*ಮೋಜಿನಾಟದಲ್ಲಿ ಸಂಭ್ರಮಿಸಿದ ಎಸ್ಆರ್ಕೆ, ಸುದ್ದಿ, ಕರ್ನಾಟಕ ಪತ್ರಕರ್ತರ ಸಂಘ,ಎಸಿಸಿಇ(ಐ)ಬಳಗ
*ಎಸ್.ಆರ್.ಕೆ.ಸಮಗ್ರ, ಸುದ್ದಿ ರನ್ನರ್ಸ್, ಕರ್ನಾಟಕ ಪತ್ರಕರ್ತರ ಸಂಘ, ಎಸಿಸಿಇ(ಐ)ಉತ್ತಮ ಪ್ರದರ್ಶನ
ಪುತ್ತೂರು: ಗ್ರಾಮೀಣ ಸಂಸ್ಕೃತಿ, ಆಚಾರ ವಿಚಾರಗಳನ್ನು ಜನಮನದಲ್ಲಿ ಬಿತ್ತುವ ಮೂಲಕ ಕೆಮ್ಮಿಂಜೆ ಅತ್ತಾಳ ಗದ್ದೆಯಲ್ಲಿ ಆ.3ರಂದು ಕೆಸರು ಗದ್ದೆ ಕ್ರೀಡಾಕೂಟದ ಸಂಭ್ರಮ ಮನೆ ಮಾಡಿತ್ತು.ಎಸ್.ಆರ್.ಕೆ.ಲ್ಯಾಡರ್ಸ್,ಸುದ್ದಿ ಸಮೂಹ ಸಂಸ್ಥೆಗಳು,ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕ ಮತ್ತು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್(ಇಂಡಿಯಾ)ಪುತ್ತೂರು ಸೆಂಟರ್ ಇದರ ಸಹಯೋಗದೊಂದಿಗೆ ಆಯೋಜಿಸಿದ ‘ಕೆಸರ್ಡ್ ಕುಸಲ್ದ ಲೇಸ್- 2025’ ಸಂಭ್ರಮ ಬೆಳಗ್ಗಿನಿಂದ ಮಧ್ಯಾಹ್ನದ ತನಕ ಯಶಸ್ವಿಯಾಗಿ ನಡೆಯಿತು.

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ಬೆಳಗ್ಗೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್(ಇಂಡಿಯಾ)ಪುತ್ತೂರು ಸೆಂಟರ್ ಇದರ ಅಧ್ಯಕ್ಷ ಪ್ರಮೋದ್ ಕುಮಾರ್ ಕೆ.ಕೆ.ಅವರು ಗದ್ದೆಗೆ ಹಾಲೆರೆದು ಶುಭಹಾರೈಸಿದರು.ಎಸ್.ಆರ್.ಕೆ.ಲ್ಯಾಡರ್ಸ್ನ ಮಾಲಕ ಕೇಶವ ಅಮೈ,ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಧರ್ ರೈ ಕೋಡಂಬು,ಗದ್ದೆಯ ಮಾಲಕ ಸಹೋದರರಾದ ಶಶಿಧರ್ ಅತ್ತಾಳ, ದಯಾನಂದ ಅತ್ತಾಳ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಹಿಂದಿನ ಸಂಸ್ಕೃತಿ,ಆಚಾರ ವಿಚಾರ ತಿಳಿಸಿಕೊಡುವ ಪ್ರಯತ್ನ ಮಾದರಿ-ಚಂದ್ರಹಾಸ ಶೆಟ್ಟಿ:
ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿಯವರು ಮಾತನಾಡಿ, ತುಳುನಾಡ ಸಂಸ್ಕೃತಿ,ಆಚಾರ ವಿಚಾರ ಈಗಿನ ಮಕ್ಕಳಿಗೆ ತಿಳಿಸುವ ನಿಟ್ಟಿನಲ್ಲಿ ಎಲ್ಲಾ ಕಡೆಯಲ್ಲೂ ಆಟಿ ಕೂಟ,ಕಂಡಡೊಂಜಿ ದಿನ ಇಂತಹ ಕಾರ್ಯಕ್ರಮ ನಡೆಯುತ್ತಿದೆ.ಈ ನಿಟ್ಟಿನಲ್ಲಿ ಎಸ್ಆರ್ಕೆ ಲ್ಯಾಡರ್ಸ್, ಸುದ್ದಿ ಸಮೂಹ ಸಂಸ್ಥೆ, ಕರ್ನಾಟಕ ಪತ್ರಕರ್ತರ ಸಂಘ ಮತ್ತು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಸಂಘಟನೆಯವರು ನಡೆಸಿದ ಕೆಸರ್ಡ್ ಕುಸಲ್ದ ಲೇಸ್ ಕಾರ್ಯಕ್ರಮ ಮಾದರಿ ಕಾರ್ಯಕ್ರಮವಾಗಿ ಮೂಡಿ ಬಂದಿದೆ.ಈ ಕಾರ್ಯಕ್ರಮದಲ್ಲಿ ನಾನು ಬಂದು ಹೋಗುವ ಎಂದು ಬಂದವ.ಆದರೆ ಕೇಶವಣ್ಣನ ಪ್ರೀತಿ ನನ್ನನ್ನು ಇಲ್ಲಿ ಕೂತುಕೊಳ್ಳುವಂತೆ ಮಾಡಿತ್ತು.ಜೊತೆಗೆ ಸುದ್ದಿಯ ಸಹಯೋಗ ಇರುವುದರಿಂದಾಗಿ ಕಾರ್ಯಕ್ರಮದಲ್ಲಿ ಪೂರ್ಣವಾಗಿ ಭಾಗವಹಿಸಿದ್ದೇನೆ ಎಂದರು.
ಪ್ರಸ್ತುತ ದಿನಗಳಲ್ಲಿ ಆಟಿ ಕೂಟ, ಕೆಸರು ಗದ್ದೆ ಕಾರ್ಯಕ್ರಮದ ಮೂಲಕ ಹಿಂದಿನ ಕಷ್ಟಕಾಲದಲ್ಲಿ ಹೇಗೆ ಜೀವನ ನಡೆಸುತ್ತಾರೆ ಎಂಬುದನ್ನು ತಿಳಿಸುವ ನಿಟ್ಟಿನಲ್ಲಿ ನಾವು ಆಚರಿಸುವುದನ್ನು ಈಗಿನ ಮಕ್ಕಳು ನೋಡಿ ಇಷ್ಟು ಸಂಭ್ರಮದ ಗಮ್ಮತ್ತಿನ ಕಾರ್ಯಕ್ರಮ ಹಿಂದೆ ಹೇಗೆ ಕಷ್ಟದ ದಿನ ಆಗಿತ್ತು ಎಂದು ನಮ್ಮನ್ನೇ ಪ್ರಶ್ನೆ ಮಾಡುತ್ತಾರೆ ಎಂದು ಚಂದ್ರಹಾಸ ಶೆಟ್ಟಿ ಹೇಳಿದರು.

ಇದು ಮನರಂಜನೆ ಮಾತ್ರವಲ್ಲ ಜೀವನದ ಪಾಠ- ಡಾ.ಯು.ಪಿ.ಶಿವಾನಂದ:
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ಬೆಳಿಗ್ಗೆ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿ ಮಧ್ಯಾಹ್ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ನಮ್ಮ ಜೀವನಕ್ಕೆ ಅನ್ನ, ಅನ್ನದಾತರು ಬಹಳ ಮುಖ್ಯ.ಇದನ್ನು ನೆನಪಿಸುವ ಮತ್ತು ನಮ್ಮ ಹಿರಿಯರು, ನಾವು ಬೆಳೆದು ಬಂದ ರೀತಿಯನ್ನು ನೆನಪಿಸುವ ಒಂದು ಸುಸಂದರ್ಭ ಈ ಕಾರ್ಯಕ್ರಮದ ವಿಶೇಷ.ಈ ಕಾರ್ಯಕ್ರಮಕ್ಕೆ ನಮಗೆ ಅವಕಾಶ ಮಾಡಿಕೊಟ್ಟ ಎಸ್ಆರ್ಕೆಯ ಕೇಶವ ಅಮೈ ಅವರಿಗೆ ವಿಶೇಷವಾಗಿ ಅಭಿನಂದನೆಗಳು.ಕೆಸರ್ಡ್ ಕುಸಲ್ದ ಲೇಸ್ ಇದು ಮನರಂಜನೆ ಮಾತ್ರವಲ್ಲ ಜೀವನದಲ್ಲಿ ಬದುಕುವುದನ್ನು ಕಲಿಸುತ್ತದೆ.ಜೀವನದಲ್ಲಿ ಈ ಪಾಠ ಮುಖ್ಯ.ಇವತ್ತು ಎಲ್ಲರೂ ಸೇರಿಕೊಂಡು ಉತ್ತಮ ಆಟ ಆಡಿದ್ದೀರಿ.ಮುಂದಿನ ವರ್ಷಕ್ಕೂ ನಿರೀಕ್ಷೆಯಿಡಿ ಎಂದರು.

ನಾವು ಮೂರು ಸಂಸ್ಥೆ ಸೇರಿದರೆ ಎಷ್ಟು ಚೆನ್ನಾಗಿ ಬೇಕಾದರೂ ಕಾರ್ಯಕ್ರಮ ಮಾಡಬಹುದು-ಕೇಶವ ಅಮೈ:
ಎಸ್ಆರ್ಕೆ ಲ್ಯಾಡರ್ಸ್ ಮಾಲಕ ಕೇಶವ ಅಮೈ ಅವರು ಮಾತನಾಡಿ, ತಮ್ಮ ಭಾಷಣದ ಆರಂಭದಲ್ಲಿ ‘ಕೆಸರ್ಡ್ ಕುಸಲ್ದ ಲೇಸ್’ನ ಕ್ರೀಡೆಯಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ, ಇಂತಹ ಕಾರ್ಯಕ್ರಮ ಮುಂದೆ ಕೂಡಾ ಬೇಕಾ?,ಇವರೊಂದಿಗೆ ಸೇರಿ ಮಾಡಬೇಕಾ ಎಂದು ಕೇಳಿದಾಗ ನೆರೆದವರು ಬೇಕೆಂದು ಘೋಷಣೆ ಕೂಗಿದರು.ನೆರೆದವರ ಘೋಷಣೆಯನ್ನು ಆಲಿಸಿದ ಕೇಶವ ಅಮೈ ಅವರು ಇಷ್ಟಿದ್ದರೆ ಸಾಕು.ನಮಗೆ ಬೇಕಾಗಿರುವುದು ನಮ್ಮ ಒಟ್ಟಿಗೆ ನಿಂತು ಇಷ್ಟು ಹೊತ್ತು ಬಹಳ ತಾಳ್ಮೆಯಿಂದ ಆಟವಾಡಿದ ನಿಮಗೆ ಅಭಿನಂದನೆಗಳು.ಸಣ್ಣ ಪುಟ್ಟ ಎಡವಟ್ಟುಗಳಾಗಿದ್ದರೂ ಅದೆಲ್ಲವನ್ನು ಸರಿ ಮಾಡಿಸಿಕೊಂಡು ನೀವು ನಮ್ಮೊಂದಿಗೆ ಇದ್ದರೆ ನಾವು ಎಂತಹ ಕಾರ್ಯಕ್ರಮ ಮಾಡಲೂ ಸಿದ್ದರಿದ್ದೇವೆ,ಬದ್ದರಿದ್ದೇವೆ ಎಂದರು.ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿಯವರು ನಮ್ಮ ಕೆಸರಿನ ಆಟದ ಕಾರ್ಯಕ್ರಮಕ್ಕೆ ಸ್ಪೂರ್ತಿ.ಇಂತಹ ಕಾರ್ಯಕ್ರಮ ನಡೆಯಬೇಕಾದರೆ ಮಾಧ್ಯಮದ ಪ್ರಚಾರ ಬಹಳ ಅಗತ್ಯ ಅದಕ್ಕೆ ಸುದ್ದಿ ಸಮೂಹ ಸಂಸ್ಥೆಯೂ ಅಗತ್ಯ.ಇದರ ಜೊತೆ ಇಂಜಿನಿಯರ್ಸ್ ಟೀಮ್ ಕೂಡಾ ಬೇಕು.ನಾವು ಮೂವರು ಸೇರಿದರೆ ಎಷ್ಟು ಚೆನ್ನಾಗಿ ಬೇಕಾದರೂ ಕಾರ್ಯಕ್ರಮ ಮಾಡಬಹುದು.ಈ ಕ್ರೀಡೆಯಲ್ಲಿ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮಕ್ಕಳು ನಮ್ಮ ಮನೆಯ ಮಕ್ಕಳು ಎಂದರು.

ಜೀವನ ಸ್ಮರಣೀಯ ದಿನ-ಪ್ರಮೋದ್ ಕುಮಾರ್:
ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್(ಇಂಡಿಯಾ)ಪುತ್ತೂರು ಸೆಂಟರ್ ಇದರ ಅಧ್ಯಕ್ಷ ಪ್ರಮೋದ್ ಕುಮಾರ್ ಕೆ.ಕೆ.ಅವರು ಬೆಳಿಗ್ಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶುಭ ಹಾರೈಸಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಎಸ್ಆರ್ಕೆ ಲ್ಯಾಡರ್ಸ್ನ ಕೇಶವಣ್ಣ ಅವರಲ್ಲಿ ಒಂದು ಉತ್ತಮ ವಿಷನ್ ಇರುತ್ತದೆ,ಒಳ್ಳೆಯ ಥೀಮ್ ಇದೆ.ಇವೆಲ್ಲ ನಮ್ಮ ಸ್ಮರಣೀಯ ದಿನವಾಗಿ ಹೇಳುವುದಕ್ಕೆ ಇಚ್ಚೆ ಪಡುತ್ತೇನೆ.ಸುದ್ದಿಯ ಮೂಲಕ ನಡೆದ ‘ಬಾಂಧವ್ಯ’ ಕ್ರಿಕೆಟ್ ಪಂದ್ಯಾಟದಲ್ಲಿ ಇಂಜಿನಿಯರ್ಸ್ ಟೀಮ್ ಚಾಂಪಿಯನ್ ಪಡೆದಿತ್ತು.ಇವತ್ತು ನಮ್ಮಲ್ಲಿ ಸಂಖ್ಯೆ ಕಡಿಮೆ ಇದ್ದರೂ ಉತ್ಸಾಹಭರಿತ ಆಟ ಆಡಿದ್ದೇವೆ.ಇವತ್ತು ಕೇಶವಣ್ಣನ ಸಾಧನೆಯ ಹಿಂದೆ ಅವರ ಸಿಬ್ಬಂದಿಗಳ ಪರಿಶ್ರಮವೂ ಇದೆ.ಒಟ್ಟಿನಲ್ಲಿ ನಾವೆಲ್ಲ ಸೇರಿದರೆ ದೇಶವನ್ನು ಉದ್ದಾರ ಮಾಡುವ ಪರಿಸ್ಥಿತಿ ಇದೆ.ಮುಂದಿನ ವರ್ಷ ಇದೇ ಗದ್ದೆಯಲ್ಲಿ ಇನ್ನಷ್ಟು ಕ್ರೀಡಾಕೂಟವನ್ನು ಏರ್ಪಡಿಸೋಣ.ಮತ್ತಷ್ಟು ಸಮಾಜಮುಖಿ ಕೆಲಸ ಮಾಡೋಣ ಎಂದರು.

ಗೌರವ:
ಅತ್ತಾಳ ಗದ್ದೆಯ ಮಾಲಕ ಶಶಿಧರ್ ಅತ್ತಾಳ ಅವರನ್ನು ಕೆಸರ್ಡ್ ಕುಸಲ್ದ ಲೇಸ್ ಕಾರ್ಯಕ್ರಮದ ಅಯೋಜಕರು ಸ್ಮರಣಿಕೆ ನೀಡಿ ಗೌರವಿಸಿದರು.ಹೊಲವನ್ನು ಟ್ರ್ಯಾಕ್ಟರ್ ಮೂಲಕ ಹದಗೊಳಿಸಿದ ಚಿದಾನಂದ ಪೆಲತ್ತಿಂಜ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಧರ್ ರೈ ಕೋಡಂಬು,ಎಸಿಸಿಇ(ಐ)ಸದಸ್ಯ ನೇಮಿರಾಜ್, ಗದ್ದೆಯ ಮಾಲಕ ಶಶಿಧರ್ ಅತ್ತಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೆಳಗ್ಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಸ್.ಆರ್.ಕೆ. ಟೀಮ್ನ ದೀಪಕ್ ಪ್ರಾರ್ಥಿಸಿದರು.ಕರ್ನಾಟಕ ಪತ್ರಕರ್ತರ ಸಂಘದ ನ್ಯಾಷನಲ್ ಕೌನ್ಸಿಲ್ ಮೆಂಬರ್ ಉಮೇಶ್ ಮಿತ್ತಡ್ಕ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷೆ ಶೈಲಜಾ ಸುದೇಶ್ ಸ್ವಾಗತಿಸಿ, ಎಸ್ಆರ್ಕೆ ಲ್ಯಾಡರ್ಸ್ನ ಲೆವಿಟ ವಂದಿಸಿದರು.ಉಪನ್ಯಾಸಕ ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು.ಬೆಳಗ್ಗಿನಿಂದ ಮಧ್ಯಾಹ್ನದ ತನಕ ಒಟ್ಟು ಕಾರ್ಯಕ್ರಮದ ಉದ್ಘೋಷಕರಾಗಿ ಸುದ್ದಿ ಯು ಟ್ಯೂಬ್ ಚಾನೆಲ್ನ ಬೆಳ್ತಂಗಡಿಯ ದಾಮೋದರ್ ದೊಂಡೋಲೆ ಮತ್ತು ಪತ್ರಕರ್ತ ಮೌನೇಶ್ ವಿಶ್ವಕರ್ಮ ನೆರವೇರಿಸಿದರು.ವಿಶೇಷವಾಗಿ ಎಸ್ಆರ್ಕೆ ಲ್ಯಾಡರ್ಸ್ನ ದಿನೇಶ್ ಅವರು ಒಟ್ಟು ಸ್ಪರ್ಧೆಗಳ ತೀರ್ಪುಗಾರರಾಗಿ ಸಹಕರಿಸಿದರು.ಸಭಾ ಕಾರ್ಯಕ್ರಮದ ಬಳಿಕ ಆಟಿ ವಿಶೇಷ ಸಹಭೋಜನ ನಡೆಯಿತು.ರಾಮಕುಂಜ ಕನ್ನಡ ಮಾಧ್ಯಮ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲ, ಸುದ್ದಿ ಸಂಸ್ಥೆಯ ಸಿಇಒಗಳಾದ ಸೃಜನ್ ಊರುಬೈಲು,ಸಿಂಚನಾ ಊರುಬೈಲು, ನಿರ್ದೇಶಕಿ ಶೋಭಾ ಶಿವಾನಂದ,ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿಯ ಚಂದ್ರಹಾಸ ಶೆಟ್ಟಿ ಆನೆಮಜಲು,ವಿಕ್ರಂ ಶೆಟ್ಟಿ ಅಂತರ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ಲೋಕನಾಥ ರೈ,ಕೇಶವ ಅಮೈ ಅವರ ಸಹೋದರಿ ಸತ್ಯವತಿ, ಕುಟುಂಬಸ್ಥರಾದ ಶ್ರಾವ್ಯ, ರತೀಶ್, ಹರ್ಷಿಣಿ, ಸುದೇಶ್ ಕುಮಾರ್, ಚಿಕ್ಕಪುತ್ತೂರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಎಸ್ಆರ್ಕೆ ಲ್ಯಾಡರ್ಸ್ನ ಕೇಶವ ಅಮೈ ಅವರ ಸಹೋದರಿ ಶ್ರೀಲತಾ, ಆರ್ವಿ ಇಂಟರ್ಗ್ರಾಫಿಕ್ಸ್ನ ಪಾಲುದಾರ ಜ್ಞಾನೇಶ್ ವಿಶ್ವಕರ್ಮ ಅವರು ವಿವಿಧ ಕಾರ್ಯಕ್ರಮ ನಿರೂಪಿಸಿದರು.ಕ್ರೀಡೆಯಲ್ಲಿ ಎಸ್.ಆರ್.ಕೆ.ಲ್ಯಾಡರ್ಸ್ನ ಸಿಬ್ಬಂದಿ,ರಾಮಕುಂಜ ಕನ್ನಡ ಮಾಧ್ಯಮ ಶಾಲೆಯ 10 ಮಂದಿ ವಿದ್ಯಾರ್ಥಿಗಳು, ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆಯ ಮತ್ತು ಮೀಡಿಯಾ ಸಿಬ್ಬಂದಿಗಳು,ಕರ್ನಾಟಕ ಪತ್ರಕರ್ತರ ಸಂಘದ ಪದಾಽಕಾರಿಗಳು,ಸದಸ್ಯರು ಭಾಗವಹಿಸಿದ್ದರು.ಎಸಿಸಿಇ(ಐ) ಅಧ್ಯಕ್ಷ ಪ್ರಮೋದ್ ಕುಮಾರ್ ಅವರ ನೇತೃತ್ವದಲ್ಲಿ,ಕಾರ್ಯದರ್ಶಿ ವಿನೋದ್, ಚೇತನ್, ಶಿವರಾಮ ಮತಾವು, ವೆಂಕಟರಾಜ್, ಹರೀಶ್ ಮೆದು, ಲೋಕೇಶ್, ನಿತೀಶ್, ಪ್ರಣಮ್ ಮತ್ತಿತರರು ಕ್ರೀಡೆಯಲ್ಲಿ ಸ್ಪೂರ್ತಿದಾಯಕವಾಗಿ ಭಾಗವಹಿಸಿದರು.

ಕಂಬಳಕ್ಕೆ ಹೈಯೆಸ್ಟ್ ಪ್ರಚಾರ ಕೊಡುವುದು ಸುದ್ದಿ
ಈಗಿನ ಕಾಲದಲ್ಲಿ ಎಲ್ಲಿ ನೋಡಿದರೂ ಆಟಿ ಕೂಟ, ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ನಡೆಯುತ್ತಾ ಇದೆ.ಪ್ರತಿ ದಿನ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಅದೇ ವರದಿ ನೋಡುತ್ತಾ ಇದ್ದೇವೆ. ಅದೇ ರೀತಿ ನಮ್ಮ ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಹೈಯೆಸ್ಟ್ ಪ್ರಚಾರ ಕೊಡುವುದು ಸುದ್ದಿ ಸಮೂಹ ಸಂಸ್ಥೆ.ಯಾವುದೇ ಕಾರ್ಯಕ್ರಮ ಅಗುವಾಗ ಪೂರ್ಣ ಸಹಕಾರ ಕೊಡುತ್ತಾರೆ. ನಾವು ಕೂಡಾ ಅವರ ಯಾವುದೇ ಒಂದು ಕಾರ್ಯಕ್ರಮಕ್ಕೂ 100 ಪರ್ಸೆಂಟ್ ಹೋಗಿಯೇ ಹೋಗುತ್ತೇವೆ
| ಎನ್.ಚಂದ್ರಹಾಸ ಶೆಟ್ಟಿ, ಅಧ್ಯಕ್ಷರು
ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ

ಎಸ್ಆರ್ಕೆ ಲ್ಯಾಡರ್ಸ್ ಗೆ ಸಮಗ್ರ ಪ್ರಶಸ್ತಿ
ನಿಧಿ ಶೋಧನಕ್ಕೆ ಸಂಬಂಧಿಸಿ ಗದ್ದೆಯ ಒಟ್ಟು 5 ಕಡೆಯಲ್ಲಿ ಮಣ್ಣಿನ ಮಡಕೆಯನ್ನು ಇಡಲಾಗಿತ್ತು.ಈ ಪೈಕಿ ಒಂದು ಮಡಕೆಯಲ್ಲಿ ಬೆಳ್ಳಿಯ ನಾಣ್ಯ ಇಡಲಾಗಿತ್ತು.ಎಸ್.ಆರ್.ಕೆ.ಯ ಆಶೋಕ್ ನಿಧಿ ಶೋಧದಲ್ಲಿ ಬೆಳ್ಳಿಯ ನಾಣ್ಯವನ್ನು ತನ್ನದಾಗಿಸಿಕೊಂಡರು.ಉಳಿದಂತೆ ಸುದ್ದಿ ಬಿಡುಗಡೆಯ ಅಕ್ಷತಾ ಅವರ ಪುತ್ರಿ ಆತ್ಮಿ, ಎಸ್ಆರ್ಕೆಯ ರಾಜೇಶ್, ಎಸ್ಆರ್.ಕೆ.ಯ ಇಬ್ರಾಹಿಂ ಅವರ ಪುತ್ರಿ ರೈಸಾನ್ ಅವರು ನಿಧಿ ಶೋಧ ಮಾಡಿದರು.ಕಾರ್ಯಕ್ರಮದಲ್ಲಿ ಬೆಲೂನ್ ಸೇವಿಂಗ್, ಮಕ್ಕಳಿಗೆ ಪಾಸಿಂಗ್ ದ ಬಾಲ್, ಗ್ರೂಪ್ನಲ್ಲಿ ಹುಲಿ ದನ, ಜಂಪಿಂಗ್ ರೇಸ್, ಮೊಸರುಕುಡಿಕೆ, ಹಗ್ಗ ಜಗ್ಗಾಟ, ಹಿಂಬದಿ ಓಟ, ಲಿಂಬೆ ಚಮಚ ಓಟ, ಗೂಟ ಸುತ್ತು ಸ್ಪರ್ಧೆಗಳು ನಡೆದಿದ್ದು,ಒಟ್ಟು ಸ್ಪರ್ಧೆಯಲ್ಲಿ ವೈಯುಕ್ತಿಕ ಬಹುಮಾನಗಳನ್ನು ಕಾರ್ಯಕ್ರಮದ ನಡುವೆ ವಿತರಿಸಲಾಯಿತು. ಗುಂಪು ಸ್ಪರ್ಧೆಯ ಬಹುಮಾನವನ್ನು ಸಮಾರೋಪ ಸಮಾರಂಭದಲ್ಲಿ ವಿತರಣೆ ಮಾಡಲಾಯಿತು.ಒಟ್ಟು ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿಯನ್ನು ಎಸ್.ಅರ್.ಕೆ. ಟೀಮ್ ಪಡೆದುಕೊಂಡಿದ್ದು, ಸುದ್ದಿ ರನ್ನರ್ಸ್ ಆಗಿ ಮೂಡಿ ಬಂದಿದೆ.ಕರ್ನಾಟಕ ಪತ್ರಕರ್ತರ ಸಂಘ ಮತ್ತು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಪುತ್ತೂರು ಸೆಂಟರ್ ಉತ್ತಮ ಪ್ರದರ್ಶನ ಪಂದ್ಯವಾಗಿ ಗುರುತಿಸಿಕೊಂಡಿತು.ಒಟ್ಟು ಕಾರ್ಯಕ್ರಮದಲ್ಲಿ ಸಂಘ ಸಂಸ್ಥೆಗಳ ಸದಸ್ಯರು ಮಾತ್ರವಲ್ಲದೆ ಮನೆ ಮಂದಿ ಭಾಗವಹಿಸಿ ಸಂಭ್ರಮಿಸಿದರು.
ವಿಶೇಷ ಖಾದ್ಯ, ಭರ್ಜರಿ ಊಟ
ಕಾರ್ಯಕ್ರಮದಲ್ಲಿ ಬೆಳಗ್ಗೆ ಪತ್ರೊಡೆ ಮತ್ತು ಲೆಮನ್ ಟೀ ವ್ಯವಸ್ಥೆ ಮಾಡಲಾಗಿತ್ತು.ಈ ನಡುವೆ ಬೆಳಗ್ಗೆ 11 ಗಂಟೆ ಸುಮಾರಿಗೆ ಪುನರ್ಪುಳಿ ಸೂಪ್ ಮತ್ತು ತಜಂಕ್ ಒಡೆ ವಿಶೇಷವಾಗಿತ್ತು. ಮಧ್ಯಾಹ್ನ ಊಟದಲ್ಲಿ ಕಣಿಲೆ ಉಪ್ಪಿನಕಾಯಿ, ಪೂಂಬೆ ಪಲ್ಯ, ಉಪ್ಪಡ್ ಪಚ್ಚಿಲ್, ಕುಡು ಚಟ್ನಿ, ತಿಮರೆ ತಂಬುಳಿ, ಗಂಜಿ, ಹಲಸಿನ ಹಪ್ಪಳ, ಬಸಳೆ ಸಾಂಬಾರು, ಹಲಸಿನ ಹಣ್ಣಿನ ಪಾಯಸ, ತಂಬಿಟ್ಟು ಉಂಡೆ, ಮಾಂಸಹಾರಿ ಊಟದಲ್ಲಿ ಎಟ್ಟಿ ಚಟ್ನಿ, ಕೋಳಿ ಸುಕ್ಕ ಭರ್ಜರಿ ಊಟವಾಗಿತ್ತು.

ಉತ್ತಮ ಅಚ್ಚುಕಟ್ಟಿನ ವ್ಯವಸ್ಥೆ
ಕಾರ್ಯಕ್ರಮ ಗದ್ದೆಯ ಎದುರು ಪೂರ್ವ ದಿಕ್ಕಿಗೆ ಮುಖ ಮಾಡಿ ವೇದಿಕೆ ಹಾಕಲಾಗಿತ್ತು.ಮತ್ತೊಂದು ಬದಿಯಲ್ಲಿ ಊಟ, ಉಪಹಾರಕ್ಕೆ ಶೀಟ್ ಅಳವಡಿಸಿ ವ್ಯವಸ್ಥೆ ಕಲ್ಪಿಸಲಾಗಿತ್ತು.ಅಲ್ಲೂ ಮೈಕ್ ಮೂಲಕ ಮಾಹಿತಿ ನೀಡಲಾಗುತ್ತಿತ್ತು.ಇನ್ನೊಂದು ಕಡೆ ವೇದಿಕೆಯ ಮುಂಭಾಗದಲ್ಲಿ ಮತ್ತು ಗದ್ದೆಯಲ್ಲೂ ಉದ್ಘೋಷಕರು ಎಡೆಬಿಡದೆ ತಮ್ಮ ಮಾತಿನ ದಾಟಿಯಲ್ಲಿ ಕ್ರೀಡಾ ಪಟುಗಳಿಗೆ ಸ್ಪೂರ್ತಿ ನೀಡುತ್ತಿದ್ದರು. ಆಗಾಗ ಮೈಯಲ್ಲಿ ಅಂಟಿಕೊಂಡ ಕೆಸರನ್ನು ತೆಗೆಯಲು ಗದ್ದೆಯಲ್ಲೇ ಎರಡು ಬದಿ ಶವರ್ ಬಾತ್ ಕೂಡ ಮಾಡಲಾಗಿತ್ತು.ಮಳೆ ನೀರಿನ ಶವರ್ ಬಾತ್ನಲ್ಲಿ ನೃತ್ಯ ಕಾರ್ಯಕ್ರಮವೂ ನಡೆಯಿತು.ಗದ್ದೆಯ ಎರಡೂ ಬದಿಯಲ್ಲಿ ಮಳೆ ನೀರು ಹರಿಯುವ ತೋಡುಗಳಿದ್ದು ಅಲ್ಲೂ ಜಲಕ್ರೀಡೆಯ ಮೂಲಕ ಹಳ್ಳಿಯ ಸೊಗಡನ್ನು ಮತ್ತೆ ನೆನಪಿಸುವ ಕೆಲಸ ನಡೆಯಿತು. ಬೆಳಗ್ಗೆ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭಿಸಿ ಮಧ್ಯಾಹ್ನ ಸಮಾರೋಪ ಮಾಡಲಾಯಿತು.ಒಟ್ಟಿನಲ್ಲಿ ಉತ್ತಮ ಅಚ್ಚುಕಟ್ಟಿನ ವ್ಯವಸ್ಥೆ ಮಾರ್ಗದರ್ಶನದ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಎಸ್ಆರ್ಕೆ ಲ್ಯಾಡರ್ಸ್ನ ಮಾಲಕ ಕೇಶವ ಅಮೈ ಅವರು ಕಾರಣೀಭೂತರಾಗಿ ಕಂಡರು.