ಪುತ್ತೂರು: ಕೃಷಿ ಇಲಾಖೆ ಪುತ್ತೂರು ಇದರ ವತಿಯಿಂದ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ಆಶ್ರಯದಲ್ಲಿ 2025-26ರ ಸಾಲಿನ ಬೆಳೆ ಸಮೀಕ್ಷೆ ಕಾರ್ಯಾಗಾರ ಸೆ.17ರಂದು ಮುಂಡೂರು ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆಯ ನಿರ್ದೇಶಕ ಟಿ.ಜಿ ಚೆಲುವ ರಂಗಪ್ಪ, ಮುಂಡೂರು ಗ್ರಾಮ ಆಡಳಿತಾಧಿಕಾರಿ ಉಮೇಶ್ ಕಾವಡಿ ಮಾಹಿತಿ ನೀಡಿದರು.

ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಮಾತನಾಡಿ 2025-26ನೇ ಸಾಲಿನ ಬೆಳೆ ಸಮೀಕ್ಷೆಯಲ್ಲಿ ಇರುವ ಸಮಸ್ಯೆಯನ್ನು ಬಗೆಹರಿಸಲು ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದ್ದು ಕೃಷಿಕರು ಬೆಳೆ ಸಮೀಕ್ಷೆ ಮಾಡಿಸಿಕೊಳ್ಳುವುದರೊಂದಿಗೆ ತಮ್ಮ ಪಹಣಿಯಲ್ಲಿಯೇ ಬೆಳೆ ನಮೂದಿಸಿಕೊಂಡು, ಮುಂದಕ್ಕೆ ಬೆಳೆ ವಿಮೆ ಹಾಗೂ ಬೆಳೆಸಾಲ ಪಡೆದುಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿದರು.
ಕೃಷಿ ಇಲಾಖೆಯ ನಿರ್ದೇಶಕ ಟಿ.ಜಿ ಚೆಲುವ ರಂಗಪ್ಪರವರು ಬೆಳೆ ವಿಮೆ ಬಗ್ಗೆ ಮಾಹಿತಿ ನೀಡಿ ಕೃಷಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಬೆಳೆ ಸಮೀಕ್ಷೆ ಸೆ.೩೦ಕ್ಕೆ ಕೊನೆಗೊಳ್ಳಲಿದ್ದು, ರೈತರು ಕೂಡಲೇ ಬೆಳೆ ಸಮೀಕ್ಷೆದಾರರು ಅಥವಾ ಸ್ವತಃ ಬೆಳೆ ಸಮೀಕ್ಷೆಯನ್ನು ದಾಖಲು ಮಾಡಬೇಕು, ಏನಾದರೂ ಸಮಸ್ಯೆ ಇದ್ದರೆ ಅನ್ನೂ ತಿಳಿಸಬೇಕು ಎಂದು ಅವರು ಹೇಳಿದರು. ಕೃಷಿ ಇಲಾಖೆಯಿಂದ ಸಿಗುವ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದ ಅವರು ರೈತರು ತಮ್ಮ ಕೃಷಿಯಲ್ಲಿ ಸಾವಯವ ಜೈವಿಕ ಗೊಬ್ಬರವನ್ನು ಬಳಕೆ ಮಾಡುವ ಬಗ್ಗೆ ತಿಳಿಸಿದರು. ಗ್ರಾಮ ಆಡಳಿತಾಧಿಕಾರಿ ಉಮೇಶ್ ಕಾವಡಿ ಮಾತನಾಡಿ ಬೆಳೆ ಸಮೀಕ್ಷೆಯಲ್ಲಿ ಸಮಸ್ಯೆ ಇದ್ದರೆ ಅದನ್ನು ಪರಿಹರಿಸಿಕೊಂಡು ನೂರಕ್ಕೆ ನೂರು ಸಮೀಕ್ಷೆ ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು. ಕೃಷಿಕರ ಪರವಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡ ಮುಂಡೂರು ಪ್ರಾ.ಕೃ.ಪ.ಸಹಕಾರ ಸಂಘದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಳೆ ಸಮೀಕ್ಷೆದಾರರಾದ ಚಿದಾನಂದ ಕೆ, ಪ್ರಮೀಳಾ, ಹರ್ಷಿತ್, ಕಾರ್ತಿಕ್, ರಕ್ಷಿತ್ ಮೊದಲಾದವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ನಿರ್ದೇಶಕರಾದ ಸುಧೀರ್ ಕೃಷ್ಣ ಎಂ ಪಡ್ಡಿಲ್ಲಾಯ, ಪದ್ಮಯ್ಯ ಪಿ, ಆನಂದ ಪೂಜಾರಿ ಕೆ, ಕೊರಗಪ್ಪ ಸೊರಕೆ, ನಯನಾ ಗಣೇಶ್ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಶಿವನಾಥ ರೈ ಮೇಗಿನಗುತ್ತು ಸ್ವಾಗತಿಸಿದರು. ಉಪಾಧ್ಯಕ್ಷ ಯಾಕೂಬ್ ಮುಲಾರ್ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು.