





ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿರುವ ಸಭಾಭವನ ಕಟ್ಟಡ, ಅಯ್ಯಪ್ಪ ಗುಡಿ, ನಾಗನಕಟ್ಟೆ ಮತ್ತು ನವಗ್ರಹ ಗುಡಿಗಳನ್ನು ಅಲ್ಲಿಂದ ತೆರವು ಮಾಡಬೇಕು ಜೊತೆಗೆ ಸಭಾಭವನ ಇದ್ದ ಜಾಗದಲ್ಲಿ ಗದ್ದೆಯನ್ನು ಮಾಡಬೇಕು,ಅಲ್ಲಿಂದ ದೇವರಿಗೆ ತೆನೆ ಸಮರ್ಪಣೆಯಾಗಬೇಕು ಎನ್ನುವ ವಿಚಾರವು ಪ್ರಶ್ನಾ ಚಿಂತನೆಯಲ್ಲಿ ಕಂಡುಬಂತು.


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ, ದೇವರಮಾರು ಗದ್ದೆಯಲ್ಲಿರುವ ಶ್ರೀ ಮಹಾಲಿಂಗೇಶ್ವರ ಸಭಾಭವನ ಕಟ್ಟಡ, ನಾಗನಕಟ್ಟೆ, ಅಯ್ಯಪ್ಪ ಗುಡಿ ಮತ್ತು ನವಗ್ರಹ ಗುಡಿಗಳನ್ನು ಅಲ್ಲೇ ಉಳಿಸಿಕೊಳ್ಳುವುದೋ ಅಥವಾ ತೆರವು ಮಾಡುವುದೋ ಎನ್ನುವ ಬಗ್ಗೆ ಪ್ರಶ್ನಾಚಿಂತನೆ ನಡೆಸಿ ಉತ್ತರ ಕಂಡುಕೊಳ್ಳುವ ಕುರಿತು ಭಕ್ತಾದಿಗಳ ಸಭೆಯಲ್ಲಿ ನಿರ್ಧಾರವಾಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ತಾಂಬೂಲ ಪ್ರಶ್ನಾಚಿಂತನೆಯು ನ.18ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮಹಾಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.ದೈವಜ್ಞರಾದ ಉಡುಪಿ ಕಾಪು ಶ್ರೀ ಮಾರಿಯಮ್ಮ ದೇವಸ್ಥಾನದ ತಂತ್ರಿಗಳಾದ ಕೆ.ಪಿ.ಕುಮಾರಗುರು ತಂತ್ರಿ ಕೊರಂಗ್ರಪಾಡಿ ಇವರ ನೇತೃತ್ವದಲ್ಲಿ ನಡೆದ ತಾಂಬೂಲ ಪ್ರಶ್ನಾಚಿಂತನೆಯಲ್ಲಿ,ಮಹಾಲಿಂಗೇಶ್ವರ ದೇವರ ಅಸಮಾಧಾನಕ್ಕೆ ಕಾರಣವಾಗಿರುವ ಸಭಾಭವನ ಕಟ್ಟಡ,ನವಗ್ರಹ ಗುಡಿ,ನಾಗನಕಟ್ಟೆ ಮತ್ತು ಅಯ್ಯಪ್ಪ ಗುಡಿಯನ್ನು ಅಲ್ಲಿಂದ ತೆರವು ಮಾಡಬೇಕು ಎಂದು ಕಂಡು ಬಂತು.





ಪೂರ್ವಾಹ್ನ ಸುಮಾರು 10.45ರ ಸುಮಾರಿಗೆ ಶುರುವಾದ ಪ್ರಶ್ನಾಚಿಂತನೆಯು ಮಧ್ಯಾಹ್ನ 1 ಗಂಟೆಯವರೆಗೂ ನಡೆಯಿತು.ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ದೀಪ ಬೆಳಗಿಸಿ, ದೈವಜ್ಞರಿಗೆ ತಾಂಬೂಲ ರಾಶಿ ಪ್ರಶ್ನೆಗೆ ವೀಳ್ಯ ನೀಡಿದರು.ಬಳಿಕ ದೈವಜ್ಞರ ಸೂಚನೆಯಂತೆ ಸೇರಿದ್ದ ಭಕ್ತರೆಲ್ಲರೂ ಪ್ರಾರ್ಥಿಸಿ, ತಾಂಬೂಲ ಪ್ರಶ್ನೆಗೆ ದೈವಜ್ಞರು ರಾಶಿ ಇಟ್ಟರು.ಆರೂಢರಾಶಿಯಾಗಿ ವೃಶ್ಚಿಕ ರಾಶಿ ಬಂದಿದ್ದು, ಉದಯರಾಶಿಯಾಗಿ ಮಕರ, ಲಗ್ನಾಂಶ ರಾಶಿಯಾಗಿ ಕುಂಭ, ಛತ್ರ ರಾಶಿಯಾಗಿ ಸಿಂಹ, ಸ್ಪಷ್ಟಾಂಗ ರಾಶಿಯಾಗಿ ಮಿಥುನ ಮತ್ತು ಚಂದ್ರಾಷ್ಠಿತ ರಾಶಿಯಾಗಿ ತುಲಾ ರಾಶಿಯು ಗೋಚರಿಸಿತು.ಒಟ್ಟು 6 ರಾಶಿಯಲ್ಲಿ 4 ಅನುಕೂಲವಾಗಿ ಮತ್ತು 2 ಪ್ರತಿಕೂಲವಾಗಿ ಕಂಡುಬಂತು.
ತಾಂಬೂಲ ಪ್ರಶ್ನೆಯ ರಾಶಿಯಲ್ಲಿ ಕಂಡು ಬಂದ ವಿಚಾರಗಳನ್ನು ಶ್ಲೋಕಗಳ ಮೂಲಕ ವಿವರಿಸಿದ ದೈವಜ್ಞ ಶ್ರೀ ಕುಮಾರ ಗುರು ತಂತ್ರಿಯವರು, ‘ಸಭಾಭವನ ವಿಚಾರದ ಕುರಿತು ತಾಂಬೂಲ ರಾಶಿ ಪ್ರಶ್ನೆ ಇಟ್ಟಿದ್ದು, ಸ್ಥಿರ ರಾಶಿ ಬಂದಿದ್ದರೂ, ಅದರ ಗೂಡಾರ್ಥವನ್ನು ಗಮನಿಸಿದರೆ ಹೊರಗಡೆ ಏನು ಇದೆಯೋ ಒಳಗಡೆ ಅದು ಇಲ್ಲ ಎಂದರ್ಥ.ವೃಶ್ಚಿಕ ರಾಶಿ ಹೇಗೆ ಎಂದರೆ ಚೇಳಿನಂತೆ ಸ್ವಯಂಕೃತ ಅನರ್ಥ ರಾಶಿ ಎಂದು.ಅಂದರೆ ಸಭಾಭವನ ಕಟ್ಟಡವನ್ನು ಮಾಡಿರುವ ಉದ್ದೇಶವೇ ಮುಳುವಾಗಿರುವ ಲಕ್ಷಣಗಳು ಕಂಡುಬರುತ್ತಿವೆ.ಉದ್ದೇಶಿತ ಕೆಲಸಗಳು ಆಗದೇ ಇರುವಂಥದ್ದು ಕಂಡುಬರುತ್ತಿದೆ.ಈ ವ್ಯವಸ್ಥೆಯಲ್ಲಿ ಪ್ರಬಲವಾದ ದೋಷಗಳು ಇರುವುದು ಕಂಡುಬರುತ್ತಿವೆ. ಇವೆಲ್ಲವನ್ನೂ ವಿಮರ್ಶೆ ಮಾಡೋಣ ಎಂದು ಹೇಳಿದರು.
ಸಭಾಭವನ ಕಟ್ಟಡವನ್ನು ನಿರ್ಮಿಸಿದ ಉದ್ದೇಶವೇನೆಂಬ ದೈವಜ್ಞರ ಪ್ರಶ್ನೆಗೆ ಉತ್ತರಿಸಿದ ದೇವಳದ ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್ ಅವರು, ‘ನಮ್ಮ ಅವಧಿಯಲ್ಲಿ ಸಭಾಭವನ ಕಟ್ಟಡ ಆಗಿದೆ.ಆಗ ಭಕ್ತರಿಗೆ ಅನ್ನದಾನಕ್ಕೆ ಸ್ಥಳಾವಕಾಶ ಇರಲಿಲ್ಲ.ಈಗ ಕಟ್ಟಡ ಇರುವ ಜಾಗ ಹಿಂದೆ ದೇವಳದ ಕೈಯಲ್ಲಿ ಇರಲಿಲ್ಲ.ಭೂಮಸೂದೆಯಲ್ಲಿ ಹೋಗಿದ್ದ ಜಾಗವನ್ನು ನಾವು ರಥಬೀದಿ ಮತ್ತು ಶಾಪಿಂಗ್ ಕಾಂಪ್ಲೆಕ್ಸ್, ಭಕ್ತಾದಿಗಳ ಅನುಕೂಲಕ್ಕಾಗಿ ಈಗ ಸಭಾಭವನ ಇರುವ ಜಾಗವನ್ನು ಅಕ್ವೈರ್ ಮಾಡಿಕೊಂಡಿದ್ದೆವು.ಮೊದಲಿಗೆ ಇಲ್ಲಿ ಯಾವುದೇ ಕಟ್ಟಡ ನಿರ್ಮಿಸಿರಲಿಲ್ಲ.ಅಲ್ಲಿಯವರೆಗೆ ಸರಕಾರ ಯಾವುದೇ ದೇವಸ್ಥಾನಕ್ಕೆ ಕೃಷಿಭೂಮಿಯನ್ನು ಅಕ್ವೈರ್ ಮಾಡಿಕೊಂಡಿರಲಿಲ್ಲ.ಹೀಗಾಗಿ ಕೂಡಲೇ ಅಲ್ಲಿ ಕಟ್ಟಡ ನಿರ್ಮಿಸಬೇಕು.ಇಲ್ಲದಿದ್ದಲ್ಲಿ ಸರಕಾರ ವಾಪಸ್ ಪಡೆದುಕೊಳ್ಳುತ್ತದೆ ಎಂಬ ಸೂಚನೆ ಹಿನ್ನೆಲೆಯಲ್ಲಿ ರಥಬೀದಿ ಮತ್ತು ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಲು ಮುಂದಾದೆವು.ರಥಬೀದಿ ನಿರ್ಮಿಸಿದ ಬಳಿಕ ಹಿಂದೆ ಯೋಚಿಸಿದ್ದ ಜಾಗದಲ್ಲಿ ಸಭಾಭವನ ಕಟ್ಟಡ ಕಟ್ಟಲು ಸಾಧ್ಯವಾಗಲಿಲ್ಲ.ಹೀಗಾಗಿ ಈಗ ಇರುವ ಜಾಗದಲ್ಲಿ ಕಟ್ಟಿದ್ದೆವು.ಇದಕ್ಕೆ ಭೂಮಿಪೂಜೆ ನೆರವೇರಿಸಿದವರು ಕೃಷ್ಣ ತಂತ್ರಿಗಳು. ಬಳಿಕ ನಾವು ಇಲಾಖೆಗೆ ಬರೆದು ಟೆಕ್ನಿಕಲ್ ಸ್ಯಾಂಕ್ಷನ್ ಪಡೆದುಕೊಂಡೆವು.ಕಂಬಳ ನಡೆಯುವ ಜಾಗ ಮಾತ್ರ ದೇವಸ್ಥಾನದ್ದಾಗಿತ್ತು.ಈ ಜಾಗ ಕ್ರಿಶ್ಚಿಯನ್ ಕುಟುಂಬಸ್ಥರ ಬಳಿ ಇತ್ತು.ನಮಗೆ ಸಭಾ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ ಮಾಡಲು ಸ್ಥಳಾವಕಾಶ ಇರಲಿಲ್ಲ,ಹೀಗಾಗಿ ಈ ಕಟ್ಟಡವನ್ನು ರಚಿಸಿದೆವು’ ಎಂದು ಹೇಳಿದರು.
ಜಾಗ ದೇವರದ್ದೇ..:
ಇದಕ್ಕೆ ಉತ್ತರಿಸಿದ ದೈವಜ್ಞರು,‘ಹಿಂದೆ ಮಾಡಿರುವುದು ಅನುಚಿತ ಎಂದರ್ಥ ಅಲ್ಲ.ಮಾಡಿರುವ ಉದ್ದೇಶ ಎಲ್ಲವೂ ಶುದ್ಧವೇ. ಆದರೆ ಇಲ್ಲಿ ರೋಗ ಶಮನಕ್ಕೆಂದು ಮಾಡಿದ ಚಿಕಿತ್ಸೆ ಮತ್ತೊಂದು ಅನಾರೋಗ್ಯಕ್ಕೆ ಕಾರಣವಾದಂತಾಗಿದೆ.ಒಂದೊಂದು ಪ್ರದೇಶದಲ್ಲಿ, ಒಂದೊಂದು ಸಮಯದಲ್ಲಿ ಒಂದೊಂದು ವ್ಯವಸ್ಥೆಗಳು ಸರಿ ತಪ್ಪು ಎಂದು ನಿರ್ಧಾರವಾಗುತ್ತದೆ. ಆದರೆ ಇಲ್ಲಿ ಆರೂಢ ರಾಶಿಯನ್ನು ಗಮನಿಸಿದರೆ ನಾವು ಏನು ಮಾಡಿದ್ದೇವೆಯೋ ಅದೇ ಮುಳುವಾಗಿ ಬಂದಿರುವಂತೆ ಕಾಣುತ್ತಿದೆ.ಯಾರನ್ನೂ ತೃಪ್ತಿಪಡಿಸಲು ಇಲ್ಲಿರುವ ವಿಷಯ ಹೇಳಲು ಆಗುವುದಿಲ್ಲ.ಹೇಳುವ ವಿಷಯವನ್ನು ಮಹಾಲಿಂಗೇಶ್ವರ ದೇವರು ನ್ಯಾಯ ಎಂದು ಹೇಳಿದರೆ ಮುಗಿಯಿತು.ನಾವು ಖರೀದಿ ಮಾಡುವ ಸಮಯದಲ್ಲಿ ಈ ಭೂಮಿ ಬೇರೆಯವರ ಬಳಿ ಇದ್ದಿರಬಹುದು. ಆದರೆ ಈ ಭೂಮಿ ಅನಾದಿಕಾಲದಲ್ಲಿ ದೇವರದ್ದೇ ಆಗಿತ್ತು’ ಎಂದು ಹೇಳಿದರು.
ಮುಂದಕ್ಕೆ ವಿವರಿಸಿದ ದೈವಜ್ಞರು, ‘ಪುತ್ತೂರು ಮಹಾಲಿಂಗೇಶ್ವರ ದೇವರಿಗೆ ಸಂಬಂಧಿಸಿದ ವಿಚಾರಗಳು ಮತ್ತು ಭೂಮಿ ನಮ್ಮ ಜ್ಞಾನವನ್ನು ಮೀರಿದ ವಿಚಾರ. ಹಿಂದಿನ ಕಾಲದಲ್ಲಿ ಅಂದರೆ ಸುಮಾರು 100-125 ವರ್ಷಗಳ ಹಿಂದೆ ಈ ಜಾಗದಲ್ಲಿ ಮಹಾಲಿಂಗೇಶ್ವರ ದೇವರಿಗೆ ಸಂಬಂಧಪಟ್ಟ ಯಾವುದೋ ಒಂದು ಕ್ರಿಯೆ ಅಥವಾ ಸಾಧನಗಳು ಇದ್ದು, ಅದು ನಾಶಾವಸ್ಥೆಗೆ ಹೋಗಿದೆ.ಅದೆಲ್ಲವೂ ಈ ವ್ಯವಸ್ಥೆಗಳನ್ನು ಮಾಡುವುದಕ್ಕೆ ತಡೆಯಾಗಿವೆ ಎನ್ನುವ ಲಕ್ಷಣಗಳು ಕಂಡುಬರುತ್ತಿವೆ. ಈ ಗದ್ದೆಗೆ ಏನಾದರೂ ಹೆಸರಿತ್ತೇ?’ ಎಂದು ಪ್ರಶ್ನಿಸಿದರು. ಜೊತೆಗೆ ‘ದೇವರಿಗೆ ಕದಿರು ಕಟ್ಟುವುದಕ್ಕೆ ಬರುವ ಕದಿರನ್ನು ಎಲ್ಲಿಂದ ತರುತ್ತಿದ್ದೀರಿ’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು, ‘ಈಗ ದೇವಸ್ಥಾನದ ಗದ್ದೆಯಲ್ಲೇ ಸ್ವಲ್ಪ ಬೆಳೆಸುತ್ತೇವೆ. ಜೊತೆಗೆ ಬೇರೆ ಕಡೆಯಿಂದ ತರುತ್ತೇವೆ’ ಎಂದು ಉತ್ತರಿಸಿದರು.
ದೇವರಿಗೆ ಸಂಬಂಧಿಸಿದ ಕ್ರಿಯೆಯೊಂದು ಇವತ್ತು ನಡೆಯುತ್ತಿಲ್ಲವೆನ್ನುವ ಬೇಸರ, ಕ್ಲೇಷ ದೇವರಿಗಿದೆ:
ಮುಂದುವರೆಸಿದ ದೈವಜ್ಞರು,‘ನೂರಕ್ಕೆ ನೂರು ಈ ಭಾಗದಲ್ಲಿ ಕದಿರು ಕಟ್ಟುವುದಕ್ಕಾಗಿ ಇಲ್ಲಿದ್ದ ಗದ್ದೆಗೆ ಪ್ರತ್ಯೇಕ ಆರಾಧನಾದಿಗಳು ನಡೆಯತ್ತಿದ್ದವು.ದೇವರಲ್ಲಿ ಪ್ರಾರ್ಥನೆ ಮಾಡಿ ಈ ಗದ್ದೆಗೆ ಬಂದು ಇಲ್ಲಿ ಒಂದಷ್ಟು ಪ್ರಕೃತಿಗೆ ಆರಾಧನಾದಿಗಳನ್ನು ಮಾಡಿ ಕದಿರನ್ನು ತೆಗೆದುಕೊಂಡು ಹೋಗುತ್ತಿದ್ದಂತಹ ಲಕ್ಷಣವನ್ನು ಇತಿಹಾಸಭಾವ ಸೂಚಿಸುತ್ತದೆ.ಸಭಾಭವನ ಕಟ್ಟಿ ಆ ಸಂಪ್ರದಾಯ ನಾಶ ಆಗಿದೆ ಎಂದಲ್ಲ, ಅದಕ್ಕೂ ಮೊದಲೇ ಆಗಿದೆ. ಈ ಭೂಮಿ ಈಶ್ವರ ದೇವರಿಗೆ ಸಂಬಂಧಿಸಿದ್ದು ಎನ್ನುವುದಕ್ಕೆ ಸಂಶಯವಿಲ್ಲ.ಯಾವ ಉದ್ದೇಶದಿಂದ ರಾಶಿ ಇಟ್ಟಿದ್ದೇವೋ, ಆ ರಾಶಿಯಲ್ಲಿ ರವಿಯೇ ಇರುವುದರಿಂದ ಸಾಕ್ಷಾತ್ ಮಹಾಲಿಂಗೇಶ್ವರ ದೇವರೇ ಈ ಭೂಮಿ ನನ್ನದು ಎಂದು ಹೇಳುವುದಕ್ಕಾಗಿಯೇ ಆರೂಢದಲ್ಲಿ ಕರ್ಮಪತಿಯಾಗಿ ರವಿ ಬಂದು ಕೂರುವುದಕ್ಕೆ ಕಾರಣ. ನಾವು ಬಂದು ಕೂರುವ ಮೊದಲೇ ದೇವರು ಬಂದು ಇಲ್ಲಿ ಕೂತಾಗಿದೆ ಎನ್ನುವುದು ಸ್ಪಷ್ಟ. ಇದು ದೇವರಿಗೆ ಸಂಬಂಧಿಸಿದ ಭೂಮಿ ಎನ್ನುವುದಕ್ಕೆ ಸಂಶಯ ಬೇಡ. ಆದರೆ ಇಲ್ಲಿ ನಡೆಯುತ್ತಿದ್ದ ದೇವರಿಗೆ ಸಂಬಂಧಪಟ್ಟ ಕ್ರಿಯೆಯೊಂದು ಇವತ್ತು ನಡೆಯುತ್ತಿಲ್ಲ ಎನ್ನುವ ಬೇಸರ, ಕ್ಲೇಷ ದೇವರಿಗೆ ಇದೆ ಎನ್ನುವುದು ಕಾಣುತ್ತಿದೆ’ ಎಂದರು.

ಆನೆಯ ಘಟನೆಗೂ ಈ ಭೂಮಿಗೂ ಸಂಬಂಧ:
ಮುಂದಕ್ಕೆ ಪ್ರಶ್ನಾಚಿಂತನೆ ಮುಂದುವರೆಸಿದ ದೈವಜ್ಞರು ‘ಹಿಂದೆ ಇಲ್ಲಿ ಪಶುಗಳನ್ನು ಸಾಕುವ ಪದ್ಧತಿ ಇತ್ತೇ, ಆನೆ ಇತ್ತೇ’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಭಕ್ತಾದಿಗಳು ‘ಆನೆ ಪುತ್ತೂರಿಗೆ ಬರುವಂತಿಲ್ಲ’ ಎಂಬ ವಿಚಾರವನ್ನು ತಿಳಿಸಿದರು. ಇದಕ್ಕುತ್ತರಿಸಿದ ದೈವಜ್ಞರು, ‘ಆನೆಗೆ ಸಂಬಂಧಿಸಿದ ದೊಡ್ಡ ದುರ್ನಿಮಿತ್ತ ಘಟನೆಯೊಂದು ಇಲ್ಲಿ ನಡೆದಿದೆ. ಆ ಆನೆಯ ಘಟನೆಗೂ ಈಗ ಸಭಾಭವನ ಕಟ್ಟಿರುವ ಭೂಮಿಗೂ ಪೂರ್ಣ ಸಂಬಂಧವಿರುವುದು ಕಾಣುತ್ತಿದೆ. ಆ ಘಟನೆ ತಿಳಿದಿದೆಯೇ’ ಎಂದು ಪ್ರಶ್ನಿಸಿದರು. ಇದಕ್ಕೆ ಭಕ್ತಾದಿಗಳು ಹಿಂದೆ ಬಂಗರಸನ ಕಾಲದಲ್ಲಿ ಇಲ್ಲಿ ಅಶ್ವತ್ಥ ಮರದಡಿ ಇದ್ದ ಲಿಂಗವನ್ನು ಎಬ್ಬಿಸಲು ಆನೆಯನ್ನು ಬಳಸಿದ್ದು, ಈ ವೇಳೆ ಆನೆಯ ದೇಹ ಛಿದ್ರ ಛಿದ್ರಗೊಂಡು ಎಸೆಯಲ್ಪಟ್ಟ ಕಥೆಯನ್ನು ವಿವರಿಸಿದರು.
ಮುಂದುವರೆಸಿದ ದೈವಜ್ಞರು ‘ಈ ಭೂಮಿಯು ನೂರಕ್ಕೆ ನೂರು ಅದಕ್ಕೆ ಸಂಬಂಧಿಸಿದ ಇತಿಹಾಸವನ್ನು ಹೇಳುತ್ತದೆ. ಈ ಗದ್ದೆಗೆ ಆನೆಗೆ ಸಂಬಂಧಪಟ್ಟ ಹೆಸರೇನಾದರೂ ಇತ್ತೇ’ ಎಂದು ಕೇಳಿದರು. ಜೊತೆಗೆ ಇದಕ್ಕೆ ಆ ಆನೆಯ ಇತಿಹಾಸವನ್ನು ಹೆಸರಿಸುವಂತಹ ಪ್ರತ್ಯೇಕವಾದ ಹೆಸರು ನೂರಕ್ಕೆ ನೂರು ಇದ್ದೇ ಇದೆ’ ಎಂದರು. ಈ ವೇಳೆ ಭಕ್ತಾದಿಗಳು ಈ ಗದ್ದೆಯಿಂದ ಸ್ವಲ್ಪ ಮೇಲ್ಭಾಗದಲ್ಲಿರುವ ಜಾಗಕ್ಕೆ ಕೊಂಬೆಟ್ಟು ಎನ್ನುವ ಹೆಸರಿದೆ ಎನ್ನುವ ವಿಚಾರವನ್ನು ತಿಳಿಸಿದರು. ಇದೇ ವೇಳೆ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ್ ಗೌಡ ಅವರು, ‘ಮಹಾಲಿಂಗೇಶ್ವರ ದೇವರಿಗೆ ಮಹತೋಭಾರ ಮಹಾಲಿಂಗೇಶ್ವರ ದೇವರು ಎನ್ನುವ ಹೆಸರಿದೆ.ಸೀಮೆಯಲ್ಲಿ ಇರುವುದೆಲ್ಲಾ ಮಹಾಲಿಂಗೇಶ್ವರನ ಭೂಮಿ. ಹಿಂದೆ ಯಾರು ದೇವರ ಭೂಮಿಯನ್ನು ಉಂಬಳಿ ಪಡೆದುಕೊಂಡು ಗೇಣಿಯನ್ನು ಮಾಡಿಕೊಂಡಿದ್ದರೋ ಅವರು ಮುಂದಕ್ಕೆ ಸಂಕಿಪ್ತಗೊಳಿಸಿಕೊಂಡಿದ್ದಿರಬಹುದು’ ಎಂದರು.
“ಸಂಪತ್ತು ವಿಷವಾಗುತ್ತಿದೆ”:
‘ಈ ಸಭಾಭವನ ನಿರ್ಮಾಣದ ಉದ್ದೇಶ ಸಾಫಲ್ಯಕ್ಕೆ ಬಂದಿದೆಯೇ’ ಎಂಬ ದೈವಜ್ಞರ ಪ್ರಶ್ನೆಗೆ ಉತ್ತರಿಸಿದ ಎನ್.ಕೆ.ಜಗನ್ನಿವಾಸ ರಾವ್ ಅವರು,‘ನಾವು ಮಾಡಿದಾಗ ದೇವಸ್ಥಾನದ ಆದಾಯ ವೃದ್ಧಿಯಾಗಿತ್ತು.ಕಾರ್ಯಕ್ರಮಗಳು ನಡೆಯುತ್ತಿದ್ದವು.ಆದರೆ ಬಳಿಕ ಬಂದ ಒಂದಷ್ಟು ಸಮಿತಿಗಳು ತಾತ್ಸಾರ ತೋರಿದ ಕಾರಣ ಯಾವುದೂ ಅಭಿವೃದ್ಧಿ ಆಗಲಿಲ್ಲ.ಬೇಕಿದ್ದರೆ ಕಚೇರಿಯ ದಾಖಲೆಗಳನ್ನು ಪರಿಶೀಲನೆ ನಡೆಸಬಹುದು’ ಎಂದರು.

ನಾವು ಅಭಿವೃದ್ಧಿಗೆ ಹೊರಟಿದ್ದೇವೆ:
ಈ ವೇಳೆ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈಯವರು,‘ನಾವು ಇಲ್ಲಿ ಚರ್ಚೆ ಮಾಡಲು ಸೇರಿರುವುದು ಅಲ್ಲ, ಪ್ರಶ್ನಾಚಿಂತನೆಗೆ. ಹಿಂದೆ ಪ್ರಶ್ನಾಚಿಂತನೆ ಮಾಡಿ ಅದರಲ್ಲಿ ಒಂದಷ್ಟು ಅಂಶಗಳು ಕಂಡುಬಂದಿದ್ದವು.ಅದನ್ನಿಲ್ಲಿ ಉಲ್ಲೇಖಿಸುವುದಿಲ್ಲ.ಇಲ್ಲಿ ಪ್ರಶ್ನಾಚಿಂತನೆ ಮಾಡಿ ದೇವರಿಗೆ ಬೇಕು ಎಂದಾದರೆ ಕಟ್ಟಡವನ್ನು ಉಳಿಸಿಕೊಳ್ಳುವುದು, ತೆಗೆಯುವುದು ಎಂದಾದರೆ ತೆಗೆಯುವುದು. ದೇವರಿಗೆ ಸಮಾಧಾನ ಇದ್ದರೆ ತೆಗೆಯಬೇಕೆಂದು ನಮಗೇನೂ ಇಲ್ಲ.ನಾವು ಅಭಿವೃದ್ಧಿಗೆ ಹೊರಟಿದ್ದೇವೆ.ಮುಂದಕ್ಕೆ ಏನು ಎನ್ನುವ ಬಗ್ಗೆ ನಮಗೆ ತೀರ್ಮಾನ ಬೇಕು’ ಎಂದರು. ಇದಕ್ಕೆ ಉತ್ತರಿಸಿದ ದೈವಜ್ಞರು, ‘ಇಲ್ಲಿರುವ ಜಿಜ್ಞಾಸೆ ಇಟ್ಟುಕೊಳ್ಳುವುದು ಅಥವಾ ತೆಗೆಯುವುದು, ದೇವಹಿತ ಆದರೆ ಸರಿ ಎನ್ನುವುದು. ಇಲ್ಲಿರುವುದು ದೇವರಿಗೆ ತೃಪ್ತಿಯೋ ಅತೃಪ್ತಿಯೋ ಎನ್ನುವುದನ್ನು ನಾವು ಕಾಣಬೇಕು. ಇಲ್ಲಿ ನಾವು ಹೇಳುವುದನ್ನು ಯಾರೂ ಬ್ಲೈಂಡ್ ಆಗಿ ಒಪ್ಪಿಕೊಳ್ಳಬೇಕಿಲ್ಲ.ಈ ಸಭಾಭವನದಿಂದ ದೇವಾಲಯಕ್ಕೆ ಸಂಪತ್ತು ಬರುತ್ತಿದೆ ಎಂದು ಹೇಳಿದಿರಲ್ವಾ, ಆದರೆ ಇಲ್ಲಿ ಈಶ್ವರ ದೇವರು ಏನು ಹೇಳುತ್ತಿದ್ದಾರೆ ಎಂದರೆ, ‘ಇಲ್ಲಿ ಸಂಪತ್ತು ಇದೆ, ನೀವು ಸಂಪತ್ತು ತಂದು ಕೊಡುತ್ತಿದ್ದೀರಿ, ನಾನು ವಿಷಕಂಠ, ನನಗೇ ದೊಡ್ಡ ವಿಷವಾಗಿ ಪರಿಣಾಮವಾಗುತ್ತಿದೆ’ ಎಂದು.ಇಲ್ಲಿ ಗ್ರಹಸ್ಥಿತಿಯನ್ನೇ ಆಧಾರವಾಗಿಟ್ಟುಕೊಂಡೇ ನಾವು ಮಾತನಾಡಬೇಕೇ ಹೊರತು ಪ್ರ್ಯಾಕ್ಟಿಕಲ್ ಎನ್ನುವುದನ್ನು ಇಲ್ಲಿ ಹೇಳಲು ಆಗಲಿಕ್ಕಿಲ್ಲ ಜೊತೆಗೆ ಈ ಭಾಗಕ್ಕೆ ಸರ್ಪಬಾಧೆ ಎನ್ನುವುದು ಕೂಡ ಕಾಡುತ್ತಿದೆ. ಸರ್ಪನಿಗೂ ಅನುಕೂಲ ಸ್ಥಿತಿ ಕಾಣುತ್ತಿಲ್ಲ. ನಾಗನಿಗೂ ಮೈಲಿಗೆಯಾಗುವ ಲಕ್ಷಣಗಳು ಕಾಣುತ್ತಿವೆ’ ಎಂದು ಹೇಳಿದರು.
ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮಾತನಾಡಿ,‘ಎರಡು ಬಾರಿ ಪ್ರಶ್ನಾಚಿಂತನೆಯಲ್ಲಿ ಈ ವಿಚಾರ ಬಂದಿದೆ.ಪರಿಹಾರ ಎನ್ನುವ ವಿಚಾರ ಇದ್ದರೂ ಜನಮನ ಎಂದರೆ ಅದು ದೇವರ ಇಚ್ಛೆ ಎನ್ನುವಂಥದ್ದು.ಎಷ್ಟೋ ವರ್ಷಗಳಿಂದ ಅದನ್ನು ಇಡಬೇಕು,ತೆಗೆಯಬೇಕೆನ್ನುವ ಜಿಜ್ಞಾಸೆ ನಡೆಯುತ್ತಿದೆ.ಕ್ಷೇತ್ರದ ಅಧ್ಯಕ್ಷರು ತೆಗೆದುಕೊಂಡ ನಿರ್ಧಾರ ಉಳಿದವರು ಒಪ್ಪಿಕೊಳ್ಳಬೇಕೆನ್ನುವುದು ಜನಜನಿತ.ದೇವರಿಗೆ ಇಚ್ಚೆ ಇದ್ದರೆ ಉಳಿಸಿಕೊಳ್ಳಬೇಕು.ತೆಗೆದನಂತರ ಮುಂದಿನ ಪ್ರಶ್ನೆಗೆ ಬರುವಾಗ ಅದರಿಂದ ದೇವಸ್ಥಾನಕ್ಕಾಗಲೀ, ಭಕ್ತರಿಗಾಗಲೀ ತೊಂದರೆ ಬರಬಾರದು.ಈ ನಿಟ್ಟಿನಲ್ಲಿ ದೇವರು ಮತ್ತು ದೈವಜ್ಞರು ಸರಿಯಾದ ದಾರಿಯನ್ನು ತೋರಿಸಿಕೊಡಬೇಕು’ ಎಂದರಲ್ಲದೆ,‘ಮೊದಲು ಈ ದೇವಸ್ಥಾನ ಮಾತ್ರ ಇತ್ತು. ಬಳಿಕ ಜಾಗ ಖರೀದಿ ಮಾಡಿ ಈ ಕಟ್ಟಡ ಆಯ್ತು.ಬಳಿಕ ಜೀರ್ಣೋದ್ಧಾರ ಆಯ್ತು. ಜೀರ್ಣೋದ್ಧಾರದಲ್ಲಿ ಉಳಿದ ದುಡ್ಡಲ್ಲಿ ಪಕ್ಕದ ಜಾಗ ಖರೀದಿಸಿದರು.ಮುಂದಕ್ಕೆ ಬಂದ ಸಮಿತಿ ಆಡಳಿತ ಕಚೇರಿ ಮಾಡಿದರು.ನಮ್ಮ ಕಮಿಟಿ ಬಂದಾಗ ಅನ್ನಛತ್ರ ಮಾಡಿದೆವು.ಕೆರೆಯ ವರುಣ ಮಂಟಪ ಆಯ್ತು. ದೇವಸ್ಥಾನಕ್ಕೆ 19 ಎಕರೆ ಜಾಗ ಹೊರಗಿನಿಂದ ಬಂತು. ಈಗಿನ ಸಮಿತಿ ಬಂದ ಬಳಿಕ ಬೇರೆಯವರ ಕೈಯಲ್ಲಿದ್ದ ಜಾಗವನ್ನು ಬಿಡಿಸಿಕೊಳ್ಳುವ ಕೆಲಸ ಆಗಿದೆ’ ಎಂದು ಹೇಳಿದರು.
ಮುಂದುವರೆಸಿದ ದೈವಜ್ಞರು,‘ವ್ಯಕ್ತಿಗತವಾಗಿ ಯಾರನ್ನೂ ತೃಪ್ತಿಪಡಿಸಲು ಇಲ್ಲಿ ಸಾಧ್ಯವಿಲ್ಲ.ಈ ಕಟ್ಟಡವನ್ನು ಹೀಗೇ ಉಳಿಸಿಕೊಂಡು ಅನುಕೂಲಗಳಾಗಿ ಇಲ್ಲಿಂದ ಸಂಪತ್ತುಗಳು ಬಂದರೂ ಕೂಡ ಈಶ್ವರ ದೇವರು ಹೇಳುವುದು ಅದು ನನಗೆ ವಿಷಾರ್ಜಿತವಾಗಿರುವ ಧನ ಎಂದು. ಈ ಸಂಪತ್ತು ವಿಷದಿಂದ ಪ್ರಾಪ್ತಿಯಾಗಿರುವ ಸಂಪತ್ತು ಎಂದು ಆರೂಢದಲ್ಲಿ ಕಂಡುಬರುತ್ತದೆ. ಈ ಕಟ್ಟಡವನ್ನು ಇಟ್ಟುಕೊಳ್ಳುವ ವಿಚಾರದಲ್ಲಿ ದೇವರಿಗೆ ಒಪ್ಪಿಗೆ ಎನ್ನುವುದು ಇಲ್ಲ ಅದರಲ್ಲಿ ಸಂಶಯ ಬೇಡ. ಈ ಕಟ್ಟಡವನ್ನು ತೆಗೆದು ಇಲ್ಲಿ ಮತ್ತೊಂದು ಕಟ್ಟಡ ಕಟ್ಟುವುದು ಎಂದು ಆಗಬಾರದು. ಹಿಂದೆ ಇದು ಗದ್ದೆಯಾಗಿ ಇದ್ದು, ಇಲ್ಲಿಂದ ತೆನೆಯನ್ನು ತೆಗೆದುಕೊಂಡು ಹೋಗುವ ಸಂಕಲ್ಪ ಮಾಡಿದರೆ ವ್ಯವಸ್ಥೆಗಳು ಒಳ್ಳೆಯ ರೀತಿಯಲ್ಲಿ ಪರಿಸಮಾಪ್ತಿಯಾಗುವ ಸಾಧ್ಯತೆಗಳು ಇವೆ’ ಎಂದು ಹೇಳಿದರು.
ದೇವಸ್ಥಾನದ ಪರಿಧಿ ಬೇರೆ, ದೇವರ ಪರಿಧಿ ಬೇರೆ:
ಸ್ಮಶಾನದ ವಿಚಾರದ ಕುರಿತಂತೆ ತಿಳಿಸಿದ ದೈವಜ್ಞರು,‘ಸ್ಮಶಾನದ ಉಲ್ಲೇಖ ಕಂಡುಬರುತ್ತಿದೆ. ದೇವಾಲಯದ ವ್ಯಾಪ್ತಿ ಸ್ಮಶಾನದವರೆಗೂ ಇದೆ.ದೇವರು ಎಲ್ಲವನ್ನೂ ಸ್ವಚ್ಛಂದವಾಗಿ ನೋಡುವ ವ್ಯಾಪ್ತಿ ಅಲ್ಲಿಯವರೆಗೂ ಇದೆ’ ಎಂದು ತಿಳಿಸಿದರು. ಈ ವಿಚಾರಕ್ಕೆ ಕುರಿತಂತೆ ಮಾತನಾಡಿದ ಎನ್.ಕೆ.ಜಗನ್ನಿವಾಸ್ ರಾವ್ ಅವರು,‘ದೇವರಿಗೆ ಯಾವುದು ಅಡ್ಡ? ದೇವರ ಮುಖ ಇರುವುದು ರಥಬೀದಿಯ ಕಡೆ.ಹಿಂದೆ ಪ್ರಶ್ನಾಚಿಂತನೆಯಲ್ಲಿ ಶಿವಮೂರ್ತಿ ಅಡ್ಡ ಇದೆ ಎಂದು ಅದನ್ನು ತೆಗೆಸಲಾಯಿತು.ನಂತರ ಗೋಪುರ ಕಟ್ಟಿದೆವು. ಅದು ಅಡ್ಡ ಇಲ್ಲವೇ? ಸ್ಮಶಾನ ಮೊದಲು ಆದುದೋ, ದೇವಸ್ಥಾನ ಮೊದಲು ಆದುದೋ ಎಂದು ಚಿಂತನೆ ಮಾಡಬೇಕು.ದೇವರಿಗೆ ಯಾವುದೂ ಅಡ್ಡ ಇಲ್ಲ.ಕಾಶಿಯನ್ನು ಗಮನಿಸಿದರೆ ಅಲ್ಲಿ ಸ್ಮಶಾನ ಇದೆ.ಅದರ ನಡುವೆ ಬಹಳಷ್ಟು ಕಟ್ಟಡ ಇದೆ. ನಾವು ಕಟ್ಟಡ ಕಟ್ಟುವಾಗ ಒಂದಷ್ಟು ಮಾತುಗಳು ಕೇಳಿಬಂದಾಗ ಧಾರ್ಮಿಕ ದತ್ತಿ ಇಲಾಖೆಯಿಂದ ಆಗಮ ಪಂಡಿತರು ಬಂದು ದೇವಸ್ಥಾನದ ಪೌಳಿಯಿಂದ ಕಟ್ಟಡ ಹೊರಗೆ ಇದೆಯೇ ಒಳಗೆ ಇದೆಯೇ ಎಂದು ಅಳತೆ ಮಾಡಿದ್ದಾರೆ. ದೇವಸ್ಥಾನದ ಎದುರು ರಸ್ತೆ ಅಥವಾ ಹರಿಯುವ ನೀರಿದ್ದರೆ ಅದರಿಂದೀಚೆಗೆ ಪರಿಧಿ ಇದೆಯೇ ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ದೈವಜ್ಞರು, ‘ದೇವರಿಗೆ ಇರುವ ಪರಿಧಿ ಬೇರೆ, ದೇವಸ್ಥಾನಕ್ಕೆ ಇರುವ ಪರಿಧಿ ಬೇರೆ. ದೇವಸ್ಥಾನಕ್ಕೆ ಏಳು ಪ್ರಾಕಾರ ಅಂದರೆ ದೇವರ ಗರ್ಭಗುಡಿಯಿಂದ ಸುಮಾರು 100 ಮೀಟರ್ನಷ್ಟು ಪರಿಧಿ ಇದೆ. ಅದು ದೇವಸ್ಥಾನದ ಪರಿಧಿ. ಆದರೆ ದೇವರ ಪರಿಧಿ ಎನ್ನುವುದು ಇಡೀ ಪುತ್ತೂರು. ಈ ಕಟ್ಟಡ ದೇವಸ್ಥಾನದ ಪರಿಧಿಯಲ್ಲಿ ಬರುವುದಿಲ್ಲ. ಆದರೆ ದೇವರ ಪರಿಧಿಯಲ್ಲಿ ಬರುತ್ತದೆ. ದೇವರಿಗೆ ಅಡ್ಡ ಇದೆಯೇ ಎಂದು ಕೇಳಿದರೆ ಇದೆ ಎಂದರೆ ಇಲ್ಲ,ಇಲ್ಲ ಎಂದರೆ ಇದೆ.ಈಶ್ವರ ದೇವರಿಗೂ ಸ್ಮಶಾನಕ್ಕೂ ಅವಿನಾಭಾವ ಸಂಬಂಧ ಇದ್ದೇ ಇರುತ್ತದೆ. ಕಾಶಿಯ ವಿಚಾರ ನಮಗೆ ಪ್ರಮಾಣ ಅಲ್ಲ. ನಮಗೆ ಶಾಸ್ತ್ರವೇ ಪ್ರಮಾಣ. ಒಂದೊಂದು ಪ್ರದೇಶಕ್ಕೆ ಒಂದೊಂದು ಸಂಪ್ರದಾಯಗಳು ಬದಲಾಗುತ್ತವೆ. ಇಲ್ಲಿನ ವಿಚಾರದಲ್ಲಿ ದೇವರಿಗೆ ಅತೃಪ್ತಿ ಇರುವುದು ಸ್ಪಷ್ಟ. ಕಟ್ಟಡ ತೆಗೆಯುವುದು ದೇವರಿಗೆ ತೃಪ್ತಿಯಾಗಬಹುದು. ನೀವು ಕಟ್ಟಿರುವ ಈ ಕಟ್ಟಡ ತೆಗೆದರೂ ಅದು ನಾಶ ಅಲ್ಲ, ವ್ಯರ್ಥ ಅಲ್ಲ. ಅಂದು ಯಾವ ವ್ಯವಸ್ಥೆಯಲ್ಲಿ ಮಾಡಿದ್ದೀರೋ ಗೊತ್ತಿಲ್ಲ. ಇವತ್ತಿನ ಸ್ಥಿತಿಯಲ್ಲಿ ಅನುಕೂಲ ಇಲ್ಲ. ಅದರಿಂದ ಸರ್ಪದೋಷವೂ ಬಂದಿದೆ. ಅಯ್ಯಪ್ಪನ ವಿಚಾರದಲ್ಲೂ ದುರಿತ ಬಂದಿದೆ. ದೇವಕೋಪವೂ ಬಂದಿದೆ. ಇಟ್ಟುಕೊಳ್ಳುವುದು ಅನುಕೂಲ ಆಗುವುದಿಲ್ಲ’ ಎಂದರು.
ಚಿನ್ನದ ತೆನೆಯ ವಿಚಾರ:
ನಾಗನಕಟ್ಟೆಯ ವಿಚಾರದ ಕುರಿತಂತೆ, ಅಲ್ಲಿ ಚರಂಡಿ ಇದೆ.ಕೊಳಚೆ ನೀರು ಹೋಗುವ ಚರಂಡಿಯ ಪಕ್ಕ ನಾಗನಕಟ್ಟೆ ಕಟ್ಟುತ್ತಾರೋ ಎಂದು ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ ಪ್ರಶ್ನಿಸಿದರು. ಜೊತೆಗೆ ದೇವಸ್ಥಾನದಲ್ಲಿ ಚಿನ್ನದ ತೆನೆಯೊಂದಿತ್ತು ಎನ್ನುವ ವಿಚಾರ ಕೇಳಲ್ಪಟ್ಟಿದ್ದೇವೆ ಎಂದರು.ಇದಕ್ಕೆ ಉತ್ತರಿಸಿದ ದೈವಜ್ಞರು, ‘ಈ ಭೂಮಿಯಲ್ಲಿ ಬೆಳೆದ ತೆನೆಯನ್ನು ದೇವರಿಗೆ ಸಮರ್ಪಿಸಿದರೆ ಅದು ಚಿನ್ನಕ್ಕೆ ಸಮ ಎಂದು ಲೆಕ್ಕ. ಚಿನ್ನದ ತೆನೆ ಎಂದರೆ ಇಲ್ಲಿ ಉತ್ಪತ್ತಿಯಾದುದು ಈಶ್ವರ ದೇವರಿಗೆ ಚಿನ್ನ ಬೆಳೆದಷ್ಟು ಪ್ರೀತಿ ಎನ್ನುವುದು ಲಕ್ಷಣ’ ಎಂದರು.
‘ಈಗ ಹೊಸ ಸಮಿತಿಯವರು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮುಂದಾಗಿದ್ದು, ದೇವಸ್ಥಾನದ ಅಯ್ಯಪ್ಪ ಗುಡಿ, ನವಗ್ರಹ ಗುಡಿ ಮತ್ತು ನಾಗನಕಟ್ಟೆಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು.ರಾಜಬೀದಿಯಿಂದ ಈಶಾನ್ಯ ಭಾಗವನ್ನು ಸಂಪೂರ್ಣ ಗದ್ದೆ ಮಾಡಬೇಕು. ಅರ್ಧಭಾಗವನ್ನಾದರೂ ಸಂಪೂರ್ಣ ಗದ್ದೆ ಮಾಡಬೇಕು’ ಎಂದು ಅನಿಲ್ ಕಣ್ಣರ್ನೂಜಿ ಹೇಳಿದರು. ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಮಾತನಾಡಿ, ‘ಹಿಂದೆ ದೈವಾರಾಧನೆಯಲ್ಲಿ ದೇವಾಲಯದ ಹೊರ ಪ್ರಾಂಗಣದಲ್ಲಿದ್ದ ನಡೆಯಲ್ಲಿ ದೈವನರ್ತನ ಸೇವೆ ನಡೆಯುತ್ತಿತ್ತು. ಹಿಂದೆ ಅಂಗಣಕ್ಕೆ ದೈವ ಇಳಿಯುತ್ತಿರಲಿಲ್ಲ.ಈಗ ರಾಜಗೋಪುರದ ಒಳಗೆ ಹೊರಾಂಗಣದಲ್ಲಿ ನೇಮ ನಡೆಯುತ್ತಿದೆ. ಇದು ಸರಿಯೇ’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ದೈವಜ್ಞರು, ದೇವರ ಪಾದ ಎಂದರೆ ಗೋಪುರ. ಗೋಪುರದಿಂದ ಹೊರಗಡೆ ದೈವನರ್ತನ ಆಗುವುದಿದ್ದರೆ ಅದು ಶಾಸೀಯ ದೃಷ್ಟಿಯಲ್ಲಿ ತಪ್ಪಲ್ಲ.ಪಾದದ ಒಳಗಡೆ ಬಂದರೆ ದೋಷ’ ಎಂದರು.
ಹೊಸ ಜಾಗ ಬರುವ ಲಕ್ಷಣ:
ಈ ವೇಳೆ ಶಾಸಕ ಅಶೋಕ್ ಕುಮಾರ್ ರೈಯವರು,‘ದೇವಸ್ಥಾನದ ಪಕ್ಕದಲ್ಲಿ ಕ್ರಿಶ್ಚಿಯನ್ ವ್ಯಕ್ತಿಯೋರ್ವರ ಪೈಕಿ 1 ಎಕರೆ ಜಾಗ ಇದೆ.ದೇವಸ್ಥಾನದ ಕೆಲಸ ಮಾಡುವ ಓರ್ವರ ಬಳಿ 70 ಸೆಂಟ್ಸ್ ಜಾಗ ಇದೆ.ಅವರ ಬಳಿ ಜಾಗ ಖರೀದಿಗೆ ಕೇಳಿದ್ದೇವೆ.ಅವರಿಗೆ ಇಲ್ಲಿಯವರೆಗೆ ಯಾರಿಗೂ ಮಾರಾಟ ಮಾಡಲು ಆಗಿಲ್ಲ.ಈಕಡೆಯವರು ಒಂದು ಹಂತದಲ್ಲಿ ಒಪ್ಪಿಕೊಂಡಿದ್ದು, ವ್ಯವಹಾರದ ದೃಷ್ಟಿಯಿಂದ ಒಂದಷ್ಟು ವ್ಯತ್ಯಾಸ ಇದೆ.ಅದು ದೇವರಿಗೆ ಮಾಡಬೇಕು ಎಂದು ಇದೆಯೋ ಇಲ್ವೋ ಎನ್ನುವುದು ನಮ್ಮ ಪ್ರಶ್ನೆ’ ಎಂದು ಕೇಳಿದರು.ಇದಕ್ಕೆ ರಾಶಿ ನೋಡಿ ಉತ್ತರಿಸಿದ ದೈವಜ್ಞರು, ‘ಪರಿಪೂರ್ಣವಾಗಿ ಇದೆ.ಈಶ್ವರ ದೇವರಿಗೆ ಒಂದಷ್ಟು ಭೂಮಿ ಬರುವ ಯೋಗ ಪರಿಪೂರ್ಣವಾಗಿ ಇದೆ. ಎರಡು ಅಥವಾ ಮೂರು ವಿಭಾಗದ ಭೂಮಿ ಬರುವ ಲಕ್ಷಣಗಳು ಕಂಡುಬರುತ್ತಿವೆ, ದೇವರ ದೃಷ್ಟಿ ಸಂಪೂರ್ಣವಾಗಿ ಇದೆ’ ಎಂದರು.
ಪುತ್ತೂರು ಉಮೇಶ್ ನಾಯಕ್ ಅವರು ಮಾತನಾಡಿ, ‘ಹಿಂದಿನ ಆಡಳಿತ ಮಂಡಳಿಯವರು ದೇವಸ್ಥಾನದ, ಪುತ್ತೂರಿನ ಅಭಿವೃದ್ಧಿಗಾಗಿ ಈ ಕಟ್ಟಡ ನಿರ್ಮಿಸಿದ್ದರು. ಈಗಿನ ಆಡಳಿತ ಮಂಡಳಿ, ಭಕ್ತರ ಅಪೇಕ್ಷೆಯಂತೆ ಈಗ ಪ್ರಶ್ನಾಚಿಂತನೆ ನಡೆಯುತ್ತಿದೆ.ಇಲ್ಲಿ ದೇವರ ಆದೇಶ ಏನು ಎನ್ನುವುದು ಮುಖ್ಯ. ಶ್ಲೋಕದ ಅರ್ಥವನ್ನು ಆಡಳಿತ ಮಂಡಳಿಯವರು ಅರ್ಥೈಸಿಕೊಂಡು, ತುರ್ತಾಗಿ ನಿರ್ಧಾರ ಕೈಗೊಂಡು ಭಕ್ತರ ಮುಂದೆ ಪ್ರಸ್ತುತಪಡಿಸಿ ದೈವಜ್ಞರಿಗೆ ತಿಳಿಸಿದರೆ ಅವರು ಅದಕ್ಕೆ ನೀಡುವ ಆದೇಶವನ್ನು ಮುಂದುವರೆಸುವುದು ಸೂಕ್ತ’ ಎಂದರು. ಚಿನ್ನದ ತೆನೆಯ ವಿಚಾರಕ್ಕೆ ಸಂಬಂಧಿಸಿದಂತೆ ‘ಚಿನ್ನದ ತೆನೆ ಇಲ್ಲಿ ಬೆಳೆದದ್ದಲ್ಲ, ಉಪ್ಪಿನಂಗಡಿಯ ಒಂದು ಗದ್ದೆಯಲ್ಲಿ ಬೆಳೆದಿರುವುದು, ಒಂದು ಪ್ರತೀತಿಯ ಪ್ರಕಾರ ಅದನ್ನು ಯಾವ ದೇವಸ್ಥಾನಕ್ಕೆ ಕೊಡಬೇಕು ಎನ್ನುವ ಗೊಂದಲ ಬಂದಾಗ, ಅವರು ದೇವರಲ್ಲಿ ಪ್ರಾರ್ಥನೆ ಮಾಡಿ ಉಪ್ಪಿನಂಗಡಿ ಸಹಸ್ರಲಿಂಗೇಶ್ವರನಿಗೆ ಒಪ್ಪಿಸಬೇಕೋ, ಪುತ್ತೂರು ಮಹಾಲಿಂಗೇಶ್ವರನಿಗೆ ಒಪ್ಪಿಸಬೇಕೋ ಎಂದು ತೋರಿಸಿಕೊಡಬೇಕೆಂದು ಪ್ರಾರ್ಥಿಸಿದ್ದರು. ಮರುದಿನ ಅದು ಪುತ್ತೂರು ಭಾಗಕ್ಕೆ ಬಾಗಿ ನಿಂತಿತ್ತು.ಹೀಗಾಗಿ ಅದನ್ನು ಮಹಾಲಿಂಗೇಶ್ವರ ದೇವರ ಭಂಡಾರಕ್ಕೆ ಒಪ್ಪಿಸಿದ್ದಾರೆಂದು ಕೇಳಿದ್ದೇನೆ’ ಎಂದರು.
ಕೊನೆಯ ಹಂತದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ಮಾತನಾಡಿ,‘ಈ ಹಿಂದಿನ ಪ್ರಶ್ನಾಚಿಂತನೆಯಲ್ಲಿ ಈ ಕಟ್ಟಡವನ್ನು ತೆರವು ಮಾಡಬೇಕೆಂದು ಬರೆದಿದ್ದಾರೆ.ಪರಿಹಾರವನ್ನೂ ಸೂಚಿಸಿದ್ದಾರೆ.ಪರಿಹಾರ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ.ಇತ್ತೀಚಿನ ಪ್ರಶ್ನೆಯಲ್ಲೂ ಇದನ್ನು ತೆಗೆಯಬೇಕೆಂದು ಹೇಳಿದ್ದಾರೆ.ಸಾರ್ವಜನಿಕರಲ್ಲಿ ಇದನ್ನು ಯಾಕೆ ತೆಗೆಯಬೇಕೆಂಬ ಗೊಂದಲ ಇರುವುದು ಸಹಜ.ಹಿಂದೆ ಮಾಸ್ಟರ್ಪ್ಲ್ಯಾನ್ ಇಲ್ಲದೇ ಕೆಲಸ ಮಾಡಲಾಗಿದೆ.ನಾವು ಮಾಸ್ಟರ್ಪ್ಲ್ಯಾನ್ ಮಾಡಿ ಸರಕಾರಕ್ಕೆ ಸಲ್ಲಿಸಿದ್ದೇವೆ. ಈಗ ಅಂತಿಮ ಪ್ರಶ್ನಾಚಿಂತನೆ ಮಾಡುತ್ತಿದ್ದೇವೆ. ಇದನ್ನು ತೆಗೆಯಬೇಕೆಂದೇ ಬಂದಿದೆ.ಇದನ್ನು ಉಳಿಸಿಕೊಂಡರೂ ಮತ್ತೆ ಅಭಿವೃದ್ಧಿಗೆ 3 ಕೋಟಿ ರೂ.ಖರ್ಚು ಮಾಡಬೇಕು. ಎಷ್ಟು ದುಡ್ಡು ಬಂದರೂ ದೇವರಿಗೆ ವಿಷ ಕೊಟ್ಟಂತಾಗುತ್ತದೆ ಎಂದಾದರೆ ಇದನ್ನು ಉಳಿಸಿಕೊಳ್ಳುವ ವಿಚಾರಗಳು ನಮ್ಮಲ್ಲಿಲ್ಲ.ಮಾಸ್ಟರ್ಪ್ಲ್ಯಾನ್ ಮೂಲಕ ಕೆಲಸ ಮಾಡುತ್ತೇವೆ, ಈ ಕಟ್ಟಡ ತೆಗೆಯುತ್ತೇವೆ. ಅಯ್ಯಪ್ಪ ಮಂದಿರವನ್ನು ಹಿಂದೆ ನಿಗದಿ ಮಾಡಿದ್ದ ಜಾಗದಲ್ಲಿ ಮಾಡುತ್ತೇವೆ. ನಾಗನಕಟ್ಟೆಯನ್ನು ಮೂಲನಾಗನ ಸಾನಿಧ್ಯಕ್ಕೆ ಸ್ಥಳಾಂತರ ಮಾಡುತ್ತೇವೆ.ಗದ್ದೆಯನ್ನು ಮಾಡಬೇಕೆಂಬ ಸೂಚನೆಗೆ ಪೂರಕವಾಗಿ ಪ್ಲ್ಯಾನ್ನಲ್ಲಿ ಸೇರಿಸಿಕೊಂಡು ಕೆಲಸ ಮಾಡುತ್ತೇವೆ. ಇದಕ್ಕೆ ದೇವರ ಅನುಗ್ರಹ ಇದೆಯೇ ಎಂದು ನಿವೃತ್ತಿ ರಾಶಿ ನೋಡಿ’ ಎಂದು ಕೇಳಿದರು.
ನಿವೃತ್ತಿರಾಶಿ ಚಿಂತನೆ:
ಅಂತಿಮವಾಗಿ ನಿವೃತ್ತಿರಾಶಿ ಚಿಂತನೆ ನಡೆಸಿದ ದೈವಜ್ಞರು, ‘ಜನರು ನಡೆದಾಡುವುದಕ್ಕೆ ಈ ವ್ಯವಸ್ಥೆಯನ್ನು ಬಿಡುವುದಕ್ಕಿಂತ, ಈ ಜಾಗವನ್ನು ಗದ್ದೆಗಾಗಿ ಮೀಸಲಾಗಿಡುವುದೇ ಸರಿ ಎನ್ನುವುದು ಕಂಡುಬರುತ್ತಿದೆ.ಇಲ್ಲದೇ ಇದ್ದಲ್ಲಿ ನಾವು ಯಾವ ಉದ್ದೇಶಕ್ಕೆ ಈ ಕಟ್ಟಡವನ್ನು ತೆರವು ಮಾಡುತ್ತೇವೋ ಆ ಉದ್ದೇಶ ಈಡೇರಿಲ್ಲ ಎಂದಾಗಿ ಬಿಡುತ್ತದೆ. ಈ ಭೂಮಿಯನ್ನು ಪರಿಽ ಮಾಡಿಕೊಂಡು ತೆನೆಗಾಗಿಯೇ ಆ ಗದ್ದೆಯನ್ನು ಉಳಿಸಿಕೊಳ್ಳುವುದೇ ಸರಿ ಎಂದು ಕಾಣುತ್ತಿದೆ.ಸಾನಿಧ್ಯ ವೃದ್ಧಿಗೆ ದೇವರು ಗದ್ದೆಯನ್ನು ನೋಡಬೇಕು ಅಥವಾ ಹರಿಯುನ ನೀರನ್ನು ನೋಡಬೇಕೆಂದು ಅರ್ಥ.ದೇವರ ತೆನೆಯ ಗದ್ದೆ ಎನ್ನುವ ಸಂಕಲ್ಪದಲ್ಲೇ ನಾವು ಅದನ್ನು ಇಟ್ಟುಕೊಳ್ಳುವುದು ಒಳ್ಳೆಯದು.ಈ ನಿಟ್ಟಿನಲ್ಲಿ ರಾಶಿ ನೋಡೋಣ’ ಎಂದು ಸೂಚಿಸಿದರು.ಮತ್ತೊಮ್ಮೆ ಪ್ರಾರ್ಥನೆ ನಡೆಸಿ ಚಿಂತನೆ ನಡೆಸಿದ ದೈವಜ್ಞರು,‘ನಾವು ಗದ್ದೆ ಮಾಡುವ ಸಂಕಲ್ಪಕ್ಕೆ ಈಶ್ವರ ದೇವರ ಸಂಪೂರ್ಣ ಒಪ್ಪಿಗೆ ಇದೆ. ವೃಷಭರಾಶಿ ಬಂದಿದೆ.ಈ ಹಿಂದೆ ಸೂಚಿಸಿದ ಪ್ರಾಯಶ್ಚಿತ್ತವನ್ನು ಮಾಡುವುದು, ನಾಗನ ಕಟ್ಟೆಯನ್ನು ಮೂಲನಾಗನ ಸನ್ನಿಽಗೆ ಸೇರಿಸುವುದು, ಅಯ್ಯಪ್ಪನ ಗುಡಿಯನ್ನು ಹಿಂದೆ ಪ್ರಶ್ನೆಯಲ್ಲಿ ನಿರ್ಧರಿಸಿದ ಜಾಗಕ್ಕೆ ಸೇರಿಸುವುದು, ನವಗ್ರಹ ಗುಡಿಯನ್ನು ದೇವಸ್ಥಾನದ ಒಳಗೆ ಸ್ಥಳಾಂತರಿಸುವುದಕ್ಕೆ ಸಂಪೂರ್ಣ ಒಪ್ಪಿಗೆ ಬಂದಿದೆ’ ಎಂದು ಹೇಳಿದರು.‘ಮುಂದಕ್ಕೆ ಯಾವುದೇ ತೊಡಕುಗಳು, ವಿರೋಧಗಳು, ಅಭಿಪ್ರಾಯಭೇದಗಳು ಬಾರದಂತೆ ಗುರು ಅನುಕೂಲಕರನಾಗಿ ಬರಬೇಕು ಎನ್ನುವ ಪ್ರಾರ್ಥನೆಯೊಂದಿಗೆ ರಾಶಿ ನೋಡಿದ ದೈವಜ್ಞರು, ಯಾವ ಉದ್ದೇಶ ಇಟ್ಟುಕೊಂಡು ನಾವೆಲ್ಲಾ ಪ್ರಶ್ನೆ ಇಟ್ಟಿದ್ದೇವೆಯೋ, ಆ ಉದ್ದೇಶ ಈಡೇರುತ್ತದೆ. ಮೇಷ ರಾಶಿ ಈಶ್ವರ ದೇವರಿಗೆ ಉಚ್ಛಾವಕಾಶಿಯಾಗಿರುವ ರಾಶಿ. ಗದ್ದೆಯನ್ನು ತೆನೆಗೋಸ್ಕರ ಎಂದು ನೀವು ನಿರ್ಧಾರ ಮಾಡಿ, ಮುಂದಿನ ನಿರ್ಧಾರವನ್ನು ನಾನು ಮಾಡುತ್ತೇನೆ ಎಂದು ದೇವರು ಹೇಳುತ್ತಿದ್ದಾರೆ. ನಿವೃತ್ತಿರಾಶಿಯಾಗಿ ಮೇಷರಾಶಿ ಬಂದಿದೆ’ ಎಂದು ದೈವಜ್ಞರು ಸೂಚಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಧಾನ ಅರ್ಚಕ ವಸಂತ ಕೆದಿಲಾಯ, ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಈಶ್ವರ ಬೆಡೇಕರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ದಿನೇಶ್ ಪಿ.ವಿ, ನಳಿನಿ ಪಿ.ಶೆಟ್ಟಿ, ಕೃಷ್ಣವೇಣಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ದೇವಳದ ಕಾರ್ಯನಿರ್ವಹಣಾಽಕಾರಿ ಕೆ.ವಿ.ಶ್ರೀನಿವಾಸ್,ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಮಾಜಿ ಸದಸ್ಯರಾದ ರವಿಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ,ಜಾನು ನಾಯ್ಕ್, ಜೀರ್ಣೋದ್ದಾರ ಸಮಿತಿ ಸದಸ್ಯ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಬಾಲಚಂದ್ರ ಸೊರಕೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಹೆಚ್.ಉದಯ, ದೇವಳದ ಛತ್ರಿ ಪರಿಚಾರಕ ನಾರಾಯಣ ಶಗ್ರಿತ್ತಾಯ, ಗಣೇಶ್ ಕೆದಿಲಾಯ,ಹಿರಿಯರಾದ ಕಿಟ್ಟಣ್ಣ ಗೌಡ,ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಉಲ್ಲಾಸ್ ಕೋಟ್ಯಾನ್, ಶಿವಪ್ರಸಾದ್ ರೈ ಕಿನಾರ, ಸುದರ್ಶನ್ ನಾಕ್ ಕಂಪ, ಸುದರ್ಶನ್ ಪುತ್ತೂರು,ನವೀನ್ಚಂದ್ರ ನಾಕ್,ಜೆ.ಕೆ.ನಾಯರ್,ಸುರೇಶ್ ಕಲ್ಲಾರೆ,ಶಶಿಧರ್ ವಿ.ಎನ್.,ಪಿ.ಜಿ.ಚಂದ್ರಶೇಖರ್ ರಾವ್,ಪಿ.ಎಸ್.ಭಟ್ ಸಹಿತ ಹಲವಾರು ಭಕ್ತಾದಿಗಳು ಪಾಲ್ಗೊಂಡಿದ್ದರು.ದೈವಜ್ಞರ ಜೊತೆ ಪ್ರಧಾನ ಅರ್ಚಕ ವಸಂತ ಕೆದಿಲಾಯ ಮತ್ತು ಅರ್ಚಕ ಉದಯ ಭಟ್,ಪ್ರಶಾಂತ್ ಭಟ್ ಉಪಸ್ಥಿತರಿದ್ದರು.

ಪರಿಹಾರಗಳು
ಮಹಾಲಿಂಗೇಶ್ವರದೇವರಿಗೆ ಹಣ್ಣುಕಾಯಿ,ಮುಷ್ಟಿಕಾಣಿಕೆ, ಬಂಗಾರದ ತೆನೆ
ಅರ್ಪಣೆ,ಅನುಜ್ಞಾ ಕಲಶವನ್ನು ಮಾಡಿಕೊಂಡು ಶತರುದ್ರಾಭಿಷೇಕವನ್ನು ಅರ್ಪಣೆ ಮಾಡಬೇಕು.
ಇದರ ನಿರ್ವಿಘ್ನತೆಗೆ ಆದಿಯಲ್ಲಿ 108 ತೆಂಗಿನಕಾಯಿ ಅಷ್ಟದ್ರವ್ಯ ಗಣಯಾಗ ನಡೆಸಬೇಕು.
ಹಿಂದಿನ ಪ್ರಶ್ನೆಯಲ್ಲಿ ತೋರಿಸಿದಂತೆ ನಾಗಾದಿ ಸಾನಿಧ್ಯಗಳನ್ನು ಸ್ಥಳಾಂತರ ಪಡಿಸಿ ಪೈತ್ರಿಕದೊಂದಿಗೆ ಗಜರಕ್ಷಸನ್ನು ಆವಾಹಿಸಿ,ಸಾಯುಜ್ಯ ಪಡಿಸಬೇಕು.
ಈ ಸಂಪೂರ್ಣ ಭೂಮಿಯನ್ನು ಗದ್ದೆಯನ್ನಾಗಿಸಿ,ಅದರಲ್ಲಿ ತೆನೆ ಬೆಳೆದು ಅದನ್ನು ದೇವರಿಗೆ ಅರ್ಪಿಸಬೇಕು.
ಈ ಎಲ್ಲಾ ಸತ್ಕರ್ಮಗಳನ್ನು ಭಕ್ತಿ,ಶ್ರದ್ಧೆಯಿಂದ ನಡೆಸಿದಲ್ಲಿ ಗ್ರಾಮ-ರಾಷ್ಟ್ರಕ್ಕೆ ಶ್ರೇಯಸ್ಸಾಗುತ್ತದೆ.
ನಿವೃತ್ತಿ ಮೇಷರಾಶಿ
ದೈವಜ್ಞ, ಕೆ.ಪಿ.ಕುಮಾರಗುರು ತಂತ್ರಿ,ಕೊರಂಗ್ರಪಾಡಿ
ನಾನು ದೇವಸ್ಥಾನಕ್ಕೆ ಬರುವಾಗ ದೇವಸ್ಥಾನದಲ್ಲಿ ಹೊಗೆ ತುಂಬಿಕೊಂಡಿತ್ತು.ಈ ವೇಳೆ ನಾನು ಯಾಕೆ ಇಷ್ಟು ಹೊಗೆ ಎಂದು ಪ್ರಶ್ನಿಸಿದೆ. ಆಗ ಇಲ್ಲಿ ಗಣಪತಿ ಹವನ ನಡೆಯುತ್ತಿದೆ ಎಂದು ಉತ್ತರಿಸಿದರು. ನಾವು ಬರುವುದು 15 ನಿಮಿಷ ತಡವಾಗಿರುತ್ತಿದ್ದರೆ ಹೋಮ ಪೂರ್ಣಾಹುತಿಯಾಗುತ್ತಿತ್ತು. 20 ನಿಮಿಷ ಬೇಗ ಬಂದಿರುತ್ತಿದ್ದರೆ ಗಣಹೋಮ ಶುರುವಾಗದೇ ಇರುತ್ತಿತ್ತು. ನಾವು ಇಲ್ಲಿ ಬಂದಾಗ ನಮಗೆ ಮೊದಲು ಗೋಚರಿಸಿದ್ದು ಗಣಪತಿ ಹವನದ ಹೊಗೆ. ಇದರಿಂದ ನಮಗೆ ಉಪದ್ರ ಆಗಲಿಲ್ಲ. ಆದರೆ ಹೊಗೆ ಯಾವುದರದ್ದು ಎಂದು ಕೇಳುವಷ್ಟು ಇತ್ತು.ಗಣಪತಿ ಹವನ.. ಗಣಪತಿ ಎಂದಾಗ ನೆನಪಾಗುವುದು ಆನೆಯದ್ದು. ಅಂದರೆ ಈ ಭೂಮಿಗೂ ಆನೆಗೂ ಆ ಕಾಲಘಟ್ಟದಲ್ಲಿ ಅವಿನಾಭಾವ ಸಂಬಂಧ ನೂರಕ್ಕೆ ನೂರು ಇತ್ತು.ಈ ಗದ್ದೆಗೆ ಒಂದು ಹೆಸರಿದೆ. ಆ ಹೆಸರು ಆನೆಯ ಇತಿಹಾಸವನ್ನು ನೆನಪಿಸುವ ಹೆಸರಾಗಿರುತ್ತದೆ. ಹಿಂದೆ ವಾರ್ಷಿಕವಾಗಿ ಒಮ್ಮೆ ಇಲ್ಲಿಗೆ ಬಂದು, ತೆನೆಯನ್ನು ತೆಗೆದುಕೊಂಡು ಹೋಗುವ ಪದ್ಧತಿಯೋ ಅಥವಾ ಇಲ್ಲಿ ಬಂದು ಕೈಮುಗಿದು ಪ್ರಾರ್ಥನೆ ಮಾಡುವ ಪದ್ಧತಿಯೋ ಇತ್ತು. ಅದು ನಾಶಾವಸ್ಥೆಗೆ ಹೋಗಿದೆ ಎಂದು ದೈವಜ್ಞರು ತಿಳಿಸಿದರು.
ಸಭಾಭವನ ಕಟ್ಟಡ ಇರುವ ಜಾಗದಲ್ಲಿ ಕಟ್ಟಡ ತೆಗೆದು ಗದ್ದೆಯನ್ನು ಮಾಡಿ ಭತ್ತವನ್ನು ಬೆಳೆದರೆ ಆ ತೆನೆಯನ್ನು ದೇವರಿಗೆ ಸಮರ್ಪಿಸಿದರೆ ಇದು ಬಂಗಾರದ ಭೂಮಿಯಾಗುತ್ತದೆ ಎನ್ನುವ ವಿಚಾರವನ್ನು ದೈವಜ್ಞರು ಉಲ್ಲೇಖಿಸುತ್ತಿದ್ದರು.ಈ ವೇಳೆ ದೇವಸ್ಥಾನದ ಪ್ರಧಾನ ಅರ್ಚಕರಾದ ವಸಂತ ಕೆದಿಲಾಯರು ಪೂಜೆ ಮುಗಿಸಿಕೊಂಡು, ದೇವರ ಪ್ರಸಾದದ ಕೈಚೀಲವನ್ನು ತಂದು ದೈವಜ್ಞರು ಕುಳಿತಿದ್ದ ವೇದಿಕೆಯ ಈಶಾನ್ಯ ಭಾಗದಲ್ಲಿಟ್ಟು, ದೈವಜ್ಞರ ವೇದಿಕೆಯ ಬದಿಯಲ್ಲಿ ಕುಳಿತುಕೊಂಡರು. ಈ ವೇಳೆ ಅದು ಎಲ್ಲಿನ ಪ್ರಸಾದ ಎಂದಾಗ ಮಹಾಲಿಂಗೇಶ್ವರ ದೇವಸ್ಥಾನದ ಪ್ರಸಾದ ಎಂದು ಉತ್ತರಿಸಿದರು. ಈ ವೇಳೆ ದೈವಜ್ಞರು ‘ಇದಕ್ಕೆ ಬೇರೆ ಶಕುನ ಬೇಡ. ಈ ವಿಚಾರದ ನಿರ್ಣಯಕ್ಕೆ ಬರುವಾಗ ದೇವರ ಪ್ರಸಾದವನ್ನು ತಂದು ಈಶಾನ್ಯ ಭಾಗದಲ್ಲಿ ಇಟ್ಟರು. ಇದು ಈಶ್ವರ ದೇವರ ಸ್ಥಾನ. ಅವರು ಕೂತದ್ದು ಇಲ್ಲಿ, ಅಲ್ಲಿ ಪ್ರಸಾದ ಇಡಬೇಕೆಂದಿರಲಿಲ್ಲ.ಅಲ್ಲಿ ತಂದು ಇಟ್ಟಿದ್ದಾರೆಂದರೆ ಈ ಭಾಗದಿಂದ ಅಲ್ಲಿಗೆ ತೆನೆ ಹೋಗುತ್ತಿತ್ತು ಎನ್ನುವುದಕ್ಕೆ ಸೂಚನೆ. ಪ್ರಸಾದ ಎಂದರೆ ದೇವರ ಸಾನಿಧ್ಯವೇ ಅಲ್ಲವೇ? ನಾವು ಗ್ರಹಸ್ಥಿತಿಯಲ್ಲಿ ಫಲವನ್ನು ಹೇಳುತ್ತಾ ತೆರಳುವಾಗ ದೇವತೆಗಳು ಶಕುನದ ಮೂಲಕ ಸ್ಪಷ್ಟೀಕರಿಸುತ್ತಾರೆ ಎನ್ನುವುದಕ್ಕೆ ಇದೇ ಉದಾಹರಣೆ ಎಂದು ಹೇಳಿದರು. ಈ ವಿಚಾರ ಸೇರಿದ್ದವರನ್ನು ರೋಮಾಂಚನಗೊಳಿಸಿತು.
ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನ ಕಟ್ಟಡದ ಬಗ್ಗೆ ಭಾರೀ ವರ್ಷದಿಂದ ಪ್ರಶ್ನೆಗಳು ಇತ್ತು.2019ರ ಪ್ರಶ್ನಾಚಿಂತನೆಯಲ್ಲಿ ಈ ಕಟ್ಟಡವನ್ನು ತೆರವು ಮಾಡಬೇಕೆನ್ನುವ ವಿಚಾರ ಬಂದಿದ್ದನ್ನು ನಾನು ನೋಡಿದ್ದೇನೆ.ನಾವು ಎರಡು ಪ್ರಶ್ನೆಗಳನ್ನು ಇಟ್ಟಾಗಲೂ ಇದರಿಂದ ದೇವರಿಗೆ ಸಮಾಧಾನ ಇಲ್ಲ ಎನ್ನುವುದು ಉಲ್ಲೇಖ ಆಗಿತ್ತು. ಭಕ್ತಾದಿಗಳಲ್ಲಿ ಒಂದಷ್ಟು ಪ್ರಶ್ನೆಗಳಿತ್ತು.ಈಗ ಮಾಸ್ಟರ್ಪ್ಲಾನ್ ಮಾಡಿದ್ದೇವೆ. ಸರಕಾರಕ್ಕೆ ಕಳಿಸುವ ಕೆಲಸ ಮಾಡಿದ್ದೇವೆ. ಮುಂದಕ್ಕೆ ಯಾರು ಕೆಲಸ ಮಾಡುವುದಿದ್ದರೂ ಮಾಸ್ಟರ್ಪ್ಲ್ಯಾನ್ ಮೂಲಕವೇ ಮಾಡಬೇಕು. ಈಗ ಈ ಕಟ್ಟಡದಲ್ಲೇ ಪ್ರಶ್ನೆ ಇಟ್ಟು ಕಟ್ಟಡ ತೆಗೆಯಬೇಕೇ ಬೇಡವೇ ಎನ್ನುವ ಬಗ್ಗೆ ಚಿಂತನೆ ನಡೆಸಿದ್ದೇವೆ. ದೇವಸ್ಥಾನಕ್ಕೆ ಈವರೆಗೆ ಬಾರದ ತಂತ್ರಿಗಳನ್ನು ಕರೆತಂದು ಪ್ರಶ್ನಾಚಿಂತನೆ ನಡೆಸಿದ್ದೇವೆ. ಅವರು ಪ್ರಶ್ನಾಚಿಂತನೆ ನಡೆಸಿ ಅವರು ದೇವರಿಗೆ ಈ ಕಟ್ಟಡದಿಂದ ಆದಾಯ ಬಂದರೂ ಅದು ದೇವರಿಗೆ ವಿಷವಾಗಿ ಪರಿಣಾಮವಾಗುವುದು ಹೊರತು ದೇವರಿಗೆ ಸಮಾಧಾನ ಇಲ್ಲ.ಇಲ್ಲಿ ಹಿಂದೆ ಗದ್ದೆ ಇತ್ತು, ಗದ್ದೆಯಿಂದ ತೆನೆ ಹೋಗುವ ಕೆಲಸ ಆಗಬೇಕು, ಮುಂದಕ್ಕೆ ಈ ಜಾಗದಲ್ಲಿ ಗದ್ದೆ ಮಾಡಿ ಭತ್ತ ಬೆಳೆದು ದೇವರಿಗೆ ತೆನೆ ಸಮರ್ಪಣೆಯಾಗಬೇಕೆಂದು ಹೇಳಿದ್ದಾರೆ. ಮಹಾಲಿಂಗೇಶ್ವರ ದೇವರು ಪ್ರಶ್ನಾಚಿಂತನೆ ಮೂಲಕ ಪರಿಪೂರ್ಣ ಅನುಗ್ರಹ ನೀಡಿದ್ದಾರೆ. ಭಕ್ತಾದಿಗಳು ಕೂಡ ಇಲ್ಲಿ ಭಾಗವಹಿಸಿದ್ದರು. ಈ ಕಟ್ಟಡವನ್ನು ಇಲ್ಲಿಂದ ತೆರವು ಮಾಡುವ ಕೆಲಸ ಮಾಡುತ್ತೇವೆ. ಮುಂದಕ್ಕೆ ಗದ್ದೆ ಮಾಡುವ ಕೆಲಸವನ್ನೂ ಮಾಡುತ್ತೇವೆ. ದೇವಸ್ಥಾನಕ್ಕೆ ಬೇಕಿರುವ ಸಬಾಭವನವನ್ನು ವ್ಯವಸ್ಥಿತವಾಗಿ ರಥ ನಿಲ್ಲುವ ಭಾಗದಲ್ಲಿ ಮಾಡುತ್ತೇವೆ. ಈ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಗೊಂದಲಗಳು ಬೇಡ, ನಿಮ್ಮಲ್ಲಿ ಗೊಂದಲಗಳಿದ್ದರೆ ನಮ್ಮಲ್ಲಿ ಬಂದು ಚರ್ಚೆ ಮಾಡಿ, ಅನಾವಶ್ಯಕ ಚರ್ಚೆ ಮಾಡುವ ಅಗತ್ಯವಿಲ್ಲ. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕೈಹಾಕಿದ್ದೇವೆ, ಇದಕ್ಕೆ ನಿಮ್ಮ ಮಾರ್ಗದರ್ಶನ, ಸಹಕಾರ ಇರಲಿ.
-ಅಶೋಕ್ ಕುಮಾರ್ ರೈ,
ಶಾಸಕರು ಮತ್ತು ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ

ನಮ್ಮ ಸಮಿತಿ ಅಸ್ತಿತ್ವಕ್ಕೆ ಬಂದು 11 ತಿಂಗಳಲ್ಲಿ ಮೂರನೇ ಬಾರಿಗೆ ಶಾಸಕರ ಮಾರ್ಗದರ್ಶನದಂತೆ ಭಕ್ತರ ಬೇಡಿಕೆಯಂತೆ ತಾಂಬೂಲ ಪ್ರಶ್ನಾಚಿಂತನೆಯನ್ನು ಮಾಡಿದ್ದೇವೆ.ಸಭಾಭವನ ಕಟ್ಟಡ ತೆರವು ವಿಚಾರದಲ್ಲಿ ಬಹಳಷ್ಟು ಗೊಂದಲ ಇತ್ತು.ದೇವರು ಪ್ರಶ್ನಾಚಿಂತನೆಯಲ್ಲಿ ದೈವಜ್ಞರ ಮೂಲಕ ಕಟ್ಟಡ ತೆರವು ಮಾಡಬೇಕೆಂದು ಸೂಚನೆ ನೀಡಿದರು.ಮುಂದಿನ ದಿನಗಳಲ್ಲಿ ದೈವಜ್ಞರು ಸೂಚಿಸಿದ ಕೆಲಸಗಳನ್ನು ಶೀಘ್ರವೇ ಮಾಡಲಿದ್ದೇವೆ.ದೇವರ ಸಾನಿಧ್ಯ ವೃದ್ಧಿಗೋಸ್ಕರ ತುಪ್ಪದ ದೀಪ ವ್ಯವಸ್ಥೆ, ಎಳ್ಳೆಣ್ಣೆ ಅಭಿಷೇಕ ಇತ್ಯಾದಿ ಕೆಲಸಗಳನ್ನು ಮಾಡಿದ್ದೇವೆ.ಇದರ ಸಂಪೂರ್ಣ ಫಲವನ್ನು ದೇವರು ನಮಗೆ ಒದಗಿಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಏನೇ ಕೆಲಸಗಳನ್ನು ಮಾಡುವುದಿದ್ದರೂ ಭಕ್ತರ ಗಮನಕ್ಕೆ ತಂದೇ ಮಾಡುತ್ತೇವೆ. ಮುಂದಕ್ಕೆ ಯಾವುದೇ ತಪ್ಪುಗಳಾಗದಂತೆ ಜಾಗರೂಕತೆಯಿಂದ ಕೆಲಸ ಕಾರ್ಯಗಳನ್ನು ಮಾಡುತ್ತೇವೆ. ಪ್ರಾಯಶ್ಚಿತ್ತ ಕಾರ್ಯಗಳನ್ನೂ ತಂತ್ರಿಗಳ ಮಾರ್ಗದರ್ಶನದಂತೆ ನಡೆಸಲಿದ್ದೇವೆ
-ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ









