ತೆರಿಗೆ ಸಮಸ್ಯೆ, ಜನರಲ್ಲಿ ಗೊಂದಲ ಮೂಡಿಸಿದೆ-ಗ್ರಾಮಸ್ಥರ ಆಕ್ರೋಶ
ಈಶ್ವರಮಂಗಲದಲ್ಲಿ ಜನಸಂಪರ್ಕ ಸಭೆ ನಡೆಸಲು ಆಗ್ರಹ
ಪುತ್ತೂರು: ಅನೇಕ ವರ್ಷಗಳಿಂದ ತೆರಿಗೆ ಪಾವತಿಸುತ್ತಿದ್ದ ಹಲವು ಮನೆಗಳಿಗೆ ಈಗ ತೆರಿಗೆ ಪಾವತಿಸಲು ಸಾಧ್ಯವಾಗದೇ ಸಮಸ್ಯೆ ಉಂಟಾಗಿದ್ದು ಇದಕ್ಕೆ ಗ್ರಾ.ಪಂ ಹೊಣೆಯಾಗುತ್ತದೆ ಎಂದು ನೆ.ಮುಡ್ನೂರು ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆರೋಪಿಸಿದರು. ಸಭೆ ಗ್ರಾ.ಪಂ ಅಧ್ಯಕ್ಷೆ ಫೌಝಿಯಾ ಅಧ್ಯಕ್ಷತೆಯಲ್ಲಿ ಕಾವು ಸಿ.ಎ ಬ್ಯಾಂಕ್‌ನ ಈಶ್ವರಮಂಗಲ ಶಾಖಾ ಸಭಾಂಗಣದಲ್ಲಿ ನಡೆಯಿತು. ಹಿಂದೆ ಇದ್ದ ತೆರಿಗೆ ವ್ಯವಸ್ಥೆಯನ್ನು ಈಗ ಬದಲಾಯಿಸಿ ಜನರಿಗೆ ಸಮಸ್ಯೆ ತಂದೊಡ್ಡಿದ್ದು ಯಾವ ನ್ಯಾಯ ಎಂದು ಗ್ರಾಮಸ್ಥ ಸೂಫಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರಾದ ಖಾದರ್ ಕರ್ನೂರು, ಭಾಸ್ಕರ, ಅಮರನಾಥ ಆಳ್ವ, ಕೊರಗಪ್ಪ ಮೊದಲಾದವರು ಧ್ವನಿಗೂಡಿಸಿದರು. ತೆರಿಗೆ ಪಾವತಿ ಮಾಡಲು ಅವಕಾಶ ವಂಚಿತರಿಗೆ ತಂತ್ರಾಂಶದ ಮೂಲಕ ಸೇರಿಸಲು ಸರಕಾರ ಅವಕಾಶ ಮಾಡಿಕೊಟ್ಟಿತ್ತು, ಬೇರೆ ಪಂಚಾಯತ್‌ನವರು ಮಾಡಿದ್ದಾರೆ, ಆದರೆ ನಮ್ಮಲ್ಲಿ ಯಾಕೆ ಅದನ್ನು ಮಾಡಿಲ್ಲ ಎಂದು ಅವರು ಪ್ರಶ್ನಿಸಿದರು. ಇಂತಹ ವಿಚಾರಗಳು ಭವಿಷ್ಯದಲ್ಲಿ ಜನರಿಗೆ ಮಾರಕವಾಗುವ ಸಾಧ್ಯತೆಯಿದೆ ಎಂದು ಖಾದರ್ ಕರ್ನೂರು ಹೇಳಿದರು. ಈ ವಿಚಾರವಾಗಿ ಗ್ರಾ.ಪಂ ಪಿಡಿಓ ಸುಬ್ಬಯ್ಯ ಕೆ.ಪಿ ಉತ್ತರಿಸಿದ್ದರೂ ಗ್ರಾಮಸ್ಥರು ಮತ್ತಷ್ಟು ಪ್ರಶ್ನೆಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
9/11 ಪುಡಾಗೆ, ಗ್ರಾ.ಪಂ ಅಧಿಕಾರ ಮೊಟಕು:
ಗ್ರಾಮ ಪಂಚಾಯತ್‌ನಲ್ಲಿ ಆಗುತ್ತಿದ್ದ 9/11 ನ್ನು ಪುಡಾಗೆ ವರ್ಗಾಯಿಸುವ ಮೂಲಕ ಸರಕಾರ ಗ್ರಾ.ಪಂ ಅಧಿಕಾರವನ್ನು ಮೊಟಕುಗೊಳಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಗ್ರಾಮಸ್ಥ, ನೆ.ಮುಡ್ನೂರು ಗ್ರಾ.ಪಂ ಮಾಜಿ ಸದಸ್ಯರೂ ಆದ ಖಾದರ್ ಕರ್ನೂರು ಅಸಮಾಧಾನ ವ್ಯಕ್ತಪಡಿಸಿದರು. ಕೆಲವರು ಧ್ವನಿಗೂಡಿದರು. ಪುಡಾಗೆ 9/11 ಮಾಡುವುದರಿಂದ ಗ್ರಾಮಸ್ಥರಿಗೆ ಸಮಸ್ಯೆ ಆಗ್ತದೆ, ಪುಡಾದಲ್ಲಿ ದುಡ್ಡು ಕೊಟ್ಟರೆ ಮಾತ್ರ ಕೆಲಸ ಆಗ್ತದೆ ಎಂದು ಖಾದರ್ ಕರ್ನೂರು ಆರೋಪಿಸಿದರು.
ಮನೆಯ 9/11 ವಾಣಿಜ್ಯ ಉದ್ದೇಶಕ್ಕೆ..!
ಗ್ರಾ.ಪಂ ವ್ಯಾಪ್ತಿಯಲ್ಲಿ ವಾಸ್ತವ್ಯ ಮನೆಯ 9/11 ದಾಖಲೆಯನ್ನು ವಾಣಿಜ್ಯ ಉದ್ದೇಶಕ್ಕೆ ಬೇರೊಬ್ಬರಿಗೆ ಹಿಂದಿನ ಪಿಡಿಓ ಕೊಟ್ಟಿದ್ದಾರೆ, ಅದು ಏನಾಗಿದೆ ಎಂದು ಗ್ರಾಮಸ್ಥ ಅಮರನಾಥ ಆಳ್ವ ಪ್ರಶ್ನಿಸಿದರು. ಅಧ್ಯಕ್ಷೆ ಫೌಝಿಯಾ ಉತ್ತರಿಸಿ ಆ ವಿಚಾರ ಗೊತ್ತಾದ ಕೂಡಲೇ ನಾವು ಪಿಡಿಓ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಿದ್ದೇವೆ, ಪ್ರಕರಣ ಲೋಕಾಯುಕ್ತ ತನಿಖೆಯಲ್ಲಿದೆ ಎಂದು ಹೇಳಿದರು. ಪಿಡಿಓ ಆ ರೀತಿಯ ತಪ್ಪು ಮಾಡುವಾಗ ಪಂಚಾಯತ್ ಪ್ರತಿನಿಧಿಗಳು ಏನು ಮಾಡುತ್ತಿದ್ದರು ಎಂದು ಅವರು ಪ್ರಶ್ನಿಸಿದರು. ಸದಸ್ಯ ಇಬ್ರಾಹಿಂ ಪಳ್ಳತ್ತೂರು ಉತ್ತರಿಸಿ ಹಿಂದಿನ ಪಿಡಿಓ ಮಾಡಿದ್ದು ನೂರಕ್ಕೆ ನೂರು ತಪ್ಪು, ಆ ಕಾರಣಕ್ಕಾಗಿಯೇ ಅವರನ್ನು ಇಲ್ಲಿಂದ ಎತ್ತಂಗಡಿ ಮಾಡಿದ್ದು ಎಂದರು. ಪಿಡಿಓ ಸುಬ್ಬಯ್ಯ ಕೆ.ಪಿ ಮಾತನಾಡಿ ಆ ವಿಚಾರ ಲೋಕಾಯುಕ್ತದಲ್ಲಿದೆ, ಅಲ್ಲಿ ತನಿಖೆ ಆಗ್ತದೆ ಎಂದರು. ಚರ್ಚಾನಿಯಂತ್ರಾಣಧಿಕಾರಿ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಧರ್ಮಪಾಲ ಮಾತನಾಡಿ ಹಳೆಯ ವಿಚಾರ ಮಾತನಾಡಿ ಸಮಯ ವ್ಯರ್ಥ ಮಾಡುವುದು ಬೇಡ, ಈಗಿನ ವಿಷಯ ಇದ್ದರೆ ಮಾತನಾಡುವ ಎಂದರು.
ಜನಸಂಪರ್ಕ ಸಭೆ ನಡೆಸಲು ಆಗ್ರಹ
ನೆ.ಮುಡ್ನೂರು ದೊಡ್ಡ ಗ್ರಾಮವಾಗಿದ್ದು ಇಲ್ಲಿನ ಜನರಿಗೆ ಅನೇಕ ಸಮಸ್ಯೆಗಳಿವೆ, ಎಲ್ಲ ಇಲಾಖೆಯ ಅಧಿಕಾರಿಗಳನ್ನು ಸೇರಿಸಿಕೊಂಡು ಶಾಸಕರ ನೇತೃತ್ವದಲ್ಲಿ ಜನಸಂಪರ್ಕ ಸಭೆ ಕರೆಯಬೇಕು ಎಂದು ಗ್ರಾಮಸ್ಥ ಭಾಸ್ಕರ ಆಗ್ರಹಿಸಿದರು. ಈ ಬಗ್ಗೆ ಕ್ರಮ ವಹಿಸುವುದಾಗಿ ಪಿಡಿಓ ಹೇಳಿದರು.
ನಡುಬೈಲ್ ರಸ್ತೆ ಸಮಸ್ಯೆ ಬಗೆಹರಿಸಲು ಮನವಿ:
ಮಹಿಳೆಯೋರ್ವರು ಮಾತನಾಡಿ ನಡುಬೈಲ್ ಎಂಬಲ್ಲಿ ರಸ್ತೆ ಸಮಸ್ಯೆಯಿದ್ದು ಮಕ್ಕಳಿಗೆ ತೀವ್ರ ತೊಂದರೆಯುಟಾಗುತ್ತಿದೆ, ಮನವಿ ಕೊಟ್ಟರೂ ಪ್ರಯೋಜನ ಆಗಿಲ್ಲ ಎಂದರು. ಪಿಡಿಓ ಸುಬ್ಬಯ್ಯ ಕೆ.ಪಿ ಉತ್ತರಿಸಿ ಅಲ್ಲಿ ಖಾಸಗಿಯವರ ಜಾಗ ಇದೆ, ಅವರು ಬಿಟ್ಟು ಕೊಟ್ಟರೆ ರಸ್ತೆ ಸಮಸ್ಯೆ ಬಗೆಹರಿಸಬಹುದು, ಅವರ ಜೊತೆ ನೀವು ಮಾತನಾಡಿ ಮನವೊಲಿಸುವ ಕಾರ್ಯ ಮಾಡಿ ಎಂದು ಹೇಳಿದರು.

ಗಾಳಿಮುಖದಿಂದ ಬಸ್ ವ್ಯವಸ್ಥೆಗೆ ಆಗ್ರಹ:
ಗಾಳಿಮುಖದಿಂದ ಪುತ್ತೂರಿಗೆ, ಗಾಳಿಮುಖದಿಂದ ಕಾವು ಮಾರ್ಗವಾಗಿ ಸುಳ್ಯಕ್ಕೆ ಮತ್ತು ಗಾಳಿಮುಖದಿಂದ ನೇರವಾಗಿ ಮಂಗಳೂರಿಗೆ ಬಸ್ ವ್ಯವಸ್ಥೆ ಮಾಡಬೇಕೆಂದು ಖಾದರ್ ಕರ್ನೂರು ಆಗ್ರಹಿಸಿದರು. ಗ್ರಾ.ಪಂ ಸದಸ್ಯ ಶ್ರಿರಾಂ ಪಕ್ಕಳ ಧ್ವನಿಗೂಡಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಸ್ ವ್ಯವಸ್ಥೆ ಆದರೆ ಬಹಳ ಉತ್ತಮ ಎಂದರು.
ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ರಾಮ ಮೇನಾಲ, ಸದಸ್ಯರಾದ ರಮೇಶ್ ರೈ ಸಾಂತ್ಯ, ವೆಂಕಪ್ಪ ನಾಯ್ಕ, ಕುಮಾರನಾಥ, ಪ್ರದೀಪ್ ಕುಮಾರ್, ಲಲಿತಾ ಶೆಟ್ಟಿ, ಶಶಿಕಲಾ, ಸವಿತ, ವತ್ಸಲ, ಇಂದಿರಾ, ಪೂರ್ಣೇಶ್ವರಿ, ಸುಮಯ್ಯ, ಲಲಿತಾ ಸುಧಾಕರ ಉಪಸ್ಥಿತರಿದ್ದರು.ಸಿಬ್ಬಂದಿ ಶೀನಪ್ಪ ನಾಯ್ಕ ಆಯವ್ಯಯ ಪತ್ರ ಮಂಡಿಸಿದರು. ಸಿಬ್ಬಂದಿ ಚಂದ್ರಶೇಖರ ವರದಿ ವಾಚಿಸಿದರು. ಪಿಡಿಓ ಸುಬ್ಬಯ್ಯ ಕೆ.ಪಿ ಸ್ವಾಗತಿಸಿ, ವಂದಿಸಿದರು.