ಕಲಾವಿದರ ಬಾಳಿನಲ್ಲಿ ಪ್ರೀತಿ, ವಿಶ್ವಾಸ ತುಂಬಿಸುವುದೇ ಟಾನಿಕ್-ಪಟ್ಲ ಸತೀಶ್ ಶೆಟ್ಟಿ
ಪುತ್ತೂರು: ಅನಾರೋಗ್ಯದ ಸಂದರ್ಭದಲ್ಲಿ ವೈದ್ಯರನ್ನು ಕಂಡಾಗ ವೈದ್ಯರು ರೋಗಿ ಹತ್ತಿರ ನಗುಮುಖದಿಂದ ಮಾತನಾಡಿದಾಗ ರೋಗಿಯು ಅರ್ಧದಷ್ಟು ಗುಣಮುಖ ಹೊಂದುತ್ತಾನೆ ಹಾಗೆಯೇ ಅಶಕ್ತ ಕಲಾವಿದರ ಬಾಳಿನಲ್ಲಿ ಧನಸಹಾಯದ ನೆರವು ನೀಡುವುದರೊಂದಿಗೆ ಅವರ ಬಾಳಿನಲ್ಲಿ ಪ್ರೀತಿ, ವಿಶ್ವಾಸ ತುಂಬಿಸುವುದು ಅದುವೇ ಟಾನಿಕ್, ಗ್ಲುಕೋಸ್ ಆಗಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಮಾತೃ ಘಟಕದ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿರವರು ಹೇಳಿದರು.

ಮಾಯಿದೆ ದೇವುಸ್ ಸಮೂಹ ಶಿಕ್ಷಣಗಳ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಯಕ್ಷಕಲಾ ಕೇಂದ್ರ(ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಕೇಂದ್ರ), ರಕ್ಷಕ-ಶಿಕ್ಷಕ ಸಂಘ, ಹಿರಿಯ ವಿದ್ಯಾರ್ಥಿ ಸಂಘ, ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಆಶ್ರಯದಲ್ಲಿ ಆ.೧೮ ರಂದು ಕಾಲೇಜಿನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ನಡೆದ “ಸೀತಾ ಪರಿತ್ಯಾಗ ಕನಕಾಂಗಿ ಕಲ್ಯಾಣ” ಯಕ್ಷಗಾನ ಪ್ರಸಂಗದ ಸಭಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ದೇವರು ಕಲ್ಪಿಸಿದ ಈ ಕಲೆಯನ್ನು ಯಕ್ಷಗಾನದ ಮೂಲಕ ಬಳಸುತ್ತಿದ್ದೇನೆ. ಯಕ್ಷಗಾನ ಕಲೆಯಿಂದಾಗಿ ನಾನು ಇಂದು ವಿಶ್ವದಾದ್ಯಂತ ಹೆಸರು ಗಳಿಸಿರುವ ಹಿಂದೆ ದೇವರ ಆಶೀರ್ವಾದ, ಹಿರಿಯರ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಮರೆಯಲು ಸಾಧ್ಯವಿಲ್ಲ ಎಂದರು.

ಪಟ್ಲರವರ ಸ್ವರಮಾಧುರ್ಯವೇ ಅವರ ಶ್ರೇಷ್ಟತೆ, ಸಿರಿತನವಾಗಿದೆ-ವಂ|ಲಾರೆನ್ಸ್ ಮಸ್ಕರೇನ್ಹಸ್:
ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಫಿಲೋಮಿನಾ ಕಾಲೇಜು ಕಲಿಕೆಯ ಜೊತೆಗೆ ಕಲೆಗೆ, ಕ್ರೀಡೆಗೆ ಪ್ರೋತ್ಸಾಹ ನೀಡುವ ಮೂಲಕ ಪ್ರತಿಭೆಗಳನ್ನು ಅರಳಿಸಿ ಅವರ ವ್ಯಕ್ತಿತ್ವ ವಿಕಸನಗೊಳಿಸುವತ್ತ ಬೆಳೆಸುತ್ತಿದೆ ಮಾತ್ರವಲ್ಲ ಕಾಲೇಜಿನ ಪ್ರಾಧ್ಯಾಪಕ ಪ್ರೊ|ಪ್ರಶಾಂತ್ ರೈರವರ ನೇತೃತ್ವದಲ್ಲಿ ಯಕ್ಷಕಲಾ ಕೇಂದ್ರದ ಮೂಲಕ ವಿದ್ಯಾರ್ಥಿಗಳಿಗೆ ಕಲೆಯ ಬಗ್ಗೆ ಪ್ರೋತ್ಸಾಹ ನೀಡುತ್ತಿದೆ ಎಂದ ಅವರು ಪಟ್ಲ ಸತೀಶ್ ಶೆಟ್ಟಿರವರ ಸ್ವರಮಾಧುರ್ಯಕ್ಕೆ ಇಡೀ ವಿಶ್ವವೇ ಮಾರು ಹೋಗಿದ್ದು ಇದುವೇ ಅವರ ಶ್ರೇಷ್ಟತೆ ಹಾಗೂ ಸಿರಿತನವಾಗಿದೆ. ಪಟ್ಲ ಸತೀಶ್ರವರು ಕಲಾವಿದರಿಗೆ ಜೀವವಿಮೆ, ಹಿರಿಯ ಕಲಾವಿದರಿಗೆ ಮಾಸಾಶನ, ಅಶಕ್ತರಿಗೆ ಮನೆ ನಿರ್ಮಾಣ, ವೈದ್ಯಕೀಯ ನೆರವು ಹೀಗೆ ಸಮಾಜಮುಖಿ ಕಾರ್ಯಗಳನ್ನು ಎಲ್ಲರ ಸಹಕಾರದೊಂದಿಗೆ ಮಾಡುತ್ತಾ ಬಂದಿದ್ದು ಕಲೆ ಹಾಗೂ ಸಮಾಜ ಸೇವೆ ಜೊತೆ ಜೊತೆಯಾಗಿ ಸಾಗಲಿ ಎಂದರು.

ಕಲಾವಿದರ ಆರ್ಥಿಕ ಬೆಂಬಲಕ್ಕೆ ರೂ.25 ಕೋಟಿ-ಸವಣೂರು ಸೀತಾರಾಮ ರೈ:
ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ಸೀತಾರಾಮ ರೈ ಸವಣೂರು ಮಾತನಾಡಿ, ಹತ್ತು ವರ್ಷದ ಹಿಂದೆ ಹೋದ್ರೆ ಜನಪದ ಕ್ರೀಡೆಗಳಾದ ಯಕ್ಷಗಾನ ಹಾಗೂ ಕಂಬಳ ಮುಂದೆ ನಡೆಯುವುದಿಲ್ಲ ಎಂಬ ಜಿಜ್ಞಾಸೆಯಿತ್ತು. ಆದರೆ ಪಟ್ಲ ಸತೀಶ್ರವರ ಆಗಮನದಿಂದ ಇಂದು ಯಕ್ಷಗಾನವು ಪ್ರೇಕ್ಷಕರ ಪ್ರೋತ್ಸಾಹದಿಂದ ನಿರಾತಂಕವಾಗಿ ನಡೆಯುತ್ತಿದೆ ಹಾಗೆಯೇ ಕಂಬಳ ಕೂಡ. ಮಳೆಗಾಲದ ಮೂರು ತಿಂಗಳು ಕಲಾವಿದರಿಗೆ ಕಷ್ಟ ಕಾರ್ಪಣ್ಯದ ತಿಂಗಳಾದರೂ, ಪಟ್ಲರವರು ಪಟ್ಲ ಫಂಡೇಶನ್ ಮೂಲಕ ಕಲಾವಿದರಿಗೆ ಭದ್ರತೆ ಒದಗಿಸಿದ ಕೀರ್ತಿ ಹೊಂದಿದ್ದಾರೆ ಎಂದ ಅವರು ವಿಶ್ವದಲ್ಲಿ ೩೮ ಯಕ್ಷಧ್ರುವ ಘಟಕಗಳು ಕಾರ್ಯಾಚರಿಸುತ್ತಿದ್ದು, ಕಳೆದ ಎಂಟು ವರ್ಷದಲ್ಲಿ ಸುಮಾರು ಹತ್ತು ಕೋಟಿ ಹಣವನ್ನು ಕಲಾವಿದರಿಗೆ ಇನ್ಸೂರೆನ್ಸ್, ನಿವೃತ್ತಿ ವೇತನ ನೀಡುವ ಮೂಲಕ ಮನೆಮಾತಾಗಿದ್ದಾರೆ. ಕಲಾವಿದರ ಬೆಂಬಲಕ್ಕೋಸ್ಕರ ರೂ.೧೫ ಕೋಟಿ ಫಂಡ್ ಸಂಗ್ರಹಿಸೋಣ ಎಂದಿದ್ದಕ್ಕೆ ಅದೇ ದಿನ ಕಲಾ ಪೋಷಕರು ರೂ.೧೪ ಕೋಟಿ ಸಂಗ್ರಹದ ವಾಗ್ದಾನ ಮಾಡಿರುವ ಹಿನ್ನೆಲೆಯಲ್ಲಿ ನಾವು ೧೫ ಕೋಟಿ ಬದಲು ರೂ.೨೫ ಕೋಟಿಗೆ ಏರಿಸಿದ್ದೇವೆ ಎಂದು ಅವರು ಹೇಳಿದರು.

ಫಿಲೋಮಿನಾ ವಿದ್ಯಾಸಂಸ್ಥೆ ಯಕ್ಷಗಾನ ಕಲೆಗೆ ನಿರಂತರ ಪ್ರೋತ್ಸಾಹ-ಜೈರಾಜ್ ಭಂಡಾರಿ:
ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ನಿಕಟಪೂರ್ವ ಅಧ್ಯಕ್ಷ ಹಾಗೂ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಜೈರಾಜ್ ಭಂಡಾರಿ ಮಾತನಾಡಿ, ಎರಡು ದಶಕದಿಂದ ನನಗೂ ಮತ್ತು ಫಿಲೋಮಿನಾ ಕಾಲೇಜಿಗೂ ಅವಿನಾಭಾವ ಸಂಬಂಧ. ಫಿಲೋಮಿನಾ ವಿದ್ಯಾಸಂಸ್ಥೆಯು ಶಿಕ್ಷಣದೊಂದಿಗೆ ನಾಡಿನ ಶ್ರೇಷ್ಟ ಕಲೆಯಾಗಿರುವ ಯಕ್ಷಗಾನಕ್ಕೆ ಬಹಳ ಪ್ರಾಮುಖ್ಯತೆ ನೀಡುತ್ತಾ ಬಂದಿದೆ. ೨೦೧೮ರಲ್ಲಿನ ಕಾಲೇಜಿನ ವಜ್ರಮಹೋತ್ಸವದ ಸಂದರ್ಭ ನಾನು ಮತ್ತು ನಮ್ಮ ಸ್ನೇಹಿತರು ಯಕ್ಷಗಾನದ ಹಾಡೊಂದಕ್ಕೆ ಕುಣಿದದ್ದಿದೆ ಎಂದ ಅವರು ಐವತ್ತು ವರುಷದ ಹಿಂದೆ ನಾನು ಈ ಕಾಲೇಜಿನಲ್ಲಿ ಪದವಿಯನ್ನು ಪಡೆದಿದ್ದು ಮಾತ್ರವಲ್ಲ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿಯೂ ಸೇವೆ ನೀಡಿದ ತೃಪ್ತಿ ನನಗಿದೆ ಎಂದರು.

ಅನಾರೋಗ್ಯ ಮನವಿ-ಸಹಾಯಧನ:
ಕಳೆದ ಹಲವಾರು ವರ್ಷಗಳಿಂದ ದೈವಾರಾಧನೆಗೆ ಸಂಬಂಧಪಟ್ಟ ಕಾರ್ಯಕ್ರಮಗಳಲ್ಲಿ ವಾದ್ಯ ನುಡಿಸುತ್ತಾ ಬಂದಿದ್ದು ಇದೀಗ ಅನಾರೋಗ್ಯದಿಂದ ಬಳಲುತ್ತಿರುವ ಸುರೇಂದ್ರ ದೇವಾಡಿಗರವರ ಪತ್ನಿಯು ತನ್ನ ಪತಿಗೆ ನೆರವಾಗಿ ಎಂದು ಪಟ್ಲ ಸತೀಶ್ ಶೆಟ್ಟಿರವರಲ್ಲಿ ಮನವಿ ಪತ್ರವನ್ನು ಹಸ್ತಾಂತರಿಸಿದರು. ಮನವಿ ಪತ್ರಕ್ಕೆ ಸ್ಪಂದಿಸಿದ ಪಟ್ಲ ಸತೀಶ್ ಶೆಟ್ಟಿರವರು ಘಟಕದ ಅಧ್ಯಕ್ಷರೊಂದಿಗೆ ಚರ್ಚಿಸಿ ರೂ.೨೫ ಸಾವಿರ ಮೊತ್ತದ ಧನಸಹಾಯವನ್ನು ತಕ್ಷಣ ನೀಡುವುದೆಂದು ಪಟ್ಲ ಸತೀಶ್ ಶೆಟ್ಟಿರವರು ಈ ಸಂದರ್ಭದಲ್ಲಿ ಘೋಷಿಸಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಅಧ್ಯಕ್ಷ ಕರುಣಾಕರ್ ರೈ ದೇರ್ಲ, ಸಂತ ಫಿಲೋಮಿನಾ ಕಾಲೇಜಿನ ಉಪ ಪ್ರಾಂಶುಪಾಲ ಡಾ|ವಿಜಯಕುಮಾರ್ ಮೊಳೆಯಾರ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಕುಂಞ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಯಕ್ಷಕಲಾ ಕೇಂದ್ರದ ಅಪರ್ಣಾ ಮತ್ತು ರಚನಾ ಪ್ರಾರ್ಥಿಸಿದರು. ಯಕ್ಷಕಲಾ ಕೇಂದ್ರದ ನಿರ್ದೇಶಕ ಹಾಗೂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ ಮುಂಡಾಳಗುತ್ತು ಸ್ವಾಗತಿಸಿದರು. ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ಕೋಶಾಧಿಕಾರಿ ಪ್ರೊ|ದತ್ತಾತ್ರೇಯ ರಾವ್ರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ತೇಜಸ್ವಿ ಭಟ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಆಮೇರಿಕದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಡೇ..
ಫಿಲೋಮಿನಾ ವಿದ್ಯಾಸಂಸ್ಥೆಯ ಹಾಗೆ ಇತರ ಶಿಕ್ಷಣ ಸಂಸ್ಥೆಗಳು ಯಕ್ಷಗಾನ ಕಲೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅಧ್ಯಯನದ ಗೀಳು ಹುಟ್ಟಿಸಬೇಕು. ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಸುಮಾರು ೧೨ ಸಾವಿರ ವಿದ್ಯಾರ್ಥಿಗಳಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ನಿಂದ ಉಚಿತ ಶಿಕ್ಷಣ ನೀಡುತ್ತಿದ್ದೇವೆ. ಕಲೆಗೆ ಜಾತಿ, ಧರ್ಮ, ರಾಜಕೀಯ ಎಂಬುದಿಲ್ಲ ಅದು ಎಲ್ಲರೂ ಪ್ರೀತಿಸುವ ಕಲೆಯಾಗಿದೆ ಎಂಬುದಕ್ಕೆ ಆಮೇರಿಕಾದಲ್ಲಿನ ಎರಡು ನಗರಗಳಲ್ಲಿ ಜುಲೈ ೨೭ ಹಾಗೂ ಆಗಸ್ಟ್ ೧೮ ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಡೇ ಆಚರಣೆಯನ್ನು ಆಚರಿಸುತ್ತಾರೆ.
-ಪಟ್ಲ ಸತೀಶ್ ಶೆಟ್ಟಿ, ಸ್ಥಾಪಕಾಧ್ಯಕ್ಷರು, ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು
ದಿ.ಶ್ರೀಧರ್ ಭಂಡಾರಿರವರಿಗೆ ಅಮೇರಿಕಾದಲ್ಲಿ ಡಾಕ್ಟರೇಟ್ ಪದವಿ..
ಪುತ್ತೂರು ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯನ್ನು ಪುತ್ತೂರು ದಿ.ಶ್ರೀಧರ ಭಂಡಾರಿರವರು 35 ವರ್ಷಗಳಿಂದ ಬೆಳೆಸುತ್ತಾ ಬಂದು ವಿಶ್ವವಿಖ್ಯಾತರಾಗಿ ಬೆಳೆದವರು. ಅವರ ಅಗಲಿಕೆ ಬಳಿಕ ಇದೀಗ ಅವರ ಶಿಷ್ಯರಾದ ಧರ್ಮಸ್ಥಳ ಚಂದ್ರಶೇಖರ್ರವರು ಮುನ್ನೆಡೆಸುತ್ತಾ ಬಂದಿದ್ದು, ಇಂದಿಲ್ಲಿ ನಡೆಯುವ ಯಕ್ಷಗಾನ ವೇದಿಕೆಗೆ ದಿ.ಶ್ರೀಧರ ಭಂಡಾರಿಯವರ ಭಾವಚಿತ್ರವನ್ನಿಟ್ಟಿರುವುದು ಶಿಷ್ಯ ಧರ್ಮಸ್ಥಳ ಚಂದ್ರಶೇಖರ್ರವರ ಪ್ರೀತಿಯನ್ನು ಮೆಚ್ಚುವಂತಹುದು ಮಾತ್ರವಲ್ಲಿ ದಿ.ಶ್ರೀಧರ್ ಭಂಡಾರಿರವರಿಗೆ ಆಮೇರಿಕದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೇಧಾವಿಯಾಗಿದ್ದಾರೆ ಎಂದು ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ರಂಜಿಸಿದ ಯಕ್ಷಗಾನ..
ಪುತ್ತೂರು ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ ಪ್ರಸ್ತುತಿಪಡಿಸುವ ಈ ಯಕ್ಷಗಾನ ಪ್ರಸಂಗದಲ್ಲಿ ಅತಿಥಿ ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿಯವರ ಜೊತೆಗೆ ಪ್ರಶಾಂತ್ ರೈ ಮುಂಡಾಳಗುತ್ತುರವರು ಭಾಗವಹಿಸಲಿದ್ದು ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ರೈ ಕಕ್ಕೆಪದವು ಹಾಗೂ ದೇವರಾಜ್ ಆಚಾರ್ಯ, ಚಂದ್ರಶೇಖರ ಸರಪಾಡಿ(ಚೆಂಡೆ), ಶ್ರೀಧರ ವಿಟ್ಲ(ಮದ್ದಳೆ), ಮಹೇಶ್ ಮಣಿಯಾಣಿ(ಹಾಸ್ಯ), ಪ್ರಶಾಂತ್ ನೆಲ್ಯಾಡಿ, ಸತೀಶ್ ನೀರ್ಕರೆ, ಚರಣ್(ಸ್ತ್ರೀ ವೇಷ), ಮುಮ್ಮೇಳದಲ್ಲಿ ವಸಂತ್ ಗೌಡ ಕಾಯರ್ತಡ್ಕ, ಸದಾಶಿವ ಆಚಾರ್ಯ ವೇಣೂರು, ಚಂದ್ರಶೇಖರ ಧರ್ಮಸ್ಥಳ, ಮೋಹನ್ ಬೆಳ್ಳಿಪ್ಪಾಡಿ, ಹರೀಶ್ ಶೆಟ್ಟಿ ಮಣ್ಣಾಪು, ಬಾಲಕೃಷ್ಣ ಗೌಡ ಮಿಜಾರು, ಗಣೇಶ್ ಶೆಟ್ಟಿ ಅರಳ, ಶಿವಾನಂದ ಬಜಕೂಡ್ಲು, ಶಿವರಾಜ್ ಬಜಕೂಡ್ಲು, ಸತೀಶ್ ಎಡಮೊಗೆ, ಭವಿಷ್ ಭಂಡಾರಿರವರು ಸಹಕರಿಸಿದರು.