





ಪುತ್ತೂರು: ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟ ಮಂಗಳೂರು(ಪರಿಶಿಷ್ಟ ಪಂಗಡ) ಇದರ ಉದ್ಘಾಟನೆ ಮತ್ತು ಅಭಿನಂದನಾ ಸಮಾರಂಭವು ನ.16ರಂದು ಪುತ್ತೂರು ಕೊಂಬೆಟ್ಟಿನಲ್ಲಿರುವ ಮರಾಟಿ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾಗಿರುವ ನಿವೃತ್ತ ಅಪರ ಪ್ರಧಾನ ಮುಖ್ಯ ಅರಣ್ಯ ಅಧಿಕಾರಿ ಡಾ. ಕೆ.ಸುಂದರ ನಾಯಕ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


2002-03ರಲ್ಲಿ ಆರಂಭಗೊಂಡಿದ್ದ ಕರ್ನಾಟಕ ಮರಾಠಿ ಫೆಡರೇಷನ್ ಸಂಸ್ಥೆಯ ಆಧೀನದಲ್ಲಿ ಹಲವಾರು ಸಂಘ ಸಂಸ್ಥೆಗಳಿದ್ದು ಅವೆಲ್ಲವು ಶಿಸ್ತು ಮತ್ತು ಸಂಘದ ಚಟುವಟಿಕೆಯ ಹಿನ್ನೆಲೆಯಲ್ಲಿ ಎಲ್ಲಾ 32 ಸಂಘಗಳನ್ನು ದ.ಕ ಜಿಲ್ಲಾ ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟ ಒಕ್ಕೂಟದ ಸದಸ್ಯತ್ವದ ಅಡಿಯಲ್ಲಿ ಸೇರಿಸಲಾಗಿದೆ ಎಂದ ಅವರು ಸಂಘದ ಉದ್ಘಾಟನೆಯನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಮಾಡಲಿದ್ದಾರೆ. ಇದೇ ಸಂದರ್ಭ ಭಾರತ ಸರಕಾರದ ಕೇಂದ್ರಾಡಳಿತ ಪ್ರದೇಶದ ಮುಖ್ಯಕಾರ್ಯರ್ಶಿ ಹಾಗು ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟ ಇದರ ಗೌರವಾಧ್ಯಕ್ಷ ಹೆಚ್.ರಾಜೇಶ್ ಪ್ರಸಾದ್ ಅವರನ್ನು ಸಂಘದ ವತಿಯಿಂದ ಅಭಿನಂದಿಸಲಾಗುವುದು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಭಿನಂದನಿಯ ಭಾಷಣ ಮಾಡಲಿದ್ದಾರೆ. ಸೀನಿಯರ್ ಡೆಪ್ಯೂಟಿ ಅಕೌಂಟಿಂಟ್ ಜನರಲ್, ಇಂಡಿಯನ್ ಅಡಿಟ್ ಆಂಡ್ ಅಕೌಂಟ್ಸ್ ಸರ್ವೀಸಸ್ ಪ್ರಿನ್ಸಿಪಾಲ್ ಅಕೌಂಟೆಂಟ್ ಜನರಲ್ ಕಚೇರಿ ಬೆಂಗಳೂರಿನ ಯಶೋದ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಮರಾಟಿ / ಕೊಡಗಿನ ಮರಾಠ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಸಮಾಜದ ಎಲ್ಲಾ ಬಂಧುಗು ಸೇರಿ ಸುಮಾರು 2ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.





ಸಭಾ ಕಾರ್ಯಕ್ರಮದ ಆರಂಭದಲ್ಲಿ ರಾಜ್ಯಪ್ರಶಸ್ತಿ ಪುರಸ್ಕೃತ ಪೂರ್ಣಿಮಾ ಮತ್ತು ಕೃಷ್ಣ ರಾಜ್ ಅವರಿಂದ ಸಂಗೀತ ರಸಮಂಜರಿ ನಡೆಯಲಿದೆ ಎಂದವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ನ್ಯಾಯವಾದಿ ಎನ್.ಎಸ್ ಮಂಜುನಾಥ್ ನಾಯ್ಕ, ಪ್ರಧಾನ ಕಾರ್ಯದರ್ಶಿ ವಾಸು ನಾಯ್ಕ, ಕೋಶಾಧಿಕಾರಿ ಸುಂದರ ನಾಯ್ಕ, ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕರುಣಾಕರ ಟಿ.ಎನ್, ಉಪಾಧ್ಯಕ್ಷ ಸೀತಾರಾಮ ನಾಯ್ಕ ಮತ್ತು ಪರಮೇಶ್ವರ ನಾಯ್ಕ ಉಪಸ್ಥಿತರಿದ್ದರು.









