ನಾಳೆ(ಅ.8) : ಬೆಟ್ಟಂಪಾಡಿ ಪ್ರಿಯದರ್ಶಿನಿ ಬೆಳ್ಳಿಹಬ್ಬ ಕಾಮಗಾರಿಗಳಿಗೆ ಶಂಕುಸ್ಥಾಪನೆ

0

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧೀನ ಸಂಸ್ಥೆಯಾದ ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯು ಸ್ಥಾಪನೆಯಾಗಿ 25 ವರ್ಷಗಳನ್ನು ಪೂರೈಸುತ್ತಿದ್ದು, ಬೆಳ್ಳಿಹಬ್ಬದ ಸಲುವಾಗಿ ವಿವಿಧ ಮೂಲಭೂತ ಅವಶ್ಯಕ ವ್ಯವಸ್ಥೆಗಳಿಗೆ ಕಾಮಗಾರಿಗಳು ನಡೆಯಲಿವೆ. ಇದರ ಶಂಕುಸ್ಥಾಪನೆ ಸಮಾರಂಭವು ಅ. 8 ರಂದು ಶಾಲಾ ಸಭಾಂಗಣದಲ್ಲಿ ನಡೆಯಲಿದೆ. 

ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು ವಹಿಸಲಿದ್ದಾರೆ. ಸಭಾಂಗಣಕ್ಕೆ ಶಂಕುಸ್ಥಾಪನೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಸಭಾ ವೇದಿಕೆಗೆ ಶಂಕುಸ್ಥಾಪನೆಯನ್ನು ದ.ಕ. ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬೃಜೇಶ್ ಚೌಟ, ಸಭಾಂಗಣದ ಇಂಟರ್‌ಲಾಕ್ ಅಳವಡಿಕೆಗೆ ಶಂಕುಸ್ಥಾಪನೆಯನ್ನು ಬೆಂಗಳೂರಿನ ಸುರಕ್ಷಾ ಕಾರ್ ಕೇರ್ ಪ್ರೈ.ಲಿ. ನ ಮ್ಯಾನೇಜಿಂಗ್ ಡೈರೆಕ್ಟರ್ ಬಿ.ಪಿ. ರಾಮ್‌ಪ್ರಸಾದ್ ರೈ ಹಾಗೂ ಆವರಣ ಗೋಡೆಗೆ ಶಂಕುಸ್ಥಾಪನೆಯನ್ನು ಬೆಂಗಳೂರಿನ ಫ್ರೆಟಸ್ ಫೋಕ್ಸ್ ಇಂಡಿಯಾ ಪ್ರೈ. ಲಿ. ನ ಮ್ಯಾನೇಜಿಂಗ್ ಡೈರೆಕ್ಟರ್ ಬಾಲಕೃಷ್ಣ ರೈ ನರೈಮಾರ್ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಅಕ್ಷಯ ಕಾಲೇಜು ಆಡಳಿತ ನಿರ್ದೇಶಕ ಜಯಂತ ನಡುಬೈಲು, ಪ್ರಸಾದ್ ಇಂಡಸ್ಟ್ರೀಸ್ ನ ಮ್ಹಾಲಕ ಶಿವಪ್ರಸಾದ್ ಶೆಟ್ಟಿ, ಪುತ್ತೂರು ಮಹಾವೀರ ಆಸ್ಪತ್ರೆಯ ವೈದ್ಯರಾದ ಡಾ. ಸುರೇಶ್ ಪುತ್ತೂರಾಯ, ಎಂಆರ್‌ಪಿಎಲ್ ನ ಸೀತಾರಾಮ ರೈ ಕೈಕಾರ ರವರು ಭಾಗವಹಿಸಲಿದ್ದಾರೆ ಎಂದು ಬೆಳ್ಳಿಹಬ್ಬ ಸಮಿತಿಯ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಹಾಗೂ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ಬೆಳ್ಳಿಹಬ್ಬದ ಯೋಚನೆ – ಯೋಜನೆಗಳು
ಬೆಳ್ಳಿಹಬ್ಬದ ಸವಿನೆನಪಿನ ಸಲುವಾಗಿ ಸಂಸ್ಥೆಗೆ ಅತೀ ಅವಶ್ಯಕವಾದ ಮಕ್ಕಳ ಕಲಿಕೆ, ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾಗಿ ಭೌತಿಕ ವ್ಯವಸ್ಥೆಗಳ ಜೋಡಣೆಗೆ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷರಾಗಿ ಹಲವು ಸಾಮಾಜಿಕ, ಧಾರ್ಮಿಕ ಸಂಸ್ಥೆಗಳ ಮುಂದಾಳತ್ವ ವಹಿಸಿ ಅಭೂತಪೂರ್ವ ಕೆಲಸ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಅಪಾರ ಅನುಭವವಿರುವ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರೂ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರೂ ಆಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ರವರನ್ನು ಆಯ್ಕೆ ಮಾಡಿ ಅವರ ನೇತೃತ್ವದಲ್ಲಿ ಕಾರ್ಯಾನುಷ್ಠಾನಕ್ಕಾಗಿ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ  ಯೋಜನೆ ರೂಪಿಸಲಾಗಿದೆ. 

ವಿದ್ಯಾಭಿಮಾನಿಗಳ ಸಹಕಾರದ ನಿರೀಕ್ಷೆಯಲ್ಲಿದ್ದೇವೆ

ಶಶಿಕುಮಾರ್ ರೈ ಬಾಲ್ಯೊಟ್ಟು
ಅಧ್ಯಕ್ಷರು, ಬೆಳ್ಳಿಹಬ್ಬ ಸಮಿತಿ


ಗ್ರಾಮೀಣ ಭಾಗದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣದ ಜೊತೆಗೆ ಸಂಸ್ಕೃತಿಯ ಕಲಿಕೆಯೊಂದಿಗೆ ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಪರಿಕಲ್ಪನೆಯನ್ನು ಹೊಂದಿ ಸಾಗುತ್ತಿರುವ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಬೆಳ್ಳಿಹಬ್ಬದ ಮುಂದಾಳತ್ವ ದೊರೆತಿದೆ.   ಪ್ರಮುಖವಾಗಿ ಬೃಹತ್  ಸಭಾಂಗಣ ನಿರ್ಮಾಣ, ಸಭಾ ವೇದಿಕೆ, ಇಂಟರ್‌ಲಾಕ್ ಅಳವಡಿಕೆ ಹಾಗೂ ಆವರಣ ಗೋಡೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ವಿದ್ಯಾಭಿಮಾನಿಗಳು ಹಾಗೂ ಪೋಷಕರು ಈ ಯೋಜನೆಯ ಯಶಸ್ಸಿಗೆ ಸರ್ವ ರೀತಿಯಲ್ಲಿ ಸಹಕರಿಸುವಂತೆ ಈ ಮೂಲಕ ವಿನಂತಿಸುತ್ತೇವೆ.

LEAVE A REPLY

Please enter your comment!
Please enter your name here