VCET: ಕಾಲೇಜು ವಾರ್ಷಿಕೋತ್ಸವ ಸಮಾರಂಭ ನವರಂಗ್-2025

0

ಪುತ್ತೂರು: ಸ್ವಾಮೀ ವಿವೇಕಾನಂದರು ಬದುಕಿದ್ದು ಕೇವಲ 39 ವರ್ಷಗಳು ಮಾತ್ರ ಆದರೆ ಯುವಕರಿಗೆ ಮತ್ತು ಮನುಕುಲಕ್ಕೆ ಅವರು ನೀಡಿದ ಸಂದೇಶಕ್ಕೆ ಅಳಿವೇ ಇಲ್ಲ. ಇದರ ಒಂದಷ್ಟು ಭಾಗವನ್ನಾದರೂ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭ ನವರಂಗ್-2025 ಇದರ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಭಾರತೀಯರು ಭಯದಲ್ಲೇ ಬದುಕುವವರು ಎನ್ನುವ ಮಾತಿದೆ. ಇದಕ್ಕೆ ಅನೇಕ ಕಾರಣಗಳೂ ಇವೆ. ಆದರೆ ಆ ಮಾತನ್ನು ತೊಡೆದು ಹಾಕಿ ಭಯಮುಕ್ತರಾಗಿ ಬದುಕುವ ವ್ಯಾಪಕ ಅವಕಾಶಗಳಿವೆ ಎಂದರು. ಮಂಗಳೂರಿನಲ್ಲಿ 250ಕ್ಕೂ ಹೆಚ್ಚು ಮನೆಯಲ್ಲೇ ಬೆಳೆದ ಕಂಪೆನಿಗಳಿವೆ ಇವು ಸುಮಾರು 25೦೦೦ ಉದ್ಯೋಗಿಗಳಿಗೆ ಅವಕಾಶವನ್ನು ನೀಡುತ್ತಿದ್ದು ಸಧ್ಯದಲ್ಲೇ ಇದೊಂದು ಐಟಿ ಹಬ್ ಆಗಿ ಬೆಳೆಯಲಿದೆ ಎಂದರು. ಈ ನೆಲದ ಸಾಮರ್ಥ್ಯಕ್ಕೆ ಅನುಗುಣವಾಗಿ ಹೊಸತನದ ಪ್ರಾರಂಭಕ್ಕೆ ಸರ್ವ ಪ್ರಯತ್ನವನ್ನು ಮಾಡೋಣ, ಇದಕ್ಕೆ ಯುವಜನತೆ ಕೈಜೋಡಿಸಬೇಕು ಎಂದರು. ಕೆಲವೇ ಸಮಯದಲ್ಲಿ ಈ ಕಾಲೇಜಿನ ಆವರಣದಲ್ಲಿ ಇನ್ನೂ ಹಲವು ಸ್ಟಾಟ್-ಅಪ್ ಸಂಸ್ಥೆಗಳನ್ನು ಪ್ರಾರಂಭಿಸುವುದಕ್ಕೆ ತಾನು ಕೈಜೋಡಿಸುವುದಾಗಿ ಭರವಸೆಯನ್ನು ನೀಡಿದರು.


ಇನ್ನೋರ್ವ ಮುಖ್ಯ ಅತಿಥಿ ದ ವೆಬ್ ಪೀಪಲ್ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಆದಿತ್ಯ ಕಲ್ಲೂರಾಯ ಮಾತನಾಡಿ ಯಾವುದೇ ಕೆಲಸವನ್ನು ಪ್ರಾರಂಭಿಸಿದರೆ ಮಾತ್ರ ಅವರಿಗೆ ಅದರ ಪ್ರತಿಫಲ ದೊರಕುತ್ತದೆ. ನಾವು ಅಸಂಖ್ಯಾತ ಅವಕಾಶವಿರುವ ಪ್ರಪಂಚದಲ್ಲಿದ್ದೇವೆ ಕಷ್ಟಗಳು ಬಂದಾಗ ಓಡಿಹೋಗಬೇಡಿ ಅದನ್ನು ಸಮರ್ಥವಾಗಿ ಎದುರಿಸಿ ನಿಮ್ಮ ಜೀವನವನ್ನು ಕಟ್ಟಿಕೊಳ್ಳಿ ಎಂದರು. ಸ್ಟಾಟ್-ಅಪ್ ಸಂಸ್ಥೆಗಳನ್ನು ಪ್ರಾರಂಭಿಸುವುದಕ್ಕೆ ಕಾಲೇಜು ಅವಕಾಶ ನೀಡುವುದನ್ನು ಅವರು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ ವಿದ್ಯಾರ್ಥಿಗಳು ತಾವೇನಾಗಬೇಕೆಂದು ನಿರ್ಧರಿಸಿ ಅದಕ್ಕೆ ತಕ್ಕುದಾದ ಅಡಿಪಾಯವನ್ನು ಗಟ್ಟಿಗೊಳಿಸಬೇಕು ಎಂದರು. ನಮ್ಮ ಸಂಸ್ಥೆಯು ವಿದ್ಯೆಯನ್ನು ಕೊಡುತ್ತದೆ ಅದರ ಜತೆಯಲ್ಲಿ ನಾವು ಯಾರು ಎನ್ನುವುದನ್ನೂ ನೆನಪಿಸುವ ಕಾರ್ಯವನ್ನು ಮಾಡುತ್ತದೆ. ಇನ್ನೂ ಪರಕೀಯರ ಭ್ರಮೆಯಲ್ಲಿ ಬದುಕುವ ನಾವು ಜಗತ್ತಿಗೆ ಕೊಟ್ಟ ವಿಷಯವನ್ನೇ ಮರೆತಿದ್ದೇವೆ. ನಮ್ಮ ದೇಶದ ಮಹಾಪುರುಷರು, ಸಾಧು-ಸಂತರು ತಿಳಿಸಿದ ವಿಷಯಗಳನ್ನು ವಿದೇಶೀಯರಿಂದ ತಿಳಿದುಕೊಳ್ಳಬೇಕಾದದ್ದು ನಮ್ಮ ದುರ್ದೈವ ಎಂದರು. ಕೇವಲ ಹಣವಂತರಾಗುವುದಲ್ಲ ಗುಣವಂತರಾಗಬೇಕು ಇಲ್ಲಿನ ಒಳ್ಳೆಯ ಸಂಗತಿಗಳನ್ನು ಇತರರಿಗೆ ತಿಳಿಸುವ ಮತ್ತು ಬೆಳೆಸುವ ಕಾರ್ಯ ನಿಮ್ಮಿಂದಾಗಲಿ ಎಂದರು.


ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ 2024-25ನೇ ಶೈಕ್ಷಣಿಕ ಸಾಲಿನ ಅಂತಿಮ ವರ್ಷದ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಿದ ಡಾಟಾ ಸೈನ್ಸ್ ವಿಭಾಗದ ಸುಚಿತಾ, ಪ್ರಜ್ಞಾಶಂಕರಿ, ಸಿಂಚನಲಕ್ಷ್ಮಿ, ಶ್ರೀಲಕ್ಷ್ಮಿ.ವಿ, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗದ ರವಿನಾರಾಯಣ.ಕೆ.ಎಸ್, ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ರಾಹುಲ್.ಕೆ, ಲಿಖಿತ.ಕೆ ಇವರನ್ನು ನಗದು ಬಹುಮಾನದೊಂದಿಗೆ ಸನ್ಮಾನಿಸಲಾಯಿತು. ಪ್ರತಿ ವಿಭಾಗದಲ್ಲಿ ಶೈಕ್ಷಣಿಕ ಸಾಧನೆಯನ್ನು ಮಾಡಿದ, ದತ್ತಿ ನಿಧಿ ಪ್ರಶಸ್ತಿಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಾಹಿತ್ಯಿಕ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಚಾಂಪಿಯನ್ ಆದ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ದತ್ತಿ ನಿಧಿ ಪ್ರಶಸ್ತಿಗಾಗಿ ಶ್ರೀಮತಿ ಸುಧಾ ಶಣೈ ಅವರು ನೀಡಿದ ಮೊತ್ತ ರೂ ಹತ್ತು ಲಕ್ಷವನ್ನು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶಣೈ ಹಸ್ತಾಂತಿಸಿದರು. ಇದರ ಬಡ್ಡಿ ಮೊತ್ತದಿಂದ ವಿದ್ಯಾರ್ಥಿಗಳಿಗೆ ಸಹಾಯ ಧನವನ್ನು ನೀಡಲಾಗುತ್ತದೆ. ವಿದ್ಯಾಭಾರತಿ ಉಚ್ಚ ಶಿಕ್ಷಾ ಸಂಸ್ಥಾನ ಇದರ ವತಿಯಿಂದ ಪ್ರಕಟಿಸಲಾದ ಭಾರತ್ ಬೌಧಿಕ್ಸ್ ಎನ್ನುವ ಪುಸ್ತಕವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್‌ನ ಪ್ರಾಂಶುಪಾಲೆ ಡಾ.ಶೋಭಿತಾ ಸತೀಶ್ ಮತ್ತು ಶ್ರೀರಾಮ ಪದವಿ ಕಾಲೇಜಿನ ಕೃಷ್ಣ ಪ್ರಸಾದ್.ಕೆ ಪುಸ್ತಕ ಪರಿಚಯವನ್ನು ಮಾಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್.ಪಿ, ಬ್ರಿಜ್ ಮ್ಯಾನ್ ಖ್ಯಾತಿಯ ಪದ್ಮಶ್ರೀ ಗಿರೀಶ್ ಭಾರದ್ವಾಜ್, ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ, ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ಕೋಶಾಧಿಕಾರಿ ಮುರಳೀಧರ ಭಟ್.ಬಿ, ನಿರ್ದೇಶಕರಾದ ರವಿಕೃಷ್ಣ.ಡಿ.ಕಲ್ಲಾಜೆ, ಸತ್ಯನಾರಾಯಣ ಭಟ್, ಸಂತೋಷ್ ಕುತ್ತಮೊಟ್ಟೆ, ಡಾ.ಯಶೋಧಾ ರಾಮಚಂದ್ರ, ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ, ಕಾರ್ಯಕ್ರಮ ಸಂಯೋಜಕ ಡಾ.ಚೇತನ್.ಪಿ.ಡಿ ಮತ್ತು ವಿದ್ಯಾರ್ಥಿ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ದಿತೇಶ್ ಗೌಡ ಮತ್ತು ಮೇಘನಾ ಅತಿಥಿಗಳನ್ನು ಪರಿಚಯಿಸಿದರು. ನಿಕ್ಷಿತಾ ಸ್ವಾಗತಿಸಿ, ಅನೂಷಾ ವಂದಿಸಿದರು. ಕ್ಷಿತಿ ಶೆಟ್ಟಿ ಹಾಗೂ ಶ್ರೀನಿವಾಸ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here