ಕೊಯಿಲ ಗ್ರಾಮಸಭೆ : ಧರೆ ಅಗೆತದಿಂದ ಕುಡಿಯುವ ನೀರಿನ ಟ್ಯಾಂಕ್ ಕುಸಿಯುವ ಭೀತಿ-ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ನಿರ್ಣಯ

0

ರಾಮಕುಂಜ: ಕೊಯಿಲ ಜನತಾ ಕಾಲೋನಿಯಲ್ಲಿರುವ ಕುಡಿಯುವ ನೀರು ಸರಬರಾಜು ಯೋಜನೆಯ ಬೃಹತ್ ಟ್ಯಾಂಕ್‌ನ ಪಕ್ಕದಲ್ಲೇ ಧರೆ ಅಗೆದಿರುವುದರಿಂದ ಈಗ ಟ್ಯಾಂಕ್ ಕುಸಿತವಾಗುವ ಭೀತಿ ಉಂಟಾಗಿದೆ. ಆದ್ದರಿಂದ ಟ್ಯಾಂಕ್ ಕುಸಿಯಲು ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೊಲ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಸಭೆ ಜು.28ರಂದು ಗ್ರಾ.ಪಂ.ಅಧ್ಯಕ್ಷೆ ಪುಷ್ಪಾಸುಭಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಸುಲೈಮಾನ್ ಎಂಬವರು ವಿಚಾರ ಪ್ರಸ್ತಾಪಿಸಿ ಕೊಯಿಲ ಜನತಾ ಕಾಲೋನಿಯಲ್ಲಿರುವ ಕುಡಿಯುವ ನೀರಿನ ಟ್ಯಾಂಕ್‌ನ ಸುತ್ತಲಿನ ಧರೆ ಕುಸಿತಗೊಂಡಿದ್ದು ಟ್ಯಾಂಕ್ ಕುಸಿದು ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಸಂದೇಶ್ ಅವರು, ಟ್ಯಾಂಕ್ ತೆರವುಗೊಳಿಸಲು 60 ಸಾವಿರ ರೂ. ನಿಗದಿ ಮಾಡಿ ಟೆಂಡರ್ ಕರೆಯಲಾಗಿತ್ತು. ಯಾರೂ ಮುಂದೆ ಬಾರದೇ ಇರುವುದರಿಂದ ಇದೀಗ ಟೆಂಡರ್ ಮೊತ್ತ ಕಡಿಮೆ ಮಾಡಿ ಮರು ಟೆಂಡರ್ ಕರೆಯಲಾಗಿದೆ. ಶೀಘ್ರ ತೆರವು ಮಾಡುತ್ತೇವೆ ಎಂದರು. ಅಲ್ಲಿ ತಡೆಗೋಡೆ ಮಾಡಿಕೊಡಬೇಕೆಂದು ಕಾಲೋನಿ ನಿವಾಸಿಗಳು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಅವರು, ಇದಕ್ಕೆ ದೊಡ್ಡ ಮೊತ್ತ ಬೇಕಾಗಿರುವುದರಿಂದ ಗ್ರಾ.ಪಂ.ನಿಂದ ಸಾಧ್ಯವಿಲ್ಲ ಎಂದರು.

ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಪ್ರತಿಕ್ರಿಯಿಸಿದ ಪ್ರಕಾಶ್ ಕೆಮ್ಮಾರ, ಮೋಹನದಾಸ್ ಶೆಟ್ಟಿ ಬಡಿಲ ಮತ್ತಿತರರು, 50 ಸಾವಿರ ಲೀ.ಸಾಮರ್ಥ್ಯದ ಸದ್ರಿ ಟ್ಯಾಂಕ್ 1996ರಲ್ಲಿ ನಿರ್ಮಾಣಗೊಂಡಿದೆ. ಟ್ಯಾಂಕ್ ಎತ್ತರದ ಪ್ರದೇಶದಲ್ಲಿರುವುದರಿಂದ ಗ್ರಾಮದ ವಿವಿಧ ಕಡೆ ಇಲ್ಲಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಈ ರೀತಿಯ ಜಾಗ ಗ್ರಾಮದ ಬೇರೆ ಎಲ್ಲಿಯೂ ಇಲ್ಲ. ಸ್ಥಳೀಯ ನಿವಾಸಿಯೊಬ್ಬರು ಧರೆ ಅಗೆದಿರುವುದರಿಂದ ಈಗ ಟ್ಯಾಂಕ್ ಅಪಾಯಕಾರಿ ಸ್ಥಿತಿಯಲ್ಲಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಗ್ರಾ.ಪಂ.ಸದಸ್ಯ ನಝೀರ್ ಪೂರಿಂಗ ಮಾತನಾಡಿ, ಜನತಾ ಕಾಲೋನಿಯಲ್ಲಿ ಟ್ಯಾಂಕ್ ಆಗಿ 30 ವರ್ಷ ಕಳೆದಿದೆ. ಇದರ ಪಕ್ಕದಲ್ಲಿ ಮನೆಕಟ್ಟಿ ವಾಸಿಸುತ್ತಿರುವವರಿಗೆ ಐದಾರು ವರ್ಷದ ಹಿಂದೆ 94ಸಿಯಲ್ಲಿ ಜಾಗ ಮಂಜೂರಾತಿ ಆಗಿದೆ ಎಂಬ ವಿಚಾರವನ್ನು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಚರ್ಚೆ ನಡೆದು ಟ್ಯಾಂಕ್‌ನ ಪಕ್ಕದಲ್ಲಿ ಧರೆ ಅಗೆದಿರುವುದರಿಂದಲೇ ಈಗ ಮಣ್ಣು ಕುಸಿದು ಟ್ಯಾಂಕ್ ಅಪಾಯಕಾರಿ ಸ್ಥಿತಿಗೆ ಬಂದಿದೆ. ಆದ್ದರಿಂದ ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂತು. ಇದಕ್ಕೆ ಪ್ರತಿಕ್ರಿಯೆ ನೀಡಿದ ನೋಡೆಲ್ ಅಧಿಕಾರಿಯಾಗಿದ್ದ ತಾ.ಪಂ.ಇಒ ನವೀನ್‌ಕುಮಾರ್ ಭಂಡಾರಿ ಅವರು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಗುಂಡಿಬಿದ್ದ ಎಲ್ಯಂಗ ರಸ್ತೆ-ಆಕ್ರೋಶ
ಆತೂರಿನಿಂದ ಎಲ್ಯಂಗಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಮಳೆಯಿಂದಾಗಿ ಗುಂಡಿಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಈ ರಸ್ತೆ ಮೂಲಕ ಮದ್ರಸ, ಶಾಲೆ, ದೇವಸ್ಥಾನಕ್ಕೆ ನೂರಾರು ಮಂದಿ ನಡೆದುಕೊಂಡು, ವಾಹನದಲ್ಲಿ ಓಡಾಟ ನಡೆಸುತ್ತಿದ್ದಾರೆ. ಸ್ಕೂಲ್‌ಬಸ್, ರಿಕ್ಷಾಗಳ ಓಡಾಟವೂ ಇದೆ. ಆದರೂ ಸದ್ರಿ ರಸ್ತೆಗೆ ದುರಸ್ತಿ ಭಾಗ್ಯ ಸಿಕ್ಕಿಲ್ಲ. ಸಮರ್ಪಕ ಚರಂಡಿ ವ್ಯವಸ್ಥೆಯೂ ಇಲ್ಲದೆ ನೀರು ರಸ್ತೆಯಲ್ಲೇ ಹರಿದು ರಸ್ತೆ ಕೆಟ್ಟುಹೋಗಿದೆ ಎಂದು ರಸ್ತೆ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸದ್ರಿ ರಸ್ತೆ ದುರಸ್ತಿಗೆ ಅನುದಾನ ಇಡಲಾಗಿದೆ. ಮಳೆಯಿಂದಾಗಿ ಕೆಲಸ ವಿಳಂಬವಾಗಿದೆ ಎಂದು ಅಧ್ಯಕ್ಷರು, ಸದಸ್ಯರು ತಿಳಿಸಿದರೂ ಕೇಳದ ರಸ್ತೆ ಬಳಕೆದಾರರೂ ಸದ್ರಿ ರಸ್ತೆಯನ್ನು ಗ್ರಾ.ಪಂ.ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು. ಮಳೆನಿಂತ ತಕ್ಷಣ ಗುಂಡಿ ಮುಚ್ಚುವ ಕೆಲಸ ಮಾಡುತ್ತೇವೆ ಎಂದು ಪಿಡಿಒ ಭರವಸೆ ನೀಡಿ ಚರ್ಚೆಗೆ ತೆರೆ ಎಳೆದರು.

ಪಶು ವೈದ್ಯಕೀಯ ಕಾಲೇಜು ಶೀಘ್ರ ಆರಂಭಿಸಿ
ಕೊಲದಲ್ಲಿ ಪಶುವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣಗೊಂಡು ಹಲವು ವರ್ಷ ಕಳೆದಿದೆ. ಕಟ್ಟಡಗಳ ಸುತ್ತ ಈಗ ಗಿಡಬಳ್ಳಿಗಳು ಬೆಳೆದಿವೆ. ಈ ಕಟ್ಟಡ ನಿರುಪಯುಕ್ತವಾಗಿದೆ. ಶೀಘ್ರದಲ್ಲಿ ಇಲ್ಲಿ ಕಾಲೇಜು ಆರಂಭಗೊಳಿಸಬೇಕು. ಸ್ಥಳೀಯರಿಗೆ ಉದ್ಯೋಗವೂ ಸಿಗಲಿ ಎಂದು ಜುನೈದ್, ಮೋಹನ್‌ದಾಸ್ ಶೆಟ್ಟಿ ಬಡಿಲ, ಹೇಮಾ ಬಡಿಲ ಮತ್ತಿತರರು ಒತ್ತಾಯಿಸಿದರು. ಕೊಲದಲ್ಲಿ ಜಾನುವಾರು ಸಂವರ್ಧನಾ ಕೇಂದ್ರವಿದ್ದರೂ ಸ್ಥಳೀಯರ ಜಾನುವಾರುಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ. ಕುಂತೂರುಪದವುನಲ್ಲಿರುವ ಪಶುಚಿಕಿತ್ಸಾಲಯಕ್ಕೆ ಹೋಗಬೇಕಾಗಿದೆ. ಆದ್ದರಿಂದ ಕೊಲದಲ್ಲೇ ಪಶುಚಿಕಿತ್ಸಾಲಯ ಮಾಡಬೇಕೆಂದೂ ಗ್ರಾಮಸ್ಥರು ಒತ್ತಾಯಿಸಿದರು.

ವಸತಿ ಶಾಲೆ ಮಾಡಿ
ವಳಕಡಮ ಸರಕಾರಿ ಕಿ.ಪ್ರಾ.ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಇಲ್ಲಿ ಶಾಲೆಗೆ ಸುಮಾರು 5 ಎಕ್ರೆ ಜಾಗವಿದೆ. ಊರಿನವರೇ 1.50 ಲಕ್ಷ ರೂ.ಖರ್ಚು ಮಾಡಿ ಶಾಲೆ ಹಾಗೂ ಪರಿಸರ ಅಭಿವೃದ್ಧಿ ಮಾಡಲಾಗಿದೆ. ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇದನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯಾಗಿ ಪರಿವರ್ತಿಸಬೇಕೆಂದು ಗ್ರಾ.ಪಂ.ಮಾಜಿ ಸದಸ್ಯ ವಿನೋದರ ಮಾಳ ಒತ್ತಾಯಿಸಿದರು. ಡಿ.ಟಿ.ಭಟ್ ಮತ್ತಿತರರು ಇದಕ್ಕೆ ಬೆಂಬಲ ಸೂಚಿಸಿದರು. ಸರಕಾರಿ ನೌಕರರ ಮಕ್ಕಳೂ ಸರಕಾರಿ ಶಾಲೆಗಳಿಗೆ ಬರುವಂತಾಗಬೇಕು. ಆಗ ಎಲ್ಲರಿಗೂ ಸರಕಾರಿ ಶಾಲೆ ಮೇಲೆ ಗೌರವ ಬರುತ್ತದೆ ಎಂದು ವಿನೋದ್‌ಕುಮಾರ್ ಪಲ್ಲಡ್ಕ ಹೇಳಿದರು.

ಅಕೇಶಿಯಾ ಮರ ತೆರವು ಮಾಡಿ
ಪಶುಸಂಗೋಪನಾ ಇಲಾಖೆಯ ಜಾಗದಲ್ಲಿ ಅಕೇಶಿಯಾ ನಡುತೋಪು ಮಾಡಲಾಗಿದೆ. ಈಗ ಮರಗಳೆಲ್ಲವೂ ರಸ್ತೆಗೆ ಬಾಗಿಕೊಂಡು ನಿಂತಿವೆ. ನೀರುಬಿದ್ದು ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಅಕೇಶಿಯಾ ಮರದಿಂದ ಅಸ್ತಮಾ ರೋಗವೂ ಬರುತ್ತದೆ. ಆದ್ದರಿಂದ ಇಲ್ಲಿನ ಅಕೇಶಿಯಾ ಮರಗಳನ್ನು ಕಟ್ ಮಾಡಿ ಕೊಂಡೊಯ್ಯಬೇಕೆಂದು ಗ್ರಾಮಸ್ಥ ಡಿ.ಟಿ.ಭಟ್ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನೋಡೆಲ್ ಅಧಿಕಾರಿಯಾಗಿದ್ದ ತಾ.ಪಂ.ಇಒ ನವೀನ್‌ಕುಮಾರ್ ಭಂಡಾರಿ ಅವರು, ಅಕೇಶಿಯಾ ಮರ ಕಟ್ ಮಾಡಲು ಆದೇಶವಾಗಿದೆ. ಕೆಲವೊಂದು ಕಡೆ ಕಟ್ ಮಾಡುತ್ತಿದ್ದಾರೆ. ಇಲ್ಲಿನ ಅಕೇಶಿಯಾ ಮರಗಳನ್ನು ಪ್ರಥಮ ಆದ್ಯತೆಯಲ್ಲಿ ಮುಂದಿನ ಒಂದೂವರೇ ತಿಂಗಳಿನೊಳಗೆ ತೆರವುಗೊಳಿಸಲು ಸೂಚಿಸುವುದಾಗಿ ಹೇಳಿದರು.

ಹೆದ್ದಾರಿ ಬದಿಯೇ ಮರರಾಶಿ
ಅಪಾಯಕಾರಿ ಮರಗಳನ್ನು ತುಂಡರಿಸಿ ರಸ್ತೆ ಬದಿಯೇ ರಾಶಿ ಹಾಕಲಾಗಿದೆ. ಇದರಿಂದ ನೀರು ಸರಾಗವಾಗಿ ಹರಿದುಹೋಗಲು ಆಗದೇ ರಸ್ತೆಯಲ್ಲೇ ಹರಿಯುತ್ತಿದೆ. ಅಲ್ಲದೇ ಹೆದ್ದಾರಿ ಬದಿ ನಡೆದುಕೊಂಡು ಹೋಗುವ ಶಾಲಾಮಕ್ಕಳಿಗೆ, ವೃದ್ಧರಿಗೆ ತೊಂದರೆಯಾಗಿದೆ. ಕೆಲವೊಂದು ಕಡೆ ಮನೆಗಳಿಗೆ ಹೋಗುವ ಒಳದಾರಿಯನ್ನೂ ಬಂದ್ ಮಾಡಲಾಗಿದೆ ಎಂದು ಗ್ರಾಮಸ್ಥರಾದ ಪ್ರಕಾಶ್ ಕೆಮ್ಮಾರ, ಜುನೈದ್, ಹಂಝ ಬಡ್ಡಮೆ, ವಿನೋದ್‌ಕುಮಾರ್ ಮತ್ತಿತರರು ಆರೋಪಿಸಿದರು. ಈ ಬಗ್ಗೆ ಗುತ್ತಿಗೆದಾರರಿಗೆ ಸೂಚನೆ ನೀಡಿ ತಕ್ಷಣ ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಉಪ ವಲಯ ಅರಣ್ಯಾಧಿಕಾರಿ ಕಾಂತರಾಜು ಹೇಳಿದರು. ಗಂಡಿಬಾಗಿಲು ಪರಿಸರದಲ್ಲಿ ಹೆದ್ದಾರಿಗೆ ಬಾಗಿಕೊಂಡಿರುವ ಮರಗಳ ರೆಂಬೆ ತೆರವುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.

ಬಡಿಲ ಟಿಸಿ ಬಗ್ಗೆ ಚರ್ಚೆ
ಬಡಿಲದಲ್ಲಿರುವ ಟಿ.ಸಿ.ಗೆ ಬಜತ್ತೂರು ಭಾಗದಿಂದ ತಂತಿ ಎಳೆದು ಸಂಪರ್ಕ ಕೊಡಬೇಕೆಂದು ಮೋಹನ್‌ದಾಸ್ ಬಡಿಲ, ಹೇಮಾ ಬಡಿಲ ಅವರು ಒತ್ತಾಯಿಸಿದರು. ಬಜತ್ತೂರು ಭಾಗದಿಂದ ಈ ಟಿ.ಸಿ.ಗೆ ವರ್ಗ ಜಾಗದ ಮೂಲಕ ಲೈನ್ ಎಳೆಯಬೇಕಾಗಿದೆ. ಆದರೆ ವರ್ಗ ಜಾಗದವರು ಬಿಡುತ್ತಿಲ್ಲ ಎಂದು ಮೆಸ್ಕಾಂ ಸಹಾಯಕ ಇಂಜಿನಿಯರ್ ನಿತಿನ್‌ಕುಮಾರ್ ಹೇಳಿದರು. ಹಳೆಯ ತಂತಿಗಳನ್ನು ಆದ್ಯತೆ ಮೇಲೆ ಬದಲಾವಣೆ ಮಾಡಿಕೊಡುತ್ತೇವೆ ಎಂದು ನಿತಿನ್ ಕುಮಾರ್ ತಿಳಿಸಿದರು.

ಟಿ.ಸಿ.ಶಿಫ್ಟ್ ಮಾಡಿ
ಗಂಡಿಬಾಗಿಲು ಶಾಲೆಯ ಮೈದಾನದ ಪಕ್ಕದಲ್ಲಿ ಇರುವ ವಿದ್ಯುತ್ ಟ್ರಾನ್ಸ್‌ಫಾರ್‍ಮರ್ ಶಿಫ್ಟ್ ಮಾಡಬೇಕೆಂದು ಗ್ರಾಮಸ್ಥ ಹನೀಫ್ ಅವರು ಒತ್ತಾಯಿಸಿದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಪ್ರತಿಕ್ರಿಯಿಸಿದ ಪಿಡಿಒ ಸಂದೇಶ್ ಅವರು, ಸದ್ರಿ ಟಿಸಿ ಸರಕಾರಿ ಜಾಗದಲ್ಲಿ ರಸ್ತೆ ಮಾರ್ಜಿನ್‌ನಲ್ಲಿ ಇದೆ. ಇದರಿಂದ ಶಾಲೆಗೆ ಯಾವುದೇ ತೊಂದರೆ ಇಲ್ಲ ಎಂದರು. ಟಿ.ಸಿ.ಸುತ್ತಲೂ ಬೇಲಿ ಮಾಡಿಕೊಡುವ ಎಂದು ಸದಸ್ಯ ಚಿದಾನಂದ ಹೇಳಿದರು. ಆದರೂ ಟಿ.ಸಿ.ಶಿಫ್ಟ್ ಮಾಡುವ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು.

ಮೆಸ್ಕಾಂ ಬಿಲ್ಲಿನಲ್ಲಿ ಪಿಎಫ್,ಗ್ರಾಚ್ಯುಟಿ
ಮೆಸ್ಕಾಂ ಬಿಲ್ಲಿನಲ್ಲಿ ಸಿಬ್ಬಂದಿಗಳ ಪಿಎಫ್, ಗ್ರಾಚ್ಯುಟಿ ಮೊತ್ತವೂ ಸೇರ್ಪಡೆ ಮಾಡುತ್ತಿರುವುದಕ್ಕೆ ಗ್ರಾಮಸ್ಥ ಪ್ರಕಾಶ್ ಕೆಮ್ಮಾರ ಆಕ್ಷೇಪ ಸೂಚಿಸಿದರು. ಇದಕ್ಕೆ ಸ್ಟೇ ಆಗಿದೆ. ಇದರು ಸರಕಾರದ ಮಟ್ಟದಲ್ಲಿ ಆಗುವಂತದ್ದು ಎಂದು ಮೆಸ್ಕಾಂ ಸಹಾಯಕ ಇಂಜಿನಿಯರ್ ನಿತಿನ್‌ಕುಮಾರ್ ಹೇಳಿದರು.

ಅಕ್ರಮ ಚಟುವಟಿಕೆಗೆ ತಡೆ ನೀಡಿ
ಕೊಲ ಕೆ.ಸಿ.ಫಾರ್ಮ್ ಜಾಗಕ್ಕೆ ಪ್ರವಾಸಿಗರು ಬಂದು ಮದ್ಯ ಸೇವನೆ ಮಾಡುವುದು ಸೇರಿದಂತೆ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರಾದ ಡಿ.ಟಿ.ಭಟ್, ರಿಕ್ಷಾ ಚಾಲಕ ಪುರುಷೋತ್ತಮರವರು ಒತ್ತಾಯಿಸಿದರು. ಇಂತಹ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಬೀಟ್ ಪೊಲೀಸ್ ಹರ್ಷಿತ್ ಹೇಳಿದರು. ಕೊಲದಲ್ಲಿ ಪೊಲೀಸ್ ಹೊರಠಾಣೆ ಆಗಬೇಕೆಂದು ಜುನೈದ್ ಕೆಮ್ಮಾರ ಒತ್ತಾಯಿಸಿದರು.

ಪಡಿತರ ವಿತರಣೆ ಸಮಸ್ಯೆ
ಆತೂರಿನಲ್ಲಿರುವ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಲ ಶಾಖೆಯಲ್ಲಿ ಕೊಲ ಹಾಗೂ ರಾಮಕುಂಜ ಗ್ರಾಮದ ಪಡಿತರ ಚೀಟಿದಾರರಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಇದರಿಂದ ಪಡಿತರ ಚೀಟಿದಾರರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಗ್ರಾಮವಾರು ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಜುನೈದ್ ಕೆಮ್ಮಾರ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಅಶೋಕ್ ಕೊಲ ಅವರು, ಗ್ರಾಮವಾರು ವಿತರಣೆ ಕಷ್ಟ ಎಂದರು. ಮಧ್ಯಾಹ್ನ ೧.೩೦ರಿಂದ ೨.೩೦ರ ತನಕ ಊಟದ ವಿರಾಮದ ಅವಧಿಯಲ್ಲಿ ಪಡಿತರ ವಿತರಣೆ ಮಾಡುತ್ತಿಲ್ಲ. ಈ ಸಮಯ ಪಡಿತರದಾರರೂ ಊಟವಿಲ್ಲದೆ ಜಗಳಿಯಲ್ಲಿ ಕಾಯುವ ಪರಿಸ್ಥಿತಿ ಇದೆ. ಇಲ್ಲಿ ಇಬ್ಬರು ಸಿಬ್ಬಂದಿಗಳಿರುವುದರಿಂದ ಬದಲಾವಣೆ ಮಾಡಿಕೊಂಡು ನಿರಂತರ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಹಂಝ ಬಡ್ಡಮೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕ ಅಶೋಕ ಕೊಯಿಲ ಅವರು ಈ ಬಗ್ಗೆ ಆಡಳಿತ ಮಂಡಳಿ ಗಮನಕ್ಕೆ ತರುವುದಾಗಿ ಹೇಳಿದರು.

ಖಾಯಂ ಗ್ರಾಮಾಡಳಿತ ಅಧಿಕಾರಿ ಬೇಕು
ಕೊಲ ಗ್ರಾಮಕ್ಕೆ ವಾರದ ಎಲ್ಲಾ ದಿನವೂ ಲಭ್ಯವಿರುವಂತೆ ಖಾಯಂ ಗ್ರಾಮಾಡಳಿತ ಅಧಿಕಾರಿ ನೇಮಕ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಕಡಬ ಕಂದಾಯ ಇಲಾಖೆಗೆ ಆರು ಮಂದಿ ಹೊಸದಾಗಿ ಗ್ರಾಮಾಡಳಿತ ಅಧಿಕಾರಿಗಳು ಬಂದಿದ್ದು ಇನ್ನೆರಡು ವಾರದಲ್ಲಿ ಕೊಯಿಲಕ್ಕೆ ಖಾಯಂ ಗ್ರಾಮ ಆಡಳಿತಾಧಿಕಾರಿ ಬರಲಿದ್ದಾರೆ ಎಂದರು. ಈ ವೇಳೆ ಮಾತನಾಡಿದ ಗ್ರಾಮಸ್ಥರಾದ ಸೆಲಿಕತ್, ಮೋಹನದಾಸ್ ಬಡಿಲ, ಜುನೈದ್ ಮತ್ತಿತರರು ಈಗಿರುವ ಗ್ರಾಮಕರಣಿಕರನ್ನು ಇಲ್ಲಿಗೆ ಖಾಯಂ ಮಾಡಿ, ಹೊಸದಾಗಿ ಬರುವವರು ಬೇಡ ಎಂದರು. ಪ್ಲಾಟಿಂಗ್‌ಗೆ ಗ್ರಾಮಸ್ಥರು ಅರ್ಜಿ ಕೊಡಬೇಕಾಗಿಲ್ಲ. ಕಂದಾಯ ಇಲಾಖೆಯಿಂದಲೇ ಮಾಡಲಾಗುತ್ತಿದೆ. ಈಗ ಸ್ಕ್ಯಾನಿಂಗ್ ಪ್ರಕ್ರಿಯೆ ನಡೆಯುತ್ತಿದ್ದು ಹಂತ ಹಂತವಾಗಿ ಪ್ಲಾಟಿಂಗ್ ನಡೆಯಲಿದೆ ಎಂದು ಗ್ರಾಮಾಡಳಿತಾಧಿಕಾರಿ ಶೇಷಾದ್ರಿ ಹೇಳಿದರು. ಖಾಯಂ ಪಿಡಿಒ ನೇಮಕಾತಿಗೂ ಗ್ರಾಮಸ್ಥರು ಒತ್ತಾಯಿಸಿದರು.

ಉಳಿದಂತೆ ವಿವಿಧ ಅಭಿವೃದ್ಧಿ ಕೆಲಸಗಳ ಕುರಿತು ಚರ್ಚೆ ಮಾಡಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಲಯ ಮೇಲ್ವಿಚಾರಕಿ ನಂದನಕುಮಾರಿ ಬಿ., ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಯಿಲ ಶಾಖಾ ಸಿಬ್ಬಂದಿ ಲೋಕನಾಥ ರೈ, ಕೃಷಿ ಇಲಾಖೆಯ ಸೀಮಾ ಕೆ.ಹೆಚ್., ಗ್ರಾಮ ಆಡಳಿತಾಧಿಕಾರಿ ಶೇಷಾದ್ರಿ, ಕಡಬ ಪಶುಸಂಗೋಪನಾ ಇಲಾಖೆಯ ಕಿರಿಯ ಪಶುವೈದ್ಯ ಪರೀಕ್ಷಕ ರವಿತೇಜ, ಸಿಆರ್‌ಪಿ ಮಹೇಶ್, ಉಪ ವಲಯ ಅರಣ್ಯಾಧಿಕಾರಿ ಕಾಂತರಾಜು ಬಿ.ಎ., ಮೆಸ್ಕಾಂ ಉಪ್ಪಿನಂಗಡಿ ಶಾಖಾ ಸಹಾಯಕ ಇಂಜಿನಿಯರ್ ನಿತಿನ್‌ಕುಮಾರ್, ಬೀಟ್ ಪೊಲೀಸ್ ಹರ್ಷಿತ್, ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ, ಸಂಜೀವಿನಿ ಒಕ್ಕೂಟದ ವಲಯ ಮೇಲ್ವಿಚಾರಕಿ ನಮಿತಾ ಕೆ.,ಇಲಾಖಾವಾರು ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷ ಯತೀಶ್‌ಕುಮಾರ್, ಸದಸ್ಯರಾದ ಹರ್ಷಿತ್‌ಕುಮಾರ್, ಚಿದಾನಂದ ಪಿ., ನಝೀರ್ ಪೂರಿಂಗ, ಚಂದ್ರಶೇಖರ ಮಾಳ, ಸೀತಾರಾಮ ಬಲ್ತಕುಮೇರು, ಹಸನ್ ಸಜ್ಜಾದ್, ಕಮಲಾಕ್ಷಿ, ಲತಾ, ಭಾರತಿ, ನೀತಾ ಎನ್., ಸಫಿಯಾ, ಜೊಹರಾ ಬಿ.,ಶಶಿಕಲಾ ಎಂ.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಸಂದೇಶ್ ಸ್ವಾಗತಿಸಿ, ವರದಿ ಮಂಡಿಸಿದರು. ಕಾರ್ಯದರ್ಶಿ ಪಮ್ಮು ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.


ಪವರ್‌ಮ್ಯಾನ್‌ಗೂ ಹೆಂಡತಿ, ಮಕ್ಕಳಿದ್ದಾರೆ…!
ರಾತ್ರಿ ವೇಳೆ ವಿದ್ಯುತ್ ಇಲ್ಲದೇ ಇದ್ದ ಸಂದರ್ಭದಲ್ಲಿ ಮೆಸ್ಕಾಂನ ಉಪ್ಪಿನಂಗಡಿ ಶಾಖಾ ಕಚೇರಿಗೆ ಫೋನ್ ಮಾಡಿದಾಗ ಫೋನ್ ರಿಸೀವ್ ಮಾಡಿದ ಸಿಬ್ಬಂದಿ ಪವರ್‌ಮ್ಯಾನ್‌ಗೂ ಹೆಂಡತಿ, ಮಕ್ಕಳಿದ್ದಾರೆ ಎಂದು ಉಡಾಫೆಯ ಉತ್ತರ ನೀಡಿದ್ದಾರೆ. ಇದರಿಂದ ನಮ್ಮ ಮನಸ್ಸಿಗೆ ನೋವಾಗಿದೆ ಎಂದು ಸೆಲಿಕತ್ ಕೆಮ್ಮಾರ ಮೆಸ್ಕಾಂ ಸಹಾಯಕ ಇಂಜಿನಿಯರ್ ನಿತಿನ್‌ಕುಮಾರ್ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ನಿತಿನ್‌ಕುಮಾರ್ ಅವರು, ಸಿಬ್ಬಂದಿಗಳು ಈ ರೀತಿ ಹೇಳಬಾರದಿತ್ತು. ಇದು ಶೇ.100ರಷ್ಟು ತಪ್ಪು. ನಮ್ಮಲ್ಲಿ ೮ ಗ್ರಾ.ಪಂ.ವ್ಯಾಪ್ತಿಗೆ ೧೧ ಮಂದಿ ಸಿಬ್ಬಂದಿ ಇರುವುದು. ರಾತ್ರಿ ಪಾಳಿಯಲ್ಲಿ ೮ ಗ್ರಾಮಕ್ಕೂ ಒಬ್ಬರೇ ಸಿಬ್ಬಂದಿ ಕೆಲಸ ಮಾಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸೆಲಿಕತ್, ಜುನೈದ್ ಅವರು, ಗ್ರಾಹಕರು ಕರೆ ಮಾಡಿದಾಗ ಸಿಬ್ಬಂದಿಗಳಿಗೆ ಸರಿಯಾದ ಮಾಹಿತಿ ಕೊಡಬಹುದಲ್ವ ಎಂದು ಹೇಳಿದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಉತ್ತರಿಸಿದ ಇಒ ನವೀನ್‌ಕುಮಾರ್ ಭಂಡಾರಿ ಅವರು, ಸಿಬ್ಬಂದಿಗೆ ನೋಟಿಸ್ ನೀಡಿ ಗ್ರಾ.ಪಂ.ಗೆ ಮಾಹಿತಿ ಕೊಡಿ ಎಂದರು.


ಘನತ್ಯಾಜ್ಯ ಸಿಬ್ಬಂದಿಗಳಿಗೆ ಸನ್ಮಾನ:
ಗ್ರಾಮ ಪಂಚಾಯಿತಿಯ ಘನತ್ಯಾಜ್ಯ ಘಟಕದ ಸಿಬ್ಬಂದಿಗಳಾದ ವಸಂತಿ, ಸರೋಜಿನಿ ಹಾಗೂ ಸುಮಾರು ಒಂದೂವರೇ ವರ್ಷ ತಮ್ಮ ಖಾಸಗಿ ಬೋರ್‌ವೆಲ್‌ನಿಂದ ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ ಬಳಕೆದಾರರಿಗೆ ಕುಡಿಯುವ ನೀರು ಪೂರೈಸಿದ ಸಾಮಾಜಿಕ ಕಾರ್ಯಕರ್ತೆ ಸೆಲಿಕತ್ ಅವರನ್ನು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here