ರಾಮಕುಂಜ: ಇನ್ನು ಕೆಲವೇ ದಿನಗಳಲ್ಲಿ ಶಾಲೆಗಳು ಪುನರಾರಂಭಗೊಳ್ಳಲಿದೆ. ಖಾಸಗಿ ಶಾಲೆಗಳ ಪೈಪೋಟಿ ನಡುವೆ ಸರಕಾರಿ ಶಾಲೆಗಳಲ್ಲೂ ಮಕ್ಕಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಎಸ್ಡಿಎಂಸಿ ನಾನಾ ಕಸರತ್ತು ನಡೆಸುತ್ತಿದೆ. ಈ ಬಾರಿ ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹೊಸ ಮೆರುಗು ಪಡೆದುಕೊಂಡು ಮುಂದಿನ ಶೈಕಣಿಕ ಸಾಲಿಗೆ ಸಜ್ಜುಗೊಂಡು ನಿಂತಿದೆ.
ಶಾಲೆಯ ಮುಖ್ಯಶಿಕ್ಷಕರ ಸಹಕಾರದಿಂದ ಶಾಲೆಗೆ ಆಕರ್ಷಕ ಪೈಂಟಿಂಗ್ ಮಾಡಲಾಗಿದೆ. ದ್ವಾರಕಾ ಕಾರ್ಪೊರೇಶನ್ ಪ್ರೈವೇಟ್ ಲಿಮಿಟೆಡ್ನವರ ಸಹಕಾರದೊಂದಿಗೆ ಶಾಲೆಯ ಆಟದ ಮೈದಾನ ಸಮತಟ್ಟು ಮಾಡಲಾಗಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಮ್ಮಾರದಲ್ಲಿ ಹೆದ್ದಾರಿ ಬದಿಯೇ ಕಾಣುತ್ತಿರುವ ಕೆಮ್ಮಾರ ಸರಕಾರಿ ಉ.ಹಿ.ಪ್ರಾ.ಶಾಲೆ ಇದೀಗ ಹೊಸ ರೂಪ ಪಡೆದುಕೊಂಡಿದ್ದು ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರ ಗಮನ ಸೆಳೆಯುತ್ತಿದೆ. ಪರಿಸರದ ಮಕ್ಕಳನ್ನು ಶಾಲೆಗೆ ಕೈಬೀಸಿ ಕರೆಯುವಂತೆ ಶಾಲೆ ಸಿದ್ಧಗೊಂಡು ನಿಂತಿದೆ.
55 ಸಾವಿರ ರೂ.ವೆಚ್ಚದಲ್ಲಿ ಪೈಂಟಿಂಗ್:
2025-26ನೇ ಸಾಲಿಗೆ ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಶಾಲೆಗೆ ಹೊಸ ಮೆರುಗು ನೀಡಲು ಶಾಲೆಯ ಮುಖ್ಯಶಿಕ್ಷಕಿ ಜಯಶ್ರೀ ಅವರೇ ಮುಂದಾಗಿದ್ದಾರೆ. ಸುಮಾರು 55ಸಾವಿರ ರೂ.ವೆಚ್ಚದಲ್ಲಿ ಶಾಲೆಯ ಗೋಡೆಗೆ ಪೈಂಟಿಂಗ್ ಮಾಡಲಾಗಿದ್ದು ಇದರಲ್ಲಿ ಹೆದ್ದಾರಿಯಲ್ಲಿ ಹಾದುಹೋಗುವಂತೆ ಭಾಸವಾಗುವ ಸರಕಾರಿ ಸಾರಿಗೆ ಬಸ್ಸಿನ ಚಿತ್ರ ವಿನ್ಯಾಸಗೊಳಿಸಲಾಗಿದೆ. ಇದು ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರ ಗಮನವೂ ಸೆಳೆಯುತ್ತಿದೆ. ಇದಕ್ಕೆ ಸುಮಾರು 55 ಸಾವಿರ ರೂ.ವೆಚ್ಚವಾಗಿದ್ದು ಇದರಲ್ಲಿ ರೂ.27 ಸಾವಿರದಷ್ಟು ಮೊತ್ತವನ್ನು ಶಾಲೆಯ ಮುಖ್ಯಶಿಕ್ಷಕಿ ಜಯಶ್ರೀ ಅವರೇ ಭರಿಸಿದ್ದಾರೆ. ಉಳಿದಂತೆ ಎಸ್ಡಿಎಂಸಿ ಹಾಗೂ ದಾನಿಗಳ ಸಹಕಾರದಿಂದ ಇದನ್ನು ಮಾಡಲಾಗಿದೆ.


ಆಟದ ಮೈದಾನ ಸಮತಟ್ಟು:
ಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಗಳಿಸಿರುವ ಪುತ್ತೂರಿನ ದ್ವಾರಕಾ ಕಾರ್ಪೊರೇಶನ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನಕ್ಕೆ ಮಣ್ಣು ಹಾಕಿ ಸಮತಟ್ಟು ಮಾಡಿ ಕೊಟ್ಟಿದ್ದಾರೆ. ತಮ್ಮ ವ್ಯವಹಾರದಲ್ಲಿ ಸಮಾಜಕ್ಕೂ ಒಂದು ಪಾಲು ಎಂಬ ಸದುದ್ದೇಶದೊಂದಿಗೆ ಕಾರ್ಯಾಚರಿಸುತ್ತಿರುವ ಈ ಸಂಸ್ಥೆಯು ಶಾಲಾ ಆಟದ ಮೈದಾನವನ್ನು ಅಂದಾಜು ರೂ.5 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದೆ. ಆಟದ ಮೈದಾನಕ್ಕೆ ಮಣ್ಣು ಹಾಕಿ ಅಚ್ಚುಕಟ್ಟಾಗಿ ಸಮತಟ್ಟು ಮಾಡಿಕೊಟ್ಟಿದ್ದಾರೆ. ದ್ವಾರಕಾ ಸಂಸ್ಥೆಯವರ ಈ ಸಾಮಾಜಿಕ ಸೇವೆಗೆ ಶಾಲಾ ಮುಖ್ಯಗುರು, ಅಧ್ಯಾಪಕ ವೃಂದ, ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ, ಪೋಷಕರು ಹಾಗೂ ಊರವರು ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

ಶಾಲೆಗೆ 3.5 ಎಕ್ರೆ ಜಾಗವಿದೆ:
ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಮೊದಲ ಮುಖ್ಯಗುರು ರಾಮಕೃಷ್ಣ ಮಯ್ಯ ಅವರು. ಇವರ ಮಾರ್ಗದರ್ಶನದೊಂದಿಗೆ ಅಂದಿನ ಊರಿನ ಹಿರಿಯರು ಅಡಿಪಾಯ ಹಾಕಿಕೊಟ್ಟಿದ್ದರಿಂದ ಕೆಮ್ಮಾರದಲ್ಲಿ ರಾಜ್ಯ ಹೆದ್ದಾರಿಗೆ ತಾಗಿಕೊಂಡು ಶಾಲೆಗೆ ಸುಮಾರು 3.5 ಎಕರೆ ಜಾಗವಿದೆ. ಶಾಲೆಯ ಅಭಿವೃದ್ಧಿಯಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘ, ಹಲವು ಸ್ಥಳೀಯ ಮುಖಂಡರು, ಶಾಲಾಭಿವೃದ್ದಿ ಸಮಿತಿ, ಶಿಕ್ಷಕ ವೃಂದ, ಎಸ್ಡಿಎಂಸಿ ಮಾಜಿ ಪದಾಧಿಕಾರಿಗಳ ತಂಡ ಶ್ರಮಿಸುತ್ತಿದೆ. ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಅಝೀಝ್ ಬಿ.ಕೆ ಮತ್ತು ಸದಸ್ಯರು ಶಾಲೆಯ ಅಭಿವೃದ್ಧಿಗಾಗಿ ತೋರಿದ ಕಾಳಜಿಯಿಂದ ಶಾಲೆಯು ಪ್ರಗತಿಯತ್ತ ಸಾಗುತ್ತಿದೆ ಎಂದು ಶಾಲಾ ಮುಖ್ಯಶಿಕ್ಷಕಿ ಜಯಶ್ರೀ ಅವರು ಹೇಳುತ್ತಿದ್ದಾರೆ.
ಶಾಲೆಯ ಮುಖ್ಯಶಿಕ್ಷಕಿ ಜಯಶ್ರೀ ಎಮ್.ಅವರ ಮುತುವರ್ಜಿಯಿಂದ ಶಾಲೆಯ ಗೋಡೆಗೆ ಪೈಂಟಿಂಗ್ ಮಾಡಲಾಗಿದೆ. ಇದಕ್ಕೆ ಮುಖ್ಯಶಿಕ್ಷಕಿಯವರೊಬ್ಬರೇ 27 ಸಾವಿರ ರೂ.ಖರ್ಚು ಮಾಡಿದ್ದಾರೆ. ದ್ವಾರಕ ಸಮೂಹ ಸಂಸ್ಥೆಯ ಗೋಪಾಲಕೃಷ್ಣ ಭಟ್ರವರು ಶಾಲೆಯ ಆಟದ ಮೈದಾನ ಸಮತಟ್ಟು ಮಾಡಿ ಕೊಡುವ ಮೂಲಕ ಶಾಲೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಶಾಲೆಯ ಅಭಿವೃದ್ಧಿಗೆ ಕಾಳಜಿ ತೋರಿದ ಇವರಿಗೆ ಹಾಗೂ ದಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇವೆ.
ಅಝೀಝ್ ಬಿ.ಕೆ., ಅಧ್ಯಕ್ಷರು, ಎಸ್ಡಿಎಂಸಿ