ಪುತ್ತೂರು: ಕೆದಂಬಾಡಿ ಗ್ರಾಮದ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀ ರಾಮ ಮಂದಿರದಲ್ಲಿ ನವರಾತ್ರಿ ಉತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೆ.22ರಿಂದ ಆರಂಭಗೊಂಡು ಸೆ.30ರ ತನಕ ನಡೆಯಲಿದ್ದು, ಸೆ.22ರಂದು ಪ್ರಗತಿಪರ ಕೃಷಿಕ ಕೊಡಂಕಿರಿ ಚಂದ್ರಹಾಸ ರೈಯವರು ದೀಪ ಪ್ರಜ್ವಲನೆಯ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು.

ಪ್ರತಿ ದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾಂಸ್ಕೃತಿಕ ವೈಭವಕ್ಕೆ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಕುಮಾರ್ ರೈ ದೇರ್ಲರವರು ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಿದರು. ಸೆ.22ರಂದು ರಾತ್ರಿ ಮುಂಡಾಳಗುತ್ತು ಸಂಜೀವಿ ವಿಠಲ ರೈ, ಮಾಣಿಪ್ಪಾಡಿರವರ ಭಜನಾ ಸೇವೆ, ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀ ರಾಮ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.

ಶ್ರೀ ಕೃಷ್ಣ ಕಲಾಕೇಂದ್ರ ವೀರಮಂಗಲ ಇದರಿಂದ`ಭಕ್ತಿಪ್ರಧಾನ ನೃತ್ಯರೂಪಕ ಮಕರಜ್ಯೋತಿ” ಪ್ರದರ್ಶನಗೊಂಡಿತು. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಊರ ಪರವೂರ ನೂರಾರು ಭಕ್ತಾಧಿಗಳು ಆಗಮಿಸಿ ಅನ್ನಪ್ರಸಾದ ಸ್ವೀಕರಿಸಿದರು. ಶ್ರೀರಾಮ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ರಾಘವ ಗೌಡ ಕೆರೆಮೂಲೆ, ಪ್ರ.ಕಾರ್ಯದರ್ಶಿ ಅಗರಿ ಯಶೋಧರ ಚೌಟ ಪಟ್ಟೆತ್ತಡ್ಕ, ಕೋಶಾಧಿಕಾರಿ ಮುಂಡಾಳಗುತ್ತು ಮೋಹನ ಆಳ್ವ, ಶ್ರೀ ರಾಮ ಭಜನಾ ಸಮಿತಿಯ ಅಧ್ಯಕ್ಷ ವಿನೋದ್ ಕುಮಾರ್ ಕೋಡಿಯಡ್ಕ, ಕಾರ್ಯದರ್ಶಿ ನಿತೇಶ್ ರೈ ಕೋರಂಗ ಹಾಗೂ ಆಡಳಿತ ಸಮಿತಿ ಮತ್ತು ಭಜನಾ ಸಮಿತಿಯ ಸರ್ವ ಸದಸ್ಯರುಗಳು, ಭಕ್ತಾಧಿಗಳು ಭಾಗವಹಿಸಿದ್ದರು.

ಇಂದು ಶ್ರೀ ಕ್ಷೇತ್ರದಲ್ಲಿ ಸೆ.23ರಂದು ರಾತ್ರಿ 7ರಿಂದ ಭಜನಾ ಸೇವೆ. ರಾತ್ರಿ 8.30ರಿಂದ “ನೃತ್ಯಾರ್ಪಣಂ” ವಿದುಷಿ ಕು| ಅಭಿಜ್ಞಾ ಮತ್ತು ಶಿಷ್ಯವೃಂದ ನಾಟ್ಯಾಭಿಯೋಗಿ ನೃತ್ಯಶಾಲೆ ತಿಂಗಳಾಡಿ ಇವರಿಂದ ನಡೆಯಲಿದೆ.