ಪ್ರಿಯದರ್ಶಿನಿಯಲ್ಲಿ ‘ವರ್ಣದರ್ಶಿನಿ’ ಸಮಾರೋಪ – ಶಿಕ್ಷಕರ ಪೂರ್ಣ ಕಾರ್ಯಕ್ಷಮತೆಯೇ ಯಶಸ್ವೀ ಶಿಬಿರಕ್ಕೆ ಕಾರಣ- ಚಿದಾನಂದ ಬೈಲಾಡಿ

0

ಬೆಟ್ಟಂಪಾಡಿ: ಸುಮಾರು 5 ದಿನಗಳ ಕಾಲ ವರ್ಣರಂಜಿತವಾಗಿ ನಡೆದ ವರ್ಣದರ್ಶಿನಿ ಮಕ್ಕಳ ಕಲಾಸಂಘಮವು ಮೇ.14 ರಂದು ಸಮಾರೋಪಗೊಂಡಿತು.

ಈ ಕಾರ್ಯಕ್ರಮದಲ್ಲಿ ನೋಟರಿ ನ್ಯಾಯವಾದಿ, ಶಾಲಾ ಬೆಳ್ಳಿಹಬ್ಬ ಸಮಿತಿಯ ಗೌರವಾಧ್ಯಕ್ಷರಾಗಿರುವ ಚಿದಾನಂದ ಬೈಲಾಡಿ ಅವರು ಮಾತನಾಡುತ್ತಾ, ‘ಒಂದು ಶಾಲೆಯಲ್ಲಿ ಶೈಕ್ಷಣಿಕ ಸಾಂಸ್ಕೃತಿಕದಂತಹ ಯಾವುದೇ ಕಾರ್ಯಗಳು ಯಶಸ್ವಿಗೊಳ್ಳುವುದು ಶಿಕ್ಷಕರ ಪೂರ್ಣ ಕಾರ್ಯಕ್ಷಮತೆಯಿಂದ. ಇಂತಹ ಶಿಬಿರಗಳಲ್ಲಿ ಭಾಗವಹಿಸಲು ಮಕ್ಕಳನ್ನು ಪ್ರೋತ್ಸಾಹಿಸುವ ಗುಣ ಪೋಷಕರಲ್ಲಿದ್ದುದರಿಂದ ಈ ಶಿಬಿರ ಇನ್ನಷ್ಟು ರಂಗೇರಲು ಕಾರಣವಾಯಿತು ಎಂದು ಸಮಾರೋಪ ಮಾತುಗಳನ್ನಾಡಿದರು.

ಮುಖ್ಯ ಅತಿಥಿಗಳಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹ ನಿರ್ದೇಶಕ ವೆಂಕಟರಮಣ ರಾವ್ ಮಂಕುಡೆ ಪೋಷಕರನ್ನು ಉದ್ದೇಶಿಸಿ ಮಾತನಾಡುತ್ತಾ ‘ಅಂಕಗಳಿಕೆಗೋಸ್ಕರ ಮಕ್ಕಳನ್ನು ಹುರಿದುಂಬಿಸುವಂತಹ ಶಾಲೆಗಳು ಅದೆಷ್ಟೋ ಇರಬಹುದು. ಆದರೆ ಸಂಸ್ಕಾರ ಗಳಿಕೆ ಜೀವನದ ಭಾಗವಾಗಬೇಕು. ಈ ಶಾಲೆಗೆ ನಿಮ್ಮ ಮಗುವನ್ನು ದಾಖಲಾತಿಗೊಳಿಸಿ ಒಳ್ಳೆಯ ಕೆಲಸ ನಿರ್ವಹಿಸಿರುತ್ತೀರಿ’ ಎಂದರು. ಮುಕ್ತಾಯದರ್ಶಿನಿಯ ಅಧ್ಯಕ್ಷ ಸ್ಥಾನವನ್ನು ವಹಿಸಿದ ಆಡಳಿತ ಮಂಡಳಿಯ ಕೋಶಾಧಿಕಾರಿ ಕರುಣಾಕರ ಶೆಟ್ಟಿ ಕೊಮ್ಮಂಡ ಮಾತನಾಡುತ್ತಾ, ‘ಮುಖ್ಯ ಗುರುಗಳ ಹಾಗೂ ಶಿಕ್ಷಕ ವೃಂದದವರ ನಿರಂತರ ಪರಿಶ್ರಮ ಶಿಬಿರದ ಯಶಸ್ವಿಗೆ ಕಾರಣವಾಗಿದೆ ಎಂದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಸಂಚಾಲಕ ಡಾ. ಸತೀಶ್ ರಾವ್, ಸಂಪನ್ಮೂಲ ವ್ಯಕ್ತಿ ರಮೇಶ್ ಉಳಯ ಉಪಸ್ಥಿತರಿದ್ದರು.

ಶಿಬಿರಾರ್ಥಿಗಳೊಂದಿಗೆ ನಾಟಕ ದರ್ಶಿನಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮೇಶ್ ಉಳಯ, ಯೋಗದರ್ಶಿನಿಯಲ್ಲಿ ದಿಶಾ ಯೋಗ ಶಿಕ್ಷಣ ಸಂಸ್ಥೆ ಇದರ ಮುಖ್ಯಸ್ಥರಾದ ಚಂದ್ರಶೇಖರ ಗುರೂಜಿ, ಕರಕುಶಲ ದರ್ಶಿನಿಯಲ್ಲಿ ಸ.ಹಿ.ಪ್ರಾ ಶಾಲೆ ಮುಕ್ವೆ ಇಲ್ಲಿನ ಅಧ್ಯಾಪಕರಾದ ಚರಣ್ ಕುಮಾರ್ ಪುದು, ವರ್ಣದರ್ಶಿನಿಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಎಕ್ಸಲೆಂಟ್ ಮೂಡಬಿದಿರೆ ಶಾಲೆಯ ಶಾಲಾ ಶಿಕ್ಷಕ ಭಾಸ್ಕರ್ ನೆಲ್ಯಾಡಿ, ಜಾನಪದ ದರ್ಶಿನಿಯಲ್ಲಿ ಪಿ.ಎಂ.ಶ್ರೀ ಶಾಲೆ ವಿರಮಂಗಲ ಇಲ್ಲಿನ ಮುಖ್ಯಶಿಕ್ಷಕ ತಾರಾನಾಥ ಸವಣೂರು, ಪುರಾಣ ದರ್ಶಿನಿಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಶೈಕ್ಷಣಿಕ ಪರಿವೀಕ್ಷಣಾಧಿಕಾರಿಗಳಾದ ರಘುರಾಜ ಉಬರಡ್ಕ, ರಂಗವಲ್ಲಿ ದರ್ಶಿನಿಯಲ್ಲಿ ಕರಕುಶಲ ಕಲಾವಿದರಾದ ರೋಹಿಣಿ ರಾಘವ, ಕೃಷಿದರ್ಶಿನಿಯಲ್ಲಿ ಪ್ರಗತಿಪರ ಕೃಷಿಕರಾದ ಹರಿಕೃಷ್ಣ ಕಾಮತ್ ದುರ್ಗಾಗಿರಿ, ಸಂಗೀತದರ್ಶಿನಿಯಲ್ಲಿ ಸ ಹಿ ಪ್ರಾ ಶಾಲೆ ಶೇಡಿಗುರಿ ಇಲ್ಲಿನ ರಾಮ ನಾಯ್ಕ ಕೊಜಪ್ಪೆ ಇವರುಗಳು ಭಾಗವಹಿಸಿ ಶಿಬಿರದ ಯಶಸ್ಸಿಗೆ ಕಾರಣರಾದರು.

ಸಂಸ್ಕಾರ ದರ್ಶಿನಿಯಲ್ಲಿ ವೈಯಕ್ತಿಕ ಸಂಸ್ಕಾರ ವಿಷಯದ ಕುರಿತು ಅವಿನಾಶ್ ಕೊಡಂಕಿರಿ ಇವರಿಂದ ಮಾತುಕತೆ, ಜ್ಞಾನ ದರ್ಶಿನಿಯಲ್ಲಿ ವೈಯಕ್ತಿಕ ಜ್ಞಾನ ಶೈಕ್ಷಣಿಕ ಕೌಶಲ್ಯಗಳು ವಿಷಯದ ಕುರಿತು ಡಾ. ಹರಿಪ್ರಸಾದ್ ಎಸ್ ಇವರಿಂದ ಸಂವಾದ ಕಾರ್ಯಕ್ರಮ, ಪ್ರತಿಭಾ ದರ್ಶಿನಿಯಲ್ಲಿ ವೈಯಕ್ತಿಕ ಪ್ರತಿಭೆ ಡಾ. ಶೋಭಿತ ಸತೀಶ್ ಇವರಿಂದ ಮಾತುಕತೆ ಹಾಗೂ ಆನಂದ ದರ್ಶಿನಿಯಲ್ಲಿ ಶ್ರೀಹರಿ ದರ್ಬೆ ಇವರ ಮನೆಯಲ್ಲಿ ಕಶಿ ಕಟ್ಟುವ ಕೌಶಲ್ಯ ಮತ್ತು ಹೊಳೆಯಲ್ಲಿ ನೀರಾಟವಾಡುತ್ತ ಮಕ್ಕಳು ಕುಣಿದು ಕುಪ್ಪಳಿಸಿದರು. ಸಮಾರೋಪದ ಸಾಂಸ್ಕೃತಿಕ ಭಾಗವಾಗಿ ನಾಟಕ, ವೀರಗಾಸೆ, ಕನ್ಯಾಪುಕುಣಿತ, ಚೆನ್ನು ನಲಿಕೆಗಳು ಪ್ರದರ್ಶನಗೊಂಡವು.

ಮುಕ್ತಾಯದ ದರ್ಶಿನಿಯಲ್ಲಿ ಎರಡು ಲಘು ಪ್ರಕಟಣೆಗಳು (ಬುಲೆಟಿನ್) ಬಿಡುಗಡೆಗೊಂಡವು. ಶಿಬಿರಾರ್ಥಿಗಳು, ಶಿಕ್ಷಕರೂ, ಪೋಷಕರು ಸೇರಿದಂತೆ ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಹ ಶಿಕ್ಷಕಿ ಶ್ರೀಮತಿ ಸಂಧ್ಯಾ ಎ ಸ್ವಾಗತಿಸಿ, ಮುಖ್ಯಗುರು ರಾಜೇಶ್ ಎನ್ ವಂದಿಸಿದರು. ಸಹಶಿಕ್ಷಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here