ಪುತ್ತೂರು: ಪುತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ರಸ್ತೆಗಳು ನಾದುರಸ್ತಿಯಲ್ಲಿದ್ದು, ವಾಹನ ಸವಾರರು ದುರಸ್ಥಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ರಸ್ತೆಗಳ ದುರಸ್ಥಿ ಬಗ್ಗೆ ರಾಜ್ಯ ಸರಕಾರ ಯಾವುದೇ ಹಣ ಬಿಡುಗಡೆ ಮಾಡದೆ ರಸ್ತೆ ದುರಸ್ಥಿ ಆಗುತ್ತಿಲ್ಲ. ಈ ನಡುವೆ ಗುಂಡಿಗಳನ್ನು ಮುಚ್ಚಲು ಡಾಮಾರು ರಸ್ತೆಗೆ ಮಣ್ಣು ಹಾಕುವ ಪರಿಸ್ಥಿತಿಯನ್ನು ನೋಡಿದಾಗ ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬ ಸಂದೇಶ ನೀಡುತ್ತಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಸಹಜ. ಈ ಸಂದರ್ಭದಲ್ಲಿ ರಸ್ತೆಗಳು ಗುಂಡಿ ಬೀಳುವುದು ಸಹಜ. ನಾದುರಸ್ತಿಯಾದ ರಸ್ತೆಗಳನ್ನು ತಾತ್ಕಾಲಿಕವಾದರೂ ಗುಂಡಿ ಮುಚ್ಚುವ ಕೆಲಸ ಸರಕಾರ, ಸ್ಥಳೀಯಾಡಳಿತ ಸಂಸ್ಥೆಗಳು ಮಾಡಬೇಕು. ಆದರೆ ರಾಜ್ಯ ಸರಕಾರ ಪ್ರಾಕೃತಿಕ ವಿಕೋಪದ ಅಡಿಯಲ್ಲಿ ಯಾವುದೇ ಅನುದಾನ ಕೊಟ್ಟಿಲ್ಲ. ಹಿಂದೆ ಯಾವುದೇ ಸರಕಾರ ಇದ್ದಾಗ ಪ್ರಾಕೃತಿಕ ವಿಕೋಪ ಆದಾಗ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌ನಲ್ಲಿ ಬೇರೆ ಬೇರೆ ಅನುದಾನ ಬರುತ್ತಿತ್ತು. ಸುಮಾರು 1650 ಕಿ.ಮೀ ಗ್ರಾಮೀಣ ರಸ್ತೆಗಳಿದ್ದು, ಇದರಲ್ಲಿ ಸುಮಾರು 99 ಕಿ.ಮೀ ವಾಹನ ಓಡಾಡಕ್ಕೆ ನಾದುರಸ್ತಿಗೊಂಡಿದ್ದು, ಇದಕ್ಕೆ ಸುಮಾರು 8 ಕೋಟಿ ಅನುದಾನ ಬೇಕೆಂದು ಅಧಿಕಾರಿಗಳು ಪ್ರಸ್ತಾವನೆ ಕಳುಹಿಸಿದ್ದಾರೆ. ಆದರೆ ಇಷ್ಟರ ಒಂದು ಚಿಕ್ಕಾಸು ಅನುದಾನವನ್ನು ಸರಕಾರ ಬಿಡುಗಡೆ ಮಾಡಿಲ್ಲ. ಕಳೆದ ಎರಡು ವರ್ಷದಿಂದ ಅನುದಾನವೇ ಬಂದಿಲ್ಲ ಎಂದು ಜಿ.ಪಂ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅದೇ ರೀತಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ತಾಲೂಕಿನಲ್ಲಿ ಸುಮಾರು 124 ಕಿ.ಮೀ 50 ಕಿ.ಮೀ ಬಂಟ್ವಾಳದಲ್ಲಿದೆ. 85 ಕಿ.ಮೀ ರಾಜ್ಯ ಹೆದ್ದಾರಿ ಇದೆ. ಈ ರಸ್ತೆಯಲ್ಲಿ ಶಾಸಕರು ತಕ್ಷಣ ಟೆಂಡರ್ ಆಗಿ ದುರಸ್ಥಿ ಕೆಲಸ ಆಗುತ್ತಿದೆ ಎಂದು ಪತ್ರಿಕೆಯಲ್ಲಿ ಹೇಳಿಕೆ ನೀಡಿದ್ದರು. ಆದರೆ ಈ ಕುರಿತು ನಾನು ಮಾಹಿತಿ ಸಂಗ್ರಹ ಮಾಡಿದ್ದೇನೆ. ಗುಂಡಿಬಿದ್ದ ರಸ್ತೆಗಳಿಗೆ ವರ್ಷಂಪ್ರತಿ ಬರುವ ನಿರ್ವಾಹಣ ವೆಚ್ಚದ ಹಣ ಬಂದಿದೆ ಹೊರತು ಯಾವುದೇ ವಿಶೇಷ ಅನುದಾನ ಬಂದಿಲ್ಲ. ಪುತ್ತೂರು ಉಪ್ಪಿನಂಗಡಿ ರಸ್ತೆಗೆ ನಿರ್ವಾಹಣ ವೆಚ್ಚವಾಗಿ ರೂ.10ಲಕ್ಷ ಬಂದಿದೆ. ಆದರೆ ಈ 10 ಲಕ್ಷದಲ್ಲಿ ಪುತ್ತೂರು ಉಪ್ಪಿನಂಗಡಿ ರಸ್ತೆ ದುರಸ್ಥಿ ಮಾಡಲು ಆಗುತ್ತದೆಯಾ ಎಂದು ಪ್ರಶ್ನಿಸಿದ ಮಾಜಿ ಶಾಸಕರು ಡ್ರೈನ್ ದುರಸ್ಥಿ, ಹುಲ್ಲು ತೆಗೆಯಲು ಮಾತ್ರ ಈ ಹಣ ಬಳಕೆಯಾಗಬಹುದು ಎಂದ ಅವರು ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಸಂಬಂಧಿಸಿ ಚರ್ಚೆ ಆದಾಗ ತಕ್ಷಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಪ್ಯಾಚ್‌ವರ್ಕ್ ಕೆಲಸ ಮಾಡಿದ್ದಾರೆ. ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಹಾದು ಹೋಗುವ ಮಾಣಿ ಮೈಸೂರು ರಸ್ತೆಯಲ್ಲಿ ಯಾವುದೆ ಗುಂಡಿಗಳಿಲ್ಲ. ಅದೇ ರೀತಿ ಎನ್.ಎಚ್.ಐ ಅವರು ಆಗಾಗ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಆದರೆ ರಾಜ್ಯ ಸರಕಾರಕ್ಕೆ ಸಂಬಂಧಿಸಿದ ಪಿಡಬ್ಲ್ಯೂ ಇಲಾಖೆ ಇನ್ನೂ ಕೂಡಾ ಗುಂಡಿ ಮುಚ್ಚುವ ಕೆಲಸ ಮಾಡಿಲ್ಲ. ಗುರುವಾಯನಕೆರೆ, ಉಪ್ಪಿನಂಗಡಿ ಇನ್ನೂ ಗುಂಡಿ ಮುಚ್ಚಿಲ್ಲ. ಗುಂಡಿ ಮುಚ್ಚಲು ಡಾಮರ್‌ರಸ್ತೆಗೆ ಮಣ್ಣು ಹಾಕುತ್ತಿದ್ದಾರೆ. ಡಾಮಾರು ರಸ್ತೆಗೆ ಮಣ್ಣು ಹಾಕುವ ಪರಿಸ್ಥಿತಿ ನೋಡಿದಾಗ ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬ ಸಂದೇಶ ನೀಡುತ್ತಿದೆ. ಗುಂಡಿಗೆ ಮಣ್ಣು ಹಾಕುವ ಬದಲು ತಾತ್ಕಾಲಿಕವಾಗಿ ಕ್ರೆಷರ್ ಹುಡಿ, ಜೆಲ್ಲಿ ಹಾಕಿ ದುರಸ್ಥಿ ಮಾಡಬಹುದಿತ್ತು. ಗುಂಡಿ ಮುಚ್ಚಲು ಕೂಡಾ ಈ ಸರಕಾರಕ್ಕೆ ಯೋಗ್ಯತೆ ಇಲ್ಲ ಎಂದು ಸಂಜೀವ ಮಠಂದೂರು ಆರೋಪ ಮಾಡಿದರು. ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ಶಕ್ತಿ ಕೇಂದ್ರದ ಪ್ರಮುಖರಾಗಿರುವ ನಾಗೇಂದ್ರ ಬಾಳಿಗ, ಶಶಿಧರ್ ನಾಯಕ್ ಉಪಸ್ಥಿತರಿದ್ದರು.
ವಾರದೊಳಗೆ ದುರಸ್ಥಿ ಕಾರ್ಯ ನಡೆಯದಿದ್ದರೆ ಪ್ರತಿಭಟನೆ ಎಚ್ಚರಿಕೆ
ಹದಗೆಟ್ಟ ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ. ಒಂದು ವಾರದೊಳಗೆ ಯಾವುದೆ ದುರಸ್ತಿ ಕಾರ್ಯಗಳು ನಡೆಯದೇ ಇದ್ದರೆ ರಾಜ್ಯ ಹೆದ್ದಾರಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆಯನ್ನು ಮಾಡಿ ರಾಜ್ಯ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸುವ ಕೆಲಸ ಮಾಡುವ ಮೂಲಕ ಹೋರಾಟಕ್ಕೂ ಸಿದ್ದವಾಗಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಅವರು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.