ಆನ್‌ಲೈನ್ ವಂಚನೆಗೆ ಬ್ಯಾಂಕ್ ಖಾತೆಗಳನ್ನು ದುರ್ಬಳಕೆ ಮಾಡುತ್ತಿದ್ದ ಪ್ರಕರಣ – ಬಂಧಿತ ಇಬ್ಬರ ಪೈಕಿ ಅವಿನಾಶ್ ಸುತಾರ್‌ಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು

0

ಪುತ್ತೂರು: ಆನ್‌ಲೈನ್ ವಂಚನೆಗಾಗಿ ಬಡ ಜನರ ಬ್ಯಾಂಕ್ ಖಾತೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಆರೋಪದಡಿ ಬಂಧಿತನಾಗಿದ್ದ ಬೆಳಗಾವಿಯ ತಹಶೀಲ್ದಾರ್ ಗಲ್ಲಿಯ ಅವಿನಾಶ್ ವಿಠಲ್ ಸುತಾರ್(28ವ)ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.


ಅಮಾಯಕರಿಗೆ ಚಿಲ್ಲರೆ ಹಣ ನೀಡಿ ಬ್ಯಾಂಕ್ ಖಾತೆ ತೆರೆಯಲು ಹೇಳಿದ ಬಳಿಕ ಆ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದುಕೊಂಡು ಆನ್‌ಲೈನ್ ಬ್ಯುಸಿನೆಸ್ ಮಾಡುವುದಾಗಿ ನಂಬಿಸಿ ಮುಗ್ದ ಜನರ ಬ್ಯಾಂಕ್ ಖಾತೆ ಮಾಹಿತಿಯನ್ನು ಸೈಬರ್ ವಂಚಕರ ಕೈಗಿಡುತ್ತಿದ್ದ ಆರೋಪದಡಿ ಅವಿನಾಶ್ ವಿಠಲ್ ಸುತಾರ್ ಸಹಿತ ಈರ್ವರನ್ನು ದಕ್ಷಿಣ ಕನ್ನಡ ಸೈಬರ್ ಕ್ರೈಂ ವಿಭಾಗದ ಪೊಲೀಸರು ಮಾರ್ಚ್ 24ರಂದು ಬಂಧಿಸಿದ್ದರು. ಬಂಧಿತರ ಪೈಕಿ ಅವಿನಾಶ್ ವಿಠಲ್ ಸುತಾರ್‌ಗೆ ಉಚ್ಛ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಘಟನೆಯ ಹಿನ್ನಲೆ

ಪುತ್ತೂರಿನ ರಾಧಾಕೃಷ್ಣ ನಾಯಕ್ ಎಂಬವರಿಗೆ ವಿಡಿಯೋ ಕಾಲ್ ಮಾಡಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡುತ್ತೇವೆ ಎಂದು ಹೆದರಿಸಿ 40 ಲಕ್ಷ ರೂಪಾಯಿ ಹಣವನ್ನ ಆರ್‌ಟಿಜಿಎಸ್ ಮೂಲಕ ಪಡೆಯಲಾಗಿತ್ತು. ಕೆಲವು ದಿನಗಳ ಬಳಿಕ ಅನುಮಾನಗೊಂಡ ರಾಧಾಕೃಷ್ಣ ನಾಯಕ್‌ರವರು ಸಿಇಎನ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಸೈಬರ್ ಕ್ರೈಂ ಪೊಲೀಸರು ತನಿಖೆ ವೇಳೆ ಬೆಳಗಾವಿಯ ಯಾರದ್ದೋ ಖಾತೆಗೆ ಹಣ ವರ್ಗಾವಣೆಗೊಂಡಿರುವುದನ್ನು ಪತ್ತೆ ಹಚ್ಚಿದ್ದರು. ನಂತರ ಈ ಬ್ಯಾಂಕ್ ಖಾತೆಗಳನ್ನು ಇಟ್ಟುಕೊಂಡು ಶ್ರೀಮಂತ ಜನರಿಗೆ ವಿಡಿಯೊ ಕಾಲ್, ಡಿಜಿಟೆಲ್ ಅರೆಸ್ಟ್ ಸೇರಿದಂತೆ ಹಲವು ವಿಧಾನಗಳಲ್ಲಿ ಬ್ಲ್ಯಾಕ್‌ಮೇಲ್ ಮಾಡಿ ಮುಗ್ಧ ಜನರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿರುವುದು ತನಿಖೆಯಲ್ಲಿ ಬಯಲಾಗಿತ್ತು. ಬಂಧಿತ ಆರೋಪಿಗಳು ಸೈಬರ್ ವಂಚಕರೊಂದಿಗೆ ಟೆಲಿಗ್ರಾಂ ಮೂಲಕ ಸಂಪರ್ಕ ಸಾಧಿಸಿ ವ್ಯವಹಾರ ನಡೆಸುತ್ತಿದ್ದರು.

ಆರೋಪಿಗಳು ಕೇವಲ ಕಮಿಷನ್ ಆಸೆಗಾಗಿ ಜನರ ಬ್ಯಾಂಕ್ ಖಾತೆಗಳನ್ನ ಉತ್ತರ ಭಾರತದವರಿಗೆ ನೀಡುತ್ತಿದ್ದರು. ಅನೇಕ ಜನರು ತಮ್ಮ ಖಾತೆಗಳನ್ನು ಬೇರೊಬ್ಬರಿಗೆ ಮಾರಾಟ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಈ ಘಟನೆಗೆ ಸಂಬಂಧಿಸಿ ಬೆಳಗಾವಿಯ ತಹಶೀಲ್ದಾರ್ ಗಲ್ಲಿಯ ಅವಿನಾಶ್ ವಿಠಲ್ ಸುತಾರ್ (28) ಮತ್ತು ರಾಮದೇವ ಗಲ್ಲಿಯ ಅನೂಪ್ ಕಾರೇಕರ್ (42) ಎಂಬವರನ್ನು ಬಂಧಿಸಲಾಗಿತ್ತು. ಇದೀಗ ಬಂಧಿತರ ಪೈಕಿ ಅವಿನಾಶ್ ವಿಠಲ್ ಸುತಾರ್‌ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲರಾದ ರಾಜಾರಾಮ ಭಟ್ ಸೂರಂಬೈಲು, ದೇವಾನಂದ ಕೆ., ಪ್ರಸಾದ್ ಕುಮಾರ್ ರೈ ಮತ್ತು ಹರಿಪ್ರಸಾದ್ ರೈ ಪಿ. ಅಜ್ಜಿಕಲ್ಲು ವಾದಿಸಿದ್ದರು.

LEAVE A REPLY

Please enter your comment!
Please enter your name here