ದೇವಾಲಯದ ಬಳಿ ತಾತ್ಕಾಲಿಕ ರಸ್ತೆ- ಭಕ್ತರ ಪರದಾಟಕ್ಕೆ ಗುತ್ತಿಗೆದಾರ ಸಂಸ್ಥೆ ಸ್ಪಂದನೆ

0

ಉಪ್ಪಿನಂಗಡಿ: ಚತುಷ್ಫಥ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಕಾಮಗಾರಿಯ ಕಾರಣದಿಂದ ಕುಮಾರಾಧಾರಾ ಸೇತುವೆಯ ಬಳಿ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ಇದ್ದ ರಸ್ತೆಯು ಮುಚ್ಚಲ್ಪಟ್ಟು, ಅದರ ಅರಿವಿಲ್ಲದೆ ಸೇತುವೆಯ ಬಳಿ ಬಸ್ಸಿನಿಂದ ಇಳಿಯುವ ಪರ ಊರಿನ ಭಕ್ತಾದಿಗಳು ಅಪಾಯಕಾರಿ ಸ್ಥಳದಿಂದ ದೇವಾಲಯಕ್ಕೆ ಹೋಗುವ ಯತ್ನ ಮಾಡುತ್ತಿರುವ ಕಳವಳಕಾರಿ ವಿದ್ಯಾಮಾನದ ಬಗ್ಗೆ ಪತ್ರಿಕಾ ವರದಿ ಪ್ರಕಟವಾದ ಬೆನ್ನಲ್ಲೇ ದೇವಾಲಯದ ಬಳಿ ತಾತ್ಕಾಲಿಕ ರಸ್ತೆ ನಿರ್ಮಾಣ ಕಾರ್ಯವನ್ನು ಸೋಮವಾರದಂದು ನಡೆಸಲಾಯಿತು.


ಈ ಹಿಂದೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯಕ್ಕೆ ಬರುವ ಭಕ್ತ್ತಾದಿಗಳು ಉಪ್ಪಿನಂಗಡಿಯ ಕುಮಾರಧಾರಾ ಸೇತುವೆ ದಾಟಿದಾಕ್ಷಣ ಬಸ್ಸಿನಿಂದ ಇಳಿದು ಹೆದ್ದಾರಿಗಿದ್ದ ಸಂಪರ್ಕ ರಸ್ತೆಯ ಮೂಲಕ ದೇವಾಲಯದತ್ತ ಸಾಗುತ್ತಿದ್ದರು. ಇದೀಗ ಹೆದ್ದಾರಿ ಅಗಲೀಕರಣದ ಕಾಮಗಾರಿ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಮೊದಲಿದ್ದ ಸಂಪರ್ಕ ರಸ್ತೆಯು ಮುಚ್ಚಲ್ಪಟ್ಟಿದೆ. ಹಾಗೂ ಹೆದ್ದಾರಿಯು ಮೊದಲಿಗಿಂತ ಹೆಚ್ಚು ಎತ್ತರಿಸಲ್ಪಟ್ಟಿದೆ. ಈ ಬೆಳವಣಿಗೆಯ ಅರಿವಿಲ್ಲದ ಭಕ್ತಾದಿಗಳು, ಮುಖ್ಯವಾಗಿ ದೇವಾಲಯದಲ್ಲಿ ನಡೆಯುವ ಉತ್ತರಕ್ರಿಯಾ ಕಾರ್ಯಕ್ರಮಕ್ಕೆಂದು ಆಗಮಿಸುವ ಹೊರ ಊರುಗಳ ಜನತೆ ಎಂದಿನಂತೆ ಬಸ್ಸಿನಲ್ಲಿ ಬಂದು ಸೇತುವೆ ದಾಟಿದಾಕ್ಷಣ ಬಸ್ಸಿನಿಂದ ಇಳಿಯುತ್ತಾರೆ. ಹೀಗೆ ಇಳಿದ ಮಂದಿಗೆ ದೇವಾಲಯಕ್ಕೆ ಹೋಗುವ ದಾರಿ ಕಾಣಿಸದಾಗಿ ಕಂಡ ಕಂಡಲ್ಲಿ ಇಳಿಯುವ ಪ್ರಯತ್ನವನ್ನು ಮಾಡುತ್ತಿದ್ದು, ಒಂದಿನಿತು ನಿಯಂತ್ರಣ ತಪ್ಪಿದ್ದರೆ ಪ್ರಾಣಾಪಾಯಕ್ಕೆ ತುತ್ತಾಗುವ ಸಂಭವವಿದ್ದು, ಈ ಬಗ್ಗೆ ಪತ್ರಿಕೆಯು ಸಚಿತ್ರ ವರದಿ ಪ್ರಕಟಿಸಿತ್ತು.


ಪ್ರಕಟವಾದ ಪತ್ರಿಕಾ ವರದಿಯಿಂದ ಎಚ್ಚೆತ್ತುಕೊಂಡ ಹೆದ್ದಾರಿ ಕಾಮಗಾರಿ ನಿರತ ಕೆಎನ್‌ಆರ್ ಸಂಸ್ಥೆಯು ಈ ಹಿಂದೆ ಇದ್ದ ರಸ್ತೆಯ ಭಾಗದಲ್ಲೇ ತಾತ್ಕಲಿಕ ನೆಲೆಯಲ್ಲಿ ರಸ್ತೆಯನ್ನು ನಿರ್ಮಿಸಿದ್ದು, ಲಘು ವಾಹನಗಳೂ ಕೂಡಾ ಈ ರಸ್ತೆಯನ್ನು ಬಳಸುವಂತಿದೆ. ಈ ಮೂಲಕ ದೇವಾಲಯಕ್ಕೆ ಮೊದಲಿದ್ದಂತೆಯೇ ಶಾರ್ಟ್ ಕಟ್ ರಸ್ತೆಯೊಂದು ನಿರ್ಮಾಣವಾಗಿ ಭಕ್ತಾದಿಗಳು ಅಪಾಯಕಾರಿ ಪ್ರಯತ್ನಕ್ಕೆ ಮುಂದಾಗುವುದು ತಪ್ಪಿದಂತಾಗಿದೆ.


ತ್ವರಿತ ಸ್ಪಂದನೆ ಸ್ವಾಗತಾರ್ಹ
ಈ ಬಗ್ಗೆ ಪ್ರತಿಕ್ರಿಯಿಸಿದ ಉದ್ಯಮಿ ಸ್ವರ್ಣೇಶ್ ಗಾಣಿಗ ರವರು, ಸಮಾಜದ ಸಮಸ್ಯೆಯ ಬಗ್ಗೆ ಪತ್ರಿಕೆಗಳು ಗಮನ ಸೆಳೆದ ವರದಿಯನ್ನು ಪ್ರಕಟಿಸಿದ ಬೆನ್ನಿಗೆಯೇ ತ್ವರಿತ ಸ್ಪಂದನ ತೋರಿದ ಹೆದ್ದಾರಿ ಇಲಾಖೆ ಹಾಗೂ ಕಾಮಗಾರಿ ನಿರತ ಕೆಎನ್‌ಆರ್ ಸಂಸ್ಥೆಯ ಅಧಿಕಾರಿಗಳು ತ್ವರಿತ ಸ್ಪಂದನ ತೋರಿರುವುದು ಸ್ವಾಗಾತಾರ್ಹ ವಿದ್ಯಾಮಾನ. ಇದು ವ್ಯವಸ್ಥೆಯ ಬಗ್ಗೆ ಸಮಾಜಕ್ಕೆ ವಿಶ್ವಾಸವನ್ನು ಮೂಡಿಸಿದಂತಿದೆ. ಇನ್ನು ಮುಂದಕ್ಕೆ ನಿರ್ಮಿಸಲಾದ ರಸ್ತೆಯಲ್ಲಿ ಪರ ಊರಿನ ಜನರಿಗೆ ಅರಿವು ಮೂಡಿಸುವ ಸಲುವಾಗಿ ಫಲಕವೊಂದನ್ನು ಅಳವಡಿಸುವ ಬಗ್ಗೆ ದೇವಾಲಯದ ಆಡಳಿತ ಗಮನಹರಿಸಬೇಕು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here