ರಕ್ತದಾನದಿಂದ ಜೀವ ಉಳಿಸುವ ಕೈಂಕರ್ಯ ಸಮಾಜಕ್ಕೆ ಮಾದರಿ-ಕಿಶೋರ್ ಬೊಟ್ಯಾಡಿ
ಪುತ್ತೂರು: ಮನುಷ್ಯನ ದೇಹದಲ್ಲಿ ಹರಿಯುವ ರಕ್ತಕ್ಕೆ ಜಾತಿ-ಮತ, ಬಡವ-ಬಲ್ಲಿದ, ಮೇಲ್ಜಾತಿ-ಕೆಳ ಜಾತಿ ಎಂಬುದಿಲ್ಲ. ಸಮಾಜದಲ್ಲಿನ ಸಾಮರಸ್ಯ ಜೀವನ ಬದುಕಿಸಲು ರಕ್ತದಾನ ನೆರವಾಗುತ್ತದೆ. ದೇಶದ ಭದ್ರ ಬುನಾದಿ ಯುವಸಮೂಹವಾಗಿದ್ದು ಭಾರತಾಂಬೆಯ ಮಕ್ಕಳಾಗಿರುವ ನಾವೆಲ್ಲಾ ರಕ್ತದಾನ ಮಾಡುವುದರಿಂದ ರಕ್ತದಾನವು ಸಮಾಜದಲ್ಲಿ ಸಾಮರಸ್ಯ ಜೀವನ ಬದುಕಿಸಲು ನೆರವಾಗುತ್ತದೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು.
ಸಂತ ಫಿಲೋಮಿನಾ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಮಿತ್ರರಿಂದ ಪ್ರಾರಂಭಿಸಲ್ಪಟ್ಟು ವಿದ್ಯಾರ್ಥಿ ಮಿತ್ರರಿಂದಲೇ ದರ್ಬೆ ವಿನಾಯಕ ನಗರದಲ್ಲಿ ಆಚರಿಸಲ್ಪಡುವ ಸಂತ ಫಿಲೋಮಿನಾ ವಿದ್ಯಾಸಂಸ್ಥೆಗಳ ಹಿರಿಯ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಹಾಗೂ ಸಂತ ಫಿಲೋಮಿನಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸಮಿತಿಯ ಶ್ರೀ ಗಣೇಶೋತ್ಸವಕ್ಕೆ ಇದೀಗ 43ರ ಸಂಭ್ರಮವಾಗಿದ್ದು, ಈ ಸಂಭ್ರಮದ ಅಂಗವಾಗಿ ಫಿಲೋಮಿನಾ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಮಿತ್ರರಿಂದ ಆ.10 ರಂದು ಸ್ವಯಂಪ್ರೇರಿತ ರಕ್ತದಾನ ಶಿಬಿರವು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ನಲ್ಲಿ ಜರಗಿದ್ದು, ಅವರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಯಂಗ್ ಇಂಡಿಯಾಕ್ಕೆ ಯುವಸಮೂಹ ಆಸ್ತಿ-ಸಂಜೀವ ಮಠಂದೂರು:
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಗಣೇಶ ಪ್ರಕೃತಿಯಲ್ಲಿನ ಚರಾಚರ ವಸ್ತುಗಳನ್ನು ಬದುಕಿಸುವ ಕೆಲಸ ಮಾಡುತ್ತಾನೆ ಹಾಗೆಯೇ ಪ್ರಕೃತಿಯಲ್ಲಿನ ಬುದ್ಧಿಜೀವಿಗಳನ್ನು ಬದುಕಿಸುವ ಕಾರ್ಯ ಈ ಗಣೇಶೋತ್ಸವ ಮಾಡಿಸುತ್ತದೆ. ಗಣೇಶೋತ್ಸವವು ಇಡೀ ಸಮಾಜ ಒಗ್ಗೂಡಿಸುವ ಸಂದೇಶ ನೀಡುತ್ತದೆ. ಯಂಗ್ ಇಂಡಿಯಾ ಎನಿಸಿರುವ ಭಾರತಕ್ಕೆ ಯುವಸಮೂಹವು ಆಸ್ತಿಯಾಗಿದ್ದು ಈ ಶಕ್ತಿ ಒಟ್ಟಾದರೆ ಭಾರತವು ವಿಶ್ವದಲ್ಲೇ ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳಬಲ್ಲುದು ಎಂದ ಅವರು, 43 ವರ್ಷದ ಹಿಂದೆ ನಾನು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ವಿವೇಕಾನಂದ ಹಾಗೂ ಫಿಲೋಮಿನಾ ಕಾಲೇಜಿನಲ್ಲಿ ಶ್ರೀ ಗಣೇಶೋತ್ಸವ ಕಾರ್ಯಕ್ರಮವನ್ನು ವಿಜ್ರಂಭಿಸಿ ಆಚರಿಸುವ ಸ್ಪರ್ಧೆಯಿತ್ತು. ಆಗ ನಾನು ವಿವೇಕಾನಂದದ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದೆ ಎಂದರು.

ರಕ್ತದಾನ ಶಿಬಿರದಿಂದ ಆರೋಗ್ಯ ಸಮಾಜಕ್ಕೆ ಮುನ್ನುಡಿ-ಎ.ಜೆ ರೈ:
ರೋಟರಿ ಬ್ಲಡ್ ಬ್ಯಾಂಕ್ ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿ ಹಾಗೂ ರೋಟರಿ ಕ್ಲಬ್ ಪುತ್ತೂರು ಪೂರ್ವಾಧ್ಯಕ್ಷ ಎ.ಜೆ ರೈ ಮಾತನಾಡಿ, ಅಂತರ್ರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ರೋಟರಿ ಸಂಸ್ಥೆಯು ಪುತ್ತೂರು ಆಸುಪಾಸಿನ ಭಾಗಕ್ಕೆ ರಕ್ತದ ಕೊರತೆ ನಿವಾರಿಸಲೆಂದು ಬ್ಲಡ್ ಬ್ಯಾಂಕ್ ಸ್ಥಾಪಿಸಿದ್ದಾಗಿದೆ. ಶ್ರೇಷ್ಠ ದಾನವಾಗಿರುವ ರಕ್ತದಾನ ಮಾಡಲು ಯುವಸಮೂಹ ಮುಂದೆ ಬಂದಾಗ ಅದು ವ್ಯಕ್ತಿಯ ಜೀವ ಜೀವ ಉಳಿಸುವಲ್ಲಿ ನೆರವಾಗುತ್ತದೆ. ಫಿಲೋಮಿನಾ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಪ್ರಕಾಶ್ ಮುಕ್ರಂಪಾಡಿರವರು ಪ್ರತಿ ವರ್ಷ ರಕ್ತದಾನ ಶಿಬಿರ ಮಾಡುವ ಮೂಲಕ ಆರೋಗ್ಯ ಸಮಾಜಕ್ಕೆ ಮುನ್ನುಡಿ ಎನಿಸಿದ್ದಾರೆ ಎಂದರು.

ಬಿಜೆಪಿ ನಗರ ಮಂಡಳಿಯ ಅಧ್ಯಕ್ಷ ಶಿವಕುಮಾರ್, ಫಿಲೋಮಿನಾ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಮುಕ್ರಂಪಾಡಿ, ಫಿಲೋಮಿನಾ ಶ್ರೀ ಗಣೇಶೋತ್ಸವ ವಿದ್ಯಾರ್ಥಿ ಸಮಿತಿ ಅಧ್ಯಕ್ಷ ಆನ್ವೇಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸುರಭಿ ಹಾಗೂ ಶ್ರೇಯ ಪ್ರಾರ್ಥಿಸಿದರು. ಶ್ರೀ ಗಣೇಶೋತ್ಸವ ಟ್ರಸ್ಟ್ ಕಾರ್ಯದರ್ಶಿ ಶಿವಪ್ರಸಾದ್, ಕೋಶಾಧಿಕಾರಿ ದುರ್ಗಾಪ್ರಸಾದ್, ವಿದ್ಯಾರ್ಥಿ ಸಮಿತಿ ಕಾರ್ಯದರ್ಶಿ ಸೂರಜ್ ನಂದ, ಜೊತೆ ಕಾರ್ಯದರ್ಶಿ ರಚಿತಾ ಆರ್, ವಿಕ್ರಂ ಆಳ್ವ, ಪ್ರಮುಖರಾದ ಸಂತೋಷ್ ರೈ ಕೈಕಾರ, ಪ್ರವೀಣ್ ಭಂಡಾರಿ, ನಾಗೇಂದ್ರ ಬಾಳಿಗ, ಶಶಿಧರ್ ನಾಯ್ಕ್, ನಿರಂಜನ್ ಮಾನ್ಯ ಕ್ಯಾಂಪ್ಕೋ, ಪ್ರವೀಣ್ ರೈ, ಸುಜಿತ್ ಡಿ.ರೈ, ಶ್ರೀಧರ್ ಗೌಡ ಕಣಜಾಲು ಸಹಿತ ಹಲವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸೃಜನಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಿದ್ಯಾರ್ಥಿ ಸುಕುಮಾರ್ ಪರ್ಲಡ್ಕ ವಂದಿಸಿದರು.
43ನೇ ವರ್ಷ..43 ಮಂದಿ ರಕ್ತದಾನ..
ಫಿಲೋಮಿನಾ ಶ್ರೀ ಗಣೇಶೋತ್ಸವವಕ್ಕೆ ಇದೀಗ 43ನೇ ವರ್ಷದ ಸಂಭ್ರಮವಾಗಿದ್ದು, ಈ ಪ್ರಯುಕ್ತ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಅವರಲ್ಲದೆ ಫಿಲೋಮಿನಾ ಕಾಲೇಜಿನ 43 ಮಂದಿ ವಿದ್ಯಾರ್ಥಿಗಳು ರಕ್ತದಾನ ನೀಡಿರುತ್ತಾರೆ. ಸುಮಾರು ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ರಕ್ತದಾನ ಮಾಡಲು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು ಬ್ಲಡ್ ಬ್ಯಾಂಕ್ ಸಂಸ್ಥೆಯ ನಿರ್ಣಯದಂತೆ ಅಗತ್ಯ ಬಿದ್ದಾಗ ಉಳಿದ ರಕ್ತದಾನಿ ವಿದ್ಯಾರ್ಥಿಗಳನ್ನು ಮುಂದಿನ ದಿನಗಳಲ್ಲಿ ಸಂಪರ್ಕಿಸುತ್ತೇವೆ ಎಂದಿದ್ದಾರೆ.

ಪತ್ರಕರ್ತ ಸಂತೋಷ್ ಮೊಟ್ಟೆತ್ತಡ್ಕರವರಿಗೆ ಸನ್ಮಾನ..
ಕಳೆದ ಹಲವಾರು ವರ್ಷಗಳಿಂದ ವಿನಾಯಕ ನಗರದಲ್ಲಿ ನಡೆಯುತ್ತಿರುವ ಫಿಲೋಮಿನಾ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಸಚಿತ್ರ ವರದಿಯನ್ನು “ಸುದ್ದಿ” ಪತ್ರಿಕೆಯಲ್ಲಿ ಪ್ರಕಟಿಸುತ್ತಾ ಬಂದಿರುವ ಸುದ್ದಿ ಬಿಡುಗಡೆ ಪತ್ರಿಕೆಯ ಹಿರಿಯ ವರದಿಗಾರ ಹಾಗೂ ಪುತ್ತೂರು ತಾಲೂಕು ಜರ್ನಲಿಸ್ಟ್ ಯೂನಿಯನ್ ಇದರ ಪ್ರಧಾನ ಕಾರ್ಯದರ್ಶಿಯಾಗಿರುವ ಸಂತೋಷ್ ಮೊರಾಸ್ ಮೊಟ್ಟೆತ್ತಡ್ಕರವರ ಸೇವೆಯನ್ನು ಗುರುತಿಸಿ ಈ ಸಂದರ್ಭದಲ್ಲಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಯಶಸ್ವಿ ರಕ್ತದಾನ ಶಿಬಿರ..
ಕಳೆದ 42 ವರ್ಷಗಳಿಂದ ದರ್ಬೆ ವಿನಾಯಕ ನಗರದಲ್ಲಿ ಎಲ್ಲರ ಸಹಕಾರದೊಂದಿಗೆ ವರ್ಷಂಪ್ರತಿ ಶ್ರೀ ಗಣೇಶೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದೇವೆ. ಈ ಆಚರಣೆಗೆ ಫಿಲೋಮಿನಾ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಪ್ರಸಕ್ತ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಇದೀಗ ಗಣೇಶೋತ್ಸವದ ಪ್ರಯುಕ್ತ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪರರ ಜೀವ ಉಳಿಸುವುದಕ್ಕೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುವುದು ಖುಶಿ ತಂದಿದೆ. ಮುಂದಿನ ದಿನಗಳಲ್ಲಿ ನಡೆಯುವ ವಿಘ್ನ ವಿನಾಯಕನ ಹಬ್ಬನ್ನು ಯಶಸ್ವಿಯಾಗಿ ಆಚರಿಸಲು ಸರ್ವರ ಸಹಕಾರ ಕೋರುತ್ತೇನೆ.-ಪ್ರಕಾಶ್ ಮುಕ್ರಂಪಾಡಿ, ಅಧ್ಯಕ್ಷರು, ಫಿಲೋಮಿನಾ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್