





ರಾಮಕುಂಜ: ಶ್ರೀ ರಾಮಕುಂಜೇಶ್ವರ ವೃತ್ತಿಪರ ಶಿಕ್ಷಣ ಅಭಿವೃದ್ಧಿ ಕೇಂದ್ರ ಇದರ ಶ್ರೀ ರಾಮಕುಂಜೇಶ್ವರ ಬಡ ವಿದ್ಯಾರ್ಥಿ ದತ್ತಿನಿಧಿ, ಶ್ರೀ ರಾಮಕುಂಜೇಶ್ವರ ಕ್ರೀಡಾ ಟ್ರಸ್ಟ್ ಮತ್ತು ಭೂಮಿ ಚಾರಿಟೇಬಲ್ ಟ್ರಸ್ಟ್ ಮುಂಬೈ, ಕರಾವಳಿ ಗ್ರೂಪ್ ಆಫ್ ಕಾಲೇಜ್ ಎಕ್ಸಲೆಂಟ್ ಅವಾರ್ಡ್ ಇವರ ಸಹಯೋಗದೊಂದಿಗೆ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆ ಹಾಗೂ ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಆಶ್ರಯದಲ್ಲಿ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ’ ಕಲಾ ಪಲ್ಲವ’ ಅ.17ರಂದು ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆಯಿತು.


ವಿದ್ಯಾರ್ಥಿ ವೇತನ ವಿತರಿಸಿ ಆಶೀರ್ವಚನ ನೀಡಿದ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು, ಶಿಕ್ಷಣ ಸಂಸ್ಥೆಯಲ್ಲಿ ಬುದ್ದಿವಂತಿಕೆ ಸಂಪಾದನೆಯ ಜೊತೆಗೆ ಬುದ್ದಿಯನ್ನು ಸದ್ವಿನಿಯೋಗ ಮಾಡುವ ಸಂಸ್ಕಾರ ಸಿಗಬೇಕು. ಸಮಾಜಕ್ಕೆ ಘಾತಕ ಪರಿಣಾಮ ಉಂಟುಮಾಡುವ ವಿದ್ಯಾರ್ಥಿಗಳಾಗದೆ, ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಸುಸಂಸ್ಕೃತವಾದ ವಿದ್ಯೆಯೊಂದಿಗೆ ಬೆಳೆದರೆ ದೇಶಕ್ಕೆ ಆಸ್ತಿಯಾಗುತ್ತಾರೆ ಎಂದು ನುಡಿದರು.





ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು, ಸಂಸ್ಥೆಯ ಹಾಗೂ ರಾಮಕುಂಜ ಆಸುಪಾಸಿನ 14 ಶಾಲೆಗಳಲ್ಲಿ ಕಲಿಯುತ್ತಿರುವ ಪ್ರತಿಭಾವಂತ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಉತ್ತೇಜನ ಕೊಡುವ ಉದ್ದೇಶದಿಂದ ಸುಮಾರು 3 ಲಕ್ಷ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಕ್ರೀಡಾ ಟ್ರಸ್ಟ್, ಬಡ ವಿದ್ಯಾರ್ಥಿನಿಧಿ, ಕರಾವಳಿ ಗ್ರೂಪ್ ಆಫ್ ಕಾಲೇಜು ಎಕ್ಸಲೆಂಟ್ ಅವಾರ್ಡ್ ಇವರು ನೀಡಿದ 1 ಲಕ್ಷ ರೂ. ಠೇವಣಿಯಿಂದ ಬರುವ ಬಡ್ಡಿ ಹಣದಲ್ಲಿ ಮತ್ತು ಪಿ.ಸಿ. ರಾವ್ ಮುಂಬೈ ಇವರು ಕಳೆದ 13 ವರ್ಷಗಳಿಂದ ಪ್ರತಿವರ್ಷ 60 ಸಾವಿರ ರೂ. ನೀಡುತ್ತಿದ್ದು ಇವೆಲ್ಲವನ್ನು ವಿದ್ಯಾರ್ಥಿವೇತನ ರೂಪದಲ್ಲಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಮುಂದೆ ದೊಡ್ಡ ದಾನಿಗಳಾಗಿ ಸಮಾಜಕ್ಕೆ ಒಳ್ಳೆಯ ಪ್ರಜೆಗಳಾಗಿ ಬೆಳೆಯಬೇಕು ಎಂದು ಹೇಳಿದರು.
ಮುಖ್ಯಅತಿಥಿಗಳಾಗಿದ್ದ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಡಾ.ಜಿತೇಂದ್ರ ಪ್ರಸಾದ್ ಎ.ವಿ., ಮಕ್ಕಳ ತಜ್ಞರಾದ ಡಾ.ಚರಣ್ ಆರ್.ಕೆ., ಕೆ.ಪಿ.ಎಮ್.ಜಿ. ಬೆಂಗಳೂರು ಇದರ ಐ.ಟಿ ಆಡಿಟರ್ ಲಸಿತಾ ಹಾಗೂ ನರಿಮೊಗರಿನ ರೈಲ್ವೆ ಸ್ಟೇಷನ್ ಮಾಸ್ಟರ್ ಕೀರ್ತಿಕಾ ಸನ್ಮಾನ ಸ್ವೀಕರಿಸಿ ಸಂಸ್ಥೆಯೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಸಂಚಾಲಕರಾದ ಶಿವಪ್ರಸಾದ್ ಇಜ್ಜಾವು, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್, ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಗುರು ಸತೀಶ್ ಭಟ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಗಿರೀಶ್ ಎ.ಪಿ. ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯಗುರು ಗಾಯತ್ರಿ ಯು.ಎನ್ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯಗುರು ಲೋಹಿತಾ ಎ.ವಂದಿಸಿದರು. ಸಹಶಿಕ್ಷಕ ಕಿಶೋರ್ ಕುಮಾರ್ ಬಿ. ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಆಡಳಿತಾದಿಕಾರಿ ಆನಂದ್ ಎಸ್.ಟಿ. ವ್ಯವಸ್ಥಾಪಕರಾದ ರಮೇಶ್ ರೈ, ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಪ್ರಾಂಶುಪಾಲರಾದ ಪ್ರವೀದ್ ಪಿ. ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಕರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.









