ದೀಪದೆದುರು ನಿಂತವರು ಕದಲುವ ಮುನ್ನ…

0

ತುಳುವೆರೆ ಪರ್ಬೊದ ಒಂದು ಸುತ್ತ…


@ ಸಿಶೇ ಕಜೆಮಾರ್
ತುಳುವರಿಗೆ ಹಬ್ಬ ಎಂದರೆ ಅದು ದೀಪಾವಳಿ ಆದ್ದರಿಂದಲೇ ಅವರು ದೀಪಾವಳಿಯನ್ನು ‘ಪರ್ಬೊ’ ಎಂದು ಕರೆಯುತ್ತಾರೆ. ತುಳುವರಿಗೆ ವರ್ಷಕ್ಕೆ ಒಂದು ಪರ್ಬೊ ಅದು ದೀಪಾವಳಿ. ತುಳುನಾಡಿನಲ್ಲಿ ದೀಪಾವಳಿ ಆರಂಭವಾಗುವುದೇ ನಮ್ಮನ್ನು ಅಗಲಿದವರನ್ನು ನೆನೆಯುವ ಮೂಲಕ. ಇದಕ್ಕೂ ಒಂದು ಅರ್ಥವಿದೆ. ತುಳುವರ ನಂಬಿಕೆಯಂತೆ ಮನೆತನದಲ್ಲಿ ತೀರಿ ಹೋದ ಹಿರಿ,ಕಿರಿಯರು ಶಾಶ್ವತವಾಗಿ ಗೃಹಗತಿಯನ್ನು ತೊರೆದು ಹೋಗುವುದಿಲ್ಲ. ನಿಜವಾಗಿ ನೋಡಿದರೆ ತುಳುವರಲ್ಲಿ ಸತ್ತವರನ್ನು ವೈಕುಂಠಕ್ಕೆ ಕಳುಹಿಸುವ ಪದ್ದತಿ ಇಲ್ಲವೇ ಇಲ್ಲ. ಸತ್ತವರಿಗಾಗಿ ಮಾಡುವ ಉತ್ತರಕ್ರಿಯೆಗಳು ಮುಗಿದ ಬಳಿಕ ಮನೆಯಲ್ಲಿ ಮಡೆ ಬೊಜ್ಜವನ್ನು ಮಾಡಿ, ತೀರಿಕೊಂಡವರಿಗೆ ಮನೆಯ ಒಳಗಡೆ ಮಿಸೆಲ್ ಬಡಿಸುವರು. ಒಬ್ಬ ವ್ಯಕ್ತಿ ಸತ್ತು ೧೬ ದಿನದಲ್ಲಿ ಕುಟುಂಬ ವರ್ಗದವರನ್ನು ಕರೆಸಿ ಉಲಾಯಿ ಲೆಪ್ಪುನ(ಒಳಗೆ ಕರೆಯುವುದು) ಎಂಬ ಪದ್ಧತಿ ಇದೆ. ಅಂದರೆ ನಮ್ಮ ಮನೆಯಿಂದ ಸತ್ತು ಸ್ವರ್ಗ ಸೇರಿದ ವ್ಯಕ್ತಿಯೂ ಸತ್ತ ನಂತರ ಕೂಡ ನಮ್ಮ ಮನೆಯಲ್ಲಿಯೇ ಇರಬೇಕು ಅಂದರೆ ನಮ್ಮ ಜೊತೆಯೇ ಅಶರೀರವಾಗಿ ಇರುತ್ತಾನೆ ಎಂದು ತುಳುವರು ನಂಬುತ್ತಾರೆ. ಆಯಾ ದೀಪಾವಳಿಗೆ ಮುಂಚೆ ಯಾರಾದರೂ ವಿಧಿವಶರಾದರೆ ಅವರಿಗೆ ದೀಪಾವಳಿ ದಿನ ವಿಶೇಷ ಖಾದ್ಯಗಳನ್ನು ಮಾಡಿ ಬಳಸುತ್ತಾರೆ.ಇದರಲ್ಲಿ ವಿಶೇಷವಾಗಿ ಅವಲಕ್ಕಿಯನ್ನು ಬಳಸುವುದು ಸಾಮಾನ್ಯವಾಗಿದೆ. ದೀಪಾವಳಿ ಹಬ್ಬದ ಮೊದಲು ದಿನ ಕುಚ್ಚಿಗೆ ಅಕ್ಕಿ ಅರೆದು, ತೆಂಗಿನಕಾಯಿ ಹೆರೆದು, ಬೆಲ್ಲ ಮಿಶ್ರಣ ಮಾಡಿ ಅರಸಿನದ ಎಲೆಯಲ್ಲಿ ಕಡುಬು ಬೇಯಿಸುವರು. ಬೂದುಕುಂಬಳ, ಬಾಳೆಕಾಯಿ ಮತ್ತು ಮೀನು ಪಲ್ಯವನ್ನು ಬೇರೆಬೇರೆಯಾಗಿ ತಯಾರಿಸಿ ರಾತ್ರಿ ಸಮಯದಲ್ಲಿ ಬಾಳೆ ಎಲೆ ಹಾಕಿ ಬಡಿಸುವರು. ಒಟ್ಟಿನಲ್ಲಿ ನಮ್ಮನ್ನಗಲಿದ ಹಿರಿಯರನ್ನು ಮರೆಯಬಾರದು ಎಂಬುದು ಈ ಹಬ್ಬದ ಒಂದು ಉದ್ದೇಶವಾಗಿದೆ. ಅದೇ ದಿನ ಬಚ್ಚಲು ಮನೆಯನ್ನು ಶುದ್ಧಗೊಳಿಸಿ ತಂಬಿಗೆಗೆ ಬಣ್ಣ ಬಳಿದು ನೀರು ತುಂಬಿಸಿ ಇಡಲಾಗುತ್ತದೆ. ಮರುದಿವಸ ಬೆಳಿಗ್ಗೆ ಎದ್ದು ಬಚ್ಚಲು ಮನೆಯಲ್ಲಿ ನೀರು ತುಂಬಿಸಿಟ್ಟ ಮಂಡೆ(ದೊಡ್ಡ ತಂಬಿಗೆ)ಯ ಒಲೆಗೆ ಬೆಂಕಿ ಹಾಕಿ ನೀರು ಕಾಯಿಸಲಾಗುತ್ತದೆ.ಮನೆಯ ಎಲ್ಲರೂ ಮೈಗೆ ಎಣ್ಣೆ ಹಚ್ಚಿ ಬಿಸಿ ನೀರಲ್ಲಿ ಸ್ನಾನ ಮಾಡುತ್ತಾರೆ.ಹೀಗೆ ಸ್ನಾನ ಮಾಡಿ ಬಂದವರು ಬೆಲ್ಲ ಹಾಕಿ ಕಲಸಿಟ್ಟ ಅವಲಕ್ಕಿ, ನೀರುದೋಸೆ(ತೆಲ್ಲವು) ತಿನ್ನುತ್ತಾರೆ.


ಭೂಮಿಯನ್ನು ದೇವರೆಂದು ನಂಬುತ್ತೇವೆ
ತುಳುವರು ಈ ಮಣ್ಣನ್ನು ದೇವರಿಗೆ ಸಮಾನ ಕಾಣುತ್ತಾರೆ. ಯಾವುದೇ ಕೆಲಸಕ್ಕೆ ಮುನ್ನ ಮಣ್ಣಿಗೆ ಕೈ ಮುಗಿದು ಕೆಲಸ ಆರಂಭಿಸುತ್ತಾರೆ. ನಾವು ದೇವಸ್ಥಾನ, ದೈವಸ್ಥಾನಗಳಲ್ಲಿಯೂ ಕೂಡ ಗಮನಿಸಬಹುದು ದೇವರಿಗೆ ಅಥವಾ ದೈವಕ್ಕೆ ಮಂಗಳಾರತಿ ಆದ ಬಳಿಕ ನಾವೆಲ್ಲ ನೆಲವನ್ನು ಮುಟ್ಟಿ ನಮಸ್ಕರಿಸುತ್ತೇವೆ. ದೈವಕ್ಕೆ ಪ್ರಾರ್ಥನೆ ಸಲ್ಲಿಸಿದ ಬಳಿಕವು ನೆಲವನ್ನು ಮುಟ್ಟಿ ಹಣೆಗೆ ಒತ್ತಿಕೊಳ್ಳುತ್ತೇವೆ. ಅಂದರೆ ಈ ಮಣ್ಣಲ್ಲಿ ದೇವರಿದ್ದಾನೆ ಎಂದು ತುಳುವರು ನಂಬುತ್ತಾರೆ. ತುಳುವರು ಬೇಸಾಯವನ್ನೇ ನಂಬಿ ಬದುಕುವವರು. ಆದ್ದರಿಂದ ದೀಪಾವಳಿಯ ಎರಡನೇ ದಿನ ತುಳುನಾಡಲ್ಲಿ ಭೂಮಿ ಪೂಜೆ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಇಲ್ಲಿ ಮುಖ್ಯವಾಗಿ ಬಲಿಯೇಂದ್ರನ ಆರಾಧನೆಯೊಂದಿಗೆ ಭೂಮಿ ಪೂಜೆಯು ಕೂಡ ಸೇರಿಕೊಂಡಿರುವುದನ್ನು ನಾವು ಗಮನಿಸಿದರೆ ತುಳುವರು ಭೂಮಿಯಲ್ಲಿ ಅರ್ಥಾತ್ ಪ್ರಕೃತಿಯಲ್ಲಿ ದೇವರನ್ನು ಕಂಡುಕೊಂಡವರು ಎಂಬುದು ಸ್ಪಷ್ಟವಾಗುತ್ತದೆ. ಈ ದಿನ ಗದ್ದೆಯ ಸುತ್ತಲು ಸ್ವಚ್ಛ ಮಾಡುತ್ತಾರೆ. ತೆಂಗಿನ ಮಡಲಿನ ಕಡ್ಡಿಗೆ ಕೈಮಗ್ಗದ ಬಿಳಿಯ ಬಟ್ಟೆಯ ತುಂಡುಗಳನ್ನು ಸುತ್ತಿ ಒಂದು ರೀತಿಯ ಉದ್ದನೆಯ ದೀಪವನ್ನು ತಯಾರು ಮಾಡುತ್ತಾರೆ ಇದಕ್ಕೆ ತುಳುವಿನಲ್ಲಿ ಕೋಲ್ ನಿಣೆ ಎಂದು ಹೇಳುತ್ತಾರೆ.ಅಲ್ಲದೆ ವಿವಿಧ ಬಗೆಯ ಕಾಡು ಹೂಗಳನ್ನು ಕೂಡ ತಯಾರು ಮಾಡುತ್ತಾರೆ. ಮುಖ್ಯವಾಗಿ ಕೇಪುಳ ಹೂ, ಪಾದೆ ಹೂ ಇತ್ಯಾದಿ ಹಲವು ಬಗೆಯ ಹೂಗಳನ್ನು ಕೂಡ ಜೋಡಿಸಿ ಇಡುತ್ತಾರೆ. ರಾತ್ರಿಯ ಸಮಯದಲ್ಲಿ ಗದ್ದೆಯ ಬದಿಗೆ ಹೋಗಿ ಬಟ್ಟೆಯಲ್ಲಿ ಮಾಡಿದ ದೀಪ ( ಕೋಲ್ ನಿಣೆ)ಯನ್ನು ಉರಿಸಿ ಅದರ ಬುಡಕ್ಕೆ ಈ ಹೂಗಳನ್ನು ಹಾಕುತ್ತಾರೆ ಅಲ್ಲದೆ ವೀಳ್ಯದೆಲೆ, ಅಡಿಕೆ, ಅವಲಕ್ಕಿ,ತೆಂಗಿನ ಕಾಯಿಯ ತುಂಡು ಇತ್ಯಾದಿಗಳನ್ನು ಕೂಡ ಇಡುತ್ತಾರೆ.ತುಳುನಾಡಲ್ಲಿ ಇನ್ನೊಂದು ಪದ್ಧತಿ ಕೂಡ ಇದ್ದು ಹಾಲೆ ಮರದ ಗೆಲ್ಲನ್ನು ನೆಟ್ಟು ಆ ಕೊಂಬೆಗೆ ವಿವಿಧ ರೀತಿಯ ಕಾಡು ಹೂಗಳಿಂದ ಸಿಂಗಾರ ಮಾಡಿ, ಅದರ ಬುಡಕ್ಕೆ ಈ ವಸ್ತುಗಳನ್ನು ಇಟ್ಟು ಪೂಜಿಸುತ್ತಾರೆ. ಒಟ್ಟಿನಲ್ಲಿ ಭೂಮಿ ಪೂಜೆಯೊಂದಿಗೆ ಬಲಿಯೇಂದ್ರನ ಆರಾಧನೆಯು ಆಗಿದೆ.


ಭೂಮಿಯನ್ನು ಕಾಯುವವ ಬಲಿಯೇಂದ್ರ
ಇಡೀ ತುಳುನಾಡನ್ನು ಆಳಿದ ಬಲಿ ಚಕ್ರವರ್ತಿ ಬಲಿಯೇಂದ್ರ ಎಂದರೆ ಭೂಮಿಯನ್ನು ಕಾಯುವವ ಎಂದು ತುಳುವರು ನಂಬುತ್ತಾರೆ. ಇದೇ ರೀತಿಯ ಹಾಲೆ(ಪಾಲೆ ಮರ)(ಡೆವಿಲ್ ಟ್ರೀ)ಮರದ ಕೊಂಬೆಯನ್ನು ಕಡಿದು ಮನೆಯ ಎದುರಿನ ತುಳಸಿ ಕಟ್ಟೆಯ ಪಕ್ಕ, ಜಾನುವಾರುಗಳ ಕೊಟ್ಟಿಗೆಯ ಪಕ್ಕ, ಜಾಗೆಯಲ್ಲಿನ ದೈವಗಳ ಗುಡಿಗಳ ಪಕ್ಕ ನೆಟ್ಟು ಸಿಂಗರಿಸಿ ದೀಪಾವಳಿ ದಿನ ಪೂಜೆ ಮಾಡುತ್ತಾರೆ.ಒಟ್ಟಿನಲ್ಲಿ ಇಲ್ಲಿ ದೀಪದ ಅಲಂಕಾರ ಪ್ರಮುಖವಾಗಿರುತ್ತದೆ.ಹಾಲೆ ಮರದ ಕೊಂಬೆಯನ್ನು ಸಿಂಗರಿಸಿ ಬುಡದಿಂದ ತಲೆಯವರೆಗೂ ದೀಪಗಳನ್ನು ಉರಿಸಿ ಇಡುತ್ತಾರೆ.ಮತ್ತೊಂದು ವಿಶೇಷತೆ ಎಂದರೆ ತುಳುವರು ದೀಪಗಳನ್ನು ಉರಿಸಲು ಇಲ್ಲಿ ನುರ್ತೊಂಗು(ಚಿಕ್ಕದಾಗಿ ಉರುಟಾಗಿರುವ ಒಂದು ರೀತಿಯ ಕಹಿ ಸೌತೆ ಕಾಯಿ) ಅನ್ನು ಬಳಸುತ್ತಾರೆ. ಈ ಕಾಯಿಯನ್ನು ಎರಡು ಭಾಗ ಮಾಡಿ ಈ ಹೋಲಿನಲ್ಲಿನ ತಿರುಳನ್ನು ತೆಗೆದು ಅದಕ್ಕೆ ಎಣ್ಣೆ ಹಾಕಿ ಅದರಲ್ಲಿ ದೀಪ ಉರಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇದನ್ನೆಲ್ಲಾ ಕಾಣಲು ಸಾಧ್ಯವಿಲ್ಲ.


ಗೋ ಪೂಜೆ
ದೀಪಾವಳಿಯ ಇನ್ನೊಂದು ವಿಶೇಷ ಗೋ ಪೂಜೆ.ಹಗಲಿನ ಹೊತ್ತಲ್ಲಿ ಕೊಟ್ಟಿಗೆಯಲ್ಲಿದ್ದ ಜಾನುವಾರುಗಳನ್ನು ತೋಡಿಗೆ, ಕೆರೆಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸಲಾಗುತ್ತದೆ. ಸಂಜೆಯ ಹೊತ್ತಿಗೆ ಸ್ನಾನ ಮಾಡಿದ ಗೋವುಗಳಿಗೆ ಸಿಂಗಾರ ಮಾಡಲಾಗುತ್ತದೆ. ವಿವಿಧ ರೀತಿಯ ಹೂವಿನ ಮಾಲೆಗಳನ್ನು ತೊಡಿಸಿ ಗೋವುಗಳನ್ನು ಮದುವನ ಗಿತ್ತಿಯಂತೆ ಮಾಡುತ್ತಾರೆ.ಬಳಿಕ ಒಂದು ತಡ್ಪೆ( ಅಕ್ಕಿಯಲ್ಲಿನ ಕಸ ಕಡ್ಡಿಗಳನ್ನು ಬೀಸಿ ತೆಗೆಯಲು ಬಳಸುವ ತುಳುವರ ಸಾಧನ)ಯಲ್ಲಿ ಭತ್ತ ಹಾಕಿ, ಅದರ ಸುತ್ತ ದೀಪ ಇಟ್ಟು, ಸುತ್ತ ವಿವಿಧ ರೀತಿಯ ಹೂಗಳನ್ನು ಹಾಕಿ ಗೋವುಗಳಿಗೆ ತುಡರ್(ದೀಪ) ತೋರಿಸುತ್ತಾರೆ. ಗೋವುಗಳ ಹಣೆಗೆ ಕುಂಕುಮ ಇಟ್ಟು ಅವುಗಳಿಗೆ ಭತ್ತ, ನೀರು ದೋಸೆ(ತೆಲ್ಲವು) ತಿನ್ನಲು ಕೊಡುತ್ತಾರೆ.ಇದೇ ರೀತಿಯಲ್ಲಿ ತುಡರ್ (ದೀಪ)ಅನ್ನು ಭತ್ತದ ರಾಶಿ, ತುಳಸಿ ಕಟ್ಟೆ,ಬೇಸಾಯದ ಸಲಕರಣೆಗಳಿಗೆ ತೋರಿಸಿ ಬಳಿಕ ಹಾಲೆ ಮರದ ಕೊಂಬೆಯಲ್ಲಿ ಬಳಿ ಇಟ್ಟು ಬಲಿಯೇಂದ್ರನನ್ನು ಕೂಗಿ ಕರೆಯುತ್ತಾರೆ.


ಅಂಗಡಿ ಪೂಜೆ
ದೀಪಾವಳಿ ದಿನ ಇಡೀ ಮನೆಯನ್ನು ಸ್ಚಚ್ಛ ಮಾಡುತ್ತಾರೆ. ಅದೇ ರೀತಿ ವ್ಯಾಪಾರಸ್ಥರು ತಮ್ಮ ಅಂಗಡಿ ಕೋಣೆಗಳನ್ನು ಸ್ವಚ್ಛ ಮಾಡುತ್ತಾರೆ. ಹೀಗೆ ಸ್ವಚ್ಛ ಮಾಡಿದ ಅಂಗಡಿಗೆ ದೀಪಗಳ ಅಲಂಕಾರ ಮಾಡುತ್ತಾರೆ. ಹೂಗಳನ್ನು ಹಾಕಿ ಶೃಂಗಾರಗೊಳಿಸುತ್ತಾರೆ. ಹೀಗೆ ಶೃಂಗಾರ ಮಾಡಿದ ಅಂಗಡಿಗಳಲ್ಲಿ ಲಕ್ಷ್ಮೀ ಅಥವಾ ಅವರ ಇಷ್ಟದ ದೇವರ ಫೋಟೋ ಇಟ್ಟು ಪೂಜೆ ಮಾಡುತ್ತಾರೆ. ತುಳುನಾಡಲ್ಲಿ ಅಂಗಡಿ ಪೂಜೆ ಕೂಡ ಬಹಳ ಗೌಜಿ ಗಮ್ಮತ್ತಿನಲ್ಲಿ ನಡೆಯುತ್ತದೆ. ಕೃಷಿಕರು ಹೆಚ್ಚಾಗಿ ಅಂಗಡಿಗಳಲ್ಲಿ ಸಾಮಾಗ್ರಿಗಳನ್ನು ಖರೀದಿಸುವ ಒಂದಿಷ್ಟು ಸಾಲವನ್ನು ಮಾಡಿರುತ್ತಾರೆ. ಹೀಗೆ ಮಾಡಿದ ಸಾಲ ಉಳಿದಿದ್ದರೆ ದೀಪಾವಳಿಗೆ ಅದನ್ನು ಮುಗಿಸಿ ಮುಂದೆ ಹೊಸ ಅಕೌಂಟ್ ಮಾಡುತ್ತಾರೆ. ಇದು ತುಳುನಾಡಿನ ದೀಪಾವಳಿ ಆಚರಣೆಯಾಗಿದೆ. ಈ ಶುಭ ಸಂದರ್ಭದಲ್ಲಿ ನಮ್ಮೆಲ್ಲ ಓದುಗ ಬಂಧುಗಳಿಗೆ ದೀಪಾವಳಿಯ ಪ್ರೀತಿಯ ಶುಭಾಶಯಗಳು…

LEAVE A REPLY

Please enter your comment!
Please enter your name here