





ಪುತ್ತೂರು: ಸ್ನೇಹ ಯುವಕ ಮಂಡಲ ಮತ್ತು ಸ್ನೇಹ ಮಹಿಳಾ ಮಂಡಲ ಪರ್ಪುಂಜ ಇವರ ಜಂಟಿ ಆಶ್ರಯದಲ್ಲಿ 21 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆಯನ್ನು ಆ.15 ರಂದು ಪರ್ಪುಂಜ ರಾಮಜಾಲು ಗರಡಿ ವಠಾರದಲ್ಲಿ ಉದ್ಘಾಟಿಸಲಾಯಿತು. ಬೆಳಿಗ್ಗೆ ಉಪನ್ಯಾಸಕರಾದ ಹರ್ಷಿತ್ ಕುಮಾರ್ ಕೂರೇಲುರವರು ತೆಂಗಿನ ಕಾಯಿ ಹೊಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಹಿರಿಯ ಪ್ರಗತಿಪರ ಕೃಷಿಕ, ಗೌರವ ಸಲಹೆಗಾರ ಬಾರಿಕೆ ನಾರಾಯಣ ರೈಯವರು 79 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಶುಭಾಶಯ ಕೋರಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯಗುರು ಸುಧಾಕರ ರೈ ಕುಂಬ್ರರವರು ವಹಿಸಿದ್ದರು.



ಅತಿಥಿಗಳಾಗಿ ಪರ್ಪುಂಜ ಅಮರ್ ಚಿಕನ್ ಸೆಂಟರ್ ಮಾಲಕ ಶ್ರೀಧರ ಪೂಜಾರಿ ಪಿದಪಟ್ಲ, ಸ್ನೇಹ ಯುವಕ ಮಂಡಲದ ಗೌರವ ಸಲಹೆಗಾರ ಮಿತ್ರದಾಸ ರೈ ಡೆಕ್ಕಳ, ಗೌರವ ಅಧ್ಯಕ್ಷ ಪ್ರೇಮ್‌ರಾಜ್ ರೈ ಪರ್ಪುಂಜ, ಅಧ್ಯಕ್ಷ ವಿಪಿನ್ ಶೆಟ್ಟಿ, ಸ್ನೇಹ ಯುವತಿ ಮಂಡಲದ ಗೌರವಾಧ್ಯಕ್ಷೆ ಬೇಬಿ ರೈ, ಅಧ್ಯಕ್ಷೆ ಪ್ರಮೀಳಾ ಎಸ್ ಮತ್ತಿತರರು ಉಪಸ್ಥಿತರಿದ್ದರು. ರಕ್ಷಾ ಕೆ.ಆರ್ ಮತ್ತು ವರ್ಷಾ ಎಸ್.ಆರ್ ಪ್ರಾರ್ಥಿಸಿದರು. ಸ್ನೇಹ ಯುವಕ ಮಂಡಲ ಮತ್ತು ಯುವತಿ ಮಂಡಲದ ಗೌರವ ಸಲಹೆಗಾರರಾದ ರಾಜೇಶ್ ರೈ ಪರ್ಪುಂಜ ಸ್ವಾಗತಿಸಿದರು. ಯುವತಿ ಮಂಡಲದ ಅಧ್ಯಕ್ಷ ಪ್ರಮೀಳಾ ಎಸ್. ವಂದಿಸಿದರು. ರತನ್ ರೈ ಕುಂಬ್ರ ಕಾರ್ಯಕ್ರಮ ನಿರೂಪಿಸಿದರು. ಸ್ನೇಹ ಯುವಕ ಮಂಡಲದ ಕಾರ್ಯದರ್ಶಿ ನಿತಿನ್ ಗೌಡ, ಯುವತಿ ಮಂಡಲದ ಕಾರ್ಯದರ್ಶಿ ರೇಖಾ ಎಸ್ ಹಾಗೂ ಪದಾಧಿಕಾರಿಗಳು, ಸದಸ್ಯರುಗಳು ಸಹಕರಿಸಿದ್ದರು.





ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಪುರುಷರಿಗೆ ಕಂಬ ಏರುವುದು, ಮಡಿಕೆ ಹೊಡೆಯುವುದು, ಹಗ್ಗಜಗ್ಗಾಟ, ಗೋಣಿ ಚೀಲದ ಓಟ, ಕೋಲು ಓಟ, ಮಹಿಳೆಯರಿಗೆ ಮಡಿಕೆ ಹೊಡೆಯುವುದು, ಹಗ್ಗಜಗ್ಗಾಟ, ಲಕ್ಕಿಸರ್ಕಲ್, ಗುಂಡೆಸೆತ, ಪುಟಾಣಿಗಳಿಗೆ ರಾಧಾಕೃಷ್ಣ ಛದ್ಮವೇಷ, ಕಡ್ಲೆ ಹೆಕ್ಕುವುದು, ೧ರಿಂದ೪ ನೇ ತರಗತಿಗೆ ಛದ್ಮವೇಷ, ಲಿಂಬೆಚಮಚ ಓಟ, ಸೂಜಿದಾರ ಓಟ, ೫ರಿಂದ ೭ ಕ್ಕೆ ಲಿಂಬೆ ಚಮಚ ಓಟ, ಲಕ್ಕಿಸರ್ಕಲ್, ೮ ರಿಂದ ೧೦ ಕ್ಕೆ ೧೦೦ ಮೀ.ಓಟ, ಗುಂಡೆಸೆತ ಹಾಗೂ ಇನ್ನಿತರ ಆಟೋಟ ಸ್ಪರ್ಧೆಗಳು ನಡೆದವು. ಕೆ.ಸಂಜೀವ ಪೂಜಾರಿ ಕೂರೇಲುರವರ ಪ್ರಾಯೋಜಕತ್ವದಲ್ಲಿ ಮಧ್ಯಾಹ್ನ ಅನ್ನಸಂತರ್ಪಣೆ ಹಾಗೇ ಬೆಳಿಗ್ಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ಸಂಜೆ ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ಕ್ರೀಡೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ,ನಿವೃತ್ತ ಸೈನಿಕರಿಗೆ ಸನ್ಮಾನ ನಡೆಯಲಿದೆ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.








