ಸರಕಾರದ ಯೋಜನೆಗಳನ್ನು ತಳಮಟ್ಟದ ವ್ಯಕ್ತಿಗೆ ತಲುಪಿಸುವ ಇಲಾಖೆ

0

✍🏻 ಲಕ್ಷ್ಮೀಕಾಂತ್ ರೈ ಅನಿಕೂಟೇಲು

ದೇಶ ಮತ್ತೊಂದು ಸ್ವಾತಂತ್ರ ದಿನಾಚರಣೆಯ ಸಂಭ್ರಮದಲ್ಲಿದೆ. ಬ್ರಿಟಿಷರ ದಾಸ್ಯ ಸಂಕೋಲೆಗಳಿಂದ ಬಿಡುಗಡೆಯಾಗಿ ದೇಶ 79 ವರ್ಷಗಳನ್ನು ಪೂರೈಸಿದೆ. ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಭಾರತೀಯರಲ್ಲಿ ಸಹಜವಾಗಿಯೇ ಹೆಮ್ಮೆ, ಅಭಿಮಾನ ಹಾಗೂ ಪುಳಕದಲ್ಲಿ ಮಿಂದು ಆ ದಿನವನ್ನು ಯಶಸ್ವಿಗೊಳಿಸುವುದು ಪ್ರತೀ ವರ್ಷ ನಡೆಯುವ ವಿದ್ಯಮಾನವಾಗಿದೆ. ಆದರೆ ನಿಜವಾದ ಸ್ವಾತಂತ್ರ್ಯ ಎಂಬುದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ನೆಮ್ಮದಿಯ ಬದುಕನ್ನು ಕಟ್ಟಿಕೊಂಡಾಗ ಎಂದರೆ ತಪ್ಪಾಗಲಾರದು. ಅಂತಹ ನೆಮ್ಮದಿಯ ಬದುಕನ್ನು ಕಟ್ಟಿಕೊಡುವ ಉದ್ಧೇಶವನ್ನು ಇಟ್ಟುಕೊಂಡು ಪ್ರತಿಯೊಂದು ಸರಕಾರಗಳು ವಿಭಿನ್ನ ಯೋಜನೆಗಳನ್ನು ಸ್ವಾತಂತ್ರ್ಯ ಭಾರತದಲ್ಲಿ ಸತತವಾಗಿ ರೂಪಿಸುತ್ತಿದೆ. ಅದಕ್ಕಾಗಿ ಲಕ್ಷ ಕೋಟಿ ಹಣವನ್ನು ನಿರಂತರವಾಗಿ ಬಜೆಟ್ ರೂಪದಲ್ಲಿ ನೀಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಲು ಯತ್ನಿಸುತ್ತಿದೆ.

’ಭಾರತದ ಆತ್ಮ ಹಳ್ಳಿಗಳಲ್ಲಿದೆ’ ಎಂದು ಎಲ್ಲಾ ಭಾರತೀಯ ನಾಯಕರೂ, ಸರ್ಕಾರಗಳೂ ಕಳೆದ ಹಲವಾರು ವರ್ಷಗಳಿಂದ ಹೇಳುತ್ತಾ ಬಂದಿದ್ದರೂ ಸಾವಿರಾರು ಗ್ರಾಮಗಳು ಸ್ವಾವಲಂಬನೆ ಸಾಧಿಸುವುದಿರಲಿ, ಮೂಲಸೌಕರ್ಯಗಳನ್ನೂ ಹೊಂದುವಲ್ಲಿ ಪರದಾಡುತ್ತಿದೆ ಎಂಬುದು ಸತ್ಯ. ಈ ಎಲ್ಲ ಸಂಗತಿಗಳ ಬಗ್ಗೆ, ಸ್ವತಂತ್ರ ಭಾರತದ ಸಾಧನೆಗಳೊಂದಿಗೆ ವೈಫಲ್ಯಗಳ ಬಗ್ಗೆಯೂ ಪರಾಮರ್ಶೆ ನಡೆಸಲು ಅಮೃತೋತ್ಸವ ಸಂದರ್ಭ ಪೂರ್ಣಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಪ್ರೇರಣೆಯ ರೂಪದಲ್ಲಿ ಬಳಸಿಕೊಳ್ಳಬೇಕಾಗಿದೆ. ನವದೆಹಲಿಯ ಕೆಂಪುಕೋಟೆಯಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ದೇಶವನ್ನು ಉದ್ಧೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಭಾಷಣದಲ್ಲಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರುವ ವಿಷಯಕ್ಕೆ ಒತ್ತು ದೊರೆತಿದೆ. ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಅವರು ಕೂಡ ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡುವ ಮಾತುಗಳನ್ನಾಡಿದ್ದಾರೆ. ಅಮೃತ ಗ್ರಾಮ ಪಂಚಾಯಿತಿ ಯೋಜನೆಯಡಿ ಗ್ರಾಮ ಪಂಚಾಯಿತಿಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ಧೇಶ ಅವರದಾಗಿದೆ. ಮೊದಲ ಸ್ವಾತಂತ್ರ್ಯ ದಿನಾಚರಣೆಯಿಂದ ಹಿಡಿದು ಇಂದು ಆಚರಿಸುತ್ತಿರುವ 79ನೇ ಸ್ವಾತಂತ್ರ ದಿನಾಚರಣೆವರೆಗೂ ಈ ವಿಶೇಷ ಸಂದರ್ಭವನ್ನು ಅವಿಸ್ಮರಣೀಯಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾರಿಗೆ ತರುವುದು ಸತತವಾಗಿ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಈ ಘೋಷಣೆಯಾದ ಎಲ್ಲಾ ಕಾರ್ಯಕ್ರಮಗಳನ್ನು ರಾಜ್ಯದ ಬೇರೆ ಬೇರೆ ಇಲಾಖೆಗಳು ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕಾದ ಜವಾಬ್ದಾರಿಯನ್ನು ಪಡೆದುಕೊಂಡಿರುತ್ತದೆ.


ಬರೇ ಸ್ವಾತಂತ್ರ್ಯದ ಸಂಧರ್ಭದಲ್ಲಿ ಮಾತ್ರವಲ್ಲದೇ, ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜಾರಿಗೊಳಿಸುವ ಎಲ್ಲಾ ಯೋಜನೆಗಳನ್ನು ತಳಮಟ್ಟದ ಒಬ್ಬ ವ್ಯಕ್ತಿಗೆ ತಲುಪಿಸುವಲ್ಲಿ ಇಲಾಖೆಗಳ ಜವಾಬ್ದಾರಿ ಅತ್ಯಂತ ಮಹತ್ವದಾಗಿದೆ. ಆಡಳಿತದಲ್ಲಿ ಇಲಾಖೆಗಳು ಕಟ್ಟ ಕಡೆಯ ವ್ಯಕ್ತಿಯನ್ನು ತಲುಪುವಲ್ಲಿ ಮಹತ್ಮವನ್ನು ಪಡೆದುಕೊಂಡಿದ್ದು, ಅದರ ಮೂಲಕ ಸರಕಾರ ಸುಲಭವಾಗಿ ಜನರನ್ನು ತಲುಪಲು ಸಾಧ್ಯವಾಗುತ್ತಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಸರಕಾರ ಕೆಲವು ಸಂಧರ್ಭಗಳಲ್ಲಿ ಅದರ ನಿಜವಾದ ಆಶಯವನ್ನು ಕಾರ್ಯರೂಪಕ್ಕೆ ತರುವಲ್ಲಿ ಹಿನ್ನಡೆಯಾಗುತ್ತಿರುವುದು ಕೂಡಾ ಅಷ್ಟೇ ಸತ್ಯ. ಆದರೆ ದೇಶದಲ್ಲಿರುವ ಹಲವಾರು ಇಲಾಖೆಗಳು ಸಾವಿರಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದು, ಇವುಗಳ ಕುರಿತಾದ ಬಹಳಷ್ಟು ಮಾಹಿತಿಗಳು ಜನಸಾಮಾನ್ಯರಿಗೆ ತಲುಪುವಲ್ಲಿ ಸ್ವಲ್ಪ ಎಡವಿದೆ ಎಂದರೆ ತಪ್ಪಾಗಲಾರದು.


ಈ ಹಿನ್ನಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಈ ಶುಭದಿನದಂದು, ಮಾಹಿತಿ ಯುಗದಲ್ಲಿ ಈಜಾಡುತ್ತಿರುವ ಈ ಜಾಗತಿಕ ಹಳ್ಳಿಯ ಪರಿಕಲ್ಪನೆಯ ಸಂಧರ್ಭದಲ್ಲಿ ಪ್ರತಿಯೊಂದು ಮಾಹಿತಿಯು ಒಬ್ಬ ವ್ಯಕ್ತಿಗೆ, ಅವನ ಬೆಳವಣಿಗೆಗೆ ಸಹಾಯಕವಾಗಿದೆ ಎಂಬುದನ್ನು ಅರಿತುಕೊಂಡಿರುವ ನಮ್ಮ ಸುದ್ದಿ ಬಿಡುಗಡೆ ದಿನಪತ್ರಿಕೆಯು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಮಾಹಿತಿ ತಲುಪಬೇಕು ಅನ್ನುವ ದೃಷ್ಟಿಕೋನದಿಂದ ಇಲಾಖಾ ಮಾಹಿತಿಯನ್ನು ನೀಡುತ್ತಿದೆ. ಅಧಿಕಾರ ವಿಕೇಂದ್ರೀಕರಣದ ತಳ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕದ ಪ್ರತಿಯೊಂದು ಇಲಾಖೆಯಲ್ಲಿರುವ ಸೌಲಭ್ಯಗಳನ್ನು ಒಳಗೊಂಡಂತೆ ಇಲಾಖೆಗಳ ಕುರಿತಾದ ಪ್ರತಿಯೊಂದು ಮಾಹಿತಿಯನ್ನು ಇದರಲ್ಲಿ ನೀಡಲಾಗಿದ್ದು, ಆ ಮೂಲಕ ಪ್ರತಿಯೊಬ್ಬ ವ್ಯಕ್ತಿಯು ಇದರ ಪ್ರಯೋಜನವನ್ನು ಪಡೆಯಬೇಕು ಎನ್ನುವುದು ಇದರ ಸದುದ್ಧೇಶವಾಗಿದೆ. ಆ ಮೂಲಕ ಸಮಾಜದ ಪ್ರತಿಯೊಬ್ಬ ವ್ಯಕ್ತಿ, ಪ್ರತಿಯೊಂದು ಮನೆ, ಕುಟುಂಬ ನಿಜವಾದ ಸ್ವಾತಂತ್ರ್ಯದ ಘಮವನ್ನು ಅನುಭವಿಸಲಿ… ಆ ಮೂಲಕ ಕುಟುಂಬಗಳು ಅಭಿವೃದ್ಧಿಯಾಗಲಿ… ಆ ಮೂಲಕ ಕುಟುಂಬಗಳ ಗೊಂಚಲಾಗಿರುವ ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯಗಳು ಅಭಿವೃದ್ಧಿ ಹೊಂದಲಿ.. ಆ ಮೂಲಕ ಸಂಪೂರ್ಣ ಭಾರತ ದೇಶವೇ ಸುದೃಢವಾಗಿ ಬೆಳೆಯಲಿ… ವಿಶ್ವಗುರುವಾಗಲಿ ಎಂಬ ಆಶಯದೊಂದಿಗೆ.

LEAVE A REPLY

Please enter your comment!
Please enter your name here