ಕಳಪೆ ಕಾಮಗಾರಿಗೆ, ರಸ್ತೆ ಗುಂಡಿಗೆ ಕಾರಣ ಪರಿಹಾರ ಏನು ಎಂಬ ಪ್ರಶ್ನೆಗೆ ಈ ಕೆಳಗಿನ ಪ್ರಶ್ನೆಗಳು ಸಹಾಯ ಮಾಡಬಲ್ಲವು. ರಸ್ತೆ ಆದದ್ದು ಯಾವಾಗ ಎಷ್ಟು ಖರ್ಚು. ಅದು ಯಾವ ರಸ್ತೆ ಪಿಡಬ್ಲ್ಯುಡಿಯೇ ಜಿಲ್ಲಾ ಪಂಚಾಯತ್ನದ್ದೇ ಅಥವಾ ಗ್ರಾಮ ಪಂಚಾಯತ್ನದ್ದೇ. ಆ ಅವಧಿಯಲ್ಲಿ ಇದ್ದು ಪ್ರಚಾರ ಪಡೆದ ಸಂಸದರು, ಶಾಸಕರು, ಜಿ.ಪಂ.ಸದಸ್ಯರು, ತಾ.ಪಂ.ಸದಸ್ಯರು, ಪಂಚಾಯತ್ ಅಧ್ಯಕ್ಷರು ಯಾರು. ಅದರ ಕಾಂಟ್ರಾಕ್ಟರ್, ಇಂಜಿನಿಯರ್ಗಳು ಯಾರ್ಯಾರು. ಆ ರಸ್ತೆಯ ಬಾಳಿಕೆ ಕನಿಷ್ಟ ಎಷ್ಟು ವರ್ಷ ಎಂದು ಹೇಳಲಾಗಿತ್ತು.ಅದರ ನಂತರ ಅದಕ್ಕೆ ಎಷ್ಟು ಬಾರಿ ಡಾಮರೀಕರಣ ಆಗಿದೆ. ಅದರ ವೆಚ್ಚ ಎಷ್ಟು. ಆ ಅವಧಿಯಲ್ಲಿ ಇದ್ದ ಕಾಂಟ್ರಾಕ್ಟರ್, ಇಂಜಿನಿಯರ್, ಜನಪ್ರತಿನಿಧಿಗಳು ಯಾರು. ಅದರ ಆಯಸ್ಸು ಎಷ್ಟು ಎಂದು ಹೇಳಲಾಗಿತ್ತು. ಈಗ ಕೊನೆಯಲ್ಲಿ ಆದ ಡಾಮರೀಕರಣ ಯಾವಾಗ. ಅದರ ವೆಚ್ಚ ಮತ್ತು ಕಾಂಟ್ರಾಕ್ಟರ್, ಇಂಜಿನಿಯರ್, ಜನಪ್ರತಿನಿಧಿಗಳು ಯಾರು. ಕಾಮಗಾರಿ ಉದ್ಘಾಟನೆಗೆ ಯಾರದ್ದೆಲ್ಲಾ ಹೆಸರು ಫೋಟೋ ಬಂದಿದೆ ಎಂದು ನೋಡಿದರೆ ಗೊತ್ತಾಗುತ್ತದೆ. ಅದರ ವಿವರಗಳನ್ನು ಆರ್ಟಿಐಯಲ್ಲಿ ಪಡೆಯಬಹುದು. ರಸ್ತೆ ಆ ರೀತಿ ಹಾಳಾಗಲು ಕಾರಣವೇನು. ಮಳೆಯೇ, ಕಳಪೆ ಕಾಮಗಾರಿಯೇ? ಕಳಪೆಯೇ ಕಾರಣವಾಗಿದ್ದರೆ ಅದಕ್ಕೆ ಕಾರಣರು ಯಾರು ಎಂದು ತಿಳಿಯಬೇಕು. ಇದರಿಂದ ಮುಂದೆ ಯಾರೂ ಕಳಪೆ ಕಾಮಗಾರಿ ಮಾಡದಂತೆ ಎಚ್ಚರವಹಿಸಲು ಸಹಾಯವಾಗಬಹುದು.
ಬ್ರಿಟಿಷರ ಕಾಲದಲ್ಲಿ ಆದ ರಸ್ತೆಗಳು ಇನ್ನೂ ಹಾಳಾಗದೆ ಉಳಿದಿವೆ. ಕೇರಳದಲ್ಲಿ ನಮ್ಮ ರೀತಿಯಲ್ಲಿಯೇ ಮಳೆ ವಾಹನ ಸಂಚಾರ ಇದ್ದರೂ ರಸ್ತೆಗಳು ಹಾಳಾಗುವುದಿಲ್ಲ ಯಾಕೆ. ನಮ್ಮ ರಸ್ತೆಗಳನ್ನು ಎಷ್ಟು ವರ್ಷಕ್ಕೆ ಒಮ್ಮೆ ಸರಿ ಮಾಡಬೇಕು. ಈ ಸಲ ಆಗುವ ರಿಪೇರಿ ಎಷ್ಟು ವರ್ಷ ಬಾಳಿಕೆ ಬರುತ್ತದೆ. ಪ್ರತೀ ಮಳೆಗಾಲದಲ್ಲಿ ಇದೇ ಪರಿಸ್ಥಿತಿಯಾದರೆ ಅದಕ್ಕೆ ಶಾಶ್ವತ ಪರಿಹಾರವೇನು. ರಸ್ತೆ ಹಾಳಾಗದಂತೆ, ಕಳಪೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಯಾರದ್ದು. ಸಂಸದರದ್ದೇ, ಶಾಸಕರದ್ದೇ, ಸ್ಥಳೀಯ ಜನಪ್ರತಿನಿಽಗಳದ್ದೇ, ಕಾಂಟ್ರಾಕ್ಟರದ್ದೇ, ಇಂಜಿನಿಯರದ್ದೇ ಅಥವಾ ರಾಜರುಗಳಾದ ಜನರದ್ದೇ, ಪ್ರಯಾಣಿಕರದ್ದೇ, ಪತ್ರಕರ್ತರದ್ದೇ. ವಿಮಾನ ಅಪಘಾತವಾದರೆ ಯಾಕೆ ಆಗಿದೆ, ಅದಕ್ಕೆ ಪರಿಹಾರವೇನು ಎಂದು ಕಂಡು ಹಿಡಿದು ತಪ್ಪಿಸ್ಥರನ್ನು ಗುರುತಿಸಿ, ಶಿಕ್ಷೆಯಾಗಿ ಇನ್ನು ಮುಂದೆ ಆಗದಂತೆ ನೋಡಿಕೊಳ್ಳುವಂತೆ ಈ ರಸ್ತೆ ಯಾಕೆ ಕಳಪೆಯಾಗಿ ಹಾಳಾಗಿದೆ. ಅದಕ್ಕೆ ಕಾರಣರು ಯಾರ್ಯಾರು, ಅದಕ್ಕೆ ಶಾಶ್ವತ ಪರಿಹಾರವೇನು ಎಂದು ತಿಳಿಯಬೇಕು. ಇಲ್ಲದಿದ್ದರೆ ಇದು ಪ್ರತಿ ವರ್ಷದ ಕಥೆ ಮತ್ತು ಅವಸ್ಥೆಯಾಗಿ ಪ್ರತಿಭಟನೆ ಆಪಾದನೆಗಳಿಗೆ ಕಾರಣವಾಗುವುದು ಖಂಡಿತ. ಇದಕ್ಕೆ ಪರಿಹಾರವೆಂದರೆ ಇನ್ನು ಮುಂದಿನ ರಸ್ತೆಗಳು ಕಳಪೆಯಾಗದಂತೆ ನೋಡಿಕೊಳ್ಳಲು ಆಯಾ ಅವಧಿಯಲ್ಲಿ ಈ ಕಾಮಗಾರಿಯ ಬಗ್ಗೆ ಬ್ಯಾನರ್ ಹಾಕಿಸಿಕೊಂಡವರ ಫೋಟೋಗಳನ್ನು ಹೆಸರುಗಳನ್ನು ರಸ್ತೆ ಬದಿಯಲ್ಲಿ ಹಾಕಿ ಪ್ರದರ್ಶಿಸುವುದು, ಅವರನ್ನು ಹೊಣೆಗಾರರನ್ನಾಗಿ ಮಾಡುವುದು. ಅತೀ ಅಗತ್ಯವಿದ್ದಲ್ಲಿ ಪ್ರತಿಭಟನೆ ನಡೆಸಬೇಕು. ಪಕ್ಷ, ವ್ಯಕ್ತಿ, ಅಧಿಕಾರಿ ಎಂದು ನೋಡದೆ ತಪಿತಸ್ಥರನ್ನು ಹೊಣೆಗಾರರನ್ನಾಗಿ ಮಾಡಿ ಮತದಾರ ರಾಜರುಗಳು ಅವರನ್ನು ಪ್ರಶ್ನಿಸುವಂತೆ ಆಗಬೇಕು. ಹಾಗೆ ಆದಾಗ ಮುಂದೆ ನಡೆಯುವ ಕಾಮಗಾರಿಗಳು ಕಳಪೆಯಾಗದೆ ಉತ್ತಮ ರಸ್ತೆಗಳು ದೊರಕಿ, ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಬಹುದು.
-ಡಾ. ಶಿವಾನಂದ ಯು.ಪಿ.
