ಸದಸ್ಯರ ಸಹಕಾರದೊಂದಿಗೆ ಇನ್ನಷ್ಟೂ ಒಳ್ಳೆಯ ರೀತಿಯಲ್ಲಿ ಸಂಘವನ್ನು ಮುನ್ನಡೆಸಲು ಪ್ರಯತ್ನ; ರಮೇಶ್ ಭಟ್
ಆಲಂಕಾರು: ಮುಂದಿನ 5 ವರ್ಷಗಳ ಅವಧಿಗೆ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ರಮೇಶ್ ಭಟ್ ಯು., ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ದಯಾನಂದ ರೈ ಮನವಳಿಕೆ ಹಾಗೂ ನಿರ್ದೇಶಕರಾಗಿ ಅಭಿನಂದನಾ ಸಭೆ ಮೇ 23ರಂದು ಸಂಘದ ದೀನದಯಾಳು ರೈತ ಸಭಾಭವನದಲ್ಲಿ ನಡೆಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ರಮೇಶ್ ಭಟ್ ಅವರು, ಮತ್ತೆ ಸಂಘದ ನಿರ್ದೇಶಕನಾಗಿ ಚುನಾಯಿತನಾಗಿ, ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಈ ಹಿಂದಿನಂತೆ ಆಕಸ್ಮಿಕ ಹಾಗೂ ಕಾಲ ನಿರ್ಣಯವಾಗಿದೆ. ಯಾವುದೇ ಉದ್ದೇಶವಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಸಂಸ್ಥೆಯ ಹಿತದೃಷ್ಟಿಯಿಂದ ಹಿರಿಯರ ಮಾತಿಗೆ ತಲೆಬಾಗಿ ಮತ್ತೆ ಸ್ಪರ್ಧೆ ಮಾಡಿದ್ದೇನೆ. ಇಂದಿನ ಪರಿಸ್ಥಿತಿಯಲ್ಲಿ ಇವೆಲ್ಲವನ್ನು ನಿಭಾಯಿಸುವುದು ಕಷ್ಟವೇ ಆಗಿದೆ. ಆದರೂ ಎಲ್ಲರ ಸಹಕಾರದಿಂದ ಆಡಳಿತ ಮಂಡಳಿಯ ಸದಸ್ಯರ ಸಹಕಾರದೊಂದಿಗೆ ಇನ್ನಷ್ಟೂ ಒಳ್ಳೆಯ ರೀತಿಯಲ್ಲಿ ಸಂಸ್ಥೆಯನ್ನು ಮುನ್ನಡೆಸಲು ಪ್ರಯತ್ನಿಸುತ್ತೇನೆ ಎಂದರು. ಚುನಾವಣೆ ಸಂದರ್ಭದಲ್ಲಿ ನಡೆದ ಗೊಂದಲ ವಾತಾವರಣ, ಅದರಿಂದ ಆಗಿರುವ ಕೆಟ್ಟ ಪರಿಣಾಮಗಳನ್ನು ನಾವೆಲ್ಲರೂ ಇವತ್ತಿನಿಂದಲೇ ಮರೆಯಬೇಕು. ಸಂಸ್ಥೆಯ ಹಿತದೃಷ್ಟಿಯಿಂದ ಎಲ್ಲಾ ನಿರ್ದೇಶಕರು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಪಕ್ಷಾತೀತವಾಗಿ ಸಹಕಾರಿ ರಂಗವನ್ನು ನೋಡಬೇಕಾಗಿರುವುದು ಮುಖ್ಯ ಎಂದು ರಮೇಶ್ ಭಟ್ ಹೇಳಿದರು. ಪ್ರತ್ಯೇಕವಾಗಿ ಬಳಗ ರಚಿಸಿಕೊಂಡು ಚುನಾವಣೆಗೆ ಸ್ಪರ್ಧೆ ಮಾಡಿರುವುದು ಜೀವನದಲ್ಲಿ ಇದೇ ಮೊದಲಿನದ್ದಾಗಿದೆ. ಕೋರ್ಟ್ ನ ತೀರ್ಪಿನಂತೆ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿದೆ. ಮುಂದೆ ಜಾತಿ, ಹಣ, ಅಂತಸ್ತು, ರಾಜಕೀಯವನ್ನು ಸೊಸೈಟಿಯೊಳಗೆ ಬರಲು ಅವಕಾಶ ನೀಡುವುದಿಲ್ಲ. ಸಂಘದ ಸದಸ್ಯರು, ನೌಕರರ ವರ್ಗ, ಡಿಸಿಸಿ ಬ್ಯಾಂಕ್, ಇತರೇ ಇಲಾಖೆಯವರ ಸಹಕಾರವನ್ನೂ ಬಯಸುತ್ತೇವೆ ಎಂದು ಹೇಳಿದ ರಮೇಶ್ ಭಟ್ ಅವರು ಚುನಾವಣೆಯಲ್ಲಿ ಬೆಂಬಲಿಸಿದ ಸದಸ್ಯರಿಗೆ, ವಿವಿಧ ಸಂಘಟನೆಯವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ನಮ್ಮದು ಅಭಿವೃದ್ಧಿ ಮಾತ್ರ-ದಯಾನಂದ ರೈ
ಉಪಾಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು ಮಾತನಾಡಿ, ಸಂಘದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ನಿರ್ದೇಶಕನಾಗಿ, ಉಪಾಧ್ಯಕ್ಷನಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. 1991ರ ಮೊದಲು ಸಂಸ್ಥೆಯ ಪರಿಸ್ಥಿತಿ ಅಧೋಗತಿಯಲ್ಲಿ ಇತ್ತು. 1991ರಲ್ಲಿ ರಮೇಶ್ ಭಟ್ ಅವರು ಅಧ್ಯಕ್ಷರಾದ ಬಳಿಕ ಸಂಸ್ಥೆ ಬೆಳವಣಿಗೆ ಕಂಡಿದೆ. ಅವರ ಅಧ್ಯಕ್ಷತೆಯ ಅವಧಿಯಲ್ಲಿ ಸಂಘದಲ್ಲಿ ಸೇವೆ ಸಲ್ಲಿಸಿದ್ದೇನೆ. ಯಾವುದೇ ಬೇದ ಭಾವ ಇರಲಿಲ್ಲ. ಸಹಕಾರಿ ತತ್ವದಂತೆ ಕೆಲಸ ಮಾಡಿದ್ದೇವೆ. ಈಗ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿದೆ. ನಮ್ಮದು ಅಭಿವೃದ್ಧಿ ಮಾತ್ರ. ಕಷ್ಟದಲ್ಲಿರುವ ರೈತರಿಗೆ ಆರ್ಥಿಕವಾಗಿ ನೆರವಾಗುವುದು. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಅಭಿವೃದ್ಧಿಗೆ ಒತ್ತು ನೀಡುತ್ತೇವೆ ಎಂದರು.
ರಮೇಶ್ ಭಟ್ರ ಕಡೆಗಣನೆಯಾಗಿದೆ; ಉದಯ ಕಶ್ಯಪ್
ಅಭಿನಂದನೆ ಸಲ್ಲಿಸಿ ಮಾತನಾಡಿದ ಸಂಘದ ಮಾಜಿ ನಿರ್ದೇಶಕ ಉದಯ ಕಶ್ಯಪ್ ಪೂರಿಂಗ ಅವರು, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ದ.ಕ.ಜಿಲ್ಲೆಯಲ್ಲಿ ನಂ.1 ಸ್ಥಾನದಲ್ಲಿದೆ. ಈ ಹಿಂದೆ ರಮೇಶ್ ಭಟ್ ಉಪ್ಪಂಗಳ ಅವರು ಅಧ್ಯಕ್ಷರಾಗಿದ್ದ ವೇಳೆ ಸಂಘ ಬೆಳೆದು ಬಂದ ರೀತಿಯನ್ನು ಸಹಿಸದೆ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಯವರು ಅವರನ್ನು ಕಡೆಗಣಿಸಿದ್ದಾರೆ. ಈ ಸಂಸ್ಥೆಗಾಗಿ ರಮೇಶ್ ಭಟ್ರವರು ತನ್ನ ಕೈಯಿಂದಲೇ ಹಣ ಖರ್ಚು ಮಾಡಿರುವುದನ್ನು ಗಮನಿಸಿದ್ದೇನೆ. ಅವರ ವಿರುದ್ಧ ಯಾವುದೇ ಕಪ್ಪು ಚುಕ್ಕೆ ಇಲ್ಲ. ಆದರೆ ಅವರ ಸೇವೆಯನ್ನು ಗುರುತಿಸಲಿಲ್ಲ. ಅವರ ಬಗ್ಗೆ ಬಹಳಷ್ಟು ಅಪಪ್ರಚಾರ ಮಾಡಿದ್ದಾರೆ. ಆ ನಂತರ ಅಧಿಕಾರಕ್ಕೆ ಬಂದ ಆಡಳಿತ ಮಂಡಳಿಯವರ ವಿರುದ್ಧ ಕೇಸು ಆಗಿದೆ ಎಂದು ಹೇಳಿದರು. ಸಹಕಾರಿ ಸಂಘಗಳಿಗೆ ಏನೂ ತಿಳಿಯದವರನ್ನು ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆ. ಅಧ್ಯಕ್ಷರಾಗಿರುವವರಿಗೆ ಅನುಭವ ಮುಖ್ಯ. ಎಲ್ಲಾ ವಿಚಾರದಲ್ಲೂ ಆಲಂಕಾರು ಸಹಕಾರಿ ಸಂಘ ಮಾದರಿ ಸಂಘವಾಗಿದೆ. ನಮ್ಮತನಕ್ಕೆ ಅಘಾತವಾದಾಗ ನಾವು ಸಿಡಿದು ನಿಲ್ಲುವಂತೆ ಆಗಿದೆ. ಸದಸ್ಯರ ಅಭಿಪ್ರಾಯದಂತೆ ರಮೇಶ್ ಭಟ್ ಅವರು ಚುನಾವಣೆಯಲ್ಲಿ ನಿಂತು ಈಗ ಅಧ್ಯಕ್ಷರಾಗಿದ್ದಾರೆ ಎಂದರು.
ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ: ಅಜಿತ್ ರೈ
ಬೆಂಗಳೂರಿನ ಉದ್ಯಮಿ ಅಜಿತ್ ರೈ ಮನವಳಿಕೆಗುತ್ತು ಮಾತನಾಡಿ, ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ, ದೇಶದ ಪ್ರಧಾನಮಂತ್ರಿಯವರ ಆಶಯದಂತೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬಂತೆ ಕಾರ್ಯನಿರ್ವಹಿಸಬೇಕು. ರಮೇಶ್ ಭಟ್ ಅವರು ಈ ಹಿಂದೆ ಅಧ್ಯಕ್ಷರಾಗಿದ್ದ ವೇಳೆ ಸಂಘವನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ ಎಂಬದನ್ನು ನಾವು ಕಾಣುತ್ತಿದ್ದೇವೆ. ಈಗಿನ ಆಡಳಿತ ಮಂಡಳಿಯಿಂದ ಉತ್ತಮ ಸೇವೆ ಸಿಗಲಿ ಎಂದು ಹಾರೈಸಿದರು.
ರಮೇಶ್ ಭಟ್ ಆದರ್ಶ ಅಧ್ಯಕ್ಷ; ಗೋಪಾಲಕೃಷ್ಣ ಪಡ್ಡಿಲ್ಲಾಯ
ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಪಡ್ಡಿಲ್ಲಾಯ ಅವರು ಮಾತನಾಡಿ, ರಮೇಶ್ ಭಟ್ ಅವರು ಹಿಂದೆ ಆದರ್ಶ ಅಧ್ಯಕ್ಷರಾಗಿ ಈ ಸಹಕಾರಿ ಸಂಘವನ್ನು ಅಭಿವೃದ್ಧಿಗೆ ತಂದಿದ್ದಾರೆ. ಆದ್ದರಿಂದಲೇ ಅವರಿಗೆ ಜನ ಪಕ್ಷ ರಹಿತವಾಗಿ ಬೆಂಬಲ ನೀಡಿದ್ದಾರೆ. ಸಹಕಾರಿ ರಂಗದ ಬಗ್ಗೆ ಅವರಿಗೆ ಸಾಕಷ್ಟು ಅನುಭವವಿದೆ. ಅವರ ನೇತೃತ್ವದಲ್ಲಿ ಈ ಸಂಘವು ಇನ್ನಷ್ಟೂ ಎತ್ತರಕ್ಕೆ ಏರಲಿ ಎಂದು ಹೇಳಿ ಶುಭಹಾರೈಸಿದರು.
ಸಂಘವನ್ನು ಲಾಭಕ್ಕೆ ತಂದಿದ್ದರು: ಈಶ್ವರ ಗೌಡ
ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಗೌಡ ಪಜ್ಜಡ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ನಷ್ಟದಲ್ಲಿದ್ದ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವನ್ನು 1991ರಲ್ಲಿ ಸಂಘದ ಚುಕ್ಕಾಣಿ ಹಿಡಿದಿದ್ದ ರಮೇಶ್ ಭಟ್ ಅವರು ಲಾಭಕ್ಕೆ ತಂದಿದ್ದರು. ಸುಮಾರು 29ವರ್ಷ ಸಂಘದ ಚುಕ್ಕಾಣಿ ಹಿಡಿದಿದ್ದ ರಮೇಶ್ ಭಟ್ ಅವರ ಅವಧಿಯಲ್ಲಿ ಪ್ರತಿ ವರ್ಷವೂ ಲಾಭದಾಯಕವಾಗಿ ಮುನ್ನಡೆದಿದೆ. 2020ರಲ್ಲಿ ರಮೇಶ್ ಭಟ್ ಅವರು ನಿರ್ಗಮನದ ಬಳಿಕ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂತು. ಅಧಿಕಾರ ಸ್ವೀಕಾರದ ಅವಧಿಯಲ್ಲಿ ನಿರ್ಗಮನ ಅಧ್ಯಕ್ಷ ರಮೇಶ್ ಭಟ್ರವರ ಕಡೆಗಣನೆ ಮಾಡಲಾಗಿದೆ. ಈ ಅವಧಿಯಲ್ಲಿ ನಾನೂ ನಿರ್ದೇಶಕನಾಗಿ ಆಯ್ಕೆಯಾಗಿದ್ದೆ. ಆದರೆ ಆಡಳಿತ ಮಂಡಳಿಯ ಕೆಲವೊಂದು ವಿಚಾರಗಳು ನನಗೆ ಸರಿ ಕಾಣದೇ ಇದ್ದ ಹಿನ್ನೆಲೆಯಲ್ಲಿ ರಾಜೀನಾಮೆ ಕೊಟ್ಟು ಹೊರಬಂದಿದ್ದೆ. ಯಾವೊಬ್ಬ ನಿರ್ದೇಶಕನೂ ಈ ಬಗ್ಗೆ ನನ್ನ ಜೊತೆ ಮಾತನಾಡಲಿಲ್ಲ. ಈಗ ರಮೇಶ್ ಭಟ್ ಅವರ ನೇತೃತ್ವದ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿದೆ. ಅವರ ಅಧ್ಯಕ್ಷತೆಯಲ್ಲಿ ಸಂಘವು ಇನ್ನಷ್ಟೂ ಎತ್ತರಕ್ಕೆ ಬೆಳೆದು ದಾಖಲೆ ನಿರ್ಮಿಸಲಿ ಎಂದರು.
ಸುಬ್ರಹ್ಮಣ್ಯ ಭಟ್ ಬೀರಂತಡ್ಕ ದೀಪಬೆಳಗಿಸಿ ಭಾರತಮಾತೆಗೆ ಪುಷ್ಪಾರ್ಚನೆ ಮಾಡಿದರು. ವೇದಿಕೆಯಲ್ಲಿ ನಿರ್ದೇಶಕರಾದ ಕೇಶವ ಗೌಡ ಆಲಡ್ಕ, ಉದಯ ಸಾಲ್ಯಾನ್, ರತ್ನಾ ಬಿ.ಕೆ., ವಿಜಯಾ ಎಸ್.ಅಂಬಾ, ಪದ್ಮಪ್ಪ ಗೌಡ ಕೆ., ಕುಂಞ ಮುಗೇರ, ಅಶೋಕ ಪೆರಾಬೆ, ಲೋಕೇಶ್ ಕಮ್ಮಿತ್ತಿಲು, ಅಶೋಕ ಗೋಕುಲನಗರ, ಗಾಯತ್ರಿ ಕುಂಡಡ್ಕ ಉಪಸ್ಥಿತರಿದ್ದರು. ಮಾಜಿ ಉಪಾಧ್ಯಕ್ಷ ರಮೇಶ್ ಎನ್.ಸಿ., ಶೇಖರ ಗೌಡ ಹಿರಿಂಜ, ಜನಾರ್ದನ ಕಯ್ಯಪೆ, ಗುರುಪ್ರಸಾದ್ ಅಲೆಕ್ಕಿ, ತೀರ್ಥರಾಮ ಬೀರಂತಡ್ಕ, ಬಾಲಕೃಷ್ಣ ಕೊಂಡಾಡಿಕೊಪ್ಪ, ರಜನಿ ಏಂತಡ್ಕ, ಪ್ರಮೀಳಾ ಆರ್.ರೈ, ಹರೀಶ್ ಏಂತಡ್ಕ, ಇಂದುಶೇಖರ ಶೆಟ್ಟಿ, ದೇವಕಿ ಹಿರಿಂಜ, ನೋಣಯ್ಯ, ರಾಧಾಕೃಷ್ಣ ರೈ ಪರಾರಿಗುತ್ತು, ಹೇಮಂತ್ ರೈ ಮನವಳಿಕೆಗುತ್ತು, ಮೋಹನ್ದಾಸ್ ರೈ ಪರಾರಿಗುತ್ತು ಅವರು ಹೂ ನೀಡಿ ಸ್ವಾಗತಿಸಿದರು. ನಿರ್ದೇಶಕ ಪದ್ಮಪ್ಪ ಗೌಡ ಕೆ.ವಂದಿಸಿದರು. ಗಣೇಶ್ ಹಿರಿಂಜ ಕಾರ್ಯಕ್ರಮ ನಿರೂಪಿಸಿದರು. ಭಾರತಿ ಶಾಲಾ ವಿದ್ಯಾರ್ಥಿನಿಯರಾದ ಇಂಚರ, ಭವ್ಯ ಪ್ರಾರ್ಥಿಸಿದರು. ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಗೊಟ್ಟು ಸಹಿತ ವಿವಿಧ ಕ್ಷೇತ್ರಗಳ ಗಣ್ಯರು, ಸಂಘದ ಸದಸ್ಯರು ಮಾಲಾರ್ಪಣೆ ಮಾಡಿ ಗೌರವಿಸಿದರು.
ಪ್ರಮಾಣಪತ್ರ ವಿತರಣೆ:
ಅಭಿನಂದನಾ ಸಭೆಗೆ ಮೊದಲು ಸಂಘದ ನೂತನ ನಿರ್ದೇಶಕರಿಗೆ ಚುನಾವಣಾಧಿಕಾರಿ, ಉಪನಿಬಂಧಕರ ಕಚೇರಿ ದ.ಕ.ಜಿಲ್ಲೆ ಮಂಗಳೂರು ಇಲ್ಲಿನ ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಎಂ.ಅವರು ಪ್ರಮಾಣಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಮೇಲ್ವಿಚಾರಕ ಶರತ್ ಕುಮಾರ್ ಡಿ., ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮನೋಹರ್ ಪ್ರಕಾಶ್ ಉಪಸ್ಥಿತರಿದ್ದರು.