




ಉಪ್ಪಿನಂಗಡಿ: ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಉಪ್ಪಿನಂಗಡಿ ಇದಕ್ಕೆ ಸರಕಾರ ಸದಸ್ಯರನ್ನು ನಾಮ ನಿರ್ದೇಶನ ಮಾಡದಂತೆ ಕರ್ನಾಟಕ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶಿಸಿದೆ.



ರಾಜ್ಯ ಸರಕಾರ ಸಹಕಾರಿ ಕಾಯ್ದೆಗೆ ತಿದ್ದುಪಡಿ ಮಾಡಿ 3 ಮಂದಿ ಸದಸ್ಯರನ್ನು ಸಹಕಾರಿ ಸಂಘಕ್ಕೆ ನಾಮನಿರ್ದೇಶನ ಮಾಡುವ ಕಾಯ್ದೆಯನ್ನು ತಂದಿತ್ತು. ಇದನ್ನು ಆಕ್ಷೇಪಿಸಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಮಾಜಿ ಅಧ್ಯಕ್ಷರುಗಳಾದ ಕೆ.ವಿ. ಪ್ರಸಾದ್, ಕೆ. ಗೋಪಾಲಕೃಷ್ಣ ಭಟ್ , ಪೆಲಪ್ಪಾರು ವೆಂಕಟರಮಣ ಭಟ್ ಹಾಗೂ ಸದಸ್ಯರಾದ ಅಭಿರಾಮ ಶರ್ಮ ದಾವೆ ಅರ್ಜಿ ಸಲ್ಲಿಸಿದ್ದರು.





ಕೆ.ವಿ. ಪ್ರಸಾದ್ ಮತ್ತಿತರರ ಪರವಾಗಿ ಹೈಕೋರ್ಟು ಹಿರಿಯ ವಕೀಲ ಅಗರ್ತ ಕೇಶವ ಭಟ್ ಮಂಡಿಸಿದ ವಾದವನ್ನು ಆಲಿಸಿದ ಹೈಕೋರ್ಟು ನಾಮನಿರ್ದೇಶನ ಮಾಡದಂತೆ ನ. ೨೭ರಂದು ಸರಕಾರಕ್ಕೆ ಸೂಚನೆ ನೀಡಿ ಆದೇಶಿಸಿದೆ.
ನಾಮ ನಿರ್ದೇಶನ ಕ್ರಮ ಸರಿಯಲ್ಲ-ಕೆ.ವಿ. ಪ್ರಸಾದ್
ಲಾಭಕ್ಕೂ ನಷ್ಠಕ್ಕೂ ಸಹಕಾರಿ ಸಂಘದ ಸದಸ್ಯರೇ ಉತ್ತರದಾಯಿಗಳಾಗಿರುವ ಸಹಕಾರಿ ಸಂಸ್ಥೆಗಳಿಗೆ ಸಂವಿಧಾನ ಬದ್ಧವಾಗಿ ಚುನಾವಣೆ ನಡೆದು ಆಡಳಿತ ಮಂಡಳಿಗೆ ನಿರ್ದೇಶಕರು ಆಯ್ಕೆಯಾಗಿರುತ್ತಾರೆ. ಹೀಗಿರುವಾಗ ಮತ್ತೆ ಅಲ್ಲಿಗೆ ರಾಜಕೀಯ ಹಿತಾಸಕ್ತಿಯಿಂದ ಸದಸ್ಯರನ್ನು ನಾಮನಿರ್ದೇಶನ ಮಾಡುವುದು ಸಹಕಾರಿ ಸಂಘದ ಆರೋಗ್ಯಕ್ಕೆ ಹಿತಕಾರಿಯಲ್ಲ. ಸಹಕಾರಿ ತತ್ವದ ಬಗ್ಗೆ ಒಲವಿಲ್ಲದ ವ್ಯಕ್ತಿಗಳಿಂದ ಸಹಕಾರಿ ತತ್ವಕ್ಕೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯನ್ನು ಮನಗಂಡು ಹೈಕೋರ್ಟುನಲ್ಲಿ ನಮ್ಮ ತಂಡ ಆಕ್ಷೇಪ ಅರ್ಜಿ ಸಲ್ಲಿಸಿತ್ತು.
-ಕೆ.ವಿ. ಪ್ರಸಾದ್, ಮಾಜಿ ಅಧ್ಯಕ್ಷರು, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ.








