ಪೆರ್ನೆ: ಗ್ರಾಮಾಭಿವೃದ್ಧಿ ಯೋಜನೆಯ ಬಿಳಿಯೂರು ಒಕ್ಕೂಟದ ಒಕ್ಕೂಟೋತ್ಸವ, ಸನ್ಮಾನ

0

ಪುತ್ತೂರು: ಶ್ರೇಷ್ಠತೆ, ಸಮಗ್ರತೆ, ಸಾಮರಸ್ಯ, ಐಕ್ಯತೆಗೆ ಒಕ್ಕೂಟಗಳಲ್ಲಿ ಒಗ್ಗಟ್ಟು ಬೇಕು, ಒಕ್ಕೂಟದ ಬಲವರ್ಧನೆಗೆ ಐಕ್ಯಮತಿ ಇರಬೇಕು, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳನ್ನು ಸ್ವೀಕರಿಸಿದವರು ಅಭಿವೃದ್ಧಿಯಲ್ಲಿ ಎಂದಿಗೂ ಸೋಲಲು ಸಾಧ್ಯವಿಲ್ಲ ಎಂದು ಪ್ರಾಂಶುಪಾಲರಾದ ಶೇಖರ್ ರೈ ಅಭಿಪ್ರಾಯಪಟ್ಟರು.

ಅವರು ಪೆರ್ನೆ ಶ್ರೀ ರಾಮಚಂದ್ರ ಪದವಿ ಪೂರ್ವ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪೆರ್ನೆ ವಲಯದ ಬಿಳಿಯೂರು ಒಕ್ಕೂಟದ ಒಕ್ಕೂಟೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಕಾರ್ಯಾಡಿ ಕಂಬಳಬೆಟ್ಟು ಇಲ್ಲಿನ ಅಧ್ಯಾಪಕ ವಿಠ್ಠಲ ನಾಯಕ್‌ರವರು ಮಾಹಿತಿ ನೀಡಿ, ಒಕ್ಕೂಟ ವ್ಯವಸ್ಥೆಯು ಪೊರಕೆಯ ತರಹ. ಅದರಿಂದ ಎರಡು ರೀತಿಯ ಕೆಲಸಗಳನ್ನೂ ಮಾಡಬಹುದು. ಇದರಿಂದ ಒಕ್ಕೂಟಕ್ಕೆ ರಕ್ಷಣೆ ಸಿಗುತ್ತದೆ. ಮೊದಲು ನಮ್ಮ ಮನೆಯ ಒಕ್ಕೂಟ ಚೆನ್ನಾಗಿರಬೇಕು. ನಮ್ಮ ಕುಟುಂಬವನ್ನು ಇನ್ನೊಂದು ಕುಟುಂಬದೊಂದಿಗೆ ಹೋಲಿಕೆ ಮಾಡಬಾರದು. ಇಂದಿನ ಮಕ್ಕಳಿಗೆ ಮಾರ್ಕ್ ಮುಖ್ಯವಲ್ಲ ರಿಮಾರ್ಕ್ ಬರದಂತೆ ಜೀವನ ಶಿಕ್ಷಣವನ್ನು ನೀಡಬೇಕು. ಮಕ್ಕಳನ್ನು ಹೆತ್ತವರು ಅಂತಸ್ತಿಗೆ ಬಲಿಕೊಡಬಾರದು ಮನಸ್ಸಿನೊಳಗಿನಿಂದ ಗಟ್ಟಿ ಮಾಡಬೇಕು” ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ವಲಯಾಧ್ಯಕ್ಷ ರಾಬರ್ಟ್ ಫೆರ್ನಾಂಡಿಸ್ ವಹಿಸಿದ್ದರು. ದಕ್ಷಿಣ ಕನ್ನಡ-2 ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರು, ಹತ್ತನೇ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ ಪಡೆದ ವಿದ್ಯಾರ್ಥಿಗಳು, ಮಾದರಿ ಸ್ವ ಸಹಾಯ ಮತ್ತು ಪ್ರಗತಿಬಂಧು ಸಂಘ, ನವಜೀವನ ಸಮಿತಿ, ಶೌರ್ಯ ಘಟಕ, ಯೋಜನೆಯ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿರುವ ಜನಪ್ರತಿನಿಧಿಗಳನ್ನು ಗೌರವಿಸಲಾಯಿತು. ಸಂಪೂರ್ಣ ಸುರಕ್ಷಾ ಮತ್ತು ಪ್ರಾಕೃತಿಕ ವಿಕೋಪ ಕಾರ್ಯಕ್ರಮದಡಿ ಮಂಜೂರಾದ ಅನುದಾನಗಳ ಮಂಜೂರಾತಿ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಎಲ್ಲಾ ಸಂಘಗಳಿಗೂ ನಿರ್ಣಯ ಪುಸ್ತಕದ ಬೈಂಡ್ ಗಳನ್ನು ವಿತರಿಸಲಾಯಿತು. ಯೋಜನಾಧಿಕಾರಿ ಸುರೇಶ್ ಗೌಡ, ಜನಜಾಗೃತಿ ವೇದಿಕೆ ಸದಸ್ಯ ನವೀನ್ ಕುಮಾರ್ ಪದಬರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಲಯ ಮೇಲ್ವಿಚಾರಕಿ ಶಾರದಾ ಎ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸೇವಾಪ್ರತಿನಿಧಿ ಜಯಶ್ರೀ ವರದಿ ಮಂಡನೆ ಮಾಡಿದರು. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಗೋಪಾಲ ಸಪಲ್ಯ, ಪುಷ್ಪರಾಜ ಶೆಟ್ಟಿ, ದಯಾನಂದ ಆಶೀರ್ವಾದ ಶಾಮಿಯಾನ, ಗ್ರಾ.ಪಂ.ಸದಸ್ಯರಾದ ಕೇಶವ ಸುಣ್ಣಾನ, ಜಯಂತಿ, ಸುಮತಿ, ಶೌರ್ಯ ಕ್ಯಾಪ್ಟನ್ ಸುರೇಶ್, ಅಶೋಕ ನೇಂಜ ಮತ್ತು ಒಕ್ಕೂಟದ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here