ಭ್ರಷ್ಟಾಚಾರದ ಆರೋಪದಲ್ಲಿ ತಲೆಮೆರೆಸಿಕೊಂಡಿದ್ದ ತಹಶೀಲ್ದಾರ್ ಎಸ್.ಬಿ ಕೂಡಲಗಿಯವರಿಗೆ ಹೈಕೋರ್ಟಲ್ಲಿ ನಿರೀಕ್ಷಣಾ ಜಾಮೀನು-ಕರ್ತವ್ಯಕ್ಕೆ ಹಾಜರು

0

ಪುತ್ತೂರು:ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಮೀನು ಪರಭಾರೆಗೆ ನಿರಾಕ್ಷೇಪಣಾ ಪತ್ರ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಲ್ಲಿ ತಾಲೂಕು ಕಚೇರಿಯ ಭೂಮಿ ಶಾಖೆಯ ಕೇಸ್ ವರ್ಕರ್ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣದಲ್ಲಿ, ತಮ್ಮ ಮೇಲೂ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು ತಹಶೀಲ್ದಾರ್ ಡಿ.1ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.


ಈಶ್ವರಮಂಗಲದ ಅಜಿತ್ ಎಂಬವರು ತನ್ನ ಚಿಕ್ಕಪ್ಪನಿಗೆ ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಮೀನನ್ನು ಪರಭಾರೆ ಮಾಡಲು ನಿರಾಕ್ಷೇಪಣಾ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಲೇವಾರಿಯಾಗದೇ ಇರುವ ಕುರಿತು ಅಜಿತ್ ಅವರು ಕೇಸ್ ವರ್ಕರ್ ಸುನೀಲ್ ಅವರಲ್ಲಿ ವಿಚಾರಿಸಿದಾಗ, ತಹಶೀಲ್ದಾರ್‌ರವರ ಸಹಿಗೆ ಬಾಕಿ ಇರುತ್ತದೆ. ಅದಕ್ಕೆ ಸ್ವಲ್ಪ ಹಣ ಖರ್ಚು ಇರುತ್ತದೆ, ತಹಶೀಲ್ದಾರರಿಗೆ ರೂ.10,೦೦೦ ಕೊಡಬೇಕಾಗುತ್ತದೆ ಮತ್ತು ನನಗೂ ಹಣ ಕೊಡಬೇಕಾಗುತ್ತದೆ ಎಂದು ಹೇಳಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿತ್ತು.

ಲಂಚಕ್ಕೆ ಬೇಡಿಕೆಯಿಟ್ಟಿರುವ ಬಗ್ಗೆ ಈಶ್ವರಮಂಗಲದ ಅಜಿತ್ ಎಂಬವರು ನೀಡಿದ್ದ ದೂರಿನ ಮೇರೆಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕೇಸ್ ವರ್ಕರ್ ಸುನೀಲ್ ಮತ್ತು ತಹಶೀಲ್ದಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ.28ರಂದು ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ತಾಲೂಕು ಕಚೇರಿಯ ಭೂ ಸುಧಾರಣಾ ಶಾಖೆಯ ಕೇಸ್ ವರ್ಕರ್ ಸುನೀಲ್ ದೂರುದಾರ ಅಜಿತ್ ಅವರಿಂದ ರೂ.12 ಸಾವಿರ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದರು. ಆ ಬಳಿಕ ನಾಪತ್ತೆಯಾಗಿರುವ ತಹಶೀಲ್ದಾರ್ ಎಸ್.ಬಿ ಕೂಡಲಗಿ ಈ ತನಕ ಕಚೇರಿಗೆ ಕರ್ತವ್ಯಕ್ಕೆ ಹಾಜರಾಗದೇ ನಾಪತ್ತೆಯಾಗಿದ್ದರು. ಅವರ ನಿರೀಕ್ಷಣಾ ಅರ್ಜಿ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿತ್ತು. ದೀರ್ಘ ಸಮಯಗಳಿಂದ ತಹಸಿಲ್ದಾರ್ ಕಚೇರಿಗೆ ಹಾಜರಾಗದೇ ಇರುವುದರಿಂದ ಸಹಾಯಕ ಆಯುಕ್ತರ ಕಚೇರಿಯ ಗ್ರೇಡ್ -2 ತಹಶೀಲ್ದಾರ್ ನಾಗರಾಜ್ ವಿ ಅವರನ್ನು ಪ್ರಭಾರ ತಹಶೀಲ್ದಾರ್ ಆಗಿ ಜಿಲ್ಲಾಧಿಕಾರಿ ನೇಮಕಗೊಳಿಸಿದ್ದರು.
ತಹಶೀಲ್ದಾರ್ ಎಸ್.ಬಿ ಕೂಡಲಿಗಿ ಅವರು, ತನ್ನ ಮೇಲಿನ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ ತಹಶೀಲ್ದಾರ್ ಎಸ್.ಬಿ ಕೂಡಲಿಗಿ ಅವರಿಗೆ ಜಾಮೀನು ಮಂಜೂರುಗೊಳಿಸಿದ್ದು ಮತ್ತೆ ತನ್ನ ಮೂಲಸ್ಥಾನಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆ ಮೂಲಕ ಕಳೆದ ಮೂರು ತಿಂಗಳುಗಳಿಂದ ಪೂರ್ಣಕಾಲಿಕ ತಹಶೀಲ್ದಾರ್ ಇಲ್ಲದೇ ಇದ್ದ ತಾಲೂಕು ಕಚೇರಿಗೆ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.


ನನ್ನ ಮೇಲಿನ ಆರೋಪದಲ್ಲಿ ಹುರುಳಿಲ್ಲ-ತಹಶೀಲ್ದಾರ್ ಕೂಡಲಿಗಿ:
ಅನಾವಶ್ಯಕವಾಗಿ ನನ್ನ ಮೇಲೆ ಆರೋಪ ಮಾಡಲಾಗಿದೆ. ದೂರು ನೀಡಿದ ವ್ಯಕ್ತಿಯ ಪರಿಚಯವೇ ನನಗಿಲ್ಲ. ಯಾವ ಊರು ಎಂಬುದೇ ನನಗೆ ತಿಳಿದಿಲ್ಲ. ಆ ಫೈಲ್ ನನಗೆ ಬಂದಿಲ್ಲ. ಕಚೇರಿ ಸಿಬ್ಬಂದಿ ನನ್ನ ಹೆಸರು ಹೇಳಿ ಹಣ ಮಾಡುವುದು. ದೂರು ನೀಡಿದ ವ್ಯಕ್ತಿ ಪದೇ ಪದೇ ಅವನ ಬಳಿ ಹೋಗಿದ್ದಾರೆ. ಆ ವ್ಯಕ್ತಿ ನನ್ನ ಬಳಿ ಬರುತ್ತಿದ್ದರೆ ಆಗಲೇ ಇತ್ಯರ್ಥ ಆಗುತ್ತಿತ್ತು. ನನ್ನ ಮೂವತ್ತು ವರ್ಷದ ಸೇವೆಯಲ್ಲಿ ಯಾರನ್ನೂ ಈ ರೀತಿ ಮಾಡಿಲ್ಲ. ಈಗ ತನಿಖೆ ನಡೆಯಿತ್ತಿದೆ. ಒಂದು ಪ್ರಕರಣದಲ್ಲಿ ಜಾಮೀನು ಆಗಿದೆ. ಇನ್ನೊಂದು ಪ್ರಕರಣವನ್ನು ಸ್ಕ್ವಾಷ್‌ಗೆ ಹಾಕಿದ್ದೇನೆ. ನನ್ನ ಮೇಲಿನ ಆರೋಪದಲ್ಲಿ ಯಾವುದೇ ಹುರುಳಿಲ್ಲ. ವಿನಾಕಾರಣ ನನಗೆ ಚಿತ್ರ ಹಿಂಸೆ ನೀಡಿದ್ದಾರೆ. ನನ್ನ ಮೇಲಿನ ಆರೋಪದ ಬಗ್ಗೆ ನ್ಯಾಯಾಂಗದ ಮೊರೆ ಹೋಗಿದ್ದೇನೆ. ವಿಚಾರಣೆ ನಡೆಯುತ್ತಿದೆ. ಶೀಘ್ರದಲ್ಲಿ ಸತ್ಯಾಂಶ ಬರಲಿದೆ. ಎಲ್ಲಾ ವಿಚಾರಣೆ ಎದುರಿಸುತ್ತೇನೆ. ನನ್ನ ಮೇಲಿನ ಆರೋಪ ಸುಳ್ಳು ಎಂದು ಸಾಬೀತು ಪಡಿಸಲು ನನ್ನಲ್ಲಿ ಎಲ್ಲಾ ದಾಖಲೆಗಳು ಇದೆ ಎಂದು ತಹಸಿಲ್ದಾರ್ ಕೂಡಲಗಿ ಹೇಳಿದ್ದಾರೆ.


ಹೆಸರು ದುರ್ಬಳಕೆ ಮಾಡದಂತೆ ಎಚ್ಚರಿಕೆ:
ಕಚೇರಿಯಲ್ಲಿ ತಹಶೀಲ್ದಾರ್ ಹೆಸರು ಹೇಳಿ ಕೆಲವು ಸಿಬ್ಬಂದಿ ಹಣ ಪಡೆಯುತ್ತಿದ್ದಾರೆ. ಇದಕ್ಕಾಗಿ ಎಲ್ಲರಿಗೂ ಆದೇಶ ಮಾಡಿದ್ದು, ತಹಶೀಲ್ದಾರ್ ಹೆಸರು ದುರ್ಬಳಕೆ ಮಾಡಿಕೊಂಡು ಹಣಕ್ಕೆ ಬೇಡಿಕೆಯಿಟ್ಟು ಸಾರ್ವಜನಿಕರ ಕೆಲಸಗಳಿಗೆ ತೊಂದರೆ ನೀಡಿದರೆ, ಹಣ ಪಡೆದುಕೊಂಡು ಭ್ರಷ್ಟಾಚಾರ ನಡೆಸಿದರೆ ಅದಕ್ಕೆ ನೀವೇ ಹೊಣೆಗಾರರು ಎಂದು ಎಚ್ಚರಿಕೆ ನೀಡಿ ಸುತ್ತೋಲೆ ಹೊರಡಿಸಿದ್ದೇನೆ ಎಂದು ತಹಶೀಲ್ದಾರ್ ಎಸ್.ಬಿ ಕೂಡಲಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here