





ಹಿರೇಬಂಡಾಡಿ: ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ ಇಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಧರ ಭಟ್ರವರಿಗೆ ಬೀಳ್ಕೊಡುಗೆ, 2024-25ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಸನ್ಮಾ ನ, ಶಿಕ್ಷಕ-ಪೋಷಕರ ಮಹಾಸಭೆ ಹಾಗೂ ಮಕ್ಕಳ ದಿನಾಚರಣೆ ನ.14ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.


ಆರಂಭದಲ್ಲಿ ಜವಾಹರ ಲಾಲ್ ನೆಹರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಹಿರೇಬಂಡಾಡಿ ಗ್ರಾ.ಪಂ.ಸದಸ್ಯ ಸತೀಶ್ ಶೆಟ್ಟಿ ಹೆನ್ನಾಳ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರವೀಂದ್ರ ಪಟಾರ್ತಿ ಶುಭಹಾರೈಸಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಿಪಾಣಿ ಎ.ವಿ. ಅವರು ಶಿಕ್ಷಕ-ಪೋಷಕ ಸಭೆಯ ಬಗ್ಗೆ ಮಾತನಾಡಿದರು. ಶಾಲಾ ವೈವಿಧ್ಯಮಯ ಶೈಕ್ಷಣಿಕ ಚಟುವಟಿಕೆಗಳನ್ನು ಬಿಂಬಿಸುವ ವೀಡಿಯೋ ಪ್ರದರ್ಶಿಸಲಾಯಿತು.





ಬೀಳ್ಕೊಡುಗೆ;
ನಿವೃತ್ತ ಮುಖ್ಯ ಶಿಕ್ಷಕ ಶ್ರೀಧರ್ ಭಟ್ರವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು. ಸಮಾಜ ವಿಜ್ಞಾನ ಬೋಧಕಿ ಲಲಿತಾ ಕೆ. ಅಭಿನಂದನಾ ಭಾಷಣ ಮಾಡಿದರು. ವಿಜ್ಞಾನ ಶಿಕ್ಷಕ ಮನೋಹರ್ ಎಂ. ಅಭಿನಂದನಾ ಪತ್ರ ವಾಚಿಸಿದರು. ಆಂಗ್ಲಭಾಷಾ ಭೋದಕ ವಸಂತ್ ಕುಮಾರ್ ಅಭಿನಂದನೆ ಸಲ್ಲಿಸಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡರವರು ಶ್ರೀಧರ್ ಭಟ್ರವರ ಜೊತೆಗಿನ ಒಡನಾಟದ ಸವಿನೆನಪುಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳೂ ಅಭಿನಂದನೆ ಸಲ್ಲಿಸಿದರು. ಗೌರವ ಸ್ವೀಕರಿಸಿದ ಶ್ರೀಧರ್ ಭಟ್ ಕೃತಜ್ಞತೆ ಸಲ್ಲಿಸಿದರು.

ಸಾಧಕರಿಗೆ ಸನ್ಮಾನ:
ಕಳೆದ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ಸಾಧಕರನ್ನು ಮತ್ತು ಕ್ರೀಡಾ ಸಾಧಕರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಕಳೆದ ವರ್ಷದ ಎಸ್.ಎಸ್.ಎಲ್.ಸಿ ಪ್ರಥಮ ಸ್ಥಾನಿ ಸಾಜಿದಾ ಅನಿಸಿಕೆ ವ್ಯಕ್ತಪಡಿಸಿದರು.
ಶಾಲಾ ಪ್ರಭಾರ ಮುಖ್ಯಗುರು ಉಷಾಕಿರಣ್ ಶಿಕ್ಷಕ-ಪೋಷಕ ಮಹಾಸಭೆಯ ಉದ್ದೇಶ, ರೂಪುರೇಷೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹತ್ತನೇ ತರಗತಿ ವಿದ್ಯಾರ್ಥಿನಿ ತನುಶ್ರೀ ಸಂವಿಧಾನದ ಪೂರ್ವ ಪೀಠಿಕೆ ವಾಚಿಸಿದರು. ಕನ್ನಡ ಭಾಷಾ ಶಿಕ್ಷಕಿ ಮಲ್ಲಿಕಾ ಐ. ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನದ ಬಳಿಕ ಮಕ್ಕಳಿಗೆ ವಿವಿಧ ಆಟಗಳನ್ನು ಆಡಿಸಲಾಯಿತು. ರಂಗೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಬಹುಮಾನ ವಿಜೇತರ ಪಟ್ಟಿಯನ್ನು ಶಿಕ್ಷಕಿಯರಾದ ಆರತಿ, ಸುಧಾ ಕೆ.ಎಂ.ವಾಚಿಸಿದರು.








