ಉಪ್ಪಿನಂಗಡಿ: ಇಲ್ಲಿನ ಹಳೇಗೇಟು ಬಳಿ ಕಳೆದ 23 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಅರಫಾ ವಿದ್ಯಾ ಸಂಸ್ಥೆಯಲ್ಲಿ ಈ ಶೈಕ್ಷಣಿಕ ವರ್ಷದಿಂದ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳಿಗೆ ಕ್ಯಾಂಬ್ರಿಜ್ ವಿಶ್ವವಿದ್ಯಾನಿಲಯದ ಸಿಲೆಬಸ್ (ಪಠ್ಯಕ್ರಮ) ಹಾಗೂ ಅರೇಬಿಕ್ ಶಿಕ್ಷಣವನ್ನು ಮದೀನ ವಿಶ್ವವಿದ್ಯಾನಿಲಯದ ಪಠ್ಯಕ್ರಮದಂತೆ ಅಂತರಾಷ್ಟ್ರೀಯ ಮಟ್ಟದ ಆಟಿಕೆ ಮತ್ತು ನೂತನ ಕ್ಲಾಸ್ ರೂಂ ಒಳಗೊಂಡಂತೆ ವಿವಿಧ ಶೈಕ್ಷಣಿಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಅರಫಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಶಫೀಕ್ ಅರಫಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು, 23 ವರ್ಷದ ಹಿಂದೆ ಉಪ್ಪಿನಂಗಡಿ ಹಾಗೂ ಪರಿಸರದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಸಿದ್ದಿಕ್ ಹಾಜಿ ಅರಫಾರವರ ಕನಸಿನಂತೆ ಸಂಸ್ಥೆ ಆರಂಭಗೊಂಡು ಎತ್ತರಕ್ಕೆ ಬೆಳೆದು ನಿಂತಿದ್ದು, ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಶವನ್ನು ಪಡೆಯುತ್ತಿದೆ. ಪ್ರಸಕ್ತ ಸಾಲಿನಲ್ಲಿ ರಾಬಿಯಾ 602 ಅಂಕಗಳನ್ನು ಪಡೆದು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾಳೆ. ಶೇಕಡಾ 90ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶವನ್ನು ಸಂಸ್ಥೆಯು ಹೊಂದಿದೆ. ಇದೀಗ ಒನ್ನೆಸ್ ಸ್ಕೂಲ್ ಸಹಭಾಗಿತ್ವದಲ್ಲಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದು, ಸಂಸ್ಥೆಯಲ್ಲಿ ಅರೇಬಿಕ್ ಪಠ್ಯಕ್ರಮವನ್ನೂ ಅಳವಡಿಸಲಾಗಿದೆ. ವಿವಿಧ ಸಾಂಸ್ಕೃತಿಕ, ವಿಜ್ಞಾನ, ಕ್ರೀಡೆಗೆ ಮಕ್ಕಳನ್ನು ಪ್ರೇರೇಪಿಸುತ್ತಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿದ್ಯಾ ಸಂಸ್ಥೆಯ ನಿರ್ದೇಶಕರಾದ ನಝೀರ್ ಮಠ, ಕೆ.ಎಂ. ನೌಶಾದ್, ಹಮೀದ್ ಭಾರತ್, ಶರೀಕ್ ಅರಫಾ ಉಪಸ್ಥಿತರಿದ್ದರು.