ಬೆಂಗಳೂರು: ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷರಾಗಿ ಪುತ್ತೂರು ಮೂಲದ ಡಾ. ಗಿರಿಧರ ಕಜೆ 11ನೇ ಬಾರಿಗೆ ಸರ್ವಾನುಮತದಿಂದ ಪುನರಾಯ್ಕೆಯಾದರು.
ಮಲ್ಲೇಶ್ವರದ ಹವ್ಯಕ ಭವನದಲ್ಲಿ ನಡೆದ ಅಖಿಲ ಹವ್ಯಕ ಮಹಾಸಭೆಯ 82ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ನಾನಾ ಪ್ರಾಂತ್ಯಗಳ 16 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲಾ 16 ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ನಡೆಯಿತು. ಬಳಿಕ ನಿರ್ದೇಶಕರು ಅಧ್ಯಕ್ಷರನ್ನು ಆಯ್ಕೆ ಮಾಡಿದರು.
ಉಪಾಧ್ಯಕ್ಷರಾಗಿ ಆರ್.ಎಂ. ಹೆಗಡೆ ಬಾಳೇಸರ, ಶ್ರೀಧರ ಜೆ. ಭಟ್ಟ ಕೆಕ್ಕಾರು, ಪ್ರಧಾನ ಕಾರ್ಯದರ್ಶಿಯಾಗಿ ಸಿಎ ವೇಣುವಿಶ್ಲೇಶ ಸಂಪ, ಕಾರ್ಯದರ್ಶಿಯಾಗಿ ಪ್ರಶಾಂತ ಕುಮಾರ ಜಿ. ಭಟ್ಟ ಮಳವಳ್ಳಿ, ಕಾರ್ಯದರ್ಶಿಯಾಗಿ ಆದಿತ್ಯ ಹೆಗಡೆ ಕಲಗಾರು, ಕೋಶಾಧಿಕಾರಿಯಾಗಿ ಕೃಷ್ಣಮೂರ್ತಿ ಎಸ್. ಭಟ್ ಅವರು ಆಯ್ಕೆಯಾದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 16 ನಾಮಾಂಕಿತ ನಿರ್ದೇಶಕರನ್ನು ಅಧ್ಯಕ್ಷರು ನೇಮಿಸಿ ಆದೇಶಿಸಿದರು.
ಸಂಸ್ಕಾರೋತ್ಸವ ಆಯೋಜನೆ:
ಸಂಸ್ಕಾರ ಭರಿತ ಹವ್ಯಕ ಸಮಾಜದ ಸಂಸ್ಕೃತಿ-ಸಂಸ್ಕಾರಗಳನ್ನು ಮುಂದಿನ ತಲೆಮಾರಿಗೆ ದಾಟಿಸಲು ಮಹಾಸಭೆ ಯಿಂದ ನಾಡಿನ ನಾನಾ ಪ್ರಾಂತ್ಯಗಳಲ್ಲಿ ’ಸಂಸ್ಕಾರೋತ್ಸವ’ ಆಯೋಜಿಸಲಾಗುವುದು ಎಂದು ಡಾ.ಗಿರಿಧರ ಕಜೆ ಹೇಳಿದರು. “ಸಮಾಜ ಸಂಘಟಿತವಾದಾಗ ಶಕ್ತಿಯುತವಾಗಲು ಸಾಧ್ಯ. ಹವ್ಯಕ ಮಹಾಸಭೆಯ ಸಮಾಜಮುಖಿ ಕಾರ್ಯಗಳಿಗೆ ಸಮಾಜದಿಂದ ಉತ್ತಮ ಪ್ರತಿಸ್ಪಂದನೆ ವ್ಯಕ್ತವಾಗುತ್ತಿದ್ದು ಬೇರೆ ಸಮಾಜ ದವರೂ ನಮ್ಮ ಸಮಾಜದ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ,” ಎಂದವರು ತಿಳಿಸಿದರು.
ಕಬಕ ಗ್ರಾಮದ ಕಜೆ ನಿವಾಸಿಯಾಗಿರುವ ಡಾ.ಗಿರಿಧರ ಕಜೆ ಬೆಂಗಳೂರು ರಾಜಾಜಿನಗರದ ಕಾರ್ಡ್‌ರೋಡ್‌ನಲ್ಲಿರುವ ಪ್ರಶಾಂತಿ ಆಯುರ್ವೇದಿಕ್ ಸೆಂಟರ್‌ನ ಮುಖ್ಯ ವೈದ್ಯರಾಗಿದ್ದಾರೆ.ಇತ್ತೀಚೆಗೆ ಆಯುಷ್ ಟಿವಿ’ಯವರಿಂದ ಜೀವಮಾನ ಸಾಧನಾ ಪ್ರಶಸ್ತಿಗೆ ಇವರು ಭಾಜನರಾಗಿದ್ದರು.ಇವರು ಪುತ್ತೂರಿನ ಡಾ.ಶಶಿಧರ ಕಜೆರವರ ಸಹೋದರರಾಗಿದ್ದಾರೆ.