ಮಕ್ಕಳನ್ನು ಸಂಘದ ಶಾಖೆಗೆ ಕಳುಹಿಸಿ – ಸೋಮನಾಥ ರಾವ್
ಸ್ವಾರ್ಥ ಬಿಟ್ಟು ದೇಶ ಕಟ್ಟಿ – ಡಾ. ಎಂ.ಕೆ.ಪ್ರಸಾದ್
ಸಂಘಟನೆ ಎನೆಂದು ತೋರಿಸಿಕೊಟ್ಟವರು ಡಾ ಎಂ ಕೆ ಪ್ರಸಾದ್ – ಸುಜೀಂದ್ರ ಪ್ರಭು
ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ 58 ನೇ ವರ್ಷದ ಗಣೇಶೋತ್ಸವಕ್ಕೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಕುಂಟಾರು ಗುರುತಂತ್ರಿಯವರು ಶ್ರೀ ಗಣೇಶನ ವಿಗ್ರಹ ಪ್ರತಿಷ್ಠೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಮದ್ಯಾಹ್ನ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ಮಹಾಪೂಜೆ ನೆರವೇರಿಸಿದರು. ಬೆಳಿಗ್ಗೆ ಸಮಿತಿ ಪದಾಧಿಕಾರಿಗಳು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಬಳಿಕ ದೇವಳದ ಎದುರು ಗದ್ದೆಯ ಬೃಹತ್ ಚಪ್ಪರದಲ್ಲಿ ಶ್ರೀ ಗಣೇಶನ ವಿಗ್ರಹ ಪ್ರತಿಷ್ಠೆ ಕಾರ್ಯ ನಡೆಯಿತು.
ಭಗವಧ್ವಜಾರೋಹಣದ ಮೂಲಕ ವಿವಿಧ ಕಾರ್ಯಕ್ರಮಕ್ಕೆ ಚಾಲನೆ:
ಶ್ರೀ ಗಣೇಶನ ವಿಗ್ರಹ ಪ್ರತಿಷ್ಠೆ ಬಳಿಕ ಸಭಾ ವೇದಿಕೆ ಬಳಿ ಭಗವಧ್ವಜಾರೋಹಣವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕ ಸೋಮನಾಥ ರಾವ್ ಅವರು ನೆರವೇರಿಸಿದರು. ಈ ಸಂದರ್ಭ ಗಣೇಶೋತ್ಸ ಸಮಿತಿ ಗೌರವಾಧ್ಯಕ್ಷರಾದ ಡಾ. ಎಂ ಕೆ ಪ್ರಸಾದ್, ರವೀಂದ್ರ ಶೆಟ್ಟಿ ನುಳಿಯಾಲು, ಅಧ್ಯಕ್ಷ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ, ಉಪಾಧ್ಯಕ್ಷರಾದ ವಿಶ್ವನಾಥ ಗೌಡ ಬನ್ನೂರು, ಸುಧೀರ್ ಶೆಟ್ಟಿ, ಪ್ರವೀಣ್ ನಾೖಕ್, ಜೊತೆ ಕಾರ್ಯದರ್ಶಿ ನೀಲಂತ್ ಬೊಳುವಾರು, ಕೋಶಾಧಿಕಾರಿ ಶ್ರೀನಿವಾಸ ಮೂಲ್ಯ, ಮಾಜಿ ಶಾಸಕ ಸಂಜೀವ ಮಠಂದೂರು, ಶಾರದಾ ಭಜನಾ ಮಂದಿರದ ಅಧ್ಯಕ್ಷ ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಬಜರಂಗದಳದ ಹರೀಶ್ ದೋಳ್ಪಾಡಿ, ಉದಯ ಹೆಚ್, ರಾಮಚಂದ್ರ ಕಾಮತ್, ಸಹಜ್ ರೈ ಬಳಜ್ಜ, ಶ್ರೀಕಾಂತ್ ಕಂಬಳಕೋಡಿ, ವಿದ್ಯಾ ಗೌರಿ, ಅಜಿತ್ ರೈ ಹೊಸಮನೆ, ರೂಪೇಶ್, ಕಿರಣ್ ಶಂಕರ್ ಮಲ್ಯ, ವಿಶ್ವನಾಥ ನಾಕ್ ಹಾರಾಡಿ, ಮಾದವ ಪೂಜಾರಿ, ವಿಶ್ವನಾಥ ಕುಲಾಲ್, ಆದಶ್ ಉಪ್ಪಿನಂಗಡಿ, ಪೂವಪ್ಪ, ಸುಜೀರ್ ಕುಮಾರ್ ಶೆಟ್ಟಿ, ಮಲ್ಲೇಶ್ ಆಚಾರ್ಯ, ಚಂದ್ರಶೇಖರ್, ಗೋಪಾಲಕೃಷ್ಣ, ದೇವಿಪ್ರಸಾದ್ ಮಲ್ಯ, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಶ್ರೀಧರ ಪಟ್ಲ, ವಾಟೆಡ್ಕ ಕೃಷ್ಣ ಭಟ್, ದಯಾನಂದ, ನಾಗೇಶ್ ಟಿ ಎಸ್, ರಾಮಕೃಷ್ಣ, ಸಹಿತ ಸಮಿತಿ ಸದಸ್ಯರು ಹಾಗು ಭಕ್ತರು ಉಪಸ್ಥಿತರಿದ್ದರು. ಬೆಳಿಗ್ಗೆ ಪ್ರತಿಷ್ಠೆ ಸಂದರ್ಭ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ ದಂಪತಿ ಮತ್ತು ಗಣಪತಿ ಹೋಮದ ಸಂದರ್ಭ ದಯಾನಂದ ಎ ದಂಪತಿ ಅವರು ಪೂಜೆಯಲ್ಲಿ ಪಾಲ್ಗೊಂಡರು.
ಮಕ್ಕಳನ್ನು ಸಂಘದ ಶಾಖೆಗೆ ಕಳುಹಿಸಿ:
ಭಗವಧ್ವಜಾರೋಹಣದ ಮೂಲಕ ಉತ್ಸವಕ್ಕೆ ಚಾಲನೆ ನೀಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕ ಸೋಮನಾಥ ರಾವ್ ಅವರು ಮಾತನಾಡಿ, ನನ್ನ ಬಂಧುಗಳೆ ನಾವೆಲ್ಲ ಒಂದಾಗಿ ಸೇರಿದ್ದೇವೆ. ಸಂಘಟನೆ ಸಂಸ್ಕಾರಕ್ಕಾಗಿ ನಿಮ್ಮ ಮಕ್ಖಳನ್ನು ಆದಷ್ಟು ಸಂಘದ ಶಾಖೆಗೆ ಕಳುಹಿಸಿ. ನಾನು 6 ವರ್ಷ ಪ್ರಾಯದಲ್ಲೇ ಸಂಘದ ಶಾಖೆಗೆ ಹೋಗುತ್ತಿದ್ದೆ ಎಂದ ಅವರು ಎಲ್ಲರು ತಮ್ಮ ಆರೋಗ್ಯಕ್ಕಾಗಿ ಯೋಗ ಮಾಡಿ ಎಂದರು.
ಸ್ವಾರ್ಥ ಬಿಟ್ಟು ದೇಶ ಕಟ್ಟಿ :
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಎಂ.ಕೆ.ಪ್ರಸಾದ್ ಅವರು ಮಾತನಾಡಿ, ಗಣೇಶೋತ್ಸವ ಎಲ್ಲಾ ಕಡೆ ಇದೆ. ಅದರ ಮುಖ್ಯ ಉದ್ದೇಶ ಪೂಜೆ ಮಾತ್ರವಲ್ಲ. ಸಂಘಟನೆ ಮಾಡುವುದು ಮುಖ್ಯ. ನಮ್ಮ ಹಿಂದುಗಳು ಜಡ ಸ್ವಭಾವದವರು. ಅವರ ಸ್ವಾರ್ಥ ಹೋಗಲಾಡಿಸಬೇಕಾಗಿದೆ ಎಂದ ಅವರು ಹಿಂದುಗಳು ಅಂದಾಗ ತಮ್ಮ ಕರ್ತವ್ಯ ತಿಳಿಯಬೇಕು. ಹಿಂದು ಧರ್ಮವನ್ನು ಒಡೆಯುವ ಪ್ರಯತ್ನ ಮಾಡುವುದಿಲ್ಲ ಎಂಬ ಪ್ರತಿಜ್ಞೆ ಮಾಡಬೇಕು. ಈ ಧರ್ಮ ಇದ್ದರೆ ದೇಶದಲ್ಲಿ ಸರಕಾರ ನಡೆಯುತ್ತದೆ. ಯಾರಲ್ಲೂ ವೈಯುಕ್ತಿಕ ಪ್ರತಿಷ್ಠೆ ಇರಬಾರದು. ನಮ್ಮ ಸೈನಿಕರು ಹಲವು ಯುದ್ಧದಲ್ಲಿ ದೇಶಕ್ಕೆ ವಿಜಯ ತಂದು ಕೊಟ್ಟಿದ್ದಾರೆ. ಅಂತಹ ಸೈನಿಕರು ಇರುವಾಗ ನಮ್ಮೊಳಗೆ ನಾವು ದೇಶಕ್ಕಾಗಿ ಏನು ಮಾಡಿದ್ದೇವೆ ಎಂಬುದು ಮುಖ್ಯ. ಸ್ವಾರ್ಥವನ್ನು ಬಿಟ್ಟು ದೇಶ ಕಟ್ಟಿ. ದೇಶ ಉದ್ದಾರ ಆಗಬೇಕು. ಇವತ್ತು ಗಣೇಶೋತ್ಸವದ ಮೂಲಕ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಮಾಡಿರುವುದು ಸಂಘದ ಅರಿವು ಮೂಡಬೇಕೆಂದು. ಅದು ಯಶಸ್ವಿಯಾಗಿದೆ. ಮಕ್ಕಳು ಹಿಂದು ಧರ್ಮದ ಮನೋಭಾವ ಬೆಳೆಸಬೇಕು. ಉತ್ತಮವಾಗಿ ಕಲಿಯಬೇಕು. ದೊಡ್ಡ ದೊಡ್ಡ ಹುದ್ದೆಗಳಿಗೆ ಹೋಗಬೇಕು. ಆದರೆ ಸ್ವಾರ್ಥವನ್ನು ಬೆಳೆಸಬಾರದು. ಇಲ್ಲಿ ಉತ್ತಮ ಭಾಷಣ ಕಾರರಿಂದ ಹಿಂದುತ್ವದ ಅರಿವು ಪಡೆದು ಸ್ವಾರ್ಥವನ್ನು ಬಿಟ್ಟು ದೇಶವನ್ನು ಕಟ್ಟಿ ಎಂಬುದು ನನ್ನ ಆಶಯ. ಈ ಗಣೇಶನ ಮುಂದೆ ನಿಂತು ಕೈ ಮುಗಿಯುವಾಗ ಸ್ವಾರ್ಥಕ್ಕಾಗಿ ಕೈ ಮುಗಿಯಬೇಡ. ದೇಶಕ್ಕಾಗಿ ಕೈ ಮುಗಿಯಿರಿ ಎಂದರು.
ಕೇಸರಿ ಶಾಲು ತಿರುಗಿಸಿದಾಕ್ಷಣ ಹಿಂದುತ್ವವಲ್ಲ
ಕೆಲವರ ತಲೆಯಲ್ಲಿ ಕೇಸರಿ ಶಾಲು ಹಾಕಿ ಹೋದ ಕೂಡಲೆ ಹಿಂದುತ್ವ. ಅದು ತಪ್ಪು ಕಲ್ಪಣೆ. ಕೇಸರಿ ಶಾಲು ಹಾಕಿ ಅಥವಾ ಅದನ್ನು ತಿರುಗಿಸಿ ಆದರೆ ಇದರಲ್ಲಿ ಅಷ್ಟೇ ಹಿಂದುತ್ವವನ್ನು ಹಾಳು ಮಾಡುವ ಕೆಲಸವೂ ಇದೆ. ಇವತ್ತು ಏನಾಗಿದೆ ಪುತ್ತೂರನ್ನೇ ನೋಡಿ ಆಲೋಚಿಸಿ. ನಮ್ಮೊಳಗೆ ನಾವು ಎರಡು ವಿಭಾಗವಾಗಿ ನಾವು ಹಿಂದುತ್ವ ಕಳೆದು ಕೊಂಡಿದ್ದೇವೆ. ಯಾಕೆಂದು ಯಾರಿಗೂ ಗೊತ್ತಿಲ್ಲ. ಏನು ಹುಚ್ಚು ಹಿಡಿದೆಯೋ ಗೊತ್ತಿಲ್ಲ. ಒಡೆದ ಹಿಂದುತ್ವವನ್ನು ಪುನಃ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ ಎಂದು ಡಾ. ಎಂ.ಕೆ.ಪ್ರಸಾದ್ ಅವರು ಹೇಳಿದರು.
ಸಂಘಟನೆ ಎನೆಂದು ತೋರಿಸಿಕೊಟ್ಟವರು ಡಾ ಎಂ ಕೆ ಪ್ರಸಾದ್:
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾತಂತ್ರ್ಯದ ಕಿಚ್ಚಿನಲ್ಲಿ ಸಂಘಟನೆಗಾಗಿ ಆರಂಭವಾದ ಗಣೇಶೋತ್ಸವ ಪುತ್ತೂರಿನಲ್ಲಿ ಸಾರ್ವಜನಿಕವಾಗಿ ಆಚರಿಸಲಾಗುತ್ತಿತ್ತು. ಸಂಘದ ಹಿರಿಯರ ಆಶಯದಂತೆ ಮತ್ತೆ ಟೌನ್ ಪಕ್ಕದಲ್ಲಿ ಹಿಂದೆ ಇದ್ದ ಲೈಬ್ರೇರಿ ಕಟ್ಟಡದಲ್ಲಿ ಆಚರಿಸಲಾಗುತ್ತಿತ್ತು. ಅಲ್ಲಿಂದ ಮುಂದೆ ಮಹಾಲಿಂಗೇಶ್ವರ ದೇವಸ್ಥಾನದ ಒಳಗೆ ಮತ್ತೆ ಶಾರದಾ ಭಜನಾ ಮಂದಿರ ಬಳಿ ಅಲ್ಲಿಂದ ದೇವಸ್ಥಾನದ ಎದರು ಗದ್ದೆಯಲ್ಲಿ ಇವತ್ತಿನ ತನಕ ನಡೆಯುತ್ತಾ ಬಂದಿದೆ. ಮುಂದಿನ ವರ್ಷ 60ನೇ ವರ್ಷದ ಸಂಭ್ರಮದಲ್ಲಿದ್ದೇವೆ. ಇಲ್ಲಿ ಆಚರಿಸುವ ಗಣೇಶೋತ್ಸವ ಪೂಜೆ ಮಾಡಿ ವಿಸರ್ಜನೆಗೆ ಮಾತ್ರ ಸೀಮಿತವಾಗಿಲ್ಲ. ಸಂಘಟನಾತ್ಮಕ ರೀತಿಯಲ್ಲಿ ನಡೆಯುತ್ತಿದೆ. ಹಿರಿಯರು, ಮಕ್ಕಳನ್ನು ಸೇರಿಸಿಕೊಂಡು ವಿವಿಧ ಸ್ಪರ್ಧೆಗಳನ್ನು ಆಯೋಜಿಸುವುದು, ಧಾರ್ಮಿಕ ಭಾಷಣದ ಮೂಲಕ ಧರ್ಮದ ಅರಿವು ಮೂಡಿಸುತ್ತಾ ಬರುತ್ತಿರುವ ಈ ಗಣೇಶೋತ್ಸವ ನಡೆಯುತ್ತಿದೆ. ಇವತ್ತಿನ ಕಾಲದಲ್ಲಿ ಸಂಘಟನೆ ಮಾಡುವುದು ಸುಲಭವಲ್ಲ. ಈ ನಿಟ್ಟಿನಲ್ಲಿ 1998ರಲ್ಲಿ ಶೋಭಾಯಾತ್ರೆಯಲ್ಲಿ ಚಲಿಸುವ ರಸಮಂಜರಿ ಸೇರಿಸಲಾಯಿತು. ಬಳಿಕ ಬೆಳವಣಿಗೆಯಲ್ಲಿ ಸ್ತಬ್ದಚಿತ್ರಗಳನ್ನು ಶೋಭಯಾತ್ರೆಯಲ್ಲಿ ಜೋಡಿಸಲಾಯಿತು. ಹೀಗೆ ಸಂಘಟನೆಗಾಗಿ ಹಲವಾರು ಕಾರ್ಯಗಳನ್ನು ನಮ್ಮ ಮಾರ್ಗದರ್ಶಕರಾಗಿರುವ ಡಾ. ಎಂ.ಕೆ.ಪ್ರಸಾದ್ ಅವರು ಸಂಘಟನೆ ಏನೆಂದು ತೋರಿಸಿಕೊಟ್ಟಿದ್ದಾರೆ. 59ನೇ ವರ್ಷದ ಗಣೇಶೋತ್ಸವದಲ್ಲಿ ಗೌರವಧ್ಯಕ್ಷರಾಗಿರುವ ರವೀಂದ್ರ ನುಳಿಯಾಲು ಅವರು ಕೂಡಾ ಉತ್ತಮ ಮಾರ್ಗದರ್ಶನ ನೀಡುತ್ತಿದ್ಧಾರೆ. ಮುಂದಿನ ದಿನ ಇನ್ನೂ ಹೆಚ್ಚಾಗಿ ವಿಜ್ರಂಭಣೆಯಿಂದ ನಡೆಯಲಿ ಎಂದು ಹೇಳಿದರು. ಸಮಿತಿ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಳು, ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಭ್ಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಶಿ ಪ್ರಾರ್ಥಿಸಿದರು. ಸಮಿತಿ ಹಿರಿಯ ಸದಸ್ಯ ರಾಮಚಂದ್ರ ಕಾಮತ್ ಸ್ವಾಗತಿಸಿ, ನಾಗೇಶ್ ಟಿ.ಎಸ್ ವಂದಿಸಿದರು. ಸಮಿತಿ ಜೊತೆ ಕಾರ್ಯದರ್ಶಿ ನೀಲಂತ್ ಬೊಳುವಾರು ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಮನ್ವಿತಾ ಕಾಸರಗೋಡು ಅವರಿಂದ ಭಕ್ತಿ ಗಾನಾಮೃತ ನಡೆಯಿತು. ಬಳಿಕ ಗಣಪತಿ ಹವನ, ಮಹಾಪೂಜೆ ಪ್ರಸಾದ ವಿತರಣೆಯ ಸಂದರ್ಭ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಹಸ್ರ ಸಂಖ್ಯೆಯಲ್ಲಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.