ಕ್ರೀಡೆ ನಮ್ಮಲ್ಲಿ ಧೈರ್ಯ, ಸಹಕಾರದ ಗುಣವನ್ನು ಕಲಿಸುತ್ತದೆ- ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆಯ ಕ್ರೀಡಾಕೂಟ ಉದ್ಘಾಟಿಸಿ ರಫೀಕ್ ಕೆ.ಎಮ್

0

ಪುತ್ತೂರು: ಪುತ್ತೂರಿನ ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಮೊನ್ಸಿಜ್ಞೊರ್ ಆಂಟನಿ ಪತ್ರಾವೋರವರ ಸ್ಮರಣಾರ್ಥ ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯುವ ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ ಅ.10ರಂದು ನಡೆಯಿತು.

ಉದ್ಘಾಟನಾ ಸಮಾರಂಭ:
ಬೆಳಿಗ್ಗೆ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಉದ್ಘಾಟನೆಯ ಆರಂಭದಲ್ಲಿ ಸಂತ ಫಿಲೋಮಿನಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಮೊ|ಆಂಟನಿ ಪತ್ರಾವೋರವರ ಮೂರ್ತಿಗೆ ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ|ಲಾರೆನ್ಸ್ ಮಸ್ಕರೇನಸ್ ಹಾಗೂ ಅತಿಥಿಗಳು ಹಾರಾರ್ಪಣೆ ಮಾಡಿದರು. ಮಂಗಳೂರು ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್ ಉಪಾಧ್ಯಕ್ಷರಾದ ಮೊನ್ಸಿಜ್ಞೊರ್ ಮ್ಯಾಕ್ಸಿಮ್ ಲಾರೆನ್ಸ್ ನೋರೊನ್ಹಾರವರು ಕ್ರೀಡಾ ಧ್ವಜಾರೋಹಣ ನೆರವೇರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕ್ರೀಡಾಪಟುಗಳಿಂದ ಪಥಸಂಚನ ನಡೆಯಿತು. ಅತಿಥಿಗಳು ಗೌರವವಂದನೆ ಸ್ವೀಕರಿಸಿದರು. ಅತಿಥಿಗಳು ಬಲೂನ್‌ಗಳನ್ನು ಬಾನೆತ್ತರಕ್ಕೆ ಹಾರಿಸುವ ಮೂಲಕ ಕ್ರೀಡಾಕೂಟ ಉದ್ಘಾಟಿಸಿದರು.

ಕ್ರೀಡೆ ನಮ್ಮಲ್ಲಿ ಧೈರ್ಯ, ಸಹಕಾರದ ಗುಣವನ್ನು ಕಲಿಸುತ್ತದೆ:
ಮುಖ್ಯ ಅತಿಥಿ, ಮಂಗಳೂರು ಸಿಟಿ ಕ್ರೈಮ್ ಬ್ರ್ಯಾಂಚ್ ಪೊಲೀಸ್ ಇನ್‌ಸ್ಪೆಕ್ಟರ್ ರಫೀಕ್ ಕೆ.ಎಮ್ ಮಾತನಾಡಿ ಕ್ರೀಡೆ ನಮ್ಮಲ್ಲಿ ಧೈರ್ಯ, ಸಹಕಾರ, ಹೊಂದಿಕೊಂಡು ಹೋಗುವ ಗುಣವನ್ನು ಕಲಿಸುತ್ತದೆ. ಕ್ರೀಡಾಕೂಟದಲ್ಲಿ ಗೆದ್ದವರಿಗೆ ಸಂತೋಷವಾದರೆ, ಸೋತವರಿಗೆ ಪ್ರೇರಣೆಯಾಗುತ್ತದೆ. ಆದುದರಿಂದ ಕ್ರೀಡಾಕೂಟ ಜೀವನದ ಪಾಠಶಾಲೆಯಾಗಿದೆ ಎಂದರು. ನಾನು ೨೫ ವರ್ಷಗಳ ಹಿಂದೆ ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದೆ. ಆಗ ಎನ್‌ಎಸ್‌ಎಸ್ ಘಟಕಕ್ಕೆ ಸೇರಿದೆ. ಇದರಿಂದ ನನಗೆ ಆತ್ಮವಿಶ್ವಾಸ ಬಂತು. ಜನರೊಂದಿಗೆ ಹೇಗೆ ಬೆರೆಯಬೇಕೆಂಬುದು ತಿಳಿಯಿತು. ಇದು ನನ್ನ ಜೀವನದ ತಿರುವು ಆಯಿತು. ಜೀವನ ಪೂರ್ತಿಯಾಗಿ ಕ್ರೀಡೆಯನ್ನು ಅಳವಡಿಸಿಕೊಳ್ಳಿ ಎಂದು ಹೇಳಿದ ಅವರು ಸುಂದರವಾಗಿ ಕ್ರೀಡಾಕೂಟ ಆಯೋಜನೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಇಂದಿನ ಕ್ರೀಡಾಕೂಟ ಬಹುದೊಡ್ಡ ಜಾತ್ರೆಯಂತೆ ನಡೆಯುತ್ತಿದೆ:
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್ ಉಪಾಧ್ಯಕ್ಷರಾದ ಮೊನ್ಸಿಜ್ಞೊರ್ ಮ್ಯಾಕ್ಸಿಮ್ ಲಾರೆನ್ಸ್ ನೋರೊನ್ಹಾ ಮಾತನಾಡಿ ಇಂದಿನ ಕ್ರೀಡಾಕೂಟ ದೊಡ್ಡ ಜಾತ್ರೆಯಂತೆ ನಡೆಯುತ್ತಿದೆ. ಕ್ರೀಡಾಕೂಟಗಳು ನಮಗೆ ಪದಕ ಗಳಿಸುವುದು ಮಾತ್ರವಲ್ಲದೆ ಜ್ಞಾನ ವೃದ್ಧಿಸಲು ಹಾಗೂ ವಿಶಾಲವಾದ ಮನೋಭಾವನೆ ಹೊಂದಲು ಸಹಾಯಕಾರಿಯಾಗುತ್ತದೆ. ಕ್ರೀಡೆ ಮಾನಸಿಕ ಸ್ಥೈರ್ಯವನ್ನು ನೀಡುತ್ತದೆ ಎಂದು ಹೇಳಿ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು.

ನಾವೆಲ್ಲರೂ ಒಂದು ಎಂಬುದು ತೋರಿಸುವ ದಿನವಾಗಿದೆ:
ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನಸ್ ಪ್ರಾಸ್ತಾವಿಕವಾಗಿ ಮಾತನಾಡಿ ವಂದನೀಯ ಆಂಟನಿ ಪತ್ರಾವೋರವರು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಪುತ್ತೂರಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಇಂದು ಅವರ ನೆನಪಿನಲ್ಲಿ ಕ್ರೀಡಾಕೂಟ ಆಯೋಜಿಸಲಾಗುತ್ತದೆ. ಅವರ ಧ್ಯೇಯ, ಕನಸನ್ನು ಮುಂದುವರೆಸಿಕೊಂಡು ಹೋಗಿ ಸಂಸ್ಥೆಯನ್ನು ಬೆಳೆಸೋಣ. ಮಾಯ್ ದೆ ದೇವುಸ್ ಚರ್ಚ್‌ನ ಅಧೀನದಲ್ಲಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳು ಮರದಲ್ಲಿರುವ ಗೆಲ್ಲುಗಳ ಹಾಗೆ. ನಾವೆಲ್ಲರೂ ಒಂದು ಎಂಬುದನ್ನು ತೋರಿಸುವ ದಿನವಾಗಿದೆ ಎಂದ ಅವರು ಎಲ್ಲರನ್ನೂ ಅಭಿನಂದಿಸಿ ನಮ್ಮ ಸಂಸ್ಥೆಗಳು ಬೆಳಗಿ ಜ್ಞಾನದ ಕಿರಣಗಳು ಜಗತ್ತಿನಾದ್ಯಂತ ಪಸರಿಸಿಲಿ ಎಂದು ಶುಭಹಾರೈಸಿದರು.

ಮಾಯ್ ದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ವಂ|ಮರ್ವಿನ್ ಲೋಬೋ, ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೊ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ವಂ|ಅಶೋಕ್ ರಾಯನ್ ಕ್ರಾಸ್ತಾ, ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲಾ ಮುಖ್ಯಶಿಕ್ಷಕರಾದ ವಂ|ಮ್ಯಾಕ್ಸಿಮ್ ಡಿಸೋಜ ಎಮ್., ಸಂತ ವಿಕ್ಟರನ ಬಾಲಿಕ ಪ್ರೌಢಶಾಲೆಯ ಮುಖ್ಯಶಿಕ್ಷಕಿ ರೊಸಲಿನ್ ಲೋಬೊ, ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕರಾದ ಹ್ಯಾರಿ ಡಿಸೋಜ, ಮಾಯ್ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಜಾನೆಟ್ ಡಿಸೋಜ, ಸಂತ ಫಿಲೋಮಿನಾ ಮಹಿಳೆಯರ ಹಾಸ್ಟೆಲ್ ವಾರ್ಡನ್ ಸಿಸ್ಟರ್ ಲೂರ್ದು ಮೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ರೀಡಾ ಪ್ರತಿಜ್ಞಾವಿಧಿ:
ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕ್ರೀಡಾಪಟು ಸೋನಲ್ ಪಾಯಸ್ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ನಾಡಗೀತೆ ಗಾಯನ, ಚೆಂಡೆಮೇಳ:
ಉದ್ಘಾಟನಾ ಕಾರ್ಯಕ್ರಮ ಬಳಿಕ ಕನ್ನಡ ನಾಡಿನ ನಾಡಗೀತೆ ನೂರು ವರ್ಷ ಸಂದ ನೆನಪಿಗೆ ಸಂತ ಫಿಲೋಮಿನಾ (ಸ್ವಾಯತ್ತ)ಪದವಿ ಕಾಲೇಜಿನ ನೂರು ವಿದ್ಯಾರ್ಥಿಗಳಿಂದ ನಾಡಗೀತೆ ಗಾಯನ ನಡೆಯಿತು. ಬಳಿಕ ವಿದ್ಯಾರ್ಥಿಗಳ ಚೆಂಡೆಮೇಳ ತಂಡದಿಂದ ಸ್ಯಾಕ್ಸೋಫೋನ್ ವಾದನದ ಮೂಲಕ ಆಕರ್ಷಕ ಚೆಂಡೆ ಮೇಳ ನಡೆಯಿತು.

ಅತಿಥಿಗಳನ್ನು ಶಾಲು ಹೊದೆಸಿ ಗೌರವಿಸಲಾಯಿತು. ವೇಯ್ಟ್‌ಲಿಫ್ಟಿಂಗ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಕ್ರೀಡಾಪಟು ಸುಹಾಸ್ ರೈ ಜೆ. ಹಾಗೂ ಬೆಸಿಲ್ ರಾಯ್‌ರವರನ್ನು ಅಭಿನಂದಿಸಲಾಯಿತು.

ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಲೋರಾ ಪಾಯಸ್ ಸ್ವಾಗತಿಸಿದರು. ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು. ಶಿಕ್ಷಕಿ ಜಾಸ್ಮಿನ್ ಗೋವಿಯಸ್ ಅತಿಥಿಗಳ ಪರಿಚಯ ಮಾಡಿದರು. ಶಿಕ್ಷಕಿ ವಿದ್ಯಾಶ್ರೀ ವಂದಿಸಿ ಶಿಕ್ಷಕಿಯರಾದ ದೀಪ್ತಿ ಮತ್ತು ಸರಿತಾ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು. ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕರು, ಶಿಕ್ಷಕರು, ಉಪನ್ಯಾಸಕರು, ಸಿಬಂದಿಗಳು ಸಹಕರಿಸಿದರು.

ಕ್ರೀಡಾಜ್ಯೋತಿ ಮೆರವಣಿಗೆ, ಪ್ರಜ್ವಲನೆ
ಬೆಳಿಗ್ಗೆ ಮಾಯ್ ದೆ ದೇವುಸ್ ಚರ್ಚ್‌ನಲ್ಲಿ ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ|ಲಾರೆನ್ಸ್ ಮಸ್ಕರೇನ್ಹಸ್‌ರವರು ಕ್ರಿಡಾಜ್ಯೋತಿ ಬೆಳಗಿಸಿ ಕ್ರೀಡಾಪಟುಗಳಿಗೆ ಹಸ್ತಾಂತರಿಸಿದರು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚಿದ ಸುಮಾರು 80 ಕ್ರೀಡಾಪಟುಗಳು ಕ್ರೀಡಾಜ್ಯೋತಿಯನ್ನು ಚರ್ಚ್‌ನಿಂದ ಮೆರವಣಿಗೆ ಮೂಲಕ ಸಂತ ಫಿಲೋಮಿನಾ ಕಾಲೇಜಿನ ದಿವ್ಯಚೇತನಾ ಪ್ರಾರ್ಥನಾ ಮಂದಿರಕ್ಕೆ ತಂದರು. ಬಳಿಕ ಪ್ರಾರ್ಥನಾ ಮಂದಿರದಿಂದ ತಂದ ಕ್ರೀಡಾಜ್ಯೋತಿಯನ್ನು ರಾಷ್ಟ್ರಮಟ್ಟದ ಕ್ರೀಡಾಪಟು ರಂಜಿತ್ ಕುಮಾರ್ ಉದ್ಘಾಟನಾ ಸಮಾರಂಭದ ವೇದಿಕೆಗೆ ತಂದು ಗೌರವ ಅತಿಥಿಗಳಿಗೆ ಹಸ್ತಾಂತರಿಸಿದರು. ನಂತರ ಅತಿಥಿಗಳಿಂದ ಕ್ರೀಡಾಪಟು ಚೈತ್ರಿಕಾರವರು ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ ಜ್ಯೋತಿ ಪ್ರಜ್ವಲನಾ ಪೀಠದಲ್ಲಿ ಪ್ರಜ್ವಲಿಸಿದರು.

ಮಾಯ್ ದೆ ದೇವುಸ್ ಸಮೂಹದ 7 ಶಿಕ್ಷಣ ಸಂಸ್ಥೆಗಳ
ಸಾವಿರಕ್ಕೂ ಮಿಕ್ಕಿ ಕ್ರೀಡಾಪಟುಗಳಿಂದ ಪಥಸಂಚಲನ

ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಡಿಯಲ್ಲಿ ಇರುವ ಏಳು ಶಿಕ್ಷಣ ಸಂಸ್ಥೆಗಳ ಸಾವಿರಕ್ಕೂ ಮಿಕ್ಕಿ ಕ್ರೀಡಾಪಟುಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳು, ಕ್ರೀಡಾಪಟುಗಳು ವಾದ್ಯಘೋಷಗಳೊಂದಿಗೆ ಪಥಸಂಚಲನ ನಡೆಸಿ ಅತಿಥಿ ಅಭ್ಯಾಗತರಿಗೆ ಗೌರವ ವಂದನೆ ಸಲ್ಲಿಸಿದರು.

ಮೊನ್ಸಿಜ್ಞೊರ್ ಮ್ಯಾಕ್ಸಿಮ್ ಲಾರೆನ್ಸ್ ನೋರೊನ್ಹಾ ಹಾಗೂ ರಫೀಕ್ ಕೆ.ಎಮ್‌ರವರಿಗೆ ಸನ್ಮಾನ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್ ಉಪಾಧ್ಯಕ್ಷರಾದ ಮೊನ್ಸಿಜ್ಞೊರ್ ಮ್ಯಾಕ್ಸಿಮ್ ಲಾರೆನ್ಸ್ ನೋರೊನ್ಹಾ ಹಾಗೂ ಮುಖ್ಯ ಅತಿಥಿಯಾಗಿದ್ದ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ, ಮಂಗಳೂರು ಸಿಟಿ ಕ್ರೈಮ್ ಬ್ರ್ಯಾಂಚ್ ಪೊಲೀಸ್ ಇನ್‌ಸ್ಪೆಕ್ಟರ್ ರಫೀಕ್ ಕೆ.ಎಮ್.ರವರನ್ನು ಸನ್ಮಾನಿಸಲಾಯಿತು. ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ|ಲಾರೆನ್ಸ್ ಮಸ್ಕರೇನಸ್ ಹಾಗೂ ಇತರರು ಹಾರ, ಶಾಲು, ಪೇಟ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿದರು.

LEAVE A REPLY

Please enter your comment!
Please enter your name here