ಪ್ರಜಾಪ್ರಭುತ್ವದ ಮೂರು ಅಂಗಗಳನ್ನು ನಿಯಂತ್ರಿಸುವ ಶಕ್ತಿ ಮಾಧ್ಯಮ ರಂಗಕ್ಕಿದೆ-ಪಾರ್ವತೀಶ ಬಿಳಿದಾಳೆ
ಪುತ್ತೂರು: ಸುವಿಚಾರ ಬಳಗ ಪುತ್ತೂರು, ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ಹಾಗೂ ಸುದ್ದಿ ಸಮೂಹ ಸಂಸ್ಥೆಗಳು ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ತನಿಖಾ ವರದಿ ಮಾಡುವ ಪತ್ರಕರ್ತರು ಎದುರಿಸುವ ಸವಾಲುಗಳು ಕುರಿತ ಸ್ವಾನುಭವ ಮತ್ತು ಸಂವಾದ ಕಾರ್ಯಕ್ರಮ ಸೆ.18ರಂದು ಜಿ.ಎಲ್. ವನ್ ಮಾಲ್ನ ಒಂದನೇ ಮಹಡಿಯಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿ, ಬೆಂಗಳೂರಿನ ಪತ್ರಕರ್ತ ಪಾರ್ವತೀಶ ಬಿಳಿದಾಳೆರವರು ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ರಂಗಕ್ಕೆ ವಿಶೇಷವಾದ ಶಕ್ತಿ ಇದೆ. ಇದು ಪ್ರಜಾಪ್ರಭುತ್ವದ 3 ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗವನ್ನು ನಿಯಂತ್ರಿಸುವ, ಪ್ರಶ್ನಿಸುವ ಶಕ್ತಿಯನ್ನು ಹೊಂದಿದೆ. ಮಾಧ್ಯಮಕ್ಕಿರುವ ಶಕ್ತಿ ಬೇರೆ ಯಾವುದಕ್ಕೂ ಇಲ್ಲ ಎಂದರು. ಮಾಧ್ಯಮಗಳು ಪ್ರಜಾಸತ್ತಾತ್ಮಕ ಮೌಲ್ಯವನ್ನು ಸಮಾಜಕ್ಕೆ ತಿಳಿಸುವ ಕೆಲಸವನ್ನು ಮಾಡಬೇಕು. ಸ್ವತಂತ್ರಪೂರ್ವದಲ್ಲಿ ಮಾಧ್ಯಮ ಸ್ವತಂತ್ರವಾಗಿತ್ತು. ಪ್ರಸ್ತುತ ಮಾಧ್ಯಮಗಳನ್ನು ಕಾರ್ಪೋರೇಟ್ ಶಕ್ತಿಗಳು ನಿಯಂತ್ರಿಸುವ ಹಂತಕ್ಕೆ ಬಂದಿದೆ ಎಂದರು. ಇಂದು ಪತ್ರಕರ್ತ ತನಿಖಾ ವರದಿ ಮಾಡುವಾಗ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ತನಿಖಾ ಪತ್ರಿಕೋದ್ಯಮ ಪತ್ರಕರ್ತನ ವಿವೇಚನೆ ಆಗಿದೆ. ಪತ್ರಕರ್ತನಾದವನಿಗೆ ಯಾವುದೇ ಪ್ರಕರಣದ ತನಿಖೆಯ ಬಗ್ಗೆ ಯೋಚನೆ ಮಾಡುವ ಶಕ್ತಿ ಇರಬೇಕು ಎಂದ ಅವರು ಮಾಧ್ಯಮಗಳು ಜನಸಾಮಾನ್ಯರ ಬದ್ಧತೆಯನ್ನು ಎತ್ತಿಹಿಡಿಯಬೇಕು ಎಂದರು.

ಜಿಎಲ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಮಾತನಾಡಿ, ಪತ್ರಕರ್ತರು ಸಮಾಜವನ್ನು ತಿದ್ದುವ ಕೆಲಸವನ್ನು ಮಾಡುವವರು. ಪತ್ರಿಕೋದ್ಯಮ ಹಾಗೂ ಪತ್ರಕರ್ತರಿಗೆ ಶಕ್ತಿ ಇದೆ ಎಂದು ಹೇಳಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಸುವಿಚಾರ ಬಳಗದ ಸಂಚಾಲಕ ಪ್ಯಾಟ್ರಿಕ್ ಸಿಪ್ರಿಯಾನ್ ಸ್ವಾಗತಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಧರ್ ರೈ ಕೋಡಂಬು ಹಾಗೂ ಮಾಜಿ ಅಧ್ಯಕ್ಷೆ ಶೈಲಜಾ ಸುದೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಕೀಲೆ ಹೀರಾ ಉದಯ್ ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿದರು. ಕರ್ನಾಟಕ ಪತ್ರಕರ್ತರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಕಾಂತ್ ರೈ ಅನಿಕೂಟೇಲು ವಂದಿಸಿದರು. ಸುವಿಚಾರ ಬಳಗ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯರು ಹಾಗೂ ವಿವೇಕಾನಂದ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.