ಕಡಬ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ : ಹೋರಾಟ ಸಮಿತಿಯಿಂದ ಪ್ರತಿಭಟನೆ

0

ಇಲ್ಲಿ 24 ಗಂಟೆಯೂ ಚಿಕಿತ್ಸೆ ವ್ಯವಸ್ಥೆ ಅಗತ್ಯ-ಸಯ್ಯದ್ ಮೀರಾ ಸಾಹೇಬ್


ಕಡಬ:ಇಲ್ಲಿನ ಸಮುದಾಯ ಆಸ್ಪತ್ರೆಯಲ್ಲಿರುವ ವೈದ್ಯರು,ಸಿಬ್ಬಂದಿ ಕೊರತೆ ನಿವಾರಿಸುವಂತೆ ಆಗ್ರಹಿಸಿ ಕಡಬ ತಾಲೂಕು ಅಭಿವೃದ್ದಿ, ರೈತ, ಕೃಷಿ ಕಾರ್ಮಿಕರ ಹೋರಾಟ ಸಮಿತಿಯಿಂದ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.


ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಜಿಲ್ಲಾ ಪರಿಷತ್ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ,ಕಡಬ ತಾಲೂಕು ಕೇಂದ್ರ ಸ್ಥಾನದಲ್ಲಿ ಸುಸಜ್ಜಿತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು, ಸೂಕ್ತ ಸಿಬ್ಬಂದಿ ಇಲ್ಲದೇ ಇರುವುದರಿಂದ ರೋಗಿಗಳಿಗೆ ಅಗತ್ಯ ಸೇವೆ ಲಭ್ಯವಾಗದೆ ಪರದಾಡುವಂತಾಗಿದೆ.ಖಾಯಂ ವೈದ್ಯರಿಲ್ಲದೆ ಆಸ್ಪತ್ರೆಯ ಸ್ಥಿತಿ ಇನ್ನಷ್ಟೂ ಹದಗೆಟ್ಟಿದೆ.ಎಂಟು ಗ್ರಾಮಗಳ ವ್ಯಾಪ್ತಿ ಹೊಂದಿರುವ ಈ ಆಸ್ಪತ್ರೆಯಲ್ಲಿ 24 ಗಂಟೆಯೂ ಸೂಕ್ತ ಚಿಕಿತ್ಸೆ ವ್ಯವಸ್ಥೆ ಇರಬೇಕು.ಆದರೆ ಅದಿಲ್ಲದೇ ಇರುವುದರಿಂದ ದೂರದ ಪುತ್ತೂರು ಇಲ್ಲವೇ ಮಂಗಳೂರು ಆಸ್ಪತ್ರೆಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.ಕಡಬದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಪಘಾತವಾದಾಗ ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣಹಾನಿಯಾದ ಘಟನೆಯೂ ನಡೆದಿದೆ.ಆದ್ದರಿಂದ ತಕ್ಷಣ ಇಲ್ಲಿನ ಸಿಬ್ಬಂದಿ ಕೊರತೆ ಸಮಸ್ಯೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.ಈ ಆಸ್ಪತ್ತೆಯನ್ನು ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದೂ ಒತ್ತಾಯಿಸಿದ ಮೀರಾ ಸಾಹೇಬ್,ತಕ್ಷಣ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.


ಪ್ರಮುಖರಾದ ಸತೀಶ್ ಶೆಟ್ಟಿ ಬೀರುಕ್ಕು, ಇಲ್ಯಾಸ್ ಜೆ.ಕೆ.ಕೋಡಿಂಬಾಳ,ಕಿಶನ್ ರೈ, ಆಲಿ ಹಳೆಸ್ಟೇಷನ್, ಕಡಬ ರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ಚೆನ್ನಪ್ಪ ಗೌಡ ಮೊದಲಾದವರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.ಮುಖಂಡರಾದ ಚಂದ್ರಶೇಖರ ಕೋಡಿಬೈಲು, ರಾಜೇಶ್ ಕುಟ್ರುಪ್ಪಾಡಿ, ವಿವೇಕಾನಂದ ಬೊಳ್ಳಾಜೆ,ಎ.ಜೆ.ಜೋಶ್, ಜಗದೀಶ್ ರೈ ಕೊಳಂಬೆತ್ತಡ್ಕ, ಹರೀಶ್ ಎನ್ಕಾಜೆ, ಇಕ್ಬಾಲ್ ಅಡ್ಡಗದ್ದೆ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಮಹಮ್ಮದಾಲಿ ಹೊಸಮಠ ನಿರೂಪಿಸಿ,ವಂದಿಸಿದರು.ಪ್ರತಿಭಟನೆ ಬಳಿಕ ಕಡಬ ತಾಲೂಕು ಆಡಳಿತ ಕಚೇರಿಯಲ್ಲಿ ಉಪತಹಶೀಲ್ದಾರ್ ಸಯ್ಯದುಲ್ಲ ಖಾನ್ ಮತ್ತು ಪುತ್ತೂರು ತಾಲೂಕು ಆರೋಗ್ಯಾಽಕಾರಿ ಡಾ.ದೀಪಕ್ ರೈ ಅವರಿಗೆ ಮನವಿ ನೀಡಲಾಯಿತು.

ಸಮಸ್ಯೆ ಸರಿಪಡಿಸಲು ಪ್ರಯತ್ನ
ಮನವಿ ಸ್ವೀಕರಿಸಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು,‘ಡೆಂಟಲ್, ಅಯುಶ್, ಮಕ್ಕಳ ತಜ್ಞರು ಈಗಾಗಲೇ ಇಲ್ಲಿ ಕರ್ತವ್ಯದಲ್ಲಿದ್ದಾರೆ.ಈ ಹಿಂದೆ ಕರ್ತವ್ಯದಲ್ಲಿದ್ದ ಖಾಯಂ ವೈದ್ಯರು ನಿವೃತ್ತಿ ಹೊಂದಿದ ಬಳಿಕ ವಾರದಲ್ಲಿ ಮೂರು ದಿನ ಒಬ್ಬರು ವೈದ್ಯರು ಹಾಗು ಇನ್ನುಳಿದ ದಿನದಲ್ಲಿ ಕೋಡಿಂಬಾಳದ ಒಬ್ಬರು ವೈದ್ಯರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇನ್ನುಳಿದಂತೆ ತಜ್ಞ ವೈದ್ಯರ, ಸಿಬ್ಬಂದಿಗಳ ನೇಮಕವಾಗಬೇಕಿದೆ.ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.‘ಗುರುವಾರ ಮಂಗಳೂರಿನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು ನೇಮಕವಾದ ವೈದ್ಯರಲ್ಲಿ ಎಷ್ಟು ಮಂದಿ ಕಡಬದಲ್ಲಿ ಕರ್ತವ್ಯ ನಿರ್ವಹಿಸಲು ಒಪ್ಪಿಕೊಂಡಿದ್ದಾರೆ ಎನ್ನುವ ಸ್ಪಷ್ಟ ಮಾಹಿತಿ ಇನ್ನಷ್ಟೆ ಸಿಗಬೇಕಷ್ಟೆ’ ಎಂದು ಹೇಳಿದ ಡಾ.ದೀಪಕ್ ರೈ ಅವರು,‘ಸಮಸ್ಯೆ ಪರಿಹರಿಸಲು ಇಲಾಖೆಯಿಂದ ಪ್ರಯತ್ನ ನಡೆಸಲಾಗುತ್ತಿದೆ’ ಎಂದರು.

LEAVE A REPLY

Please enter your comment!
Please enter your name here