ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಈಸ್ಟ್, ರೋಟರಿ ಕ್ಲಬ್ ಆಫ್ ಟೆಂಪಲ್ ಟೆರೇಸ್, ಫ್ಲೋರಿಡಾ, ಯು.ಎಸ್.ಎ ಇದರ ಆಶ್ರಯದಲ್ಲಿ ಕಾಮತ್ ಆಪ್ಟಿಕಲ್ಸ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವು ಆ.4ರಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿತು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಡಾ.ಶಿವಪ್ರಕಾಶ್ ಎಂ.ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕಣ್ಣಿನಿಂದ ಜಗತ್ತಿನ ಸೌಂದರ್ಯವನ್ನು ವೀಕ್ಷಿಸಬಹುದು ಹಾಗೂ ಆಸ್ವಾದಿಸಲೂಬಹುದು. ಕಣ್ಣು ಮುಚ್ಚಿದರೆ ನಮಗೆ ಏನೂ ಕಾಣಿಸದು. ಕಣ್ಣು ನಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮನುಷ್ಯನ ಎಲ್ಲ ಅಂಗಗಳಂತೆ ಕಣ್ಣು ಕೂಡ ಪ್ರಮುಖ ಅಂಗವಾಗಿದೆ. ನಿರಂತರ ಮೊಬೈಲ್ ಹಾಗೂ ಕಂಪ್ಯೂಟರ್ ವೀಕ್ಷಿಸುವುದರಿಂದ ಕಣ್ಣು ಸಮಸ್ಯೆ ಉಂಟಾಗಬಹುದು ಎಂದ ಅವರು ಅಂತರ್ರಾಷ್ಟ್ರೀಯ ಸಂಸ್ಥೆಯಾಗಿರುವ ರೋಟರಿ ಸಂಸ್ಥೆಯು ಸಮಾಜ ಸೇವೆಯೇ ಧರ್ಮ ಎಂಬಂತೆ ಕಾರ್ಯ ಮಾಡುತ್ತಿದೆ ಎಂದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್ ಮಾತನಾಡಿ, ರೋಟರಿ ಈಸ್ಟ್ ಹಾಗೂ ಯು.ಎಸ್.ಎಯ ಫ್ಲೋರಿಡಾದ ರೋಟರಿ ಟೆರೆಸ್ ಕ್ಲಬ್ ಜಂಟಿಯಾಗಿ ಈ ಶಿಬಿರವನ್ನು ಆಯೋಜಿಸಿದ್ದು ಮಂಗಳೂರಿನ ಕಾಮತ್ ಮೆಡಿಕಲ್ಸ್ ಹಾಗೂ ವಿವೇಕಾನಂದ ಶಾಲೆಯು ಶಿಬಿರದ ಯಶಸ್ವಿಗೆ ಕೈಜೋಡಿಸಿದೆ. ವಿದ್ಯಾರ್ಥಿಗಳಿಗೆ ಕಣ್ಣಿನಲ್ಲಿ ಏನೇ ಸಮಸ್ಯೆ ಇದ್ದರೆ ಈ ಶಿಬಿರದ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದರು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಸತೀಶ್ ಕುಮಾರ್ ರೈ, ಕಾಮತ್ ಆಪ್ಟಿಕಲ್ಸ್ ನ ಡಾ.ಲೋಕೇಶ್, ರೋಟರಿ ಈಸ್ಟ್ ಕೋಶಾಧಿಕಾರಿ ಜಯಂತ್ ಬಾಯಾರು, ಮಾಜಿ ಅಧ್ಯಕ್ಷ ಡಾ.ಸೂರ್ಯನಾರಾಯಣ, ಸದಸ್ಯ ಪ್ರದೀಪ್ ರಾವ್ ಉಪಸ್ಥಿತರಿದ್ದರು.
ವಿವೇಕಾನಂದ ಶಾಲೆಯ ವಿದ್ಯಾರ್ಥಿನಿಯರಾದ ಸುಪ್ರಜಾ, ಶ್ರೀದೇವಿ, ನಿಷಿ ಪ್ರಾರ್ಥಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಸ್ವಾಗತಿಸಿ, ಕಾರ್ಯದರ್ಶಿ ನವೀನ್ ರೈ ಪಂಜಳ ವಂದಿಸಿದರು. ಸಾನ್ವಿ ಹಾಗೂ ಶ್ರೀಹ ಕಾರ್ಯಕ್ರಮ ನಿರೂಪಿಸಿದರು.
ಬಾಕ್ಸ್
ಮಂಗಳೂರಿನ ಕಾಮತ್ ಆಪ್ಟಿಕಲ್ಸ್ ನ ಡಾ.ಲೋಕೇಶ್ ರವರ ನೇತೃತ್ವದಲ್ಲಿ ಉಚಿತ ಕಣ್ಣಿನ ಶಿಬಿರದಲ್ಲಿ ಭಾಗವಹಿಸಿದ ವಿವೇಕಾನಂದ ಶಾಲೆಯ ಹತ್ತನೇ ತರಗತಿಯ 240 ಮಂದಿ ವಿದ್ಯಾರ್ಥಿಗಳ ಕಣ್ಣಿನ ತಪಾಸಣೆಯನ್ನು ನಡೆಸಲಾಯಿತು. ಮಂಗಳವಾರ ಹಾಗೂ ಬುಧವಾರ ದಿನದಂದು ಶಾಲೆಯ ಒಂಭತ್ತನೇ ಹಾಗೂ ಎಂಟನೇ ತರಗತಿ ವಿದ್ಯಾರ್ಥಿಗಳ ಕಣ್ಣಿನ ತಪಾಸಣೆ ನಡೆಸಲಾಗುತ್ತದೆ.