





ಪುತ್ತೂರು: ಗ್ರಾಮೀಣ ಶಾಲಾ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಮಹೋದ್ದೇಶದಿಂದ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ (ರಿ.) ಮತ್ತು ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್ ಸಹಯೋಗದಲ್ಲಿ ಆಯೋಜಿಸಲಾದ ಶಾಲಾ ಮಟ್ಟದ ಕೋಡ್‌ಕ್ರಾಫ್ಟ್ ವಿಜ್ಞಾನ ಮೇಳವು ಅಭೂತಪೂರ್ವ ಯಶಸ್ಸು ಕಂಡಿದೆ. 46 ಶಾಲೆಗಳಿಂದ ಭಾಗವಹಿಸಿದ್ದ 1000ಕ್ಕೂ ಅಧಿಕ ತಂಡಗಳಲ್ಲಿ, 138 ಅತ್ಯುತ್ತಮ ತಂಡಗಳು ಜಿಲ್ಲಾ ಮಟ್ಟದ ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿದ್ದು, ನವೆಂಬರ್ 15 ರಂದು ಪುತ್ತೂರಿನಲ್ಲಿ ಬೃಹತ್ ಸ್ಪರ್ಧೆಗೆ ವೇದಿಕೆ ಸಿದ್ಧಗೊಂಡಿದೆ.


ಮೊದಲ ಹಂತದ ವಿಜ್ಞಾನ ಮೇಳವು ಒಟ್ಟು 46 ಗ್ರಾಮೀಣ ಕನ್ನಡ ಮಾಧ್ಯಮ ಶಾಲೆಗಳನ್ನು ತಲುಪಿತ್ತು. ಇಲ್ಲಿನ ವಿದ್ಯಾರ್ಥಿಗಳಿಂದ 1000ಕ್ಕೂ ಹೆಚ್ಚು ನಾವೀನ್ಯಪೂರ್ಣ ಯೋಜನೆಗಳನ್ನು ಪ್ರದರ್ಶಿಸುವ ಮೂಲಕ, ಜಿಲ್ಲೆಯ ಗ್ರಾಮೀಣ ಪ್ರತಿಭೆಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಯಶಸ್ವಿಯಾಗಿ ಆಯ್ಕೆಯಾದ 138 ಶ್ರೇಷ್ಠ ತಂಡಗಳು ಈಗ ಪ್ರಶಸ್ತಿಗಾಗಿ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆ ನಡೆಸಲು ಸಜ್ಜಾಗಿವೆ.





ಪ್ರತಿಷ್ಠಿತ ಜಿಲ್ಲಾ ಮಟ್ಟದ ಕೋಡ್‌ಕ್ರಾಫ್ಟ್ ವಿಜ್ಞಾನ ಮೇಳ-2025 ನವೆಂಬರ್ 15 ರಂದು ಶ್ರೀ ರಾಮಕೃಷ್ಣ ಪ್ರೌಢಶಾಲೆ, ಕೊಂಬೆಟ್ಟಿನ ಬಂಟರ ಭವನದಲ್ಲಿ ನಡೆಯಲಿದೆ. ಮಧ್ಯಾಹ್ನ 12:15 ಕ್ಕೆ ಸಮಾರೋಪ ಸಮಾರಂಭವು ಆರಂಭಗೊಳ್ಳಲಿದೆ. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಅವರು ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್, ಮಂಗಳೂರಿನ ಸಹ-ಸಂಸ್ಥಾಪಕರು ಮತ್ತು CTO ಆದ ಪ್ರವೀಣ್ ಕ್ಯಾಸ್ಟಲಿನೋ ಹಾಗು ಅದೇ ಸಂಸ್ಥೆಯ ಆಪರೇಷನ್ ಲೀಡ್ ಜೋಬಿನ್ ಜೋಸೆಫ್ ಪಿ ಜೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ..
ಈ ಮೇಳದ ಬಹುಮಾನಗಳ ಒಟ್ಟು ಮೊತ್ತ ಆಕರ್ಷಕವಾಗಿದ್ದು, ಪ್ರೌಢಶಾಲಾ ವಿಭಾಗ ಮತ್ತು ಪ್ರಾಥಮಿಕ ವಿಭಾಗಕ್ಕೆ ಪ್ರತ್ಯೇಕ ಬಹುಮಾನಗಳನ್ನು ನಿಗದಿಪಡಿಸಲಾಗಿದೆ. ಒಟ್ಟು 20 ತಂಡಗಳಿಗೆ ಬಹುಮಾನ ಲಭಿಸಲಿದೆ.
ಪ್ರತಿ ವಿಭಾಗದಲ್ಲಿ ವಿಜೇತರಿಗೆ ಲಭಿಸುವ ಬಹುಮಾನಗಳು ಇಂತಿವೆ: ಪ್ರಥಮ ಸ್ಥಾನಕ್ಕೆ ₹7,000/-, ದ್ವಿತೀಯ ಸ್ಥಾನಕ್ಕೆ ₹5,000/-, ತೃತೀಯ ಸ್ಥಾನಕ್ಕೆ ₹3,000/-. ಇದರೊಂದಿಗೆ, 7 ತಂಡಗಳಿಗೆ ತಲಾ ₹1,000/- ರಂತೆ ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.








