ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಮತ್ತು ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆ ಪುತ್ತೂರು ಇದರ ಸಹಯೋಗದೊಂದಿಗೆ ನಿರಂತರ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸೆ.1ರಂದು ಆದಿತ್ಯವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬೊಳ್ವಾರು ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಜರಗಿತು.

ಆರೋಗ್ಯ ಸುಸ್ಥಿತಿಯಲ್ಲಿಡುವಲ್ಲಿ ಆದ್ಯತೆ ಕೊಡಿ-ಡಾ.ಯು.ಪಿ ಶಿವಾನಂದ:
ಮುಖ್ಯ ಅತಿಥಿ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದರವರು ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಮನುಷ್ಯ ತನ್ನ ಅನಿಯಮಿತ ಆರೋಗ್ಯ ಶೈಲಿ, ವ್ಯಾಯಾಮ ಇಲ್ಲದಿರುವಿಕೆ, ನಿರಂತರ ಒತ್ತಡದ ಕೆಲಸದಿಂದ ತನ್ನ ಆರೋಗ್ಯವನ್ನು ನಿಯಂತ್ರಿಸುವಲ್ಲಿ ಎಡವುದೇ ಆರೋಗ್ಯದಲ್ಲಿ ಏರುಪೇರಾಗಲು ಕಾರಣ. ಆದ್ದರಿಂದ ಮನುಷ್ಯ ತನ್ನ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವುದಕ್ಕೆ ಆದ್ಯತೆ ಕೊಡಿ ಎಂದರು.
ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿಯೇ ತಡೆಗಟ್ಟಿ-ಡಾ.ಶ್ರೀಪತಿ ರಾವ್:
ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಹಾಗೂ ರೋಟರಿ ಕ್ಲಬ್ ಪುತ್ತೂರು ನಿಕಟಪೂರ್ವ ಅಧ್ಯಕ್ಷ ಡಾ.ಶ್ರೀಪತಿ ರಾವ್ ಮಾತನಾಡಿ, ಯಾವುದೇ ಕಾಯಿಲೆ ಆಗಲಿ, ಕಾಯಿಲೆಗಳನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿ ಅವನ್ನು ತಡೆಗಟ್ಟುವಿಕೆ ಅಗತ್ಯ. ಪುತ್ತೂರಿನ ಆಸುಪಾಸಿನ ಜನರ ಆರೋಗ್ಯಕ್ಕೆ ನೆರವಾಗಲು ಪ್ರಗತಿ ಆಸ್ಪತ್ರೆಯಲ್ಲಿ ವಿವಿಧ ರೋಗಗಳ ಪತ್ತೆ ಹಚ್ಚುವಿಕೆಗಾಗಿ ಉಚಿತ ವೈದ್ಯಕೀಯ ಪರೀಕ್ಷೆಯನ್ನು ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿ ಮಾಡುತ್ತಾ ಬಂದಿದ್ದು ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ, ಸಮುದಾಯ ಸೇವಾ ವಿಭಾಗದ ನಿರ್ದೇಶಕ ಗುರುರಾಜ್ ಕೊಳತ್ತಾಯ, ಡಾ.ಸುಧಾ ಎಸ್.ರಾವ್, ಪ್ರಗತಿ ಪ್ಯಾರಾ ಮೆಡಿಕಲ್ ಮುಖ್ಯಸ್ಥೆ ಪ್ರೀತಾ ಹೆಗ್ಡೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಲಾಲ್ ಪತ್ ಲ್ಯಾಬ್, ಝೈಡಸ್, ಐವಿಎಫ್, ಸಿಪ್ಲಾ, ಅಕುಮಿಂಟ್ಸ್, ಅಪೆಥೆರೊ, ಅಕ್ಸೆಸಿಸ್ ಕಂಪೆನಿಯ ಸಿಬ್ಬಂದಿಗಳು ಹಾಗೂ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿಗಳು ಸಹಕರಿಸಿದರು.
ರಕ್ತದೊತ್ತಡ, ಬಿ.ಪಿ ಪರೀಕ್ಷೆ, ಮಧುಮೇಹ, ಸಕ್ಕರೆ ಕಾಯಿಲೆ ತಪಾಸಣೆ, ಅಸ್ತಮಾ, ಇಸಿಜಿ, ಸೇವ್ ಹಾರ್ಟ್ ಪರೀಕ್ಷೆ, ಶ್ವಾಸಕೋಶ ಕಾಯಿಲೆ ತಪಾಸಣೆಗಾಗಿ ಸ್ಪೈರೋಮೆಟ್ರಿ ಪರೀಕ್ಷೆ, ಸ್ತನ ಕಾಯಿಲೆ ತಪಾಸಣೆ, ನರ ಸೂಕ್ಷ್ಮತೆ ಪರೀಕ್ಷೆ ಮತ್ತು ಮಕ್ಕಳ ಆರೋಗ್ಯ ತಪಾಸಣೆ ನಡೆಯಿತು.