





ಪುತ್ತೂರು: ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ಸುದೀರ್ಘ 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಈಶ್ವರ ಗೌಡ ಬಾರಿಂಜ ಅವರಿಗೆ ಬನ್ನೂರು ಅಲುಂಬುಡ ಸೇವಾ ಪ್ರತಿಷ್ಠಾನದ ವತಿಯಿಂದ ಸನ್ಮಾನ ಕಾರ್ಯಕ್ರಮ ನ.5ರಂದು ಅಲುಂಬುಡ ತರವಾಡು ಮನೆಯಲ್ಲಿ ನಡೆಯಿತು.



ಸನ್ಮಾನಿಸಿ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು, ಗೌಡ ಸಮಾಜ ಸಜ್ಜನ ಸಮಾಜ. ಹಿರಿಯರು ಮಾಡಿದ ಕಾಯಕದಿಂದಾಗಿ ಈಗಿನ ತಲೆಮಾರಿನವರನ್ನು ಮನೆತನದಿಂದ ಗುರುತಿಸುವಂತೆ ಆಗಿದೆ. ಗೌಡರದ್ದು 10 ಕುಟುಂಬ 18 ಗೋತ್ರ ಸಂಪ್ರದಾಯ. ನಮ್ಮದೇ ಆದ ಆಚಾರ, ವಿಚಾರಗಳಿವೆ. ನಂಬಿಕೆ, ಆರಾಧನೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇವೆಲ್ಲವೂ ಸಮಾಜವನ್ನು ಒಟ್ಟುಗೂಡಿಸುತ್ತದೆ. ಸಂಪ್ರದಾಯಕ್ಕೆ ಚ್ಯುತಿಯಾಗದಂತೆ ಆರಾಧನೆ ನಡೆಯಬೇಕೆಂದು ಹೇಳಿದರು. ಬಹುರಾಜ್ಯ ಸಹಕಾರಿ ಸಂಸ್ಥೆಯಾಗಿರುವ ಪ್ರತಿಷ್ಠಿತ ಕ್ಯಾಂಪ್ಕೋ ಚಾಕಲೇಟು ಫ್ಯಾಕ್ಟರಿಯಲ್ಲಿ 35 ವರ್ಷ ವೃತ್ತಿಧರ್ಮ, ಸಮಯ ಪಾಲನೆಗೆ ಚ್ಯುತಿಯಾಗದಂತೆ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಈಶ್ವರ ಗೌಡರ ಮುಂದಿನ ಜೀವನ ಸುಖಮಯವಾಗಿರಲಿ. ಮುಂದಿನ ಅವರ ಜೀವನಕ್ಕೆ ಪ್ರೇರಣೆ ಕೊಡುವ ಕೆಲಸ ಕುಟುಂಬದಿಂದ ಆಗಬೇಕೆಂದರು.





ಸನ್ಮಾನ
ಕ್ಯಾಂಪ್ಕೋ ನಿವೃತ್ತ ನೌಕರ ಈಶ್ವರ ಗೌಡ ಹಾಗೂ ಸರಸ್ವತಿ ದಂಪತಿಗೆ ಶಾಲು ಹಾಕಿ, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಈಶ್ವರ ಗೌಡ ಅವರು ಅನಿಸಿಕೆ ವ್ಯಕ್ತಪಡಿಸಿದರು.
ಅಲುಂಬುಡ ಸೇವಾ ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ಗೌಡ ಬನ್ನೂರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪದ್ಮಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಗೌಡ ಸರ್ವೆ, ಅಲುಂಬುಡ ತರವಾಡು ಮನೆಯ ಯಜಮಾನ ಶಿವಣ್ಣ ಗೌಡ ಅಲುಂಬುಡ, ಕುಟುಂಬದ ಹಿರಿಯ ಯಜಮಾನಿ ಕೊರಗಪ್ಪ ಗೌಡ ಪಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಲುಂಬುಡ ಸೇವಾ ಪ್ರತಿಷ್ಠಾನದ ಮುಖ್ಯಪ್ರವರ್ತಕ ಎ.ವಿ.ನಾರಾಯಣ ಗೌಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಲೋಕೇಶ ಗೌಡ ಸರ್ವೆ ವಂದಿಸಿದರು. ಆಶಾಲತಾ ನಿರೂಪಿಸಿದರು. ಗೀತಾ ಸರ್ವೆ ಪ್ರಾರ್ಥಿಸಿದರು. ಇದಕ್ಕೂ ಮೊದಲು ಕುಟುಂಬದ ದೈವಗಳಿಗೆ ದೀಪಾವಳಿ ತಂಬಿಲ ಸೇವೆ ನಡೆಯಿತು.









