ಹಳೆನೇರಂಕಿ ಶಾಲಾ ಶತಮಾನೋತ್ಸವ ಸಮಾರೋಪ

0

ಮಕ್ಕಳ ಸಂಖ್ಯೆ ಹೆಚ್ಚಿಸುವ ಜವಾಬ್ದಾರಿ ಎಲ್ಲರ ಮೇಲಿದೆ; ರಮೇಶ ರೈ

ರಾಮಕುಂಜ: ಕಡಬ ತಾಲೂಕಿನ ಹಳೆನೇರಂಕಿ ಸರಕಾರಿ ಉನ್ನತ ಹಿ.ಪ್ರಾ.ಶಾಲೆಯ ’ಶತಮಾನೋತ್ಸವ ಸಂಭ್ರಮ-2025’ರ ಸಮಾರೋಪ ಸಮಾರಂಭ ಡಿ.7ರಂದು ರಾತ್ರಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಶತಮಾನೋತ್ಸವ ಸಮಿತಿ ಅಧ್ಯಕ್ಷ ರಮೇಶ ರೈ ರಾಮಮಜಲು ಮಾತನಾಡಿ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಸ್ಥಾನ ಬಯಸದೇ ಬಂದ ಭಾಗ್ಯವಾಗಿದೆ. ಮೂರು ವರ್ಷದ ಹಿಂದೆ ಶತಮಾನೋತ್ಸವ ಸಮಿತಿ ರಚನೆಗೊಂಡಿದ್ದು ಎಲ್ಲರ ಸಹಕಾರದಿಂದ ವಿವಿಧ ಕಾಮಗಾರಿ ನಡೆದಿದೆ. ರಂಗಮಂದಿರ ನವೀಕರಣ, ಸಭಾಭವನ, ಎಂಆರ್‌ಪಿಎಲ್‌ನ ಸಹಕಾರದಲ್ಲಿ ಕಟ್ಟಡ, ಗ್ರಾ.ಪಂ.ಸಹಕಾರದಲ್ಲಿ ಆಟದ ಮೈದಾನ, ಶೌಚಾಲಯ, ಬೆಂಗಳೂರಿನ ಕಂಪನಿಗಳ ಸಹಕಾರದಲ್ಲಿ ಕಂಪ್ಯೂಟರ್, ಗ್ರಂಥಾಲಯ ಸೇರಿದಂತೆ ಶಾಲೆಗೆ ಬೇಕಾದ ಎಲ್ಲಾ ಮೂಲಭೂತ ವ್ಯವಸ್ಥೆ ಕಲ್ಪಿಸಲಾಗಿದೆ. ಶತಮಾನೋತ್ಸವ ಸಮಿತಿಯವರೆಲ್ಲರೂ ಒಂದೇ ಮನೆಯವರಂತೆ ಕೆಲಸ ಮಾಡಿದ್ದೇವೆ. ಮುಖ್ಯಶಿಕ್ಷಕರು, ಸಹಶಿಕ್ಷಕರೂ, ಎಸ್‌ಡಿಎಂಸಿ, ಹಿರಿಯ ವಿದ್ಯಾರ್ಥಿ ಸಂಘ, ಊರು, ಪರವೂರಿನವರ ನೆರವು ದೊರೆತಿದೆ. ಶತಮಾನೋತ್ಸವ ಸಂಭ್ರಮದ ಮೂಲಕ ಶಾಲೆ ಒಂದು ಹಂತಕ್ಕೆ ಬಂದಿದೆ. ಮುಂದಿನ ವರ್ಷದಿಂದ ಕಂಪ್ಯೂಟರ್ ಶಿಕ್ಷಣ, ಆಂಗ್ಲಮಾಧ್ಯಮ ವಿಭಾಗವೂ ಆರಂಭವಾಗಲಿದೆ. ಮಕ್ಕಳ ಸಂಖ್ಯೆ ಹೆಚ್ಚಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದ ಅವರು ಶತಮಾನೋತ್ಸವಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ರಾಜ್ಯದಲ್ಲೇ ಮಾದರಿ ಶಾಲೆಯಾಗಬೇಕು;
ಅತಿಥಿಯಾಗಿದ್ದ ಶಾಲೆಯ ಹಿರಿಯ ವಿದ್ಯಾರ್ಥಿ, ಬೆಂಗಳೂರು ದಾಕ್ಷಾಯಿಣಿ ಗ್ರೂಪ್ಸ್ ಆಡಳಿತ ವ್ಯವಸ್ಥಾಪಕ ತೇಜ್‌ಕುಮಾರ್ ರೈ ಮಾತನಾಡಿ, ಕಷ್ಟದ ಸಂದರ್ಭದಲ್ಲೂ ಈ ಶಾಲೆಯಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಈಗ ಉನ್ನತಹುದ್ದೆ, ಸ್ವಂತ ಉದ್ದಿಮೆಯಲ್ಲಿ ತೊಡಗಿಕೊಂಡಿದ್ದಾರೆ. ಇವರಿಗೆ ಸಮಾಜದಲ್ಲಿ ಯಾವ ರೀತಿ ಬದುಕಬೇಕೆಂಬ ಕುರಿತ ಮೂಲಭೂತ ಶಿಕ್ಷಣ ಇಲ್ಲಿ ದೊರೆತಿದೆ. ಹಿರಿಯರು ಕಷ್ಟಪಟ್ಟು ಶಾಲೆ ಆರಂಭಿಸಿ ಅಭಿವೃದ್ಧಿ ಪಡಿಸಿದ್ದಾರೆ. ಇದನ್ನು ಉಳಿಸಿಕೊಂಡು ರಾಜ್ಯದಲ್ಲೇ ಮಾದರಿ ಶಾಲೆಯಾಗಿ ಗುರುತಿಸುವಂತೆ ಮಾಡಬೇಕೆಂದು ಹೇಳಿದರು.

1 ಕೋಟಿ ರೂ.ಅಭಿವೃದ್ಧಿ ಕೆಲಸ ಆಗಿರುವುದು ಹೆಮ್ಮೆಯ ವಿಚಾರ;
ಇನ್ನೋರ್ವ ಅತಿಥಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪದ್ಮಪ್ಪ ಗೌಡ ಅವರು ಮಾತನಾಡಿ, ಶತಮಾನೋತ್ಸವ ಸಂಭ್ರಮದಲ್ಲಿರುವ ಹಳೆನೇರಂಕಿ ಶಾಲೆಯು ದೇವಸ್ಥಾನ, ಭಜನಾ ಮಂದಿರದ ರೀತಿಯಲ್ಲಿ ಕಂಗೊಳಿಸುತ್ತಿದೆ. ಜನರನ್ನು ಒಟ್ಟುಗೂಡಿಸಿ ಸರಕಾರಿ ಶಾಲೆಯೊಂದರಲ್ಲಿ 1 ಕೋಟಿ ರೂ., ಅಭಿವೃದ್ಧಿ ಕೆಲಸ ನಡೆದಿರುವುದು ಹೆಮ್ಮೆಯ ವಿಚಾರವಾಗಿದೆ. ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಾಖೆಯೂ ಹಳೆನೇರೆಂಕಿಯಲ್ಲಿ ಇದ್ದು ಊರಿನ ಅಭಿವೃದ್ಧಿಗೆ ಪೂರಕ ಎಂದರು.

ಗುರುಶಿಷ್ಯರ ಸಮ್ಮಿಲನ ಆಗಿದೆ;
ನಿವೃತ್ತ ಮುಖ್ಯಶಿಕ್ಷಕಿ ಸುಗಂಧಿ ಕೆ.ಮಾತನಾಡಿ, ಶಾಲೆಯ ಶತಮಾನೋತ್ಸವ ಸಂಭ್ರಮವು ಗುರು-ಶಿಷ್ಯರ ಸಮ್ಮಿಲನ ಆಗಿದೆ. ಹಳೆನೇರಂಕಿ ಈಗ ಹೊಸ ನೇರಂಕಿಯಾಗಿ ಕಂಗೊಳಿಸುತ್ತಿದೆ. ಇದಕ್ಕೆ ಊರ, ಪರವೂರಿನ ಜನರ ಆರ್ಥಿಕ ನೆರವು ಕಾರಣವಾಗಿದೆ. ಹಳೆನೇರಂಕಿ ಶಾಲೆಯಲ್ಲಿ ಜೀವನ ಮೌಲ್ಯದ ಶಿಕ್ಷಣ ಸಿಗುತ್ತಿದೆ. ಊರಿನವರೆಲ್ಲರೂ ಮಕ್ಕಳನ್ನು ಈ ಶಾಲೆಗೆ ಕಳಿಸಿಕೊಡಬೇಕೆಂದು ಹೇಳಿದರು.

ಸನ್ಮಾನ:
ಶತಮಾನೋತ್ಸವ ಸಮಿತಿ ಅಧ್ಯಕ್ಷ ರಮೇಶ ರೈ ರಾಮಮಜಲು ದಂಪತಿ, ಪದಾಧಿಕಾರಿಗಳಾದ ಆದಂ ಮೇಸ್ತ್ರಿ, ತೇಜಸ್ವಿನಿಶೇಖರ ಗೌಡ, ಶತಮಾನೋತ್ಸವ ಉಪಸಮಿತಿ ಸಂಚಾಲಕರಾದ ಮನೋಹರ ಮರಂಕಾಡಿ, ಸಂಜೀವ ಗೌಡ ಮುಳಿಮಜಲು, ಭಾಸ್ಕರ ಗೌಡ ಹಿರಿಂಜ, ಆನಂದ ಗೌಡ ಪರಕ್ಕಾಲು, ಸುಜಾತ ಮೇಲೂರು, ದೀಕ್ಷಿತ್ ಹಿರಿಂಜ, ಸಂತೋಷ್‌ರಾವ್ ಕುಂಞಿಕ್ಕು, ಹೊನ್ನಪ್ಪ ಗೌಡ, ಶೇಖರ ಗೌಡ ಕಟ್ಟಪುಣಿ, ಚಂದ್ರಶೇಖರ ಹೊಸಮಾರಡ್ಡ, ಮಹೇಶ್ ಪಾತೃಮಾಡಿ, ಪ್ರವೀಣ್ ಹಿರಿಂಜ, ಶೇಖರ ಗೌಡ ಹಿರಿಂಜ, ಕುಶಾಲಪ್ಪ ಗೌಡ ಮುಳಿಮಜಲು, ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾದ ಪೂವಣಿ ಗೌಡ ಮರಂಕಾಡಿ, ಬಾಲಕೃಷ್ಣ ಹಿರಿಂಜ, ಸಿಆರ್‌ಪಿಎಫ್ ನಿವೃತ್ತ ಯೋಧ ಕಾಸೀಂ ಬೈಲಂಗಡಿ, ಅಡುಗೆ ಸಿಬ್ಬಂದಿಗಳಾದ ರೇವತಿ, ಮಮತಾ ಮುಳಿಮಜಲು, ಗಿರಿಜಾ ಪಾಲೆತ್ತಡ್ಡ ಸಹಿತ ಶತಮಾನೋತ್ಸವ ಸಮಾರಂಭಕ್ಕೆ ವಿವಿಧ ರೀತಿಯಲ್ಲಿ ಸಹಕರಿಸಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಎಸ್‌ಆರ್ ಡೆವಲಪ್ಪರ‍್ಸ್‌ನ ಶಿವಪ್ರಸಾದ್ ಇಜ್ಜಾವು, ಎನ್.ಆದಂ ಮೇಸ್ತ್ರಿ ಹಳೆನೇರಂಕಿ, ನಿವೃತ್ತ ಮುಖ್ಯಗುರು ಸಂಜೀವ ಬಿ., ಶಾಲಾ ಶತಮಾನೋತ್ಸವ ಸಮಿತಿ ಉಪಾಧ್ಯಕ್ಷರಾದ ಸಂತೋಷ್ ರಾವ್ ಕುಂಞಕ್ಕು, ಧರ್ಣಪ್ಪ ಗೌಡ ಅಲೆಪ್ಪಾಡಿ, ಕಿರಣ್‌ಕುಮಾರ್ ಪಾದೆ, ತೇಜಸ್ವಿನಿಶೇಖರ ಗೌಡ ಕಟ್ಟಪುಣಿ, ವಸಂತಿ ಕಣೆಮಾರು, ಜೊತೆ ಕಾರ್ಯದರ್ಶಿ ಶೇಖರ ಗೌಡ ಹಿರಿಂಜ, ನವೀನ ಎ., ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜನಾರ್ದನ ಪೂಜಾರಿ ಕದ್ರ, ಎಸ್‌ಡಿಎಂಸಿ ಅಧ್ಯಕ್ಷ ವೀರೇಂದ್ರ ಪಾಲೆತ್ತಡ್ಡ, ಕ್ರೀಡಾ ಸಮಿತಿ ಸಂಚಾಲಕ ಪೂವಣಿ ಗೌಡ ಮರಂಕಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶತಮಾನೋತ್ಸವ ಸಮಿತಿ ಮೇಲುಸ್ತುವಾರಿ ಶೇಖರ ಗೌಡ ಕಟ್ಟಪುಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಹೇಶ್ ಪಾತೃಮಾಡಿ ಸ್ವಾಗತಿಸಿದರು. ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ, ಶಾಲಾ ಮುಖ್ಯಶಿಕ್ಷಕರೂ ಆದ ವೈ.ಸಾಂತಪ್ಪ ಗೌಡ ವಂದಿಸಿದರು. ಶಿಕ್ಷಕ, ಜೊತೆ ಕಾರ್ಯದರ್ಶಿಯೂ ಆದ ಪ್ರೇಮನಾಥ ಪದ್ಮುಂಜ ನಿರೂಪಿಸಿದರು. ಸಹಶಿಕ್ಷಕರಾದ ದಯಾನಂದ ಓಡ್ಲ, ಶಶಿಕಲಾ, ಗೀತಾಕುಮಾರಿ, ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಗೌಡ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

ಶಿಕ್ಷಕರಿಗೆ ಸನ್ಮಾನ:
ಹಳೆನೇರೆಂಕಿ ಶಾಲೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಮುಖ್ಯಶಿಕ್ಷಕ ವೈ.ಸಾಂತಪ್ಪ ಗೌಡ, ಸಹಶಿಕ್ಷಕರಾದ ಶಶಿಕಲಾ ಕದ್ರ, ಗೀತಾಕುಮಾರಿ ಅಲೆಪ್ಪಾಡಿ, ದಯಾನಂದ ಓಡ್ಲ, ನವೀನ ಎ., ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಗೌಡ, ಗೌರವ ಶಿಕ್ಷಕಿ ರಮ್ಯಾಕೀರ್ತನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶತಮಾನೋತ್ಸವ ಸಮಿತಿ ಜೊತೆಕಾರ್ಯದರ್ಶಿಯೂ ಆದ ಸನ್ಮಾನಿತ ಶಿಕ್ಷಕ ನವೀನ ಎ., ಸಂದರ್ಭೋಚಿತವಾಗಿ ಮಾತನಾಡಿದರು. ದೀಪಾ ಹಾಗೂ ರಾಜೀವ ಶೆಟ್ಟಿ ಅವರು ಸನ್ಮಾನಿತರನ್ನು ಪರಿಚಯಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ;
ಸಭಾ ಕಾರ್ಯಕ್ರಮದ ಬಳಿಕ ಶಾಲಾ ಹಿರಿಯ ವಿದ್ಯಾರ್ಥಿಗಳಿಂದ ’ಬಾಡಂದಿ ಪೂ’ ತುಳು ಸಾಮಾಜಿಕ ನಾಟಕ ನಡೆಯಿತು.

LEAVE A REPLY

Please enter your comment!
Please enter your name here