ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ‘ಶೀಂಟೂರು ಸ್ಮೃತಿ-2025’

0

ಪುತ್ತೂರು: ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಶೀಂಟೂರು ನಾರಾಯಣ ರೈಯವರ 14ನೇ ವರ್ಷದ ದಿನಾಚರಣೆ ‘ಶೀಂಟೂರು ಸ್ಮೃತಿ-2025’ ಹಾಗೂ ಶೀಂಟೂರು ಸನ್ಮಾನ ಪ್ರದಾನ ಸಮಾರಂಭ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದಲ್ಲಿ ಆ.14ರಂದು ಜರಗಿತು.


ಸೀತಾರಾಮ ರೈಯವರನ್ನು ಶಿಕ್ಷಣ ಇಲಾಖೆಯ ಪರವಾಗಿ ಅಭಿನಂದಿಸುತ್ತೇನೆ- ಲೋಕೇಶ್ ಎಸ್.ಆರ್ :
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್‌ರವರು ದೀಪ ಬೆಳಗಿಸಿ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣಕ್ಕೆ ಇರುವಷ್ಟು ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ವ್ಯಕ್ತಿಗೆ ಒಳ್ಳೆಯ ಶಿಕ್ಷಣವನ್ನು ಕೊಟ್ಟಾಗ ಇಡೀ ಸಮಾಜ ಅಭಿವೃದ್ಧಿಯನ್ನು ಕಾಣುತ್ತದೆ. ತನ್ನ ತಂದೆಯವರ ಪ್ರೇರಣೆಯಂತೆ ಸವಣೂರಿನಲ್ಲಿ ಸುಂದರವಾದ ವಿದ್ಯಾಲಯವನ್ನು ನಿರ್ಮಿಸಿ, ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣವನ್ನು ನೀಡುತ್ತಿರುವ ಸವಣೂರು ಸೀತಾರಾಮ ರೈಯವರನ್ನು ನಾನು ಶಿಕ್ಷಣ ಇಲಾಖೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು. ದ.ಕ. ಜಿಲ್ಲೆಯಲ್ಲಿ ಹತ್ತು ಹಲವು ಪ್ರತಿಭಾವಂತರು ಇದ್ದಾರೆ, ಆದರೆ ಐಎಎಸ್ ಹಾಗೂ ಐಪಿಎಸ್‌ನಂತಹ ಸ್ವರ್ಧಾತ್ಮಕ ಪರೀಕ್ಷೆ ಬರೆಯುವವರ ಸಂಖ್ಯೆ ತುಂಬಾ ಕಡಿಮೆ ಇದ್ದು, ಈ ಬಗ್ಗೆ ನಾವು ಆಲೋಚಿಸಿ, ವಿದ್ಯಾರ್ಥಿಗಳನ್ನು ಸ್ವರ್ಧಾತ್ಮಕ ಪರೀಕ್ಷೆಯಲ್ಲಿ ಬರೆಯಲು ಪ್ರೇರಣೆಯನ್ನು ನೀಡಬೇಕು ಎಂದವರು ಹೇಳಿ, ಶುಭಹಾರೈಸಿದರು.


ಸಾಧಕರ ಜೀವನವನ್ನು ಮೈಗೂಡಿಸಿಕೊಳ್ಳಬೇಕು- ಅಶ್ವಿನ್ ಎಲ್ ಶೆಟ್ಟಿ:
ಅಧ್ಯಕ್ಷತೆ ವಹಿಸಿದ್ದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಽಕಾರಿ ಅಶ್ವಿನ್ ಎಲ್ ಶೆಟ್ಟಿಯವರು ಮಾತನಾಡಿ ಜೀವನದಲ್ಲಿ ಉತ್ತಮವಾದ ಗುರಿಯನ್ನು ಹೊಂದಬೇಕು, ಅದಕ್ಕಾಗಿ ನಾವು ಸಾಧಕರ ಜೀವನ ಪಾಠವನ್ನು ಮೈಗೂಡಿಸಿಕೊಳ್ಳಬೇಕು, ಜೊತೆಗೆ ಒಳ್ಳೆಯ ದಾರಿಯಲ್ಲಿ ಮುನ್ನಡೆಯಬೇಕು, ಸಾಧನೆಯ ಹಿಂದೆ ಪರಿಶ್ರಮ ಬೇಕು, ಸತತ ಸಾಧನೆಯಿಂದ ಯಶಸ್ಸು ಸಾಧ್ಯ ಎಂದು ಹೇಳಿದರು


ತಂದೆಯವರ ಆಶಯದಂತೆ ವಿದ್ಯಾರಶ್ಮಿ ಸಂಸ್ಥೆ ಸ್ಥಾಪನೆ- ಸೀತಾರಾಮ ರೈ:
ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ನನ್ನ ತಂದೆಯವರ ಆಶಯದಂತೆ ಸವಣೂರಿನಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದೇವೆ, ಎಲ್ಲಾ ವ್ಯವಸ್ಥೆಗಳನ್ನು ಹೊಂದಿರುವ ಈ ಸಂಸ್ಥೆಯು ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದು, ರಾಜ್ಯದಲ್ಲಿಯೇ ಸಂಸ್ಥೆಯು ಗುರುತಿಸಲ್ಪಟ್ಟಿದೆ ಎಂದು ಹೇಳಿದರು.


ಸೌಭಾಗ್ಯ ನನ್ನ ಪಾಲಿಗೆ- ಬಲರಾಮ ಆಚಾರ್ಯ :
ಕರ್ನಲ್ ರಾಜೇಶ್ ಹೊಳ್ಳರವರಿಗೆ ‘ಶೀಂಟೂರು ಸನ್ಮಾನ’ವನ್ನು ಪ್ರದಾನ ಮಾಡಿ ಮಾತನಾಡಿದ ಪುತ್ತೂರಿನ ಜಿಎಲ್ ಆಚಾರ್ಯ ಜ್ಯುವೆಲ್ಲರ‍್ಸ್‌ನ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯರವರು ಶೀಂಟೂರು ನಾರಾಯಣ ರೈಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಸೌಭಾಗ್ಯ ನನ್ನ ಪಾಲಿಗೆ ದೊರೆತಿರುವುದು ತುಂಬಾ ಸಂತೋಷವಾಗಿದೆ. ಭಾರತ-ಪಾಕಿಸ್ತಾನದ ನಡುವೆ ಯುದ್ಧ ನಡೆಯುವಾಗ ಮಾತ್ರ ಸೈನಿಕರ ಬಗ್ಗೆ ನಮಗೆ ನೆನಪು ಆಗುತ್ತದೆ. ಆದರೆ ಸೈನಿಕರಾಗಿ ದೇಶಕಾಯುವ ಯೋಧರು ಪ್ರತಿದಿನ ನಿಷ್ಠೆಯಿಂದ ಕೆಲಸವನ್ನು ಮಾಡುತ್ತಿದ್ದಾರೆ ಎಂಬುದನ್ನು ನಾವು ಮನವರಿಕೆ ಮಾಡಿಕೊಂಡು, ಅವರನ್ನು ಗೌರವಿಸಬೇಕು ಎಂದರು. ಸವಣೂರು ಸೀತಾರಾಮ ರೈಯವರು ಆಧುನಿಕ ಕಾಲಘಟ್ಟಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯಲ್ಲಿ ಕಲ್ಪಿಸಿದ್ದಾರೆ, ಜೊತೆಗೆ ಸಂಸ್ಥೆಯನ್ನು ಮುನ್ನಡೆಸಲು ತನ್ನ ಅಳಿಯ ಅಶ್ವಿನ್ ಶೆಟ್ಟಿಯವರಿಗೆ ಜವಾಬ್ಧಾರಿಯನ್ನು ನೀಡಿದ್ದಾರೆ. ಅಶ್ವಿನ್ ಶೆಟ್ಟಿ ಪ್ರತಿಭಾವಂತರಾಗಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


ಶೀಂಟೂರು ಸನ್ಮಾನ:
ಶೀಂಟೂರು ಸನ್ಮಾನ ಸ್ವೀಕರಿಸಿದ ಕರ್ನಲ್ ರಾಜೇಶ್ ಹೊಳ್ಳರವರು ಮಾತನಾಡಿ ಶೀಂಟೂರು ನಾರಾಯಣ ರೈಯವರ ಹೆಸರಿನಲ್ಲಿ ಸನ್ಮಾನ ಸ್ವೀಕರಿಸುವ ಸೌಭಾಗ್ಯ ಒದಗಿ ಬಂದಿರುವುದು ನನ್ನ ಪಾಲಿನ ಬಹುದೊಡ್ಡ ಭಾಗ್ಯ, ಇದಕ್ಕಾಗಿ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು.


ಶಿಸ್ತಿನ ಸಿಪಾಯಿಯಾಗಿದ್ದರು- ಸೂಂತೋಡು ಹೂವಯ್ಯ:
ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಮೇನೇಜರ್ ಸೂಂತೋಡು ಹೂವಯ್ಯ ಸುಳ್ಯರವರು ಶೀಂಟೂರು ನಾರಾಯಣ ರೈಯವರ ಸಂಸ್ಮರಣೆ ಮಾಡಿ, ಶೀಂಟೂರು ನಾರಾಯಣ ರೈಯವರು ಶಿಕ್ಷಕನಾಗಿ, ಸಹಕಾರಿಯಾಗಿ, ಸೈನಿಕನಾಗಿ ಸಲ್ಲಿಸಿದ ಸೇವೆ ಅಪತ್ರಿಮವಾದದ್ದು, ಅವರು ಸುಳ್ಯದಲ್ಲಿ ರೈ ಮಾಸ್ಟರ್ ಎಂದೇ ಪ್ರಖ್ಯಾತಿ ಪಡೆದವರು, ಅವರು ಶಿಸ್ತಿನ ಸಿಪಾಯಿಯಾಗಿದ್ದರು, ಅವರ ಆದರ್ಶಗಳನ್ನು ಅವರ ಮಗ ಸವಣೂರು ಸೀತಾರಾಮ ರೈಯವರು ಪಾಲಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.


ಸವಣೂರು ಎಸ್.ಎನ್.ಆರ್.ರೂರಲ್ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿ ಎನ್.ಸುಂದರ ರೈ ಸವಣೂರು ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀಮತಿ ಕಸ್ತೂರಿಕಲಾ ಎಸ್ ರೈ ಸವಣೂರು, ಸಂಸ್ಥೆಯ ಟ್ರಸ್ಟಿ ರಶ್ಮಿ ಅಶ್ವಿನ್ ಶೆಟ್ಟಿ ಸವಣೂರು, ಶೀಂಟೂರು ನಾರಾಯಣ ರೈಯವರ ಕುಟುಂಬ ಸದಸ್ಯೆ ಮಮತಾ ರೈ ಡಿಂಬ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ| ರಾಜಲಕ್ಷ್ಮಿ ಎಸ್ ರೈ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ, ಉಪನ್ಯಾಸಕಿ ಲಿಖಿತಾ, ಸುಮ, ಚೇತನಾರವರು ವಿವಿಧ ಕಾರ‍್ಯಕ್ರಮಗಳಲ್ಲಿ ಸಹಕರಿಸಿದರು. ವಿದ್ಯಾರ್ಥಿಗಳಾದ ಶ್ರುತಾ ಜೈನ್, ವಿದಿಶಾ, ಶ್ರಾವ್ಯ, ದೇಚಮ್ಮ, ತೇಜಸ್ವಿನಿ,ಕೃಪಾಲಿ, ಮಾನಸ, ಮೋಕ್ಷರವರುಗಳು ಪ್ರಾರ್ಥನೆಗೈದರು. ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿ ಶಂತನುಕೃಷ್ಣ ಸಂವಿಧಾನದ ಪೀಠಿಕೆ ವಾಚನಗೈದರು. ನ್ಯಾಯವಾದಿ ಎನ್.ಜಯಪ್ರಕಾಶ್ ರೈ ವಂದಿಸಿದರು. ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಪ್ರತಿಭಾ ಎಸ್. ಕಾರ್ಯಕ್ರಮ ನಿರೂಪಿಸಿದರು.


10 ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಶೀಂಟೂರು ಶಿಷ್ಯ ವೇತನ: ವಿದ್ಯಾರಶ್ಮಿ ವಿದ್ಯಾಲಯದ ದಶಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ವಿನಯ ಹೆಗ್ಡೆಯವರು ಪ್ರಸ್ತಾಪಿಸಿ ಮುಂದಿಟ್ಟ ಯೋಜನೆಯೇ ಶೀಂಟೂರು ನಾರಾಯಣ ರೈ ಶಿಕ್ಷಣ ಪ್ರತಿಷ್ಠಾನ ಸವಣೂರು ಆಗಿದ್ದು, ಆ ಸಂದರ್ಭ ಎ.ಜೆ ಆಸ್ಪತ್ರೆಯ ಡಾ|ಎ.ಜೆ.ಶೆಟ್ಟಿಯವರು ಮೊತ್ತ ಮೊದಲಾಗಿ 10 ಲಕ್ಷ ರೂಪಾಯಿಯನ್ನು ಪ್ರತಿಷ್ಠಾನಕ್ಕೆ ದೇಣಿಗೆಯಾಗಿ ನೀಡಿದ್ದರು. ಅದಾದ ಬಳಿಕ ವಿನಯ ಹೆಗ್ಡೆ ರೂ.2 ಲಕ್ಷ ನೀಡಿದ್ದಾರೆ.ಇದರಿಂದ ಬರುವ ಬಡ್ಡಿ ಹಣವನ್ನು ಪ್ರತಿಭಾವಂತ ಮತ್ತು ಆರ್ಥಿಕ ಸಂಕಷ್ಟದಲ್ಲಿ ಇರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶಿಷ್ಯ ವೇತನವಾಗಿ ನೀಡಬೇಕೆಂದು ನಿರ್ದೇಶಿಸಿದ್ದರು. ಇದರಿಂದ ಪ್ರೇರಿತರಾಗಿ ಮುಂದೆ ಹಲವು ಮಂದಿ ಸಹೃದಯಿ ದಾನಿಗಳು ಸ್ವಯಂ ಇಚ್ಚೆಯಿಂದ ಉತ್ತಮ ಮೊತ್ತವನ್ನು ನೀಡುತ್ತಾ ಬಂದಿದ್ದಾರೆ. ಆದರಂತೆ ಪ್ರತಿ ವರ್ಷ ಶೀಂಟೂರು ಸ್ಮೃತಿ ಕಾರ‍್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ವಿವಿಧ ತರಗತಿಗಳ ಹತ್ತು ಮಂದಿ ಅರ್ಹ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಗುರುತಿಸಿ, ತಲಾ 5 ಸಾವಿರದಂತೆ ಶಿಷ್ಯ ವೇತನವನ್ನು ನೀಡುತ್ತಿದ್ದು, ಈ ಬಾರಿ ಯು.ಕೆ.ಜಿಯ ಅಝ ಫಾತಿಮ, 5ನೇ ತರಗತಿಯ ದಿವಿತ್, 7ನೇ ತರಗತಿ ವಂದನ್ ರೈ, 8ನೇ ತರಗತಿಯ ಇಫಾ, 10ನೇ ತರಗತಿಯ ಪ್ರತೀಕ್ಷ.,ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಪ್ರತೀಕ್ಷ, ವಿಜ್ಞಾನ ವಿಭಾಗದ ಶ್ರೀರಕ್ಷ, ತೃತೀಯ ಬಿ.ಸಿ.ಎಯ ಪವನ್ ಹೆಚ್.ಎಸ್ ತೃತೀಯ ಬಿ.ಎಯ ದೀಕ್ಷಿತ್ ಹಾಗೂ ತೃತೀಯ ಬಿಕಾಂನ ಧನ್ಯಶ್ರೀ ಅವರಿಗೆ ಶಿಷ್ಯ ವೇತನವನ್ನು ವಿದ್ಯಾರಶ್ಮಿ ಸಂಸ್ಥೆಯ ಸಂಚಾಲಕ ಸವಣೂರು ಕೆ. ಸೀತಾರಾಮ ರೈಯವರು ವಿತರಿಸಿದರು.

ಶೀಂಟೂರುರವರ ಜೀವನಾದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶ
ಶೀಂಟೂರು ನಾರಾಯಣ ರೈಯವರ ಜೀವನಾದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಅವರ ನೆನಪಿನಲ್ಲಿ ನಡೆಸಿಕೊಂಡು ಬರುತ್ತಿರುವ ‘ಶೀಂಟೂರು ಸ್ಮೃತಿ’ ಕಾರ್ಯಕ್ರಮದಲ್ಲಿ ಒಂದು ವರ್ಷ ಒಬ್ಬ ಶಿಕ್ಷಕ ಮತ್ತು ಇನ್ನೊಂದು ವರ್ಷದಲ್ಲಿ ಒಬ್ಬ ಸೇನಾನಿಯನ್ನು ಗುರುತಿಸಿ ಅವರನ್ನು ಸನ್ಮಾನಿಸುತ್ತಾ ಬಂದಿದ್ದೇವೆ. ಈ ಬಾರಿ ಸೇನಾನಿ ಕರ್ನಲ್ ರಾಜೇಶ್ ಹೊಳ್ಳ ಅವರನ್ನು ಸನ್ಮಾನಿಸುತ್ತಿದ್ದೇವೆ.
-ಸವಣೂರು ಕೆ.ಸೀತಾರಾಮ ರೈ
ಸಂಚಾಲಕರು,ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಸವಣೂರು

LEAVE A REPLY

Please enter your comment!
Please enter your name here