
ಬೆಂಗಳೂರು: ಕಡಬ ತಾಲೂಕಿನ ಸಮಗ್ರ ಅಭಿವೃದ್ಧಿ ಯ ಕುರಿತಂತೆ ಸುದ್ದಿ ಬಿಡುಗಡೆ ಹೊರತಂದ ವಿಶೇಷ ಪುರವಣಿಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಭಾಪತಿ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್, ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿಯವರಿಗೆ ವಿಧಾನಸೌಧದಲ್ಲಿ ಆ. 14 ರಂದು ನೀಡಲಾಯಿತು.

ಅಽವೇಶನದ ಕಲಾಪದ ಒತ್ತಡದ ನಡುವೆಯೂ ವಿಶೇಷ ಪುರವಣಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಾಯಕರುಗಳು ಕಡಬ ತಾಲೂಕಿನ ಅಭಿವೃದ್ಧಿ ಕಾಲದ ಬೇಡಿಕೆಯಾಗಿದ್ದು, ಈ ಕುರಿತು ಗಮನಹರಿಸುವುದಾಗಿ ಭರವಸೆ ನೀಡಿದರು.

ಕಡಬದ ಅಭಿವೃದ್ಧಿ ಗೆ ಮುಂಚೂಣಿಯ ನೇತೃತ್ವ – ಯು.ಟಿ. ಖಾದರ್:
ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್ ಯು.ಟಿ. ಖಾದರ್ ರವರು ’ನನಗೂ ಕಡಬಕ್ಕೂ ಅವಿನಾಭಾವ ಸಂಬಂಧವಿದ್ದು, ಕಡಬದ ಅಭಿವೃದ್ಧಿಗೆ ಸಂಬಂಽಸಿದಂತೆ ಖಂಡಿತವಾಗಿಯೂ ಮುಂಚೂಣಿಯ ನೇತೃತ್ವ ವಹಿಸುವುದಾಗಿ ಭರವಸೆ ನೀಡಿದರು.

ಸದನದ ಗಮನ ಸೆಳೆಯಲಿದ್ದೇನೆ – ಭಾಗೀರಥಿ ಮುರುಳ್ಯ:
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ’ಈಗಾಗಲೇ ನಾನು ಕಡಬ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸದನದಲ್ಲಿ ಪ್ರಸ್ತಾಪಿಸಲು ಸಮಯಾವಕಾಶ ಕೇಳಿದ್ದು, ಸದನದ ಗಮನ ಸೆಳೆಯುವುದಾಗಿ ಹೇಳಿದರು.

ಕಾನೂನಿನಲ್ಲಿ ಬದಲಾವಣೆ ತರುವ ಚಿಂತನೆಯಾಗಬೇಕಿದೆ – ಅಶೋಕ್ ಕುಮಾರ್ ರೈ:
ತಾಲೂಕಿನ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಮುತುವರ್ಜಿ ವಹಿಸಿ ಸರಕಾರ ವಿಶೇಷ ಅನುದಾನ ನೀಡಬೇಕು. ರಾಜ್ಯದಲ್ಲೇ ಆದಾಯದಲ್ಲಿ ಮೊದಲ ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯಕ್ಕೆ ಸಂಬಂಧಪಟ್ಟಂತೆ ಕಾನೂನಿನ ಬದಲಾವಣೆ ತಂದು ಅದನ್ನು ತಾಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸುವ ಕುರಿತು ಚಿಂತನೆ ನಡೆಸಬೇಕಾಗಿದೆ. ಈ ಕುರಿತು ಸಂಬಂಧಪಟ್ಟವರ ಗಮನ ಸೆಳೆಯುವುದಾಗಿ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಹೇಳಿದರಲ್ಲದೇ ವಿಶೇಷ ಪುರವಣಿಯನ್ನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ತಲುಪಿಸುವಲ್ಲಿ ’ಸುದ್ದಿ’ ತಂಡದ ಜೊತೆಯಾದರು.

ಮೇಲ್ಮನೆಯಲ್ಲೂ ಪ್ರಸ್ತಾಪಿಸಲಿದ್ದೇನೆ – ಕಿಶೋರ್ ಕುಮಾರ್ ಪುತ್ತೂರು:
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ ’ಕಡಬದ ಅಭಿವೃದ್ಧಿ ಗೆ ಸಂಬಂಽಸಿದಂತೆ ಪಕ್ಷ ಬೇಧವಿಲ್ಲದೇ ಸಹಕರಿಸುವುದಲ್ಲದೇ ಮೇಲ್ಮನೆಯಲ್ಲೂ ವಿಷಯ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರೈ ಎಸ್ಟೇಟ್ ಚಾರಿಟೇಬಲ್ ಎಜುಕೇಶನಲ್ ಟ್ರಸ್ಟ್ ನ ಕಾರ್ಯಾಧ್ಯಕ್ಷ ಸುದೇಶ್ ಕುಮಾರ್ ಶೆಟ್ಟಿ, ರಂಜಿತ್ ಬಂಗೇರ, ಸಂತೋಷ್ ಚಿಲ್ಮೆತ್ತಾರು, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಪ್ರಣಮ್ ಶೆಟ್ಟಿ ಪನಡ್ಕ ಜೊತೆಯಲ್ಲಿದ್ದರು.