ಸಾರಥಿ ಸ್ವಾವಲಂಬಿ ಯೋಜನೆಯಡಿ ವಾಹನ ವಿತರಣೆ

0

ಎಲ್ಲಾ ಕ್ಷೇತ್ರದಲ್ಲಿ ಸರಕಾರದ ಸಾಧನೆ ಮೆಚ್ಚತಕ್ಕದ್ದು ; ಶಾಸಕ ಅಶೋಕ್ ರೈ


ಪುತ್ತೂರು: ಅಂಬೇಡ್ಕರ್ ನಿಗಮದ ಸಾರಥಿ ಸ್ವಾವಲಂಬಿ ಯೋಜನೆಯಡಿ ಪುತ್ತೂರು ವಿಧಾನಸಭಾ ಕ್ಷೇತ್ರದ ಓರ್ವ ಫಲಾನುಭವಿಗೆ ವಾಹನ ಮಂಜೂರಾಗಿದ್ದು ಶಾಸಕ ಅಶೋಕ್ ರೈ ಅವರು ವಾಹನದ ಕೀಯನ್ನು ಫಲಾನುಭವಿಗೆ ಹಸ್ತಾಂತರ ಮಾಡಿದರು. ಪಡ್ನೂರು ಗ್ರಾಮದ ಸೇಡಿಯಾಪು ನಿವಾಸಿ ಸುಂದರ್ ರವರು ಈ ಯೋಜನೆಗೆ ಆಯ್ಕೆಯಾಗಿದ್ದಾರೆ.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಶೋಕ್ ರೈ , ಸರಕಾರದ ಐದು ಗ್ಯಾರಂಟಿ ಯೋಜನೆಯ ಜೊತೆಗೆ ಎಲ್ಲಾ ಕ್ಷೇತ್ರದಲ್ಲೂ ಜನತೆಗೆ ನೆರವಾಗುವ ಯೋಜನೆಯನ್ನು ಜಾರಿಮಾಡುತ್ತಿದೆ. ದಲಿತ ಕುಟುಂಬದವರೂ ಸ್ವಾವವಲಂಬಿಗಳಾಗಿ ಜೀವನ ಸಾಗಿಸಬೇಕು ಎಂಬ ಉದ್ದೇಶದಿಂದ ಸರಕಾರ ವಾಹನವನ್ನು ನೀಡುತ್ತಿದೆ. ಪುತ್ತೂರು ವಿಧಾಸಭಾ ಕ್ಷೇತ್ರ ವ್ಯಾಪ್ತಿಯ ಓರ್ವ ಫಲಾನುಭವಿಗೆ ಈ ಬಾರಿ ಕಾರು ನೀಡಲಾಗಿದೆ. ಇನ್ನೊಂದು ಯೋಜನೆಯಲ್ಲಿ ಕಳೆದ ತಿಂಗಳು ಪಿಕಪ್ ವಾಹನವನ್ನು ನೀಡಲಾಗಿತ್ತು. ದಲಿತ ಕುಟುಂಬಗಳಿಗೆ ಉಚಿತ ಕೊಳವೆ ಬಾವಿಯನ್ನು ಸರಕಾರ ಮಂಜೂರು ಮಾಡುತ್ತಿದ್ದು ಅರ್ಹ ಎಲ್ಲಾ ಫಲಾನುಭವಿಗಳಿಗೂ ಅದನ್ನು ವಿತರಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು. ಸರಕಾರ ವಿವಿಧ ಸವಲತ್ತುಗಳನ್ನು ಬಡವರಿಗೆ ನೀಡುತ್ತಿದ್ದು ಅರ್ಜಿ ಹಾಕುವ ಮೂಲಕ ಅದನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.


ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ ರವರು ಮಾತನಾಡಿ, ದಲಿತರ ಶ್ರೆಯೋಭಿವೃದ್ದಿಗೆ ಕಾಂಗ್ರೆಸ್ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ.ಈಗಾಗಲೇ ನೂರಕ್ಕೂ ಮಿಕ್ಕಿ ಕೊಳವೆ ಬಾವಿಗಳನ್ನು ನೀಡಲಾಗಿದೆ, ಅಂಬೇಡ್ಕರ್ ಭವನಕ್ಕೆ ಹೆಚ್ಚಿನ ಅನುದಾನವನ್ನು ಸರಕಾರ ನೀಡಿದೆ. ಕಾಂಗ್ರೆಸ್ ಸರಕಾರ ದಲಿತರ ಪರವಾಗಿದೆ ಎಂಬುದು ಇದರಲ್ಲಿ ಸಾಬೀತಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷರಾದ ಸೋಮನಾಥ, ಲತಾ ಸೇಡಿಯಾಪು ಮತ್ತಿತರರು ಉಪಸ್ತಿತರಿದ್ದರು.

LEAVE A REPLY

Please enter your comment!
Please enter your name here