ಕೆಂಪುಕಲ್ಲು ಗಣಿಗಾರಿಕೆ ಸಮಸ್ಯೆಗೆ‌ 15 ದಿನಗಳೊಳಗೆ ಪರಿಹಾರ

0

ಬೆಂಗಳೂರು: ದ.ಕ.ಜಿಲ್ಲೆಯಲ್ಲಿ ಕೆಂಪುಕಲ್ಲು ಗಣಿಗಾರಿಕೆ ವಿಚಾರದಲ್ಲಿ ಉಂಟಾಗಿರುವ ಸಮಸ್ಯೆಗೆ ಸಂಬಂಧಿಸಿ 15 ದಿನಗಳೊಳಗೆ ಹೊಸ ನಿಯಮ ಜಾರಿಯಾಗಿ,ಸಮಸ್ಯೆ ಇತ್ಯರ್ಥವಾಗಲಿದೆ.
ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಕಾನೂನಿನ ಅನ್ವಯ ಅವಕಾಶ ಕಲ್ಪಿಸುವ ವಿಚಾರದಲ್ಲಿ ಬೆಂಗಳೂರು ವಿಧಾನ ಸೌಧದಲ್ಲಿ ಆ.12ರಂದು ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.


ವಿಧಾನ ಸಭೆಯ ಅಧ್ಯಕ್ಷ ಯು.ಟಿ.ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್, ಕಂದಾಯ ಸಚಿವ ಕೃಷ್ಣಬೈರೇಗೌಡ, ಗಣಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ,ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಶಾಸಕ ಅಶೋಕ್ ಕುಮಾರ್ ರೈ,ವಿ.ಸುನಿಲ್ ಕುಮಾರ್, ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜ,ಮಂಜುನಾಥ ಭಂಡಾರಿ, ಜಿಲ್ಲೆಯ ಶಾಸಕರು ಹಾಗೂ ಉನ್ನತ ಮಟ್ಟದ ಅಽಕಾರಿಗಳು ಪಾಲ್ಗೊಂಡಿದ್ದರು.


ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಇರುವ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆಗಳಲ್ಲಿ ನಡೆದ ಚರ್ಚೆಗಳು ಹಾಗೂ ಪರಿಷ್ಕೃತ ನಿಯಮ ಜಾರಿಗೆ ತರುವ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಗಣಿ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿದರು.ವಾಣಿಜ್ಯ ಉದ್ದೇಶವಲ್ಲದ ಕೆಂಪುಕಲ್ಲು ಕ್ವಾರಿಗಳಿಗೆ ಅಧಿಕೃತವಾಗಿ ಪರವಾನಿಗೆ ಕೊಡುವ ವ್ಯವಸ್ಥೆಯನ್ನು ಸರಳೀಕರಣ ಮಾಡಲಾಗುವುದು.ಈ ನಿಟ್ಟಿನಲ್ಲಿ ಎಸ್‌ಒಪಿ ಡ್ರಾಫ್ಟನ್ನು ಸಿದ್ಧಪಡಿಸುತ್ತಿರುವ ಬಗ್ಗೆಯೂ ಗಣಿ ಇಲಾಖೆ ಅಽಕಾರಿಗಳು ಮಾಹಿತಿ ನೀಡಿದರು.


ಸಮಸ್ಯೆ ಸರಿಪಡಿಸಿ,ರಾಯಲ್ಟಿ ಕಡಿಮೆಗೊಳಿಸಿ-ಯು.ಟಿ.ಖಾದರ್:
ಸಭೆಯ ಅಧ್ಯಕ್ಷತೆ ವಹಿಸಿದ್ದ ಸ್ಪೀಕರ್ ಯು.ಟಿ.ಖಾದರ್ ಅವರು ಮಾತನಾಡಿ, ಮಣ್ಣು ಸಮತಟ್ಟು ಸೇರಿದಂತೆ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಡ್ರಿಲ್ ಮಾಡುವ ಕುರಿತಂತೆ ಇರುವ ಸಮಸ್ಯೆಯನ್ನು ಸರಿಪಡಿಸುವತ್ತ ಗಣಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.ರಾಯಲ್ಟಿಯನ್ನು ಕಡಿಮೆಗೊಳಿಸಿ, ನಿಯಮ ಬದ್ಧವಾಗಿ ಕೆಂಪುಕಲ್ಲು ಗಣಿಗಾರಿಕೆಗೆ ಅವಕಾಶ ಕಲ್ಪಿಸುವಂತೆ ಗಣಿ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಸುಲಭ ಪರವಾನಿಗೆಗೆ ವ್ಯವಸ್ಥೆ ಕಲ್ಪಿಸಿ-ದಿನೇಶ್ ಗುಂಡೂರಾವ್:
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು, ಸಮಯ ಮಿತಿಯೊಳಗೆ ಸುಲಭ ರೀತಿಯಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಪರವಾನಿಗೆಗಳನ್ನು ನೀಡುವ ವ್ಯವಸ್ಥೆ ಕಲ್ಪಿಸಿ ಎಂದು ಗಣಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯ ಕಟ್ಟಡ ಕಾಮಗಾರಿಗಳಿಗೆ, ಗೃಹ ನಿರ್ಮಾಣಕ್ಕೆ ಕೆಂಪುಕಲ್ಲು ಅಗತ್ಯವಾಗಿ ಬೇಕಾಗಿದೆ.ಕೆಂಪುಕಲ್ಲು ಗಣಿಗಾರಿಕೆ ಮಾಡಲು ಅರ್ಜಿ ಸಲ್ಲಿಸುವವರಿಗೆ ಶೀಘ್ರದಲ್ಲಿ ಅವಕಾಶ ಕಲ್ಪಿಸಿ, ತಿಂಗಳೊಳಗೆ ಪರವಾನಿಗೆ ದೊರಕಿಸಿಕೊಡುವತ್ತ ಹೆಚ್ಚಿನ ಗಮನ ಹರಿಸುವಂತೆಯೂ ಸಚಿವ ದಿನೇಶ್ ಗುಂಡೂರಾವ್ ಗಣಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಸದನದಲ್ಲಿ ಪ್ರಸ್ತಾಪಿಸಿದ್ದ ಶಾಸಕ ಅಶೋಕ್ ಕುಮಾರ್ ರೈ:
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲಿನ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಅನೇಕ ಮಂದಿ ಗಾರೆ ಕೆಲಸದವರು ನಿರ್ಗತಿಕರಾಗಿದ್ದಾರೆ.ನಮಗೆ ಇಲ್ಲೀಗಲ್ ಆಕ್ಟಿವಿಟೀಸ್ ಬೇಡ.ಆದರೆ ನಿಯಮದಲ್ಲಿ ಸಡಿಲೀಕರಣ ಮಾಡಿ ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಶಾಸಕ ಅಶೋಕ್ ಕುಮಾರ್ ರೈಯವರು ವಿಧಾನಸಭೆಯ ಮುಂಗಾರು ಅಧಿವೇಶನದ ಮೊದಲ ದಿನವೇ ಸರಕಾರವನ್ನು ಒತ್ತಾಯಿಸಿದ್ದರು.


ಇಷ್ಟು ವರ್ಷದಿಂದ ಕೆಂಪು ಕಲ್ಲಿನ ಬಿಸಿನೆಸ್ ಮತ್ತು ಮರಳು ಸರಿಯಾಗಿ ನಡೀತಿತ್ತು.ಕೆಂಪು ಕಲ್ಲು ತೆಗೆಯೋದಂದ್ರೆ ಬಂಗಾರ ತೆಗೆಯೋದಲ್ಲ.ಇದಕ್ಕೊಂದು ದೊಡ್ಡ ರೂಪುರೇಶೆ ಕೊಟ್ಟು ಕೆಂಪು ಕಲ್ಲು ಸಾಗಾಟ ಮಾಡುವವರನ್ನು ಹಿಡಿಯುವಂಥದ್ದು,ಅವರ ಮೇಲೆ ಕೇಸು ಹಾಕುವಂಥದ್ದು ನಡೆಯುತ್ತಿದೆ.ಅದಲ್ಲದೆ ಕೆಂಪು ಕಲ್ಲು ಒಂದು ಟನ್‌ಗೆ 256 ರೂ.ರಾಯಲ್ಟಿಯನ್ನು ಹಾಕುತ್ತಾರೆ.ಕೆಂಪು ಕಲ್ಲು ಸ್ಥಗಿತಗೊಂಡಿರುವುದರಿಂದ ಎಷ್ಟೋ ಜನ ನಿರ್ಗತಿಕರಾಗಿದ್ದಾರೆ.ಈ ನಿಟ್ಟಿನಲ್ಲಿ ಇದನ್ನು ಸಡಿಲಿಕೆ ಮಾಡಬೇಕು,ಒಂದು ಕಡೆಯಿಂದ ಪೊಲೀಸರ ಕಾಟ ಮತ್ತೊಂದು ಕಡೆ ಗಣಿ ಇಲಾಖೆಯವರ ಕಾಟ.ಕಲ್ಲಿನ ವ್ಯಾಪಾರ ನಮ್ಮ ಭಾಗದಲ್ಲಿ ಮಾತ್ರ ಅದೂ ನಾಲ್ಕೈದು ತಿಂಗಳು ಕಲ್ಲಿನ ವ್ಯಾಪಾರ ಮಾಡ್ತಾರೆ.ಅದಕ್ಕೆ ಇಷ್ಟೊಂದು ಕಠಿಣ ನಿಯಮಗಳನ್ನು ತಂದರೆ ಹೇಗೆ?ಕಾನೂನು ತರಲಿ ನಮಗೇನು ಇಲ್ಲೀಗಲ್ ಆಕ್ಟಿವಿಟೀಸ್ ಬೇಡ.ಆದರೆ ನಿಯಮ ಸಡಿಲಿಕೆ ಮಾಡಬೇಕು ಎಂದು ಹೇಳಿದ ಶಾಸಕರು,ಕಳೆದ ನಾಲ್ಕೈದು ತಿಂಗಳಿನಿಂದ ಗಾರೆ ಕೆಲಸದವರಿಗೆ ಕೆಲಸವಿಲ್ಲ.ಕಾನೂನು ಮಾಡ್ತೇವೆ,ಕಾನೂನು ಮಾಡ್ತೇವೆ ನಾಡಿದ್ದು ಮಾಡ್ತೇವೆ ಹೇಳ್ತೇವೆ.ಮೂರು ತಿಂಗಳಿನಿಂದ ಇದಕ್ಕೆ ಸಂಬಂಽಸಿ ಸಭೆಗಳು ನಡೆದಿದೆ.ಇದಕ್ಕೆ ಕಾನೂನು ಮಾಡ್ಲಿಕ್ಕೆ ಇದೇನು ಇಲ್ಲೀಗಲ್ ಆಕ್ಟಿವಿಟೀಸ್ ಅಲ್ಲ ಎಂದು ಸದನದ ಗಮನ ಸೆಳೆದಿದ್ದರು.

LEAVE A REPLY

Please enter your comment!
Please enter your name here