ಮಳೆಕೊಯ್ಲು ಇಂದಿನ ಅಗತ್ಯ, 3ನೇ ಮಹಾಯುದ್ಧ ನಡೆದರೆ ಅದು ನೀರಿಗಾಗಿ-ಸಂಸದ ಕ್ಯಾ| ಬ್ರಿಜೇಶ್ ಚೌಟ
‘ಅರಿವು ಕೇಂದ್ರ’, ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಸಹಯೋಗದೊಂದಿಗೆ ಫಾರ್ಮ್ಲ್ಯಾಂಡ್ ರೈನ್ವಾಟರ್ ಹಾರ್ವೆಸ್ಟಿಂಗ್ ಸಿಸ್ಟಂ ಇವರಿಂದ ಮಂಗಳೂರು ಪ್ರೆಸ್ಕ್ಲಬ್ಗೆ ಮಳೆನೀರು ಕೊಯ್ಲು ಘಟಕ ಕೊಡುಗೆ
ಪುತ್ತೂರು: ನೀರು ಎಷ್ಟು ಅಮೂಲ್ಯ ಎನ್ನುವುದು ನಮಗೆಲ್ಲರಿಗೂ ಗೊತ್ತಿದೆ. ಮುಂದಿನ ಯುದ್ಧ ಎನ್ನುವುದು ನಡೆದರೆ ಅದು ನೀರಿಗಾಗಿ ಎನ್ನುವ ಮಾತುಗಳನ್ನೂ ಹೇಳುತ್ತಾರೆ. ಹಿಂದೆ ಮಳೆನೀರು ಕೊಯ್ಲು ಎನ್ನುವುದರ ಅವಶ್ಯಕತೆ ಇರಲಿಲ್ಲ ಮತ್ತು ಅದಕ್ಕೆ ಪೂರಕ ವ್ಯವಸ್ಥೆಗಳು ಕೂಡ ಇರಲಿಲ್ಲ. ಆದರೆ ಇಂದು ಇದು ಅತ್ಯವಶ್ಯಕವಾಗಿದೆ. ಈ ಜವಾಬ್ದಾರಿಯನ್ನು ನಾವೆಲ್ಲರೂ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಮಳೆನೀರು ಕೊಯ್ಲು ಯೋಜನೆಯನ್ನು ಅಭಿಯಾನದ ರೂಪದಲ್ಲಿ ಸರ್ವವ್ಯಾಪಿಯಾಗಿ, ಸರ್ವಸ್ಪರ್ಶಿಯಾಗಿ ಪ್ರತೀ ಮನೆ ಮನಸ್ಸಿಗೆ ಮುಟ್ಟುವ ರೀತಿಯಲ್ಲಿ ಮಾಡಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಬೇಕು ಎಂದು ದ.ಕ.ಲೋಕಸಭಾ ಕ್ಷೇತ್ರದ ಸಂಸದ ಕ್ಯಾ|ಬ್ರಿಜೇಶ್ ಚೌಟ ಹೇಳಿದರು.
ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ನ ಸೇವಾ ಯೋಜನೆಯ ಅಂಗವಾಗಿ ಅರಿವು ಕೇಂದ್ರ, ಫಾರ್ಮ್ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್ ಚಿಕ್ಕಮಗಳೂರು ಇದರ ವತಿಯಿಂದ ಜು.11ರಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ಅಳವಡಿಸಿದ ಮಳೆ ನೀರು ಕೊಯ್ಲು ಯೋಜನೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಜಿಲ್ಲೆಯ ಪ್ರತಿ ಮನೆ ಮನೆಗಳಲ್ಲೂ ಜಲ ಸಾಕ್ಷರತೆಯ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಕೆಲಸಗಳಿಗೆ ಜಿಲ್ಲೆಯ ಎಲ್ಲಾ ವರ್ಗದ ಜನರ ಬೆಂಬಲವಿದೆ. ಸಾಕ್ಷರತಾ ಆಂದೋಲನವು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದಂತೆಯೇ ‘ಮಳೆನೀರು ಕೊಯ್ಲು ಯೋಜನೆ’ಯನ್ನು ನಡೆಸಬೇಕೆಂದು ಕ್ಯಾ| ಬ್ರಿಜೇಶ್ ಚೌಟ ಹೇಳಿದರು. ದ.ಕ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಮಾಡುವ ಅಭಿಯಾನಕ್ಕೆ ಬೆಂಬಲ ಕೇಳಿದ ಚೌಟರು, ಸುದ್ದಿಯ ಡಾ.ಶಿವಾನಂದರೂ ಅಭಿಯಾನಕ್ಕೆ ಬೆಂಬಲ ನೀಡಬೇಕೆಂದು ಕೋರಿದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಅರಿವು ಕೇಂದ್ರದ ನಿರ್ದೇಶಕ ಡಾ.ಯು.ಪಿ.ಶಿವಾನಂದ, ಫಾರ್ಮ್ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್ ಚಿಕ್ಕಮಗಳೂರು ಇದರ ನಿರ್ದೇಶಕ ಮೈಕೆಲ್ ಬ್ಯಾಪ್ಟಿಸ್ಟ್, ರೈನ್ ಕ್ಯಾಚರ್ಸ್ ನಿರ್ದೇಶಕ ಮನೋಜ್ ಸ್ಯಾಮ್ಯುಯೆಲ್ ಬ್ಯಾಪ್ಟಿಸ್ಟ್, ರೈನ್ವಾಟರ್ ಹಾರ್ವೆಸ್ಟಿಂಗ್ ಪಾಲುದಾರ ಲಿನ್-ರ್ಡ್ ಪಿಂಟೊ, ರೋಟರಿ ಅಸಿಸ್ಟೆಂಟ್ ಗವರ್ನರ್ ಚೆನ್ನಗಿರಿ ಗೌಡ, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ನ ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ಜಿಲ್ಲಾಧ್ಯಕ್ಷ ಪಬ್ಲಿಕ್ ಇಮೇಜ್ ಡಾ.ಶಿವಪ್ರಸಾದ್, ರೋಟರಿ ಕ್ಲಬ್ ಸಹಾಯಕ ಗವರ್ನರ್ ಚಿನ್ನಗಿರಿ ಗೌಡ, ರೋಟರಿ ಕ್ಲಬ್ ಸಹಾಯಕ ಗವರ್ನರ್ ಪ್ರೊ. ರವಿಶಂಕರ್ ರಾವ್, ಜಿಲ್ಲಾ ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜೇಂದ್ರ ಕಲ್ಬಾವಿ, ರೋಟರಿ ಕ್ಲಬ್ ಝೋನಲ್ ಲೆಫ್ಟಿನೆಂಟ್ ರವಿ ಜಲನ್, ಉಪಾಧ್ಯಕ್ಷ ರವೀಂದ್ರ ಬಿಎನ್, ಖಜಾಂಚಿ ರಾಜೇಶ್ ಸೀತಾರಾಮ್, ರೋ| ಮುರಳಿ ಮೋಹನ್, ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ, ಪ್ರೆಸ್ ಕ್ಲಬ್ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಪತ್ರಕರ್ತರಾದ ಪುಷ್ಪರಾಜ್, ರಾಜೇಶ್ ದಡ್ಡಂಗಡಿ, ಸತೀಶ್ ಇರ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಂಗಳೂರು ಪ್ರೆಸ್ಕ್ಲಬ್ನ ನಿವೃತ್ತ ಸಿಬ್ಬಂದಿ ಚಂಚಲಾಕ್ಷಿಯವರು ಕೊರೋನಾ ಟೈಮ್ನಲ್ಲಿ ಪತ್ರಕರ್ತ ಸಂಘದ ಸದಸ್ಯರಿಗೆ ಊಟದ ವ್ಯವಸ್ಥೆ ಮಾಡಿ ವಿಶೇಷ ಸೇವೆ ನೀಡಿದ್ದನ್ನು ಗುರುತಿಸಿ ರೋಟರಿ ಮಂಗಳೂರು ಸೆಂಟ್ರಲ್ ವತಿಯಿಂದ ಸನ್ಮಾನಿಸಲಾಯಿತು. ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಅಧ್ಯಕ್ಷ ಭಾಸ್ಕರ ರೈ ಕಟ್ಟ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ವಂದಿಸಿದರು.
ಪ್ರೆಸ್ ಕ್ಲಬ್ ಕಟ್ಟಡಕ್ಕೆ ಮಾಡಿರುವ ಮಳೆಕೊಯ್ಲು ಮೂಲಕ ವರ್ಷಕ್ಕೆ 6ರಿಂದ 8 ಲಕ್ಷ ಲೀ. ನೀರು ಕ್ಲಬ್ನ ಬಾವಿಗೆ ರೀಚಾರ್ಜ್ ಆಗಲಿದೆ. ಈ ಮೊದಲು ನೆಲಕ್ಕೆ ಬಿದ್ದು ಚರಂಡಿಗೆ ಸೇರಿ ಫ್ಲಡ್ಗಳಿಗೆ ಕಾರಣವಾಗಿ ಸಮುದ್ರ ಸೇರುತ್ತಿದ್ದ ಆ ನೀರು ಇದೀಗ ಕ್ಲಬ್ನ ಬಾವಿಗೆ ಅಂತರ್ಜಲವಾಗಿ ಸೇರಲಿದೆ.
‘ಸುದ್ದಿ ಸಮೂಹ ಸಂಸ್ಥೆ’ಗಳ ಸಂಸ್ಥಾಪಕ ಮತ್ತು ಆಡಳಿತ ನಿರ್ದೇಶಕರಾಗಿರುವ ಡಾ.ಯು,ಪಿ.ಶಿವಾನಂದರ ಸಮಾಜಮುಖಿ ಚಿಂತನೆಯ ಫಲವಾಗಿ ರೂಪು ತಳೆದಿರುವ ಅರಿವು ಕೇಂದ್ರ ಇಂದು ಉದ್ಯಮಶೀಲರಿಗೆ ತರಬೇತಿ, ಮಾರುಕಟ್ಟೆ ವ್ಯವಸ್ಥೆ, ಶೈಕ್ಷಣಿಕ ತರಬೇತಿ ಕಾರ್ಯಾಗಾರಗಳು, ಕೃಷಿ-ಉದ್ಯಮ ಕ್ಷೇತ್ರ ಹೀಗೆ ಹಲವು ಕ್ಷೇತ್ರಗಳಲ್ಲಿ ಕಾರ್ಯಾಚರಿಸುತ್ತಿರುವ ಜೊತೆಗೆ ಕಳೆದ ಕೆಲ ವರ್ಷಗಳಿಂದ ಕರಾವಳಿಯಲ್ಲಿ ಮಳೆ ನೀರು ಕೊಯ್ಲು ಯೋಜನೆಯ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಜನಜಾಗೃತಿ ಹಾಗೂ ಅರಿವು ಮೂಡಿಸುತ್ತಿದೆ. ಈ ಮೂಲಕ ನೂರಾರು ಕಡೆಗಳಲ್ಲಿ ಮಳೆ ನೀರು ಕೊಯ್ಲು ಘಟಕಗಳು ರಚನೆಗೊಂಡು ಮಳೆನೀರು ಉಳಿತಾಯಗೊಳ್ಳುತ್ತಿದೆ. ಇದೀಗ ಮಂಗಳೂರಿನ ಪತ್ರಿಕಾ ಭವನ ಕಟ್ಟಡದಲ್ಲಿ ಕೂಡ ಅರಿವು ಕೇಂದ್ರದ ಸಹಯೋಗದೊಂದಿಗೆ ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ನ ಸೇವಾ ಯೋಜನೆಯ ಅಂಗವಾಗಿ ಫಾರ್ಮ್ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್ ಚಿಕ್ಕಮಗಳೂರು ಅವರ ಕೊಡುಗೆ ಮೂಲಕ ಮಳೆನೀರು ಕೊಯ್ಲು ಘಟಕ ರಚನೆಗೊಂಡು ಉದ್ಘಾಟನೆಗೊಂಡಿದೆ.