ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸುವ ಕುರಿತು ಸೂಕ್ತ ಕ್ರಮಕೈಗೊಳ್ಳುವಂತೆ ಗೃಹ ಸಚಿವ ಡಾ|ಜಿ.ಪರಮೇಶ್ವರ ಅವರು ಡಿಜಿಪಿ/ಐಜಿಪಿ ಅವರಿಗೆ ನಿರ್ದೇಶನ ನೀಡಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈಯವರ ಮನವಿ ಪತ್ರಕ್ಕೆ ಸಚಿವರು ಈ ಮೇಲಿನ ಷರಾ ಬರೆದಿದ್ದಾರೆ.
ಮಹಿಳಾ ಠಾಣೆ ಸ್ಥಳಾಂತರಿಸುವ ಅವಶ್ಯಕತೆಯಿರುವುದಿಲ್ಲ ಎಂದು ಗೃಹ ಸಚಿವರು ಕೆಲ ದಿನಗಳ ಹಿಂದೆಯಷ್ಟೆ ಶಾಸಕರಿಗೆ ಉತ್ತರ ನೀಡಿದ್ದರು. ಅದರ ಮರು ದಿನವೇ ಶಾಸಕ ಅಶೋಕ್ ಕುಮಾರ್ ರೈಯವರು ಗೃಹ ಸಚಿವರನ್ನು ಭೇಟಿಯಾಗಿ ಮಹಿಳಾ ಪೊಲೀಸ್ ಠಾಣೆ ಸ್ಥಳಾಂತರಕ್ಕೆ ಮನವಿ ಸಲ್ಲಿಸಿದ್ದರು. ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿ ಜೀರ್ಣೋದ್ಧಾರಕ್ಕೆ ಈಗಾಗಲೇ ಮಾಸ್ಟರ್ ಪ್ಲಾನ್ ತಯಾರಿಸಲು ಕ್ರಮ ವಹಿಸಲಾಗಿದ್ದು,ಪ್ರಸ್ತುತ ದೇವಸ್ಥಾನದ ಪಶ್ಚಿಮಕ್ಕೆ ಇರುವಂತಹ ಮಹಿಳಾ ಆರಕ್ಷಕ ಠಾಣೆಯು 0.03 ಎಕ್ರೆ ಜಮೀನಲ್ಲಿರುವ ಅನಧಿಕೃತ ಕಟ್ಟಡವಾಗಿದ್ದು, ಸದ್ರಿ ಕಟ್ಟಡಕ್ಕೆ ಯಾವುದೇ ಅನುಮತಿ ಪಡೆದಿರುವುದಿಲ್ಲ.ಕಟ್ಟಡಕ್ಕೆ ಸೆಟ್ ಬ್ಯಾಕ್ ಇರುವುದಿಲ್ಲ ಹಾಗೂ ತೀರಾ ಹಳೆಯ ಕಟ್ಟಡವಾಗಿರುತ್ತದೆ. ಪ್ರಸ್ತುತ ಪುತ್ತೂರು ನಗರಸಭೆಯ ಹೃದಯ ಭಾಗದಲ್ಲಿ ಇಲಾಖಾ ಅಧಿಕಾರಿಗಳು ಸೂಚಿಸಿದ ಹಾಗು ಜಿಲ್ಲಾ ಪೊಲೀಸ್ ಇಲಾಖೆಯ ಜಿಲ್ಲಾ ವರಿಷ್ಟಾಧಿಕಾರಿಗಳ ಪತ್ರದನ್ವಯ ಪುತ್ತೂರು ಕಸಬದ ಸ.ನಂ.124/5ರಲ್ಲಿ 0.08ಎಕ್ರೆ ಖಾಲಿ ಇರುವ ಸರಕಾರಿ ಜಮೀನನ್ನು ಮಹಿಳಾ ಪೊಲೀಸ್ ಠಾಣಾ ಕಟ್ಟಡ ನಿರ್ಮಾಣಕ್ಕೆ ಕಾಯ್ದಿರಿಸಲಾಗಿದೆ. ಪ್ರಸ್ತುತ ನಗರಸಭೆ ವ್ಯಾಪ್ತಿಯಲ್ಲಿ 2 ಎಕ್ರೆ ಸರಕಾರಿ ಜಮೀನು ಲಭ್ಯವಿರುವುದಿಲ್ಲವಾದ್ದರಿಂದ ಈಗಾಗಲೇ ತಾಲೂಕಿನ ಹೃದಯ ಭಾಗದಲ್ಲಿ ಕಾಯ್ದಿರಿಸಿರುವ ಜಮೀನಿನಲ್ಲಿ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸಿ ದೇವಳದ ಮುಂಭಾಗ ಸುಂದರಗೊಳಿಸುವ ಯೋಜನೆಗೆ ಅನುವು ಮಾಡಿಕೊಡಬೇಕಾಗಿ ಹಾಗು ತಾವು ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ರೂ. 1 ಕೋಟಿ ಘೋಷಣೆ ಮಾಡಿದ್ದು, ಈ ತನಕ ಯಾವುದೇ ಅನುದಾನ ಮಂಜೂರು ಆಗಿಲ್ಲ. ಆದ್ದರಿಂದ ತಕ್ಷಣ ರೂ.1 ಕೋಟಿ ಅನುದಾನವನ್ನು ಬಿಡುಗಡೆಗೊಳಿಸುವಂತೆಯೂ ಶಾಸಕ ಅಶೋಕ್ ಕುಮಾರ್ ರೈ ಅವರು ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದು ಇದಕ್ಕೆ ಸ್ಪಂದಿಸಿರುವ ಗೃಹ ಸಚಿವ ಡಾ|ಜಿ.ಪರಮೇಶ್ವರ್, ಈ ಕುರಿತು ಸೂಕ್ತ ಕ್ರಮಕೈಗೊಳ್ಳುವಂತೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.
ಸ್ಥಳಾಂತರದ ಅವಶ್ಯಕತೆ ಇರುವುದಿಲ್ಲ ಎಂದು ಸದನದಲ್ಲಿ ಹೇಳಿಕೆ ನೀಡಿದ್ದರು:
ಪುತ್ತೂರು ಮಹಿಳಾ ಪೊಲೀಸ್ ಠಾಣೆಯನ್ನು ಕಾಯ್ದಿರಿಸಿರುವ ಜಮೀನಿಗೆ ಸ್ಥಳಾಂತರಿಸುವ ಅವಶ್ಯಕತೆ ಇರುವುದಿಲ್ಲ ಎಂದು ಗೃಹ ಸಚಿವ ಡಾ|ಜಿ.ಪರಮೇಶ್ವರ್ ಹೇಳಿದ್ದಾರೆ.ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಕೇಳಿರುವ ಪ್ರಶ್ನೆಗೆ ಗೃಹಸಚಿವರು ಉತ್ತರ ನೀಡಿದ್ದರು.
ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಪುತ್ತೂರು ಮುಖ್ಯ ಭಾಗದಲ್ಲಿ ಜಾಗ ಕಾಯ್ದಿರಿಸಲಾಗಿದ್ದು ಕಾಯ್ದಿರಿಸಿದ ಸ್ಥಳಕ್ಕೆ ಠಾಣೆಯನ್ನು ಸ್ಥಳಾಂತರಿಸದೇ ಇರಲು ಕಾರಣಗಳೇನು ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಗೃಹ ಸಚಿವರು, ಪುತ್ತೂರು ಮಹಿಳಾ ಪೊಲೀಸ್ ಠಾಣೆಯು ಪ್ರಸ್ತುತ ಪುತ್ತೂರು ನಗರದ ಕೇಂದ್ರ ಭಾಗದಲ್ಲಿ ಹಲವಾರು ವರ್ಷಗಳ ಹಿಂದಿನಿಂದಲೂ ಕಾರ್ಯನಿರ್ವಹಿಸುತ್ತಿದೆ. ಕಟ್ಟಡವು ನಗರದಲ್ಲಿ ಇರುವುದರಿಂದ ತುರ್ತಾಗಿ ಮಹಿಳೆ ಮತ್ತು ಮಕ್ಕಳಿಗೆ ತಮ್ಮ ಸಮಸ್ಯೆ ಮತ್ತು ಅಹವಾಲುಗಳನ್ನು ತ್ವರಿತವಾಗಿ ಸಂಪರ್ಕಿಸಿ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಸ್ಥಳವಾಗಿರುತ್ತದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭಕ್ತರು ಜಾಸ್ತಿ ಬರುವುದರಿಂದ ಮತ್ತು ಇನ್ನಿತರ ಸಮಯ ನಗರದಲ್ಲಿ ಕಳ್ಳತನ, ಇನ್ನಿತರ ಅಪರಾಧ ತಡೆಗಟ್ಟಲು ಠಾಣೆಯ ಕಟ್ಟಡವು ಅಲ್ಲಿಯೇ ಇರುವುದು ಸೂಕ್ತವಾಗಿರುತ್ತದೆ. ಪ್ರಸ್ತುತ ಠಾಣೆಯ ಕಟ್ಟಡವು ದೇವಸ್ಥಾನದ ಪಕ್ಕದಲ್ಲಿರುವ ಕಾರಣ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಜನದಟ್ಟಣೆ ಇರುವುದರಿಂದ ಆ ಸಮಯದಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸಲು ಪೊಲೀಸ್ ಅಧಿಕಾರಿ/ಸಿಬ್ಬಂದಿಯವರಿಗೆ ಸಹಕಾರಿಯಾಗಿದದ್ದು ಪ್ರಸ್ತುತ ಸಾರ್ವಜನಿಕರಿಗೆ ಮತ್ತು ದೂರುದಾರರಿಗೆ ಅತ್ಯಂತ ಸುಲಭವಾಗಿ ಠಾಣೆಗೆ ಬರಲು ಮತ್ತು ತಮ್ಮ ಅಹವಾಲುಗಳನ್ನು ಹಾಗೂ ಫಿರ್ಯಾದುಗಳನ್ನು ಸಲ್ಲಿಸಲು ಅನುಕೂಲವಾಗಿರುತ್ತದೆ.
2 ಎಕ್ರೆ ಜಮೀನು ಅಗತ್ಯಎಂದಿದ್ದರು:
ಪೊಲೀಸ್ ಠಾಣೆಗೆ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲು 2 ಎಕ್ರೆ ಜಮೀನು ಬೇಕಾಗಿದ್ದು ಠಾಣೆಯನ್ನು ಬೇರೆ ಜಮೀನಿಗೆ ಸ್ಥಳಾಂತರಿಸಿದಲ್ಲಿ ಪೊಲೀಸ್ ಅಧಿಕಾರಿ/ಸಿಬ್ಬಂದಿಯವರಿಗೆ ಮೂಲಭೂತ ಸೌಕರ್ಯ ಒದಗಿಸಲು ಅಸಾಧ್ಯವಾಗಿರುತ್ತದೆ. ಈ ಕಾರಣಗಳಿಂದ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸಲು ಅನಾನುಕೂಲವಾಗಿರುತ್ತದೆ. ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಕಾಯ್ದಿರಿಸಿರುವ ಜಮೀನು ಕೇವಲ 0.08 ಎಕ್ರೆ ಇರುವುದರಿಂದ ಪೊಲೀಸ್ ಠಾಣೆಯ ಅವಶ್ಯಕತೆಗನುಗುಣವಾಗಿ ಹೊಸ ಕಟ್ಟಡ ನಿರ್ಮಾಣ ಮಾಡಲು ಸ್ಥಳಾವಕಾಶದ ಕೊರತೆ ಇರುವುದರಿಂದ ಠಾಣೆಯನ್ನು ಕಾಯ್ದಿರಿಸಿದ ಜಮೀನಿಗೆ ಸ್ಥಳಾಂತರಿಸುವ ಅವಶ್ಯಕತೆ ಇರುವುದಿಲ್ಲ ಎಂದು ಗೃಹ ಸಚಿವರು ಉತ್ತರ ನೀಡಿದ್ದರು.ಇದರ ಮರು ದಿನವೇ ಶಾಸಕ ಅಶೋಕ್ ಕುಮಾರ್ ರೈಯವರು ಗೃಹ ಸಚಿವರಿಗೆ ಮನವಿ ಸಲ್ಲಿಸಿ, ಮಹಿಳಾ ಪೊಲೀಸ್ ಠಾಣೆ ಸ್ಥಳಾಂತರಕ್ಕೆ ಕ್ರಮ ಮತ್ತು ಈ ಕುರಿತು ಘೋಷಿಸಿರುವ 1 ಕೋಟಿ ರೂ.ಅನುದಾನವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದರು.
ಮಹಿಳಾ ಪೊಲೀಸ್ ಠಾಣೆ ಸ್ಥಳಾಂತರದ ಅವಶ್ಯಕತೆಯಿರುವುದಿಲ್ಲ ಎಂದು ಗೃಹ ಸಚಿವ ಡಾ|ಜಿ.ಪರಮೇಶ್ವರ್ ಅವರು ಸದನದಲ್ಲಿ ಉತ್ತರ ನೀಡಿದ್ದ ಬೆನ್ನಲ್ಲೇ ಶಾಸಕ ಅಶೋಕ್ ಕುಮಾರ್ ರೈ ಅವರು ಗೃಹ ಸಚಿವರಿಗೆ ಲಿಖಿತ ಮನವಿ ಸಲ್ಲಿಸಿ,ಮಹಿಳಾ ಪೊಲೀಸ್ ಠಾಣೆಯನ್ನು ಕಾಯ್ದಿರಿಸಿರುವ ಜಮೀನಿಗೆ ಸ್ಥಳಾಂತರಕ್ಕೆ ಕ್ರಮ ಮತ್ತು ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಘೋಷಿಸಿರುವ 1 ಕೋಟಿ ರೂ.ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ದರು. ಈ ಮನವಿಗೆ ಸ್ಪಂದಿಸಿರುವ ಗೃಹ ಸಚಿವರು,ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.