ವ್ಯವಹಾರ ರೂ.2 ಕೋಟಿ 18 ಲಕ್ಷ, ಲಾಭ ರೂ.1ಲಕ್ಷ 57 ಸಾವಿರ, ಡಿವಿಡೆಂಡ್ ಶೇ.10, ಬೋನಸ್ ಲೀ.64 ಪೈಸೆ
ಪುತ್ತೂರು: ಒಳಮೊಗ್ರು ಹಾಲು ಉತ್ಪಾದಕ ಸಹಕಾರಿ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರಕ್ಷಿತ್ ರೈ ಮುಗೇರುರವರು ಅಧ್ಯಕ್ಷತೆಯಲ್ಲಿ ಸೆ.19 ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ರಕ್ಷಿತ್ ರೈ ಮುಗೇರುರವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳೊಂದಿಗೆ ಸಂಘವು ವರದಿ ಸಾಲಿನಲ್ಲಿ 2ಕೋಟಿ 19ಲಕ್ಷದ 697 ರೂಪಾಯಿಗಳ ವ್ಯವಹಾರ ನಡೆಸಿ 1ಲಕ್ಷದ 57 ಸಾವಿರದ 615 ರೂಪಾಯಿಗಳ ನಿವ್ವಳ ಲಾಭವನ್ನು ಗಳಿಸಿಕೊಂಡಿದೆ. ಇದರಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಡ್ ಹಾಗೇ ಲೀಟರ್‌ಗೆ 64 ಪೈಸೆ ಬೋನಸ್ ನೀಡಲಾಗುವುದು ಎಂದು ಅವರು ತಿಳಿಸಿದರು.

ಸಂಘದ ಕಾರ್ಯದರ್ಶಿ ಸುಷ್ಮಾ ಸತೀಶ್ ಕೆ.ರವರು 2024-25 ನೇ ಸಾಲಿನ ವರದಿ ಮಂಡಿಸಿದರು. ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿರವರು ಮಾಹಿತಿ ನೀಡುತ್ತಾ, ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲನ್ನು ನೀಡುವುದು ಅತೀ ಅಗತ್ಯವಾಗಿದ್ದು ಇದರಿಂದ ಸಂಘದ ಅಭಿವೃದ್ಧಿಯೊಂದಿಗೆ ರೈತರಿಗೂ ಹೆಚ್ಚಿನ ಲಾಭಗಳಿಸಲು ಸಾಧ್ಯವಿದೆ. ಒಕ್ಕೂಟದಿಂದ ಉತ್ತಮ ಪೌಷ್ಠಿಕಾಂಶ ಹೊಂದಿರುವ ಆಹಾರ ದೊರೆಯುತ್ತಿದ್ದು ಇದನ್ನು ಪಶುಗಳಿಗೆ ನೀಡುವುದರಿಂದ ಹೆಚ್ಚಿನ ಹಾಲನ್ನು ಪಡೆಯಲು ಸಾಧ್ಯ ಎಂದರು. ಹೈನುಗಾರಿಕೆ ನಡೆಸುವವರಿಗೆ ಒಕ್ಕೂಟದಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದ್ದು ರೈತರ ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು. ಜಾನುವಾರುಗಳಿಗೆ ವಿಮೆ ಮಾಡಿಸಿಕೊಳ್ಳುವುದು ಅತೀ ಅಗತ್ಯ ಎಂದ ಅವರು ವಿಮೆ ಮಾಡಿಸಿಕೊಂಡ ಜಾನುವಾರುಗಳಿಗೆ ಅಳವಡಿಸಿದ ಟ್ಯಾಗ್ ಕಳೆದುಹೋಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಸಂಘಕ್ಕೆ ಕಾರ್ಯದರ್ಶಿ ನೇಮಕದ ಬಗ್ಗೆ ಸದಸ್ಯ ರಾಮಯ್ಯ ಗೌಡ ಮತ್ತು ಮಾಜಿ ಕಾರ್ಯದರ್ಶಿ ಶೇಖರ ರೈ ಕೆ.ರವರು ತಮ್ಮ ಸಲಹೆಗಳನ್ನು ಸೂಚಿಸಿದರು.
ಸಂಘದ ಅಧ್ಯಕ್ಷ ರಕ್ಷಿತ್ ರೈ ಮುಗೇರುರವರು ಮಾತನಾಡಿ, ಎಲ್ಲರ ಸಹಕಾರದಿಂದ ಸಂಘವು ಒಳ್ಳೆಯ ರೀತಿಯಲ್ಲಿ ವ್ಯವಹಾರ ಮಾಡಿಕೊಂಡು ಬಂದಿದ್ದು ಉತ್ತಮ ಲಾಭವನ್ನು ಕೂಡ ಪಡೆದುಕೊಂಡು ಬಂದಿದೆ. ಇದಕ್ಕೆ ಸಂಘದ ಸರ್ವ ಸದಸ್ಯರುಗಳಿಗೆ ಹಾಗೇ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು. ಸಂಘದ ಬೆಳವಣಿಗೆಗೆ ಸದಸ್ಯರ ಸಹಕಾರ ಅತೀ ಅಗತ್ಯ ಎಂದ ಅವರು ಸಂಘದ ಅಭಿವೃದ್ಧಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸುವಂತೆ ಕೇಳಿಕೊಂಡರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ವಸಂತ ಶೆಟ್ಟಿ, ನಿರ್ದೇಶಕರುಗಳಾದ ಸುಧಾಕರ ಶೆಟ್ಟಿ, ಮೋಹನ್‌ದಾಸ ರೈ ಕುಂಬ್ರ, ಕೆ.ದಿನೇಶ್ ರೈ, ವಾರಿಜಾಕ್ಷಿ ಪಿ.ಶೆಟ್ಟಿ, ಅದ್ದು ಯಾನೆ ಅದ್ರಾಮ, ಕರುಣಾಕರ ಶೇಣವ, ಆನಂದ ಕೆ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಪ್ರೇಮಾ ಪ್ರಾರ್ಥಿಸಿದರು. ನಿರ್ದೇಶಕ ಅಶೋಕ್ ಪೂಜಾರಿ ಬೊಳ್ಳಾಡಿ ವಂದಿಸಿದರು.
ಈರೋಡ್ ಹಸು ಸಾಕಾಣಿಗೆ ಒಕ್ಕೂಟದಿಂದ ಪ್ರೋತ್ಸಾಹ
ಈಗಾಗಲೇ ಅತೀ ಹೆಚ್ಚು ಹಾಲು ಕೊಡುವ ತಮಿಳುನಾಡಿನ ಈರೋಡ್ ಹಸುಗಳನ್ನು ಸಾಕಾಣಿಕೆ ಮಾಡಲು ರೈತರಿಗೆ ಒಕ್ಕೂಟದಿಂದ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ವಿಸ್ತರಣಾಧಿಕಾರಿ ಮಾಲತಿಯವರು, ಸುಮಾರು 60 ಸಾವಿರದಿಂದ 1 ಲಕ್ಷ ರೂಪಾಯಿವರೇಗೆ ಬೆಲೆ ಇರುವ ಈರೋಡ್ ಹಸುಗಳನ್ನು ಖರೀದಿಸುವವರು ಇದ್ದರೆ ಒಕ್ಕೂಟದಿಂದ ಉಚಿತವಾಗಿ ಅವರನ್ನು ಈರೋಡ್‌ಗೆ ಕರೆದುಕೊಂಡು ಹೋಗುವ ವ್ಯವಸ್ಥೆಯೂ ಇದೆ ಅಲ್ಲದೆ ಉಚಿತ ವಿಮೆ ಕೂಡ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.

ಅತೀ ಹೆಚ್ಚು ಹಾಲು ಹಾಕಿದವರಿಗೆ ಬಹುಮಾನ
ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕುವ ಸದಸ್ಯರನ್ನು ಬಹುಮಾನ ನೀಡಿ ಗೌರವಿಸಲಾಯಿತು. ಪ್ರಥಮ ಬಹುಮಾನವನ್ನು ಸುಧಾಕರ ಶೆಟ್ಟಿ ಎರ್ಕ ಪಡೆದುಕೊಂಡರೆ ದ್ವಿತೀಯ ಬಹುಮಾನವನ್ನು ದಿನೇಶ್ ಶೆಟ್ಟಿ ಬಡಕ್ಕೋಡಿ ಪಡೆದುಕೊಂಡರು. ಉಳಿದಂತೆ ಸದಸ್ಯರಿಗೆ ಗಿಪ್ಟ್ ಕೂಪನ್ ನೀಡಿ ಪ್ರೋತ್ಸಾಹಿಸಲಾಯಿತು.
‘ ಸಂಘವು 2ಕೋಟಿ 19 ಲಕ್ಷ ರೂಪಾಯಿ ವ್ಯವಹಾರದೊಂದಿಗೆ 1ಲಕ್ಷದ 57 ಸಾವಿರ ನಿವ್ವಳ ಲಾಭವನ್ನು ಪಡೆದುಕೊಂಡು ಒಳ್ಳೆಯ ರೀತಿಯಲ್ಲಿ ಮುಂದುವರಿಯುತ್ತಾ ಇದ್ದು ಇದು ಸರ್ವ ಸದಸ್ಯರ ಹಾಗೂ ಆಡಳಿತ ಮಂಡಳಿಯವರ ಸಹಕಾರದಿಂದ ಸಾಧ್ಯವಾಗಿದೆ. ಸಂಘದ ಅಭಿವೃದ್ದಿಗೆ ಸರ್ವರ ಸಹಕಾರ ಅತೀ ಅಗತ್ಯ’.
ರಕ್ಷಿತ್ ರೈ ಮುಗೇರು, ಅಧ್ಯಕ್ಷರು ಒಳಮೊಗ್ರು ಹಾಲು ಉತ್ಪಾದಕರ ಸಹಕಾರಿ ಸಂಘ