ಸಮಾಜದ ಬೆಳವಣಿಗೆಗಾಗಿ ಸಂಘದಲ್ಲಿ ಭಾಗಿಗಳಾಗುವ ಚಿಂತನೆ ಪ್ರತಿಯೊಬ್ಬರಲ್ಲಿರಬೇಕು-ದುಗ್ಗಪ್ಪ ನಾಯ್ಕ
ಪುತ್ತೂರು: ಮರಾಟಿ ಸಂಘವು ಪದಾಧಿಕಾರಿಗಳಿಗೆ ಸೀಮಿತವಾದುದಲ್ಲ. ಮರಾಟಿ ಸಮಾಜ ಬಾಂಧವರಿಗೆಲ್ಲ ಸೇರಿದ ಸಂಘಟನೆಯಾಗಿದೆ. ಸಮಾಜ ಬಾಂಧವರೆಲ್ಲರೂ ನಮ್ಮವರು ಎಂಬ ಭಾವನೆಯಿಂದ ಸಮಾಜದ ಒಳಿತಿಗಾಗಿ ಸಂಘದಿಂದ ಎಲ್ಲಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಹೀಗಾಗಿ ಸಂಘಟನೆ ನಿರಂತರವಾಗಿ ಬೆಳೆಯಲು ಸಮಾಜ ಬಾಂಧವರೆಲ್ಲರೂ ತೊಡಗಿಸಿಕೊಳ್ಳುವುವುದು ಬಹುಮುಖ್ಯ. ಕಾರ್ಯಕಾರಿ ಸಮಿತಿಯಲ್ಲಿ ಸೇರಿಕೊಂಡು ಸಂಘದ ಮುಖಾಂತರ ಸಮಾಜದ ಬೆಳವಣಿಗೆಯಲ್ಲಿ ಭಾಗಿಗಳಾಗುವ ಚಿಂತನೆ ಪ್ರತಿಯೊಬ್ಬ ಸಮಾಜ ಬಾಂಧವರಲ್ಲಿ ಬರಬೇಕು ಎಂದು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ದುಗ್ಗಪ್ಪ ನಾಯ್ಕ ಹೇಳಿದರು.

ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ಜು.27ರಂದು ನಡೆದ ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದ ಮುಖಾಂತರ ಮರಾಟಿ ಸಮಾಜ ಬಾಂಧವರಿಗೆಲ್ಲರಿಗೂ ಸಭಾಭನವನ್ನು ಶೇ.20ರ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಪ್ರತಿಭೆಗಳನ್ನು ಗುರುತಿಸಲು ಪ್ರತಿಭಾ ಪುರಸ್ಕಾರ, ಕ್ರೀಡಾಕೂಟ ಸೇರಿದಂತೆ ವಾರ್ಷಿಕವಾಗಿ ಹಲವು ಕಾರ್ಯಕ್ರಮ ನಡೆಸಲಾಗುತ್ತಿದೆ. ಇದಲ್ಲದೆ ಪ್ರಾಕೃತಿಕ ವಿಕೋಪ, ಅನಾರೋಗ್ಯ ಸಮಸ್ಯೆಗಳಿಗೆ ಸಮಾಜ ಬಾಂಧವರಗೆ ಧನಸಹಾಯ ನೀಡುತ್ತಿದೆ. ಶಿಕ್ಷಣ ಮಹತ್ವ ನೀಡಲು ವಿದ್ಯಾನಿಧಿ ಸ್ಥಾಪಿಸಿದ್ದು ಅದರ ಮೊತ್ತ ರೂ.7ಲಕ್ಷವಾಗಿದೆ. ಜ್ಞಾನ ವೃದ್ಧಿಗಾಗಿ ಪುಸ್ತಕ ಭಂಡಾರ ತೆರೆಲಾಗಿದ್ದು, ಸಮಾಜ ಬಾಂಧವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಭೂ ವಿವಾದ, ಇನ್ನಿತರ ತಕರಾರು ಸಮಸ್ಯೆಗಳಿಗೆ ಸಂಬಂಧಿಸಿ ಸಂಘಕ್ಕೆ ದೂರು ನೀಡಿದಲ್ಲಿ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದ್ದು ನಮ್ಮವರು ಎಂಬ ಭಾವನೆಯಿಂದ ಸಮಾಜ ಬಾಂಧವರ ಸಮಸ್ಯೆಗಳಿಗೆ ಸಂಘದ ಮೂಲಕ ಸ್ಪಂದನೆ ನೀಡಲಾಗುತ್ತಿದೆ ಎಂದು ಹೇಳಿದ ಅವರು ಸಂಘ ನಮಗೇನು ಕೊಟ್ಟಿದೆ ಎಂದು ಹೊರಗಿನಿಂದ ಪ್ರಶ್ನಿಸುವವರು ಸಂಘದಲ್ಲಿ ಸೇರಿಕೊಂಡು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ಹೊರಗಿನಿಂದ ಮಾತನಾಡುವುದು ಯಾರಿಗೂ ಶೋಭೆ ತರುವಂತದಲ್ಲ. ಕಾರ್ಯಕ್ರಮಗಳಿಗೆ ಸಂಘದ ಹಣವನ್ನು ಖರ್ಚು ಮಾಡದೇ ಕಾರ್ಯಕಾರಿ ಸಮಿತಿಯವರು ಹಾಗೂ ಇತರ ದೇಣಿಗೆಯ ಮೂಲಕ ಖರ್ಚು ಮಾಡಲಾಗುತ್ತಿದೆ ಎಂದು ತಿಳಿಸಿದರು.
ನೂತನ ಕಾರ್ಯಕಾರಿ ಸಮಿತಿ ರಚನೆ:
ಸಂಘದ 2025-26ನೇ ಸಾಲಿಗೆ ಕಾರ್ಯಕಾರಿ ಸಮಿತಿಗೆ ಗ್ರಾಮಾಂತರ ಪ್ರದೇಶಗಳಿಂದ 20 ಮಂದಿ ಹಾಗೂ ನಗರ ಪ್ರದೇಶದಿಂದ 16 ಮಂದಿ ಸೇರಿದಂತೆ ಒಟ್ಟು ೩೬ ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಂಘದ ನಿಕಟಪೂರ್ವ ಅಧ್ಯಕ್ಷ ಮಂಜುನಾಥ ಎನ್.ಎಸ್. ಹಾಗೂ ಕಾರ್ಯದರ್ಶಿ ಶೀನಪ್ಪ ನಾಯ್ಕ ನೆಲ್ಯಾಡಿ ಕಾರ್ಯಕಾರಿ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಯುವ ವೇದಿಕೆಯಿಂದ ಟ್ರಾಫಿಕ್ ಮಿರರ್ ಅಳವಡಿಕೆ ಕೊಡುಗೆ:
ಕೊಂಬೆಟ್ಟು ಮರಾಟಿ ಸಮಾಜ ಮಂದಿರ ಮುಂಭಾಗದ ಅಪಾಯಕಾರಿ ತಿರುವಿನಲ್ಲಿ ವಾಹನ ಸವಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮರಾಟಿ ಯುವ ವೇದಿಕೆಯಿಂದ ಅಳವಡಿಸಲಾದ ಟ್ರಾಫಿಕ್ ಮಿರರ್ನ್ನು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್. ದುಗ್ಗಪ್ಪ ನಾಯ್ಕ ಅನಾವರಣಗೊಳಿಸಿದರು. ಅಧ್ಯಕ್ಷ ಮರಾಟಿ ಯುವ ವೇದಿಕೆಯ ಅಧ್ಯಕ್ಷ ವಸಂತ ನಾಯ್ಕ ಆರ್ಯಾಪು, ಉಪಾಧ್ಯಕ್ಷ ನವೀನ್ ಕೆ., ಖಜಾಂಚಿ ಜಗದೀಶ್ ಎಲಿಕ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಪೂವಪ್ಪ ನಾಯ್ಕ ಕುಂಞಕುಮೇರು ಸ್ವಾಗತಿಸಿದರು. ಕಾರ್ಯದರ್ಶಿ ಶೀನಪ್ಪ ನಾಯ್ಮ ನೆಲ್ಯಾಡಿ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಮೋಹನ ನಾಯ್ಕ ಲೆಕ್ಕಪತ್ರ ಮಂಡಿಸಿದರು. ಯುವ ಕಾರ್ಯದರ್ಶಿ ಗಿರೀಶ್ ನಾಯ್ಕ ಸೊರಕ ವಂದಿಸಿದರು. ಮಹಿಳಾ ವೇದಿಕೆಯ ಸದಸ್ಯೆ ಯಶೋಧಾ ಕೃಷ್ಣ ನಾಯ್ಕ ಪ್ರಾರ್ಥಿಸಿದರು. ನಿಕಟಪೂರ್ವ ಕೋಶಾಧಿಕಾರಿ ಬಾಬು ನಾಯ್ಕ ಸಂತಾಪ ಸೂಚಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆಯಿತು. ನಂತರ ನೂತನ ಕಾರ್ಯಕಾರಿ ಸಮಿತಿ ಸಭೆಯು ನಡೆಯಿತು.
ಸಂಘಕ್ಕೆ ಸಂಪ್ಯದಲ್ಲಿ 38 ಸೆಂಟ್ಸ್ ಜಾಗವಿದ್ದು, ಅದಕ್ಕೆ ಆವರಣ ಮಾಡಲಾಗಿದೆ. ಅಲ್ಲಿ ಸಾಂಸ್ಕೃತಿಕ ಕಲಾಭವನ ನಿರ್ಮಾಣಕ್ಕೆ ಈ ಹಿಂದೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ವರ್ಷ ಮತ್ತೆ ಮನವಿ ಸಲ್ಲಿಸಲು ಕಾರ್ಯಪ್ರವೃತ್ತರಾಗಿದ್ದು ಅದಕ್ಕೆ ಸಂಚಾಲಕರನ್ನು ನೇಮಿಸಲಾಗಿದೆ. ಸಾಂಸ್ಕೃತಿಕ ಕಲಾ ಭವನದ ನಿರ್ಮಾಣಕ್ಕೆ ಅನುದಾನದ ಬಗ್ಗೆ ಶಾಸಕರಲ್ಲಿ ವಿಚಾರಿಸಲಾಗಿದ್ದು ಅದಕ್ಕೆ ಬೇಕಾದ ಯೋಜನೆ, ಅಂದಾಜಪಟ್ಟಿ ತಯಾರಿಸಿಕೊಂಡು ಬರುವಂತೆ ಅವರು ಸೂಚಿಸಿದ್ದು ದೊಡ್ಡ ಮಟ್ಟದ ಅನುದಾನ ದೊರೆಯುವ ನಿರೀಕ್ಷೆಯಿದೆ.
-ಎನ್. ದುಗ್ಗಪ್ಪ ನಾಯ್ಕ,
ಅಧ್ಯಕ್ಷರು ಮರಾಟಿ ಸಮಾಜ ಸೇವಾ ಸಂಘ