ಕಟ್ಟೆಮಜಲು-ದಡ್ಡಲ್‌ಪಳಿಕೆ ರಸ್ತೆ ಹೊಂಡಗುಂಡಿ..! ಬಾಳೆಗಿಡ ನೆಟ್ಟು ಗ್ರಾಮಸ್ಥರ ಆಕ್ರೋಶ

0


ನೆಲ್ಯಾಡಿ: ಇಲ್ಲೊಂದು ರಸ್ತೆ ಇದೆ. ಈ ರಸ್ತೆಯು ಗುಂಡಿಯಲ್ಲಿದೆಯೋ ಅಥವಾ ಗುಂಡಿಯು ರಸ್ತೆಯಲ್ಲಿದೆಯೋ ಎಂಬುವಷ್ಟರ ಮಟ್ಟಿಗೆ ಕೆಟ್ಟುಹೋಗಿದೆ. ಈ ರಸ್ತೆಯಲ್ಲಿ ದಿನನಿತ್ಯ ಸಂಚರಿಸುವ ವಾಹನ ಸವಾರರು, ಸಾರ್ವಜನಿಕರು ಹೊಂಡಗಳಲ್ಲಿ ಬಾಳೆಗಿಡಗಳನ್ನು ನೆಟ್ಟು ಆಕ್ರೋಶ ಹೊರಹಾಕಿದ್ದಾರೆ.


ಇದು ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದಲ್ಲಿ ಬರುವ ಕಟ್ಟೆಮಜಲು-ದಡ್ಡಳ್‌ಪಳಿಕೆ ರಸ್ತೆಯ ಪರಿಸ್ಥಿತಿಯಾಗಿದೆ. ಈ ರಸ್ತೆ ನೆಲ್ಯಾಡಿಯಿಂದ ಕಟ್ಟೆಮಜಲು ಮೂಲಕ ಪೆರಿಯಶಾಂತಿ ಸಮೀಪ ದಡ್ಡಳ್‌ಪಳಿಕೆಯಲ್ಲಿ ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತದೆ. ಪೆರಿಯಶಾಂತಿ, ಕೊಕ್ಕಡಕ್ಕೆ ಹೋಗುವವರು ಈ ರಸ್ತೆ ಮೂಲಕ ಸಂಚಾರ ಮಾಡಬಹುದಾಗಿದೆ. ಸದ್ಯ ಪುತ್ಯೆಯಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಕೊಕ್ಕಡಕ್ಕೆ ತೆರಳುವ ವಾಹನ ಸವಾರರು ಈ ರಸ್ತೆಯನ್ನೂ ಬಳಕೆ ಮಾಡುತ್ತಿದ್ದಾರೆ. ಮುಖ್ಯವಾಗಿ ಈ ರಸ್ತೆಯು ಈ ಭಾಗದ ಹರಿಜನ ಕಾಲೋನಿ ಹಾಗೂ ದಡ್ಡಲ್‌ಪಳಿಕೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಕಟ್ಟೆಮಜಲು-ದಡ್ಡಳ್‌ಪಳಿಕೆ ಮಧ್ಯೆ ಕೆಲವೊಂದು ಕಡೆ ರಸ್ತೆ ಕಾಂಕ್ರೀಟ್ ನಡೆದಿದೆ. ಆದರೆ ಇನ್ನು ಕೆಲವು ಕಡೆ ಡಾಮರೀಕರಣ ಎದ್ದು ಈಗ ಹೊಂಡ, ಗುಂಡಿ ನಿರ್ಮಾಣಗೊಂಡಿದೆ. ಕಟ್ಟೆಮಜಲು ದೈವಸ್ಥಾನದ ಬಳಿ ಇರುವ ಕಿರುಸೇತುವೆಯಿಂದ ಮುಂದೆ ರಸ್ತೆ ಅಲ್ಲಲ್ಲಿ ಡಾಮರು ಎದ್ದುಹೋಗಿ ಹೊಂಡ ಗುಂಡಿಗಳಿಂದ ತುಂಬಿ ಹೋಗಿದೆ. ಇಲ್ಲಿ ರಸ್ತೆಯು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ಬಾಳೆಗಿಡಗಳನ್ನು ನೆಟ್ಟು ಆಕ್ರೋಶ ಹೊರಹಾಕಿದ್ದಾರೆ.

ಕಾಂಕ್ರಿಟೀಕರಣಗೊಳಿಸಿ:
ಗಲ್ಲಿ ಗಲ್ಲಿಗಳಲ್ಲಿ ಕಾಂಕ್ರೀಟ್ ರಸ್ತೆಗಳೇ ರಾರಾಜಿಸುತ್ತಿರುವಾಗ ನೆಲ್ಯಾಡಿ ಪೇಟೆಗೆ ಹತ್ತಿರವೇ ಇರುವ ಈ ರಸ್ತೆ ಮೇಲೆ ಜನಪ್ರತಿನಿಧಿಗಳು ಇನ್ನೂ ಕೃಪೆ ತೋರಿಲ್ಲ. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು, ಶಾಸಕರು ಈ ರಸ್ತೆ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ರಸ್ತೆ ಬಳಕೆದಾರರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಭರವಸೆ ಕೊಟ್ಟು ಗೆದ್ದ ನಂತರ ಈ ಊರಿಗೆ ಕಾಲಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ರಿ ರಸ್ತೆಯಲ್ಲಿ ಪ್ರತಿನಿತ್ಯ ಶಾಲಾ ವಾಹನಗಳು, ಹಾಲು ಸಾಗಾಟದ ವಾಹನ ಓಡಾಟ ನಡೆಸುತ್ತದೆ. ಹೊಂಡ ಗುಂಡಿಯಿಂದ ತುಂಬಿದ ಈ ರಸ್ತೆಯಲ್ಲಿ ಸಂಚಾರ ಮಾಡುವುದೇ ವಾಹನ ಸವಾರರಿಗೆ ಸಾಹಸವಾಗಿದೆ. ಆದ್ದರಿಂದ ಈ ರಸ್ತೆಯನ್ನು ತಕ್ಷಣ ಶಾಶ್ವತ ಕಾಂಕ್ರೀಟೀಕರಣ ಮಾಡಬೇಕು. ತಪ್ಪಿದ್ದಲ್ಲಿ ಮುಂದಿನ ಚುನಾವಣೆ ಬಹಿಷ್ಕಾರ ಹಾಕುವುದಾಗಿ ಎಚ್ಚರಿಸಿದ್ದಾರೆ.

ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿ ಇಲ್ಲ:
ಕಟ್ಟೆಮಜಲು-ದಡ್ಡಳ್‌ಪಳಿಕೆ ರಸ್ತೆಯಲ್ಲಿ ಶಾಲಾ ವಾಹನ, ಬೈಕ್ ಹಾಗೂ ಇತರೇ ವಾಹನಗಳು ಓಡಾಟ ನಡೆಸುತ್ತಿರುತ್ತವೆ. ಆದರೆ ಕಟ್ಟೆಮಜಲುನಿಂದ ಮುಂದೆ ಮಳೆಗೆ ರಸ್ತೆ ಕೆಟ್ಟುಹೋಗಿ ಗುಂಡಿ ನಿರ್ಮಾಣಗೊಂಡಿದೆ. ಸಮರ್ಪಕ ಚರಂಡಿಯೂ ಇಲ್ಲದೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಗುಂಡಿಗಳಿಂದ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿದೆ. ಸದ್ರಿ ರಸ್ತೆ ಕಾಂಕ್ರಿಟೀಕರಣಕ್ಕೆ ಒತ್ತಾಯ ಮಾಡುತ್ತಲೇ ಬಂದಿದ್ದೇವೆ. ಆದರೆ ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿ ಇಲ್ಲ.
ಕಾಂತಪ್ಪ ಗೌಡ ಕಟ್ಟೆಮಜಲು, ಮಾಜಿ ಸದಸ್ಯರು, ಗ್ರಾ.ಪಂ.ಕೌಕ್ರಾಡಿ

ಚುನಾವಣೆ ಬಹಿಷ್ಕರಿಸುತ್ತೇವೆ
ಕಟ್ಟೆಮಜಲು ಮುಂದೆ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣಗೊಂಡಿದ್ದು ವಾಹನದಲ್ಲಿ ಸಂಚಾರ ಮಾಡಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ರಸ್ತೆ ಕಾಂಕ್ರೀಟೀಕರ ಮಾಡಬೇಕು. ಇಲ್ಲದೇ ಇದ್ದಲ್ಲಿ ಮುಂದಿನ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದೇವೆ.
ರಾಜು ಕೆ.ರಾಣೇಯರ್, ಹಳೆಯಂಡ್ಯ ಕೌಕ್ರಾಡಿ



ನಡೆಯಲು ಭಯವಾಗುತ್ತಿದೆ
ರಸ್ತೆ ಎಲ್ಲಾ ಎದ್ದು ಗುಂಡಿಗಳಿಂದ ತುಂಬಿದೆ. ನಡೆದಾಡಲು ಭಯವಾಗುತ್ತಿದೆ. ಆದಷ್ಟೂ ಬೇಗ ಇಲ್ಲಿ ರಸ್ತೆ ಕಾಂಕ್ರಿಟೀಕರಣ ಮಾಡಬೇಕು.
ಪೂರ್ವಿ ಎಸ್.ಎನ್. ವಿದ್ಯಾರ್ಥಿನಿ

LEAVE A REPLY

Please enter your comment!
Please enter your name here