂತೆ ಆಪರೇಶನ್ ಸಿಂಧೂರದ ಬಗ್ಗೆ ಮಾತನಾಡುತ್ತಾ ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ ಬೆಂಗಳೂರಿನಲ್ಲಿ ಸೈನ್ಯಕ್ಕೆ ಬೆಂಬಲ ತೋರಿಸುವ ಜಾಥದಲ್ಲಿ ಭಾಗವಹಿಸಿ, ದೇಶದ ಎಲ್ಲಾ ಜಾತಿ, ಧರ್ಮ, ಪಕ್ಷದವರು ದೇಶ ರಕ್ಷಣೆಯಲ್ಲಿ ನಮ್ಮೊಂದಿಗೆ ಇದ್ದಾರೆ. ಸರಕಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಘೋಷಿಸಿದ್ದಾರೆ. ದೇಶ ರಕ್ಷಣೆಯಾದರೆ ಮಾತ್ರ ನಾವು ಇರಲು ಸಾಧ್ಯ ಎಂದಿದ್ದಾರೆ. ಪ್ರಧಾನಿ ಮೋದೀಜಿಯವರ ಕಟು ಟೀಕಾಕಾರರು ಆಗಿರುವ AIMIM ಪಕ್ಷದ ಅಸ್ಸಾವುದ್ದೀನ್ ಓವೈಸಿಯವರು ಪಾಕಿಸ್ತಾನದ ವಿರುದ್ಧದ ಹೋರಾಟಕ್ಕೆ ದೇಶದ ಬೆಂಬಲಕ್ಕೆ ನಿಂತಿದ್ದಾರೆ. ದೇಶದ ಎಲ್ಲಾ ರಾಜಕೀಯ ಪಕ್ಷಗಳೂ, ಎಲ್ಲಾ ಧರ್ಮದವರೂ ಆಪರೇಷನ್ ಸಿಂಧೂರಕ್ಕೆ ಬೆಂಬಲ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರಂತವರು ಪ್ರಧಾನಿ ಮೋದಿಜೀ ಅನುಸರಿಸಿದ ಹಾದಿಯಲ್ಲೇ ಸಾಗಿ ತಮ್ಮ ತಾಲೂಕಿನಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ನಡುವೆ ಸಾಮರಸ್ಯ ಉಂಟು ಮಾಡಬೇಕಾದ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗಿದೆ. ತೆಕ್ಕಾರು ಹಿಂದುಗಳ ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಕೆಲವು ಮುಸ್ಲಿಮರು ಮಾಡಿದ್ದ ತಪ್ಪನ್ನು ಟೀಕಿಸಿದ್ದು ಸರಿ. ಆದರೆ ಅದನ್ನು ಎಲ್ಲರಿಗೂ ಅನ್ವಯ ಮಾಡಿ ಅಲ್ಲಿಯ ಎಲ್ಲಾ ಮುಸ್ಲಿಮರನ್ನು ಟೀಕಿಸಿ ದೇವಸ್ಥಾನದ ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡಿ ಬೆಂಬಲ ನೀಡಿದ ಮುಸ್ಲಿಂರಿಗೂ ಭಾಗವಹಿಸಲು ಅವಕಾಶ ಮತ್ತು ಆಮಂತ್ರಣ ನೀಡಲೇಬಾರದಿತ್ತು ಎಂದು ಹೇಳಿದ್ದು ಸರಿಯೇ?. ಅವರು ತಮ್ಮ ಆ ಮಾತನ್ನು ಕಾಶ್ಮೀರದಲ್ಲಿ ಅಥವಾ ಆಪರೇಶನ್ ಸಿಂಧೂರದ ಬಗ್ಗೆ ಮಾತನಾಡಿದ ಕರ್ನಲ್ ಸೋಫಿಯಾ ಖುರೇಷಿ (ಮುಸ್ಲಿಂ), ವ್ಯೋಮಿಕ್ ಸಿಂಗ್ (ಸಿಖ್) ವಿಕ್ರಂ ಮಿಸ್ರಿ (ಹಿಂದು) ಅವರ ಎದುರು ಹೇಳಿದರೆ ಅದರ ಪರಿಣಾಮ ಏನಾದೀತು? ಅವರಿಗೆ ಅಲ್ಲಿ ಸ್ವಾಗತ ಸಿಕ್ಕೀತೇ? ಧಿಕ್ಕಾರ ದೊರಕೀತೇ? ಎಂದು ಅವರು ಮತ್ತು ಅವರಂತಹ ನಾಯಕರು ಅರ್ಥ ಮಾಡಿಕೊಳ್ಳಬೇಕು. ದೇಶ ರಕ್ಷಣೆಯಾದರೆ ಮಾತ್ರ ಧರ್ಮ ರಕ್ಷಣೆಯಾಗುತ್ತದೆ. ಸಾಮರಸ್ಯದಲ್ಲಿ ಎಲ್ಲಾ ಸಮುದಾಯದವರು ಪರಸ್ಪರ ಗೌರವದಿಂದ ಬಾಳಿದರೆ ದೇಶ ರಕ್ಷಣೆಯಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು ಹರೀಶ್ ಪೂಂಜ ಬೆಳ್ತಂಗಡಿಯ ಶಾಸಕರಾಗಿ ಕೆಲಸ ಮಾಡಲಿ ಇದು ಜಿಲ್ಲೆಯ ಎಲ್ಲಾ ಧರ್ಮಗಳ ನಾಯಕರುಗಳಿಗೆ ಅನ್ವಯವಾಗಲಿ ಎಂದು ಆಶಿಸುತ್ತೇನೆ.
– ಡಾ.ಯು.ಪಿ ಶಿವಾನಂದ