





ರಸ್ತೆ ಕಾಮಗಾರಿಗಾಗಿ ತನ್ನ ಅಮೂಲ್ಯ ಸಮಯವನ್ನು ಮೀಸಲಿಟ್ಟ ಮುಖಂಡ.!
ಸಾಮಾಜಿಕ ಬದ್ಧತೆ ಮೆರೆಯುತ್ತಿರುವ ಇಳಂತಾಜೆ ಸಂತೋಷ್ ಕುಮಾರ್ ರೈ


@ಯೂಸುಫ್ ರೆಂಜಲಾಡಿ





ಪುತ್ತೂರು: ರಸ್ತೆ ಹದಗೆಟ್ಟರೆ ಅಥವಾ ಕಾಮಗಾರಿ ನಡೆಯುವಾಗ ಏನಾದರೂ ಸಣ್ಣಪುಟ್ಟ ಸಮಸ್ಯೆಗಳು ಉಂಟಾದರೆ ಸ್ಥಳೀಯ ಗ್ರಾಮ ಪಂಚಾಯತ್ಗೆ ದೂರು ಕೊಡುವುದು, ಜನಪ್ರತಿನಿಧಿಗಳಿಗೆ ಶಾಪ ಹಾಕುವವರೇ ಹೆಚ್ಚು. ಅಂತದ್ದರಲ್ಲಿ ಇಲ್ಲೊಬ್ಬರು ವಿಭಿನ್ನ ವ್ಯಕ್ತಿತ್ವದವರಿದ್ದಾರೆ. ಸಾರ್ವಜನಿಕ ರಸ್ತೆ ಕಾಮಗಾರಿಯನ್ನು ತನ್ನ ಮನೆಯ ಕೆಲಸದಂತೆ ಭಾವಿಸಿ ಅದಕ್ಕಾಗಿ ತನ್ನ ಸಮಯವನ್ನು ಮೀಸಲಿಟ್ಟು ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರೇ ಪ್ರಗತಿಪರ ಕೃಷಿಕ, ರಾಜಕೀಯ ಮುಖಂಡ ಇಳಂತಾಜೆ ಸಂತೋಷ್ ಕುಮಾರ್ ರೈ.
ಕೌಡಿಚ್ಚಾರು-ಇಳಂತಾಜೆ-ಕೆಯ್ಯೂರು ಸಂಪರ್ಕಿಸುವ ಅಂದಾಜು 4.5 ಕಿ.ಮೀ ರಸ್ತೆ ಹದಗೆಟ್ಟು ಹಲವು ವರ್ಷಗಳು ಕಳೆದಿತ್ತು. ರಸ್ತೆ ಅಭಿವೃದ್ಧಿಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಈ ರಸ್ತೆಯ ಅಭಿವೃದ್ಧಿಗೆ ಅರಿಯಡ್ಕ ಮತ್ತು ಕೆಯ್ಯೂರು ವಲಯ ಕಾಂಗ್ರೆಸ್ ಶಾಸಕ ಅಶೋಕ್ ರೈಯವರಿಗೆ ಮನವಿ ಸಲ್ಲಿಸಿತ್ತು. ಇಳಂತಾಜೆ ಸಂತೋಷ್ ಕುಮಾರ್ ರೈ ಅವರಂತೂ ಈ ರಸ್ತೆಯ ಅನುದಾನಕ್ಕಾಗಿ ಶಾಸಕ ಅಶೋಕ್ ರೈ ಅವರಲ್ಲಿ ನಿರಂತರ ಮನವಿ ಮಾಡುತ್ತಲ್ಲೇ ಬಂದಿದ್ದರು. ಪರಿಣಾಮವಾಗಿ ಶಾಸಕರು ರೂ.5 ಕೋಟಿ ಅನುದಾನ ಬಿಡುಗಡೆಗೊಳಿಸಿ ಬೇಡಿಕೆ ಈಡೇರಿಸಿದ್ದರು. ಇದೀಗ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು 8 ಇಂಚು ದಪ್ಪ ಹಾಗೂ 3.75 ಮೀಟರ್ ಅಗಲದಲ್ಲಿ ಈ ರಸ್ತೆ ನಿರ್ಮಾಣ ಆಗುತ್ತಿದೆ.

ಕೌಡಿಚ್ಚಾರು-ಇಳಂತಾಜೆ-ಕೆಯ್ಯೂರು ರಸ್ತೆ ಕಾಮಗಾರಿ ನಾಲ್ಕು ತಿಂಗಳ ಹಿಂದೆ ಪ್ರಾರಂಭಗೊಂಡಿದ್ದು ರಸ್ತೆ ಕಾಮಗಾರಿ ಪ್ರಾರಂಭಗೊಂಡ ದಿನದಿಂದ ಇಂದಿನ ವರೆಗೂ ಇಳಂತಾಜೆ ಸಂತೋಷ್ ರೈ ಅವರು ರಸ್ತೆ ಕಾಮಗಾರಿ ಬಗ್ಗೆ ನಿಗಾ ವಹಿಸಿ ಕಾರ್ಯಪ್ರವೃತ್ತರಾಗಿದ್ದಾರೆ. ಕಾಮಗಾರಿ ಆರಂಭ ಆಗುವ ವೇಳೆ ರಸ್ತೆಗೆ ವರ್ಗ ಜಾಗ ಬಿಟ್ಟುಕೊಡುವ ಕೊಡುವ ವಿಚಾರದಲ್ಲಿ ಕೆಲವು ತಕರಾರು ಎದ್ದಿತ್ತು. ಆ ಸಂದರ್ಭದಲ್ಲಿ ಸಂಬಂಧಪಟ್ಟ ಮನೆಯವರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿರುವ ಇಳಂತಾಜೆ ಸಂತೋಷ್ ರೈ ಅವರು ರಸ್ತೆ ಬದಿಯಲ್ಲಿರುವ ಮರಗಳನ್ನು ತೆರವು ಮಾಡುವ ವಿಚಾರದಲ್ಲೂ ಮುಂಚೂಣಿಯಲ್ಲಿ ಅರಣ್ಯ ಇಲಾಖೆಯವರೊಂದಿಗೆ ಸಂಪೂರ್ಣವಾಗಿ ಸಹಕಾರ ನೀಡುವ ಮೂಲಕ ರಸ್ತೆ ಕಾಮಗಾರಿ ಸುಸೂತ್ರವಾಗಿ ಸಾಗಲು ನೆರವಾಗಿದ್ದರು. ರಸ್ತೆ ಕಾಂಕ್ರೀಟ್ ಕಾಮಗಾರಿ ಆದ ಬಳಿಕ ಪ್ರತೀ ದಿನ ಬೆಳಿಗ್ಗೆ 6 ಗಂಟೆಗೆ ಬಂದು ಕೆಲಸಗಾರರನ್ನು ಸೇರಿಸಿಕೊಂಡು ರಸ್ತೆಗೆ ನೀರು ಹಾಯಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮಾತ್ರವಲ್ಲದೇ ಪ್ರತೀ ದಿನ ರಸ್ತೆ ಕಾಮಗಾರಿಯನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಾ ಏನಾದರೂ ಎಡರು ತೊಡರುಗಳಿದ್ದಲ್ಲಿ ಅದನ್ನು ಸಂಬಂಧಪಟ್ಟವರಿಗೆ ತಿಳಿಸುವ ಕೆಲಸವನ್ನು ಕೂಡಾ ಮಾಡುತ್ತಿದ್ದಾರೆ. ತನ್ನ ಮನೆ ಸಮೀಪದಲ್ಲಿರವ ಬೋರ್ವೆಲ್ನ್ನು ರಸ್ತೆ ಕಾಮಗಾರಿ ಮಾಡುತ್ತಿರುವ ಕೆಲಸಗಾರರಿಗೆ ಉಪಯೋಗಿಸಿಕೊಳ್ಳಲು ತಾತ್ಕಾಲಿಕವಾಗಿ ಬಿಟ್ಟುಕೊಟ್ಟಿದ್ದಾರೆ. ರಸ್ತೆ ಕಾಮಗಾರಿ ನಿರ್ವಹಿಸುತ್ತಿರುವ ಕೆಲಸಗಾರರಿಗೆ ಕೆಲವು ಬಾರಿ ತಮ್ಮ ಮನೆಯಲ್ಲಿ ಹೊಟ್ಟೆ ತುಂಬಾ ಚಿಕನ್ ಊಟವನ್ನೂ ನೀಡಿದ್ದಾರೆ.
ಒಟ್ಟಿನಲ್ಲಿ ವ್ಯಕ್ತಿಯೋರ್ವರು ತನ್ನ ಊರಿನಲ್ಲಿ ಆಗುತ್ತಿರುವ ರಸ್ತೆ ಕಾಮಗಾರಿ ಬಗ್ಗೆ ಈ ಮಟ್ಟದಲ್ಲಿ ಮುತುವರ್ಜಿ ವಹಿಸಿರುವುದು ಮತ್ತು ಸಾರ್ವಜನಿಕವಾಗಿ ಆಗುತ್ತಿರುವ ಕಾಮಗಾರಿಯನ್ನು ತನ್ನ ಮನೆಯ ಕೆಲಸಕ್ಕಿಂತಲೂ ಹೆಚ್ಚಾಗಿ ಜವಾಬ್ದಾರಿ ವಹಿಸಿ ಸಾಮಾಜಿಕ ಬದ್ಧತೆ ಮೆರೆದಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಇಳಂತಾಜೆ ಸಂತೋಷ್ ರೈ ಅವರ ಸಾಮಾಜಿಕ ಕಾಳಜಿ ಇತರರಿಗೆ ಮಾದರಿಯಾಗಿದೆ.
ಕೌಡಿಚ್ಚಾರು-ಇಳಂತಾಜೆ-ಕೆಯ್ಯೂರು ರಸ್ತೆ ಹದಗೆಟ್ಟು ಹಲವು ವರ್ಷ ಕಳೆದ ಪರಿಣಾಮ ವಾಹನ ಸವಾರರು, ಸಾರ್ವಜನಿಕರು ಬಹಳ ಸಂಕಷ್ಟಪಡುತ್ತಿದ್ದರು. ಈ ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ನಮ್ಮ ಬೇಡಿಕೆ ಈಡೇರಿರಲಿಲ್ಲ. ಶಾಸಕ ಅಶೋಕ್ ರಯ ಅವರು ಶಾಸಕರಾದ ಬಳಿಕ ನಾವು ಅವರಲ್ಲಿ ಈ ರಸ್ತೆಯ ಬಗ್ಗೆ ತಿಳಿಸಿ ಅನುದಾನಕ್ಕೆ ಬೇಡಿಕೆ ಇಟ್ಟಿದ್ದೆವು, ಸ್ಪಂದಿಸಿದ ಶಾಸಕರು ರೂ.5 ಕೋಟಿ ಅನುದಾನದವನ್ನು ಒದಗಿಸುವ ಮೂಲಕ ಬಹುಕಾಲದ ಬೇಡಿಕೆಯೊಂದನ್ನು ಈಡೇರಿಸಿದ್ದಾರೆ. ನಮ್ಮೂರಿನ ರಸ್ತೆ ಕಳಪೆಯಾಗದೇ ಸಧೃಢವಾಗಿ ಆಗಬೇಕು ಮತ್ತು ಅದು ಮುಂದಿನ ಪೀಳಿಗೆಗೂ ಉಪಯೋಗವಾಗಬೇಕು ಎನ್ನುವ ಕಾರಣಕ್ಕೆ ರಸ್ತೆ ಬಗ್ಗೆ ಕಾಳಜಿ ವಹಿಸುವುದು ನಮ್ಮ ಜವಾಬ್ದಾರಿ. ನಮ್ಮೂರಿಗೆ ರಸ್ತೆ ಆಗುವಾಗ ಅದಕ್ಕೆ ಸಹಕಾರ ನೀಡುವುದು ನಮ್ಮ ಕರ್ತವ್ಯವೂ ಹೌದು. ಈ ನಿಟ್ಟಿನಲ್ಲಿ ನನ್ನಿಂದಾಗುವ ಸಣ್ಣ ಸಹಕಾರವನ್ನು ನೀಡುತ್ತಿದ್ದೇನೆ ಎಂದು ಇಳಂತಾಜೆ ಸಂತೋಷ್ ರೈ ತಿಳಿಸಿದ್ದಾರೆ.
ಇಳಂತಾಜೆ ಸಂತೋಷ್ ರೈ ಅವರನ್ನು ನಾನು ಹತ್ತಿರದಿಂದ ಬಲ್ಲವನು. ಅವರು ಯಾವುದೇ ಕೆಲಸ ಕಾರ್ಯಗಳನ್ನು ಬಹಳ ಶಿಸ್ತು ಮತ್ತು ನಿಯ್ಯತ್ತಿನಿಂದ ಮಾಡುವವರು. ಪ್ರಸ್ತುತ ಕಾಮಗಾರಿ ನಡೆಯುತ್ತಿರುವ ಕೌಡಿಚ್ಚಾರು-ಇಳಂತಾಜೆ-ಕೆಯ್ಯೂರು ರಸ್ತೆಯ ಬಗ್ಗೆ ಅವರು ವಹಿಸಿರುವ ಮುತುವರ್ಜಿ ಮೆಚ್ಚುವಂತದ್ದು. ಪ್ರತೀ ದಿನ ರಸ್ತೆಯ ಬಗ್ಗೆ ಗಮನಹರಿಸುವುದಲ್ಲದೇ ಅದಕ್ಕೆ ಬೇಕಾದ ಅನೇಕ ಅಗತ್ಯತೆಗಳನ್ನು ಕೂಡಾ ಅವರು ಪೂರೈಸಿದ್ದಾರೆ. ಈ ರಸ್ತೆಗೆ ಇಷ್ಟು ದೊಡ್ಡ ಅನುದಾನ ಬರಲೂ ಸಂತೋಷ್ ರೈ ಪ್ರಮುಖ ಕಾರಣಕರ್ತರು. ರಸ್ತೆ ಕಾಮಗಾರಿ ಸಂದರ್ಭ ಅವರು ನೀಡುತ್ತಿರುವ ಸಹಕಾರ ಮತ್ತು ಕಾಳಜಿ ಗಮನಿಸುವಾಗ ಅವರ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಇಳಂತಾಜೆ ಸಂತೋಷ್ ರೈ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ತಿಳಿಸಿದ್ದಾರೆ.






