ಮಾತೃ ಭಾಷೆಯನ್ನು ಪ್ರೀತಿಸುತ್ತಲೇ ಹಿಂದಿ ಭಾಷೆಯನ್ನೂ ಕಲಿಯೋಣ – ಡಾ. ಡಿಂಪಲ್
ಪುತ್ತೂರು: ನಮ್ಮ ದೇಶದೆಲ್ಲಡೆ ಹಿಂದೀ ದಿವಸ ಎಂದು ಆಚರಿಸಲಾಗುತ್ತದೆ. 1949 ಸೆಪ್ಟೆಂಬರ್ 14ರಂದು ಹಿಂದೀ ಭಾಷೆಯನ್ನು ರಾಜ್ಯ ರಾಜ್ಯಗಳ ನಡುವಿನ ಸಂವಹನ ಭಾಷೆಯಾಗಿ ಮತ್ತು ಕೇಂದ್ರ ಸರಕಾರೀ ಕಾರ್ಯಾಲಯಗಳಲ್ಲಿ ಬಳಸಹುದಾದ ಅಧೀಕೃತ ಭಾಷೆಯಾಗಿ ಘೋಷಿಸಲಾಯಿತು. ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ವರ್ಷಂಪ್ರತಿಯಂತೇ ಈ ವರ್ಷವೂ ಹಿಂದಿ ದಿವಸ ಆಚರಿಸಲಾಯಿತು ಎಂದು ಸಂತ ಫಿಲೋಮಿನಾ ಕಾಲೇಜಿನ ಹಿಂದಿ ಭಾಷಾ ಪ್ರಾಧ್ಯಾಪಕ ಡಾ. ಡಿಂಪಲ್ ಫರ್ನಾಂಡಿಸ್ ಹೇಳಿದರು.
ಅವರು ಸೆ.14ರಂದು ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಹಿಂದಿ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಜಗತ್ತಿನಲ್ಲೇ ಹೆಚ್ಚು ಮಾತನಾಡಲು ಬಳಸುವ ಭಾಷೆಗಳಲ್ಲಿ ಮೂರನೇ ಸ್ಥಾನ ಹಿಂದಿಯದು, ನಮ್ಮ ದೇಶದಲ್ಲಿ ಅತಿ ಹೆಚ್ಚು ಜನರು ಬಳಸುವ ಅರ್ಥ ಮಾಡಿಕೊಳ್ಳುವ ಭಾಷೆ ಹಿಂದಿ, ನಮಗೆಲ್ಲಾ ಗಬ್ಬರಸಿಂಗ ಅಮಿತಾಭ ಬಚ್ಚನರಂತಹ ಮೆಚ್ಚಿನ ನಟರ ಮನರಂಜನಾ ಜಗತ್ತನ್ನು ತೆರೆದಿಟ್ಟ ಭಾಷೆ ಹಿಂದಿ, ಜಾಹಿರಾತುಗಳ ಭಾಷೆ ಹಿಂದಿ, ನಮಗೆ ಸದಾ ಸ್ಪೂರ್ತಿಯಾಗಿರುವ “ಭಾರತ ಮಾತಾ ಕೀ ಜೈ’ ಘೋಷಣೆಯ ಭಾಷೆ ಹಿಂದಿ, ಹೀಗೆ ಈ ಭಾಷೆ ನಮ್ಮ ಹೃದಯಕ್ಕೆ ಸದಾ ಹತ್ತಿರವಾಗಿದೆ. ಹಾಗೆಂದು ನಮ್ಮ ಮಾತೃ ಭಾಷೆಗಿಂತ ನಮಗೆ ಬೇರೆ ಭಾಷೆ ಮುಖ್ಯವಲ್ಲ. ನಾವು ನಮ್ಮ ತಾಯುಡಿಯನು ಪ್ರೀತಿಸುತ್ತ, ಅಪ್ಪಿಕೊಳುತ ಬಹುಜನರ ಭಾಷೆಯಾದ ಹಿಂದೀ ಭಾಷೆಯನ್ನೂ ಕಲಿಯೋಣ ಎಂದರು.
ಹಿಂದಿ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ನಿಬಂಧ ಲೇಖನ, ನೌಕರ ವರ್ಗದವರಿಗೆ ಹಿಂದೀ ಬರಹ ಮತ್ತು ಸಾಮಾನ್ಯ ಜ್ಞಾನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಶಾಲಾ ಪರೀಕ್ಷೆಗಳು ನಡೆಯುತ್ತಿದ್ದರೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೂ, ಪೋಷಕರು ಭಾಗವಹಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಡಾ. ದಿನಕರ ಅಡಿಗ ಹಿಂದೀ ದಿನದ ಶುಭಾಶಯ ಕೋರಿ ಹಿಂದಿ ಭಾಷೆಯನ್ನು ಅದರೊಂದಿಗೇ ಬಳಸಿ ಬೆಳೆಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಭಾಗ್ಯ, ಡಾ. ವೀಣಾ ಅವರು ಹಿಂದೀ ಕವಿತೆಯನ್ನು ವಾಚಿಸಿದರು. ಶೃತಿ ಹಾಡಿದರು. ಡಾ. ರಘುರಾಮ ಹಿಂದಿ ದಿನದ ಸಂದೇಶ ವಾಚಿಸಿದರು. ಡಾ. ರಾಜಶೇಖರ ಸ್ವಾಗತಿಸಿದರು, ಡಾ. ಜ್ಯೋತಿ ವಂದಿಸಿದರು.